
ವಾಷಿಂಗ್ಟನ್: ರಾತ್ರಿ ಹೊತ್ತಿನಲ್ಲೂ ಭೂಮಿಗೆ ಸೂರ್ಯನ ಬೆಳಕನ್ನು ನೀಡುವ ತನ್ನ ಮಹತ್ವಕಾಂಕ್ಷೆ ಯೋಜನೆಗೆ ಅಮೆರಿಕದ ಮೂಲದ ರಿಫ್ಲೆಕ್ಟ್ ಆರ್ಬಿಟಲ್ ಕಂಪನಿಯು, ಹೈದ್ರಾಬಾದ್ ಮೂಲದ ಸ್ಕೈರೂಟ್ ಕಂಪನಿಯನ್ನು ಆರಿಸಿಕೊಂಡಿದೆ.
ಕ್ಯಾಲಿಫೋರ್ನಿಯಾ ಮೂಲದ ರಿಫ್ಲೆಕ್ಟ್ ಆರ್ಬಿಟಲ್, ಕಂಪನಿಯು ಭೂಕಕ್ಷೆಯಲ್ಲಿ ಹಲವು ಉಪಗ್ರಹಗಳನ್ನು ಹಾರಿಬಿಟ್ಟು ಬೃಹತ್ ಪ್ರತಿಫಲಿಸುವ ಫಲಕಗಳ ಮೂಲಕ ಸೂರ್ಯನ ಬೆಳಕನ್ನು ಬಳಸಿಕೊಂಡು ಬೇಡಿಕೆ ಆಧಾರದ ಮೇಲೆ ರಾತ್ರಿ ಹೊತ್ತಲ್ಲೂ ಸೂರ್ಯನ ಬೆಳಕು ಒದಗಿಸಲಿದೆ. ರಾತ್ರಿ ವೇಳೆ ಸಂಭವಿಸುವ ದುರಂತ, ಪ್ರಾಕೃತಿಕ ವಿಕೋಪಗಳಂಥ ಸಂದರ್ಭದಲ್ಲಿ ಹುಡುಕಾಟ ಕಾರ್ಯಾಚರಣೆ ಸೇರಿ ಹಲವು ಉದ್ದೇಶಗಳಿಗೆ ಇದರಿಂದ ಅನುಕೂಲ ಆಗಲಿದೆ ಎಂದು ಕಂಪನಿ ತಿಳಿಸಿದೆ.
ಈ ಸಂಬಂಧ ಭಾರತದಲ್ಲಿ ಮೊದಲ ಬಾರಿ ಖಾಸಗಿ ರಾಕೆಟ್ನ ಯಶಸ್ವಿ ಪ್ರಯೋಗ ನಡೆಸಿರುವ ಹೈದರಾಬಾದ್ ಮೂಲದ ಸ್ಕೈರೂಟ್ ಏರೋಸ್ಪೇಸ್ ಜತೆಗೆ ಕಂಪನಿಯು ಒಪ್ಪಂದ ಮಾಡಿಕೊಂಡಿದೆ. ಸ್ಕೈರೂಟ್ನ ವಿಕ್ರಂ ರಾಕೆಟ್ ಬಳಸಿಕೊಂಡು ಕಂಪನಿಯು ಎರಡು ಉಪಗ್ರಹಗಳನ್ನು ನಭದಲ್ಲಿ ಕೂರಿಸಲಿದೆ.
ಬಾಹ್ಯಾಕಾಶ ತಂತ್ರಜ್ಞಾನವನ್ನು ವಿನೂತನ ರೀತಿಯಲ್ಲಿ ಬಳಸಿಕೊಂಡು ಭೂಮಿಯಲ್ಲಿ ಹೊಸ ಸಾಧ್ಯತೆಗಳಿಗೆ ಮುನ್ನುಡಿ ಬರೆಯುತ್ತಿರುವ ರಿಫ್ಲೆಕ್ಟ್ ಆರ್ಬಿಟಲ್ ಸಂಸ್ಥೆ ಜತೆ ಒಪ್ಪಂದಕ್ಕೆ ನಾವು ತೀವ್ರ ಉತ್ಸುಕರಾಗಿದ್ದೇವೆ ಎಂದು ಸ್ಕೈರೂಟ್ ಏರೋಸ್ಪೇಸ್ ಸಿಇಒ ಪವನ್ ಚಂದನ್ ಅವರು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಐದು ಕಿ.ಮೀ. ವ್ಯಾಪ್ತಿಯಲ್ಲಿ ಯಾವಾಗ ಬೇಕಿದ್ದರೂ ಸೂರ್ಯನ ಬೆಳಕನ್ನು ಎಷ್ಟು ಬೇಕೋ, ಅಷ್ಟು ಪ್ರತಿಫಲಿಸುವ ರೀತಿ ಸೇವೆಯನ್ನು ಕಂಪನಿ ನೀಡಲಿದೆ. ರಕ್ಷಣಾ ಕಾರ್ಯಾಚರಣೆ, ಕೈಗಾರಿಕಾ ವಲಯಗಳಲ್ಲಿನ ಕೆಲಸದ ಅವಧಿ ವಿಸ್ತರಣೆ, ಸಾರ್ವಜನಿಕ ಕಾರ್ಯಕ್ರಮಗಳು, ರಾತ್ರಿ ಹೊತ್ತಲ್ಲೂ ರಕ್ಷಣಾ ಕಾರ್ಯಕ್ಕೆ ನೆರವು, ಸೋಲಾರ್ ಪಾರ್ಕ್ಗಳಿಂದ ರಾತ್ರಿ ಹೊತ್ತೂ ವಿದ್ಯುತ್ ಉತ್ಪಾದನೆಗೆ ಈ ಸೇವೆ ಬಳಸಿಕೊಳ್ಳಬಹುದಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.
ಸ್ಮಾರ್ಟ್ಫೋನ್ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್ಡೇಟ್. ಡಿಜಿಟಲ್ ಟ್ರೆಂಡ್ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್ಅಪ್ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.