ಬರಿಗಣ್ಣಿನಲ್ಲಿ ಸೂರ್ಯಗ್ರಹಣ ನೋಡಿದ ಮಹಿಳೆಗೆ ಕಾದಿತ್ತು ಶಾಕ್: ಕಣ್ಣಿನೊಳಗೇ ಮೂಡಿತು ಶಾಶ್ವತ 'ಅರ್ಧಚಂದ್ರ'!

Published : Aug 11, 2026, 07:29 PM IST
Nia Pyne Eye

ಸಾರಾಂಶ

ಸೂರ್ಯಗ್ರಹಣವನ್ನು ಅಸುರಕ್ಷಿತವಾಗಿ ವೀಕ್ಷಿಸಿದ ನ್ಯೂಯಾರ್ಕ್‌ನ ಯುವತಿಯೊಬ್ಬರ ಕಣ್ಣಿನ ರೆಟಿನಾದಲ್ಲಿ ಅರ್ಧಚಂದ್ರಾಕಾರದ ಶಾಶ್ವತ ಕುರುಡು ಚುಕ್ಕೆ (Blind Spot) ಮೂಡಿದೆ. ಈ ಘಟನೆಯು 'ಸೋಲಾರ್ ರೆಟಿನೋಪತಿ' ಎಂಬ ಗಂಭೀರ ಸ್ಥಿತಿಯನ್ನು ವಿವರಿಸುತ್ತದೆ.

ಬೆಂಗಳೂರು (ಆ.11): ಸೂರ್ಯಗ್ರಹಣವನ್ನು ಖಾಲಿ ಕಣ್ಣಿನಿಂದ ನೋಡಬಾರದು ಎಂಬ ವಿಜ್ಞಾನಿಗಳ ಎಚ್ಚರಿಕೆಯನ್ನು ನಿರ್ಲಕ್ಷಿಸಿದ ಅಮೆರಿಕದ ನ್ಯೂಯಾರ್ಕ್ ಮೂಲದ 26 ವರ್ಷದ ಮಹಿಳೆಯೊಬ್ಬರ ಕಣ್ಣಿನೊಳಗೆ ಅರ್ಧಚಂದ್ರಾಕಾರದ Blind Spot ಶಾಶ್ವತವಾಗಿ ಮೂಡಿದೆ. ಸೂರ್ಯನಿಂದ ಹೊರಹೊಮ್ಮಿದ ಅಪಾಯಕಾರಿ ಕಿರಣಗಳು ಆಕೆಯ ಕಣ್ಣಿನ ಅತ್ಯಂತ ಸೂಕ್ಷ್ಮವಾದ ರೆಟಿನಾ (Retina) ಭಾಗದ ಜೀವಕೋಶಗಳನ್ನು ಸುಟ್ಟುಹಾಕಿದ್ದು, ಈ ಕಳವಳಕಾರಿ ಸಂಶೋಧನೆಯ ವಿವರಗಳನ್ನು ಪ್ರಸಿದ್ಧ 'ಜಾಮಾ ಆಫ್ತಾಲ್ಮೋಲಜಿ' (JAMA Ophthalmology) ವೈದ್ಯಕೀಯ ನಿಯತಕಾಲಿಕದಲ್ಲಿ ಪ್ರಕಟಿಸಲಾಗಿದೆ. ನ್ಯೂಯಾರ್ಕ್‌ನ ಮೌಂಟ್ ಸಿನಾಯ್ ಆಸ್ಪತ್ರೆಯ ವೈದ್ಯರು ಈ ಅಪರೂಪದ ವೈದ್ಯಕೀಯ ಪ್ರಕರಣವನ್ನು ಜಗತ್ತಿಗೆ ಉಲ್ಲೇಖಿಸಿದ್ದಾರೆ.

21 ಸೆಕೆಂಡ್ ವೀಕ್ಷಣೆ ತಂದಿಟ್ಟ ವಿಪತ್ತು

2017 ರ ಆಗಸ್ಟ್ 21 ರಂದು ಅಮೆರಿಕದಲ್ಲಿ ಸೂರ್ಯಗ್ರಹಣ ಸಂಭವಿಸಿತ್ತು. ನ್ಯೂಯಾರ್ಕ್‌ನ ಸ್ಟೇಟನ್ ಐಲ್ಯಾಂಡ್ ನಿವಾಸಿ ನಿಯಾ ಪೇನ್ (Nia Payne) ಎಂಬ 26 ವರ್ಷದ ಯುವತಿ ಈ ಗ್ರಹಣ ವೀಕ್ಷಿಸಲು ಹೊರಬಂದಿದ್ದರು. ಆ ಪ್ರದೇಶದಲ್ಲಿ ಸೂರ್ಯ ಶೇ. 70 ರಷ್ಟು ಚಂದ್ರನಿಂದ ಆವೃತನಾಗಿದ್ದ ಅಂದರೆ ಭಾಗಶಃ ಗ್ರಹಣವಾಗಿತ್ತು.

ಆರಂಭದಲ್ಲಿ ಸೂಕ್ತ ಕಣ್ಣಿನ ರಕ್ಷಣಾ ಗ್ಲಾಸ್ ಇಲ್ಲದೆ ಕೇವಲ 6 ಸೆಕೆಂಡುಗಳ ಕಾಲ ಸೂರ್ಯನನ್ನು ನೇರವಾಗಿ ನೋಡಿದ ಪೇನ್, ನಂತರ ಪಕ್ಕದಲ್ಲಿದ್ದವರಿಂದ ಗ್ರಹಣ ವೀಕ್ಷಣೆಯ ಕನ್ನಡಕ ಪಡೆದು ಮತ್ತೊಮ್ಮೆ 15 ರಿಂದ 20 ಸೆಕೆಂಡುಗಳ ಕಾಲ ಗ್ರಹಣ ವೀಕ್ಷಿಸಿದ್ದರು. ಆದರೆ ಆ ಕನ್ನಡಕ 'ISO 12312-2' ಎಂಬ ಅಂತರರಾಷ್ಟ್ರೀಯ ಭದ್ರತಾ ಮಾನದಂಡವನ್ನು ಹೊಂದಿರಲಿಲ್ಲ. ಪರಿಣಾಮವಾಗಿ ಒಟ್ಟು 21 ಸೆಕೆಂಡುಗಳ ಕಾಲ ಗ್ರಹಣ ನೋಡಿದ ಪೇನ್ ಅವರಿಗೆ ಕೆಲವೇ ಗಂಟೆಗಳಲ್ಲಿ ಎಡಕಣ್ಣಿನ ಮಧ್ಯಭಾಗದಲ್ಲಿ ಮಸುಕಾದಂತೆ ಅನುಭವವಾಯಿತು.

ಸಾಮಾನ್ಯ ಮಸುಕಲ್ಲ, ಕಣ್ಣಿನ ಮುಂದೆ ಅರ್ಧಚಂದ್ರ!

ಕೆಲ ದಿನಗಳ ನಂತರವೂ ಆ ಮಸುಕು ಮರೆಯಾಗಲಿಲ್ಲ. ಬದಲಿಗೆ ಅವರು ಯಾವುದೇ ವಸ್ತುವನ್ನು ನೋಡಿದರೂ ಅದರ ಮಧ್ಯಭಾಗದಲ್ಲಿ ಅರ್ಧಚಂದ್ರಾಕಾರದ ಕಪ್ಪು ಚುಕ್ಕೆ (Blindspot) ಅಡ್ಡಬರಲು ಪ್ರಾರಂಭಿಸಿತು. ಇದರಿಂದ ಓದಲು, ಜನರ ಮುಖ ಗುರುತಿಸಲು ಹಾಗೂ ಸ್ಕ್ರೀನ್‌ಗಳನ್ನು ವೀಕ್ಷಿಸಲು ಅವರಿಗೆ ತೀವ್ರ ತೊಂದರೆಯಾಯಿತು.

ಮೌಂಟ್ ಸಿನಾಯ್‌ನ ಕಣ್ಣಿನ ಆಸ್ಪತ್ರೆಗೆ ಭೇಟಿ ನೀಡಿದಾಗ, ಅವರ ಕಣ್ಣಿನ ದೃಷ್ಟಿ ಸಾಮರ್ಥ್ಯ (Visual Acuity) ಬಲಗಣ್ಣು 20/20 ಮತ್ತು ಎಡಗಣ್ಣು 20/25 ರಷ್ಟಿತ್ತು (ಸಾಮಾನ್ಯ ಸ್ಥಿತಿ). ಆದರೆ, ಸಮಸ್ಯೆ ಇದ್ದದ್ದು ದೃಷ್ಟಿಯ ತೀವ್ರತೆಯಲ್ಲ, ಬದಲಿಗೆ ಸೆಂಟ್ರಲ್ ವಿಷನ್‌ನಲ್ಲಿ (ಮಧ್ಯ ದೃಷ್ಟಿ) ಮೂಡಿದ 'ಸೋಲಾರ್ ರೆಟಿನೋಪತಿ' (Solar Retinopathy) ಎಂಬ ಕಾಯಿಲೆಯಲ್ಲಿ.

ರೆಟಿನಾಗೆ ಹಾನಿಯಾದದ್ದು ಹೇಗೆ?

ಕಣ್ಣಿನ ರೆಟಿನಾ ಎಂಬುದು ಅತ್ಯಂತ ಸೂಕ್ಷ್ಮವಾದ ನರಮಂಡಲದ ಪದರವಾಗಿದ್ದು, ಬೆಳಕನ್ನು ಗ್ರಹಿಸಿ ಮೆದುಳಿಗೆ ಸಂಕೇತಗಳನ್ನು ಕಳುಹಿಸುತ್ತದೆ. ಇದರಲ್ಲಿರುವ 'ಕೋನ್' ಜೀವಕೋಶಗಳು ಪ್ರಕಾಶಮಾನ ಬೆಳಕು ಮತ್ತು ವಸ್ತುಗಳ ವಿವರವಾದ ಚಿತ್ರಣಕ್ಕೆ ಕಾರಣವಾಗುತ್ತವೆ. ಅದರಲ್ಲೂ ರೆಟಿನಾದ ಮಧ್ಯದಲ್ಲಿರುವ 'ಫೋವಿಯಾ' ಎಂಬ ಪುಟ್ಟ ಜಾಗದಲ್ಲಿ ಈ ಕೋನ್‌ಗಳ ಸಾಂದ್ರತೆ ಹೆಚ್ಚಿರುತ್ತದೆ.

ಸೂರ್ಯನ ಕಡೆಗೆ ನೇರವಾಗಿ ನೋಡಿದಾಗ, ಕಣ್ಣಿನ ಮಸೂರವು (Lens) ಆ ತೀವ್ರವಾದ ಸೂರ್ಯನ ಕಿರಣಗಳನ್ನು ಒಂದೇ ಸಣ್ಣ ಜಾಗಕ್ಕೆ ಕೇಂದ್ರೀಕರಿಸುತ್ತದೆ. ಸೂರ್ಯನ ಪ್ರಚಂಡ ತಾಪ ಮತ್ತು ಕೆಮಿಕಲ್ ರಿಯಾಕ್ಷನ್‌ಗೆ ಈ ಪ್ರೋಟೋರೆಸೆಪ್ಟರ್ (Photoreceptor) ಜೀವಕೋಶಗಳು ಸುಟ್ಟು ಕರಕಲಾಗುತ್ತವೆ. ಇಲ್ಲಿ ಮುಖ್ಯ ಸಂಗತಿಯೆಂದರೆ ರೆಟಿನಾದಲ್ಲಿ ನೋವಿನ ನರಗಳಿಲ್ಲದಿರುವುದರಿಂದ ಈ ಹಾನಿ ಸಂಭವಿಸುವಾಗ ಕಣ್ಣಿನಲ್ಲಿ ಯಾವುದೇ ನೋವಾಗುವುದಿಲ್ಲ! ಒಮ್ಮೆ ನಾಶವಾದ ಜೀವಕೋಶಗಳನ್ನು ದೇಹವು ಮರಳಿ ಉತ್ಪಾದಿಸಲು ಸಾಧ್ಯವಿಲ್ಲ.

ಡ್ರಾಯಿಂಗ್ ಶೀಟ್ ಮತ್ತು ರೆಟಿನಾ ಸ್ಕ್ಯಾನ್ ಎರಡೂ ಸೇಮ್

ಆಸ್ಪತ್ರೆಯ ವೈದ್ಯರು ಪೇನ್ ಅವರಿಗೆ ತಮಗೆ ಕಾಣಿಸದಿರುವ ಭಾಗದ ಚಿತ್ರ ಬರೆಯಲು (Draw) ಸೂಚಿಸಿದರು. ಅವರು ಕಾಗದದ ಮೇಲೆ ಬಿಡಿಸಿದ ಚಿತ್ರವು ಸೂರ್ಯಗ್ರಹಣದ ಸಮಯದಲ್ಲಿ ಕಾಣಿಸುವ ಅರ್ಧಚಂದ್ರಾಕಾರದ ರೂಪದಲ್ಲೇ ಇತ್ತು!

ವೈದ್ಯರು 'ಅಡಾಪ್ಟಿವ್ ಆಪ್ಟಿಕ್ಸ್' (Adaptive Optics) ಎಂಬ ಅತ್ಯಾಧುನಿಕ ಖಗೋಳವಿಜ್ಞಾನದ ತಂತ್ರಜ್ಞಾನ ಆಧಾರಿತ ಸ್ಕ್ಯಾನಿಂಗ್ ಯಂತ್ರದ ಮೂಲಕ ಪೇನ್ ಅವರ ಕಣ್ಣನ್ನು ಪರೀಕ್ಷಿಸಿದರು. ಅತ್ಯಂತ ಸೂಕ್ಷ್ಮ ಜೀವಕೋಶಗಳನ್ನು ಸ್ಕ್ಯಾನ್ ಮಾಡಿದಾಗ, ಆಕೆಯ ಎಡಕಣ್ಣಿನ ರೆಟಿನಾದಲ್ಲಿದ್ದ ಸುಟ್ಟ ಜೀವಕೋಶಗಳ ಆಕಾರ ಮತ್ತು ಪೇನ್ ಕಾಗದದ ಮೇಲೆ ಬಿಡಿಸಿದ ಆಕಾರ ಎರಡೂ ಶೇ.100 ರಷ್ಟು ಒಂದಕ್ಕೊಂದು ಹೋಲುತ್ತಿದ್ದವು! ಸೂರ್ಯನ ಪ್ರಕಾಶಮಾನ ಭಾಗವು ರೆಟಿನಾದ ಮೇಲೆ ಹೇಗೆ ಬಿತ್ತರಗೊಂಡಿತ್ತೋ, ಅದೇ ಆಕಾರದಲ್ಲಿ ಜೀವಕೋಶಗಳು ನಶಿಸಿಹೋಗಿದ್ದವು.

ಭಾಗಶಃ ಸೂರ್ಯಗ್ರಹಣ ಏಕೆ ಹೆಚ್ಚು ಅಪಾಯಕಾರಿ?

ಪೂರ್ಣ ಸೂರ್ಯಗ್ರಹಣದ (Totality) ಸಮಯದಲ್ಲಿ ಸೂರ್ಯ ಸಂಪೂರ್ಣವಾಗಿ ಮುಚ್ಚಲ್ಪಟ್ಟಾಗ ಕೆಲವು ಸೆಕೆಂಡುಗಳ ಕಾಲ ಕಣ್ಣಿನಿಂದ ನೋಡಬಹುದು. ಆದರೆ 'ಭಾಗಶಃ ಗ್ರಹಣ' ಅತ್ಯಂತ ಅಪಾಯಕಾರಿ. ಏಕೆಂದರೆ ಸೂರ್ಯನ ಸಣ್ಣ ಕತ್ತರಿಸಿದ ಭಾಗದಿಂದ ಹೊರಬರುವ ಕಿರಣಗಳು ಸಹ ಕಣ್ಣಿನ ಜೀವಕೋಶಗಳನ್ನು ಶಾಶ್ವತವಾಗಿ ನಾಶಪಡಿಸುವಷ್ಟು ಶಕ್ತಿಶಾಲಿಯಾಗಿರುತ್ತವೆ. ಸಾಮಾನ್ಯ ಸನ್ ಗ್ಲಾಸ್‌ಗಳು (Sunglasses) ಸೂರ್ಯನ ಈ ಅಪಾಯಕಾರಿ ರೇಡಿಯೇಶನ್ ತಡೆಯಲು ಸಾಧ್ಯವಿಲ್ಲ.

ಸೋಲಾರ್ ರೆಟಿನೋಪತಿಗೆ ಯಾವುದೇ ಚಿಕಿತ್ಸೆ ಇಲ್ಲ. ನಶಿಸಿಹೋದ ರೆಟಿನಾ ಜೀವಕೋಶಗಳನ್ನು ಮರುಸೃಷ್ಟಿಸಲು ಸಾಧ್ಯವಿಲ್ಲದಿರುವುದರಿಂದ ನಿಯಾ ಪೇನ್ ಅವರ ಎಡಕಣ್ಣಿನಲ್ಲಿ ಆ ಕತ್ತಲೆಯ ಚಂದ್ರಾಕಾರದ ಕಲೆ ಶಾಶ್ವತವಾಗಿ ಉಳಿದುಕೊಂಡಿದೆ. ಪ್ರಸ್ತುತ ಅವರು ಬಲಗಣ್ಣಿನ ಮೇಲೆ ಹೆಚ್ಚು ಅವಲಂಬಿತರಾಗಿ ಜೀವನ ನಡೆಸುತ್ತಿದ್ದಾರೆ. ಗ್ರಹಣದ ವೇಳೆ ಸುರಕ್ಷಿತ ಐಎಸ್‌ಒ (ISO) ಪ್ರಮಾಣೀಕೃತ ಕಣ್ಣಡಕ ಧರಿಸದಿದ್ದರೆ ಎಂತಹ ಭೀಕರ ಪರಿಣಾಮ ಎದುರಾಗಬಹುದು ಎಂಬುದಕ್ಕೆ ಈ ಘಟನೆ ಅತ್ಯಂತ ದೊಡ್ಡ ಉದಾಹರಣೆಯಾಗಿದೆ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಜಗತ್ತಿಗೆ ಬೆಳಕಿನ ಮಾಲಿನ್ಯದ ಎಚ್ಚರಿಕೆ ನೀಡಿದ ವಿಜ್ಞಾನಿಗಳು, ಇಂದು ಹುಟ್ಟಿದ ಮುಕ್ಕಳು 18 ವರ್ಷವಾಗುವ ವೇಳೆಗೆ ಕಾಣೋಕೆ ಸಿಗೋದಿಲ್ಲ ನಕ್ಷತ್ರಗಳು!
ಭಾರತದ 1868 ಸೂರ್ಯಗ್ರಹಣದಲ್ಲಿ ಸಿಕ್ಕಿತ್ತು ಸೂರ್ಯನ ನಿಗೂಢ ರಹಸ್ಯ, ಭೂಮಿಯಲ್ಲಿ ಪತ್ತೆಯಾಗಲು 27 ವರ್ಷ ಬೇಕಾಯ್ತು