
ಈ ಪ್ರಕೃತಿಯೇ ಒಂದು ವಿಸ್ಮಯ. ಅಗೆದಷ್ಟೂ, ಬಗೆದಷ್ಟೂ ವಿಸ್ಮಯಗಳ ಆಗರ ಇದು. ಈ ಭೂಮಿಯ ಮೇಲೆ, ಸಮುದ್ರದ ಆಳದಲ್ಲಿ ಇರುವ ಜೀವ-ಜಂತುಗಳ ಬಗ್ಗೆ ಮನುಷ್ಯರು ಎಷ್ಟೇ ಅಧ್ಯಯನ ಮಾಡಿದರೂ ಅದು ಈ ಪ್ರಕೃತಿಯ ಮುಂದೆ ಠುಸ್. ಎಷ್ಟೇ ಸಂಶೋಧನೆ ಮಾಡಿದರೂ ಹಲವು ಬಗೆಹರಿಯದ ಸಮಸ್ಯೆಯಾಗಿಯೇ ಉಳಿಯುತ್ತವೆ. ವಿಜ್ಞಾನ ಲೋಕಕ್ಕೂ ಸವಾಲಾಗಿರುವ ಒಂದು ಜೀವಿಯೀಗ ಪತ್ತೆಯಾಗಿದೆ. ಇದರ ದೇಹ ಪೀಸ್ ಪೀಸ್ ಮಾಡಿದ್ರೂ ಮತ್ತೆ ಹುಟ್ಟುವ ಜೀವಿ ಇದಾಗಿದೆ! ಇದೀಗ ಇದರ ಡಿಎನ್‌ಎ ಅಧ್ಯಯನ ಮಾಡುವ ಮೂಲಕ ಮನುಷ್ಯರ ಡಿಎನ್ಎಗೆ ಮ್ಯಾಚ್ ಆಗಿ ಅಮರತ್ವ ಪಡೆಯಲು ಸಾಧ್ಯವೇ ಎನ್ನುವ ಸಂಶೋಧನೆಗಳೂ ನಡೆಯುತ್ತಿವೆ!
ಅಂದಹಹಾಗೆ ಈ ಜೀವಿ ಕಂಡಿರುವುದು ಇಸ್ರೇಲ್ನಲ್ಲಿರುವ ಕೆಂಪು ಸಮದ್ರದಲ್ಲಿ. ಇದರ ದೇಹವನ್ನು ಮೂರು ಭಾಗಗಳಾಗಿ ತುಂಡಾಗಿ ಕತ್ತರಿಸಿದರೂ, ಕೇವಲ 30-40 ದಿನಗಳ ಅವಧಿಯಲ್ಲಿ ಮತ್ತೆ ಮರುಹುಟ್ಟು ಪಡೆಯುವ ಜೀವಿ ಇದಾಗಿದೆ. ಇಸ್ರೇಲ್ ದೇಶದ ಕರಾವಳಿ ತೀರದ ಕೆಂಪು ಸಮುದ್ರದಲ್ಲಿ ಜೀವಿಸುವ ಒಂದು ಚಿಕ್ಕ ಸಮುದ್ರ ಜೀವಿ, ತನ್ನ ದೇಹವನ್ನು ತುಂಡು ತುಂಡಾಗಿ ಕತ್ತರಿಸಿದರೂ ಕೇವಲ 30 ರಿಂದ 40 ದಿನಗಳಲ್ಲಿ ಪ್ರತಿಯೊಂದು ತುಂಡಿನಿಂದಲೂ ಹೊಸ ಜೀವಿಯಾಗಿ ಮರುಹುಟ್ಟು ಪಡೆಯುವ ಮೂಲಕ ವಿಜ್ಞಾನಿಗಳನ್ನು ದಂಗಾಗಿಸಿದೆ.
ಸಮುದ್ರದಲ್ಲಿ ಹೈಡ್ರಾ, ಜೆಲ್ಲಿಫಿಶ್ ಅಥವಾ ಪ್ಲನೇರಿಯಾದಂತಹ ಕೆಲವು ಅಕಶೇರುಕ ಜೀವಿಗಳು, ತಮ್ಮ ದೇಹವನ್ನು ಪುನರುತ್ಪತ್ತಿ ಮಾಡಿಕೊಳ್ಳುತ್ತವೆ. ಆದರೆ ಈ ವಿಚಿತ್ರ ಜೀವಿಯಾಗಿರುವ ಪಾಲಿಕಾರ್ಪ ಮೈಟಿಲಿಗೇರಾ ಜೀವಿಯ ಆವಿಷ್ಕಾರ ಜಾಗತಿಕ ಜೀವಶಾಸ್ತ್ರವನ್ನು ಬೆಚ್ಚಿಬೀಳಿಸಿದೆ. ಇದಕ್ಕಾಗಿ ಸಂಶೋಧಕರ ತಂಡವು ಒಂದು ಪ್ರಯೋಗ ಮಾಡಿತ್ತು. ಹೊಸ ಜೀವಿಯನ್ನು ಕಂಡ ತಕ್ಷಣ ಅದನ್ನು ಪ್ರಯೋಗಾಲಯಕ್ಕೆ ಕರೆತರಲಾಯಿತು. ಬಳಿಕ, ಇಸ್ರೇಲ್‌ನ ಪ್ರಸಿದ್ಧ ಟೆಲ್ ಅವೀವ್ ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರ ವಿಭಾಗದ ಪ್ರೊ. ನೋವಾ ಶೆಂಕರ್ ಹಾಗೂ ಸಂಶೋಧಕ ಟಾಲ್ ಗಾರ್ಡನ್ ನೇತೃತ್ವದಲ್ಲಿ ಸಂಶೋಧನೆ ನಡೆಸಿದಾಗ ಈ ಅದ್ಭುತ ಬೆಳಕಿಗೆ ಬಂದಿದೆ. ಇದನ್ನು ಪ್ರಖ್ಯಾತ ಜರ್ನಲ್ ‘ಫ್ರಾಂಟಿಯರ್ಸ್ ಇನ್ ಸೆಲ್ ಅಂಡ್ ಡೆವಲಪ್‌ಮೆಂಟಲ್ ಬಯಾಲಜಿ’ ಯಲ್ಲಿ ಪ್ರಕಟಿಸಲಾಗಿದೆ. ಹವಳದ ದಿಬ್ಬಗಳ ಮೇಲೆ ಕಲ್ಲಿನಂತೆ ಅಂಟಿಕೊಂಡಿರುವ ‘ಪಾಲಿಕಾರ್ಪ ಮೈಟಿಲಿಗೇರಾ’ ಎಂಬ ಹೆಸರಿನ ಒಂಟಿ ಸಮುದ್ರ ಜೀವಿ, ತನ್ನ ದೇಹವನ್ನು ತುಂಡಾಗಿಸಿದರೂ ಮರುಹುಟ್ಟು ಪಡೆಯುವ ಸಾಮರ್ಥ್ಯವನ್ನು ಹೊಂದಿದೆ ಎನ್ನುವುದು ಸಂಶೋಧನೆಯಿಂದ ತಿಳಿದಿದೆ.
ಇದರ ಜೀವನ ಸಾಮರ್ಥ್ಯ ಪರೀಕ್ಷಿಸಲು ವಿಜ್ಞಾನಿಗಳು ಈ ಜೀವಿಗಳನ್ನು ತಂದು ಅವುಗಳ ದೇಹವನ್ನು ಉದ್ದ ಮತ್ತು ಅಡ್ಡಲಾಗಿ ಕತ್ತರಿಸಿದರು. ಹೀಗೆ ಪೀಸ್ ಪೀಸ್ ಆದ ದೇಹಗಳಲ್ಲಿ, ಒಂದರಲ್ಲಿ ಮೆದುಳು ಮತ್ತು ನರಮಂಡಲ ಇರಲಿಲ್ಲ, ಎರಡನೇ ಭಾಗದಲ್ಲಿ ಹೃದಯ ಇರಲಿಲ್ಲ ಮತ್ತು ಮೂರನೇ ಭಾಗದಲ್ಲಿ ಜೀರ್ಣಾಂಗ ವ್ಯವಸ್ಥೆಯ ಸುಳಿವೇ ಇರಲಿಲ್ಲ. ಬೇರೆ ಯಾವುದೇ ಜೀವಿಯಾಗಿತ್ತು ಸ್ವಲ್ಪ ದಿನದಲ್ಲಿ ಕೊಳೆಯಬೇಕಿತ್ತು. ಆದರೆ ವಿಜ್ಞಾನಿಗಳು ಪೀಸ್ ಆಗಿರುವ ದೇಹಗಳನ್ನು 40 ದಿನಗಳ ಕಾಲ ನೀರಿನ ಟ್ಯಾಂಕ್ನಲ್ಲಿ ಇರಿಸಿ ಸೂಕ್ಷ್ಮವಾಗಿ ವೀಕ್ಷಿಸಿದರು. ಕತ್ತರಿಸಿದ ಕೆಲವೇ ದಿನಗಳಲ್ಲಿ ಗಾಯದ ಭಾಗದಲ್ಲಿ ಹೊಸ ಕೋಶಗಳು ಕ್ಷಿಪ್ರವಾಗಿ ಸೃಷ್ಟಿಯಾಗತೊಡಗಿದವು. 30 ರಿಂದ 40 ದಿನಗಳ ಅವಧಿಯಲ್ಲಿ, ಕತ್ತರಿಸಲ್ಪಟ್ಟ ಪ್ರತಿಯೊಂದು ತುಣುಕೂ ತನ್ನ ಕಳೆದುಹೋದ ನರಮಂಡಲ, ಕರುಳು ಮತ್ತು ಹೃದಯವನ್ನು ಶೂನ್ಯದಿಂದ ಹೊಸದಾಗಿ ಮರುನಿರ್ಮಿಸಿಕೊಂಡಿತು. ಅಂದರೆ, ಒಂದೇ ಒಂದು ಜೀವಿಯನ್ನು ಮೂರು ಭಾಗಗಳಾಗಿ ಕತ್ತರಿಸಿದರೆ, ಒಂದು ತಿಂಗಳ ನಂತರ ಅಲ್ಲಿ ಮೂರು ಪ್ರತ್ಯೇಕ, ಆರೋಗ್ಯವಂತ ಮತ್ತು ಸಂಪೂರ್ಣ ಕ್ರಿಯಾಶೀಲ ಜೀವಿಗಳು ಈಜಾಡುತ್ತಿದ್ದವು.
ಈವರೆಗೆ ಇಡೀ ದೇಹವನ್ನು ಮರುಸೃಷ್ಟಿಸಿಕೊಳ್ಳುವ ಶಕ್ತಿ ಕೇವಲ 'ಅಲೈಂಗಿಕ' ಸಂತಾನೋತ್ಪತ್ತಿ ನಡೆಸುವ ಸಮೂಹ ಜೀವಿಗಳಲ್ಲಿ ಮಾತ್ರ ಕಂಡುಬರುತ್ತಿತ್ತು. ಅವು ಒಂದಕ್ಕೊಂದು ತಳುಕುಹಾಕಿಕೊಂಡು ಕ್ಲೋನಿಂಗ್ ಮೂಲಕ ಬೆಳೆಯುತ್ತವೆ. ಆದರೆ ಈ ಪಾಲಿಕಾರ್ಪ ಮೈಟಿಲಿಗೇರಾ ಜೀವಿಯು ಒಂಟಿಯಾಗಿ ಬದುಕುವ ಹಾಗೂ ಕೇವಲ ಗಂಡು-ಹೆಣ್ಣು ಲೈಂಗಿಕ ಸಂಪರ್ಕದಿಂದ ಮಾತ್ರ ಸಂತಾನೋತ್ಪತ್ತಿ ನಡೆಸುವ ಜೀವಿಯಾಗಿದೆ. ಲೈಂಗಿಕ ಸಂತಾನೋತ್ಪತ್ತಿ ನಡೆಸುವ ಇಂತಹ ಪ್ರಾಣಿಯಲ್ಲಿ ಪೂರ್ಣ ದೇಹ ಮರುಸೃಷ್ಟಿಯಾಗುವುದು ಇತಿಹಾಸದಲ್ಲೇ ಮೊದಲು ಎಂದಿದ್ದಾರೆ ವಿಜ್ಞಾನಿಗಳು
ಈ ಜೀವಿ ಕೇವಲ ಯಾವುದೋ ಹುಳು ಅಥವಾ ಅಮೀಬಾ ಅಲ್ಲ. ಇದು ‘ಕಾರ್ಡೇಟಾ’ ಅಂದರೆ ಬೆನ್ನುಹುರಿ ಅಥವಾ ಬೆನ್ನಿನ ನರನಾಳ ಹೊಂದಿರುವ ಪ್ರಾಣಿ ಸಂಕುಲ ವಿಭಾಗಕ್ಕೆ ಸೇರಿದ ಜೀವಿಯಾಗಿದೆ. ಜೀವ ವಿಕಾಸದ ಹಾದಿಯಲ್ಲಿ ಮನುಷ್ಯರು ಸೇರಿದಂತೆ ಸಮಸ್ತ ಸಸ್ತನಿಗಳು, ಪಕ್ಷಿಗಳು ಮತ್ತು ಮೀನುಗಳು ಇದೇ ಕಾರ್ಡೇಟಾ ಕುಟುಂಬದ ಕವಲುಗಳಾಗಿವೆ ಅಂದರೆ ಜೀವ ವಿಕಾಸದ ಮಾರ್ಗದಲ್ಲಿ ಪಾಲಿಕಾರ್ಪ ಮೈಟಿಲುಗೇರಾ ಮಾನವನಿಗೆ ಅತ್ಯಂತ ಹತ್ತಿರವಿರುವ ಜೀವ ಪ್ರಭೇದವಾಗಿದೆ. ಇದೇ ಕಾರಣಕ್ಕೆ, ಮನುಷ್ಯರ ಮೇಲೆ ಪ್ರಯೋಗ ಮಾಡಬಹುದೇ ಎನ್ನುವ ಒಂದು ವಿಚಾರ ಸಂಶೋಧಕರಿಗೆ ಹೊಳೆದಿದೆ.
ಈ ಸಂಶೋಧನೆ ಅದ್ಭುತವಾಗಿದ್ದರೂ, ಇದನ್ನು ಸಮುದ್ರ ಜೀವಿಯಿಂದ ಮಾನವನ ಶರೀರಕ್ಕೆ ಪ್ರಾಯೋಗಿಕವಾಗಿ ಅಳವಡಿಸುವುದು ಸುಲಭದ ಕೆಲಸವಲ್ಲ. ಈ ಜೀವಿಯಲ್ಲಿ ಯಾವ ನಿರ್ದಿಷ್ಟ ಜೀನ್‌ಗಳು ಪುನರುತ್ಪತ್ತಿ ಪ್ರಕ್ರಿಯೆಯನ್ನು ನಿಯಂತ್ರಿಸುತ್ತವೆ ಮತ್ತು ಅವು ಮಾನವನ ಡಿಎನ್‌ಎ ಜೊತೆ ಹೇಗೆ ಹೊಂದಾಣಿಕೆಯಾಗುತ್ತವೆ ಎಂಬುದನ್ನು ಇನ್ನಷ್ಟೇ ಕಂಡುಕೊಳ್ಳಬೇಕಿದೆ. ಇದಕ್ಕೆ ಇನ್ನೊಂದು ಕಾರಣವೂ ಇದೆ. ಅದೇನೆಂದರೆ, ಸದ್ಯ ಜಾಗತಿಕ ವೈದ್ಯಕೀಯ ಲೋಕ ಎದುರಿಸುತ್ತಿರುವ ನೂರಾರು ಜಟಿಲ ಸಮಸ್ಯೆಗಳಿಗೆ ಕೀಲಿಕೈ ಒದಗಿಸಬಲ್ಲದು ಈ ಜೀವಿ. ಮಾನವನಿಗೆ ತೀವ್ರ ಹೃದಯಾಘಾತ ಸಂಭವಿಸಿದಾಗ ಹೃದಯದ ಲಕ್ಷಾಂತರ ಸ್ನಾಯುಕೋಶಗಳು ಸತ್ತುಹೋಗುತ್ತವೆ. ಮಾನವ ದೇಹಕ್ಕೆ ಹೊಸ ಹೃದಯ ಸ್ನಾಯುಗಳನ್ನು ಬೆಳೆಸುವ ಸಾಮರ್ಥ್ಯವಿಲ್ಲದ ಕಾರಣ ರೋಗಿಯು ಜೀವನಪೂರ್ತಿ ಹೃದಯ ವೈಫಲ್ಯದಿಂದ ಬಳಲುತ್ತಾನೆ. ಆದರೆ ಸಮುದ್ರ ಜೀವಿ ಶೂನ್ಯದಿಂದ ಹೊಸ ಹೃದಯ ನಿರ್ಮಿಸಿಕೊಳ್ಳುವ ಆನುವಂಶಿಕ ಗುಟ್ಟನ್ನು ವಿಜ್ಞಾನಿಗಳು ಬಯಲು ಮಾಡಿದರೆ, ಮನುಷ್ಯನಲ್ಲೂ ಹಾನಿಗೊಳಗಾದ ಹೃದಯ ಕೋಶಗಳನ್ನು ನೈಸರ್ಗಿಕವಾಗಿ ಪುನರುತ್ಪತ್ತಿ ಮಾಡುವ ಔಷಧಗಳನ್ನು ತಯಾರಿಸಬಹುದು.
ಅದರಂತೆ ಮಾನವನ ಕೇಂದ್ರ ನರಮಂಡಲ ಒಮ್ಮೆ ಹಾನಿಯಾದರೆ ಅದನ್ನು ಸರಿಪಡಿಸುವುದು ಪ್ರಸ್ತುತ ಅಸಾಧ್ಯ. ಅಪಘಾತಗಳಲ್ಲಿ ಬೆನ್ನುಹುರಿ ತುಂಡಾಗಿ ಪಾರ್ಶ್ವವಾಯು ತುತ್ತಾದವರು, ಆಲ್ಝೈಮರ್ಸ್ ಅಥವಾ ಪಾರ್ಕಿನ್ಸನ್ ಕಾಯಿಲೆಯಿಂದ ಮೆದುಳಿನ ಜೀವಕೋಶ ಕಳೆದುಕೊಂಡ ರೋಗಿಗಳಿಗೆ, ಈ ಜೀವಿಯ ನರಮಂಡಲ ಪುನರುತ್ಪತ್ತಿ ತಂತ್ರಜ್ಞಾನ ಆಶಾಕಿರಣವಾಗಲಿದೆ. ಅಷ್ಟೇ ಅಲ್ಲದೇ ವಿಶ್ವಾದ್ಯಂತ ಕಿಡ್ನಿ, ಲಿವರ್ ಮತ್ತು ಹೃದಯ ವೈಫಲ್ಯದಿಂದ ಬಳಲುತ್ತಿರುವ ಕೋಟ್ಯಂತರ ರೋಗಿಗಳು ಸೂಕ್ತ ದಾನಿಗಳು ಸಿಗದೆ ಸಾವನ್ನಪ್ಪುತ್ತಿದ್ದಾರೆ. ಈ ಜೀವಿಯ ಕಾಂಡಕೋಶಗಳ ಕಾರ್ಯವೈಖರಿಯನ್ನು ಅರ್ಥೈಸಿಕೊಂಡರೆ, ಭವಿಷ್ಯದಲ್ಲಿ ರೋಗಿಯ ಸ್ವಂತ ಕೋಶಗಳಿಂದಲೇ ಲ್ಯಾಬ್‌ಗಳಲ್ಲಿ ಪೂರ್ಣ ಪ್ರಮಾಣದ ನೈಸರ್ಗಿಕ ಅಂಗಾಂಗಗಳನ್ನು ಪುನರುತ್ಪತ್ತಿ ಮಾಡುವ ದಿನಗಳು ದೂರವಿಲ್ಲ ಎಂದೇ ವ್ಯಾಖ್ಯಾನಿಸಲಾಗುತ್ತಿದೆ!
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.