ಮನೆ ಮುಂದೆ ಜಮೀನು ಉಳುಮೆ ಮಾಡುವಾಗ ಸಿಕ್ಕಿತು ಅಪರೂಪದ ನಿಧಿ: ಪತ್ತೆಯಾಯಿತು ಫೇರೋ ರಾಮ್ಸೆಸ್ II ನ ಬೃಹತ್ ಪ್ರತಿಮೆ!

Published : Oct 16, 2026, 03:57 PM IST
egyptian Farmer

ಸಾರಾಂಶ

ಈಜಿಪ್ಟ್‌ನ ಬೆಹ್‌ಬೀಟ್ ಎಲ್ ಹಾಗರ್ ಗ್ರಾಮದಲ್ಲಿ ಜಮೀನು ಉಳುಮೆ ಮಾಡುತ್ತಿದ್ದ ರೈತನಿಗೆ ಪ್ರಸಿದ್ಧ ದೊರೆ ರಾಮ್ಸೆಸ್ II ನ ಬೃಹತ್ ಪ್ರತಿಮೆಗಳು ಪತ್ತೆಯಾಗಿವೆ. ಪುರಾತತ್ವ ತಜ್ಞರು ಸ್ಥಳದಲ್ಲಿ ಉತ್ಖನನ ನಡೆಸಿ 27 ಅಡಿ ಎತ್ತರದ ಪ್ರತಿಮೆಯ ಭಾಗಗಳು ಮತ್ತು ಅಪರೂಪದ ಗ್ರಾನೈಟ್ ಶಿಲೆಯನ್ನು ಶೋಧಿಸಿದ್ದಾರೆ. ರೈತನ ಪ್ರಾಮಾಣಿಕತೆಯನ್ನು ಸರ್ಕಾರ ಶ್ಲಾಘಿಸಿದ್ದು, ಹೆಚ್ಚಿನ ಸಂಶೋಧನೆ ಮುಂದುವರಿದಿದೆ.

ಈಜಿಪ್ಟ್‌ನ ಘರ್ಬಿಯಾ ಪ್ರಾಂತ್ಯದ ಬೆಹ್‌ಬೀಟ್ ಎಲ್ ಹಾಗರ್ ಎಂಬ ಗ್ರಾಮದಲ್ಲಿ ಅಪರೂಪದ ಪುರಾತತ್ವ ಅಂಶವೊಂದು ಬೆಳಕಿಗೆ ಬಂದಿದೆ. ತಮ್ಮ ಮನೆಯ ಮುಂಭಾಗದಲ್ಲಿದ್ದ ಜಮೀನನ್ನು ಉಳುಮೆ ಮಾಡುತ್ತಿದ್ದ ರೈತನೊಬ್ಬನಿಗೆ, ಬೈಬಲ್‌ನಲ್ಲಿ ಪ್ರಸ್ತಾಪಿತ ಪ್ರಸಿದ್ಧ ಈಜಿಪ್ಟ್ ರಾಜ ರಾಮ್ಸೆಸ್ II ನ ಬೃಹತ್ ರಾಜಮನೆತನದ ಸುಂದರ ಪ್ರತಿಮೆ ಪತ್ತೆಯಾಗಿದೆ. 'ನ್ಯೂಯಾರ್ಕ್ ಪೋಸ್ಟ್' ಹಾಗೂ 'ಹೆರಿಟೇಜ್ ಡೈಲಿ' ವರದಿಗಳ ಪ್ರಕಾರ, ರೈತ ತಕ್ಷಣವೇ ಸ್ಥಳೀಯ ಪ್ರಾಚೀನ ವಸ್ತುಗಳ ನಿಯಂತ್ರಣಾಧಿಕಾರಿಗಳಿಗೆ ಮಾಹಿತಿ ನೀಡಿದ್ದು, ತದನಂತರ ಈಜಿಪ್ಟ್‌ನ 'ಸುಪ್ರೀಂ ಕೌನ್ಸಿಲ್ ಆಫ್ ಆಂಟಿಕ್ವಿಟೀಸ್'ನ ತಜ್ಞರ ತಂಡವು ಸ್ಥಳಕ್ಕೆ ಧಾವಿಸಿ ಭಾರಿ ಉತ್ಖನನ ಪ್ರಕ್ರಿಯೆ ಆರಂಭಿಸಿದೆ.

27 ಅಡಿ ಎತ್ತರದ ಬೃಹತ್ ಪ್ರತಿಮೆಯ ಭಾಗಗಳು ಪತ್ತೆ

ಉತ್ಖನನದ ವೇಳೆಯಲ್ಲಿ ಪ್ರಖ್ಯಾತ ದೊರೆ ರಾಮ್ಸೆಸ್ II ನ 5 ಅಡಿಗೂ ಹೆಚ್ಚು ಎತ್ತರವಿರುವ ತಲೆಯ ಭಾಗ ಪತ್ತೆಯಾಗಿದೆ. ಈ ಶಿರಸ್ಸಿನ ಮೇಲೆ ಮೇಲ್ಭಾಗ ಮತ್ತು ಕೆಳಭಾಗದ ಈಜಿಪ್ಟ್ ಅನ್ನು ಪ್ರತಿನಿಧಿಸುವ ಕಿರೀಟ ವನ್ನು ಕೆತ್ತಲಾಗಿದೆ. ಪತ್ತೆಯಾಗಿರುವ ತಲೆಯ ಗಾತ್ರ ಹಾಗೂ ಶೈಲಿಯನ್ನು ಆಧರಿಸಿ ದೃಢೀಕರಿಸಿರುವ ಪುರಾತತ್ವ ತಜ್ಞರು, ಈ ಸಂಪೂರ್ಣ ಪ್ರತಿಮೆಯು ಪೀಠವನ್ನು ಸೇರಿ ಬರೋಬ್ಬರಿ 27 ಅಡಿಗಿಂತಲೂ ಹೆಚ್ಚು ಎತ್ತರವಿದೆ ಎಂದು ಅಂದಾಜಿಸಿದ್ದಾರೆ.

ಇದಷ್ಟೇ ಅಲ್ಲದೆ, ಈ ಪ್ರತಿಮೆಯ ಹಿಂಭಾಗದಲ್ಲಿದ್ದ ಕಲ್ಲಿನ ಕಂಬದ ಒಂದು ಭಾಗವೂ ದೊರೆತಿದ್ದು, ಅದರ ಮೇಲೆ ಈ ಫೇರೋನ ರಾಜಮನೆತನದ ಅಧಿಕೃತ ಹೆಸರು ಮತ್ತು ಬಿರುದುಗಳನ್ನು ಒಳಗೊಂಡ ಶಾಸನಗಳನ್ನು ಕೆತ್ತಲಾಗಿದೆ.

ಮತ್ತೊಂದು ಪ್ರತಿಮೆ, ಅಪರೂಪದ ಗ್ರಾನೈಟ್ ಶಿಲೆ

ಇದೇ ಉತ್ಖನನ ಸ್ಥಳದಲ್ಲಿ 8 ಅಡಿಗಿಂತ ಕಡಿಮೆ ಎತ್ತರವಿರುವ ಮತ್ತೊಂದು ಸಣ್ಣ ರಾಜಮನೆತನದ ಪ್ರತಿಮೆಯನ್ನೂ ಪತ್ತೆ ಮಾಡಲಾಗಿದೆ. ಈ ಕಲಾಕೃತಿಯ ಕಾಲುಗಳು ಮತ್ತು ಪೀಠದ ಭಾಗಗಳು ಧ್ವಂಸಗೊಂಡಿದ್ದರೂ, ಮುಖದ ಕೆತ್ತನೆ ಅತ್ಯಂತ ಸ್ಪಷ್ಟವಾಗಿದೆ. ಪ್ರಾಚೀನ ಈಜಿಪ್ಟಿನ ದೊರೆಗಳು ಧರಿಸುತ್ತಿದ್ದ ಪಟ್ಟೆಯುಳ್ಳ ಸಾಂಪ್ರದಾಯಿಕ 'ನೀಮ್ಸ್' ರಾಜ ಶಿರಸ್ತ್ರಾಣವು ಇದರ ಮೇಲಿದೆ. ಮುಖದ ಸೌಂದರ್ಯ ಹಾಗೂ ಲಕ್ಷಣಗಳು ದೊಡ್ಡ ಪ್ರತಿಮೆಯನ್ನು ಹೋಲುತ್ತಿರುವುದರಿಂದ, ಇದು ಕೂಡ ರಾಮ್ಸೆಸ್ II ನ ಮತ್ತೊಂದು ಪ್ರತಿಕೃತಿ ಎಂದು ಭಾವಿಸಲಾಗಿದೆ.

ಜೊತೆಗೆ 4 ಅಡಿ ಎತ್ತರದ ಅಪರೂಪದ 'ಗುಲಾಬಿ ಗ್ರಾನೈಟ್' ಕಲ್ಲಿನ ಬ್ಲಾಕ್ ಪತ್ತೆಯಾಗಿದೆ. ಇದರ ಮೇಲೆ ಚಿತ್ರಲಿಪಿಗಳಿದ್ದು, ಫೇರೋನನ್ನು ಮೇಲ್ಭಾಗ ಮತ್ತು ಕೆಳಭಾಗದ ಈಜಿಪ್ಟ್‌ನ ರಾಜ ಹಾಗೂ ಸೂರ್ಯದೇವ 'ರಾ' ನ ಮಗ ಎಂದು ಹೊಗಳುವ ಸಾಲುಗಳು ನಮೂದಾಗಿವೆ.

ಬೈಬಲ್‌ನ ಹಿನ್ನೆಲೆ ಹಾಗೂ ದೊರೆ ರಾಮ್ಸೆಸ್ II

ಕ್ರಿ.ಪೂ. 1303 ರಲ್ಲಿ ಜನಿಸಿದ ರಾಮ್ಸೆಸ್ II, ಈಜಿಪ್ಟಿನ 'ಹೊಸ ಸಾಮ್ರಾಜ್ಯ'ದ (ಕ್ರಿ.ಪೂ. 1570 ರಿಂದ 1069) ಅತ್ಯಂತ ಪ್ರಭಾವಶಾಲಿ, ಸಾಹಸಿ ಹಾಗೂ ಶಕ್ತಿಶಾಲಿ ಆಡಳಿತಗಾರರಲ್ಲಿ ಒಬ್ಬನೆಂದು ಜಾಗತಿಕ ಇತಿಹಾಸಕಾರರು ಪರಿಗಣಿಸುತ್ತಾರೆ.

ಧಾರ್ಮಿಕ ಮೂಲಗಳ ಪ್ರಕಾರ, ಪವಿತ್ರ ಬೈಬಲ್‌ನ 'ಎಕ್ಸೋಡಸ್' ಗ್ರಂಥದಲ್ಲಿ ಪ್ರವಾದಿ ಮೋಶೆಯ ಕಥೆಯೊಂದಿಗೆ ಈ ರಾಜನ ಹೆಸರನ್ನು ಪರೋಕ್ಷವಾಗಿ ಜೋಡಿಸಲಾಗುತ್ತದೆ. ಇಸ್ರೇಲೀಯರನ್ನು ಗುಲಾಮರನ್ನಾಗಿ ಮಾಡಿ, ಮೋಶೆಯ ಮಾತನ್ನು ಧಿಕ್ಕರಿಸಿ ದೇವರ ಕೋಪಕ್ಕೆ ತುತ್ತಾದ ಈಜಿಪ್ಟ್ ಫೇರೋ ಈತನೇ ಎಂದು ಜಾನಪದ ಹಾಗೂ ಸಾಂಪ್ರದಾಯಿಕ ನಂಬಿಕೆಗಳಲ್ಲಿ ವಿವರಿಸಲಾಗುತ್ತದೆ.

ರೈತನ ಪ್ರಾಮಾಣಿಕತೆಗೆ ಸಚಿವರಿಂದ ಶ್ಲಾಘನೆ

ಈಜಿಪ್ಟ್‌ನ ಪ್ರವಾಸೋದ್ಯಮ ಮತ್ತು ಪ್ರಾಚ್ಯವಸ್ತು ಸಚಿವ ಶೆರಿಫ್ ಫಾಥಿ ಈ ಐತಿಹಾಸಿಕ ಶೋಧವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ನೈಲ್ ಡೆಲ್ಟಾ ಪ್ರದೇಶವು ಪ್ರಾಚೀನ ಈಜಿಪ್ಟ್‌ನಲ್ಲಿ ರಾಜಕೀಯ, ಸಾಂಸ್ಕೃತಿಕ ಹಾಗೂ ಆರ್ಥಿಕ ಭದ್ರಕೋಟೆಯಾಗಿತ್ತು ಎಂಬುದಕ್ಕೆ ಈ ಶೋಧನೆ ಜೀವಂತ ಸಾಕ್ಷಿಯಾಗಿದೆ. ಆ ಯುಗದ ವಾಸ್ತುಶಿಲ್ಪ ವಿಕಸನದ ಕುರಿತು ಹೆಚ್ಚಿನ ಅಧ್ಯಯನ ನಡೆಸಲು ಇದು ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಅಲ್ಲದೆ, ಪತ್ತೆಯಾದ ಮಹತ್ವದ ಕಲಾಕೃತಿಯನ್ನು ರಹಸ್ಯವಾಗಿ ಮಾರಾಟ ಮಾಡಲು ಅಥವಾ ಹಾನಿಗೊಳಿಸಲು ಯತ್ನಿಸದೆ, ತಕ್ಷಣವೇ ಸರ್ಕಾರಿ ಇಲಾಖೆಗೆ ಮಾಹಿತಿ ನೀಡಿದ ರೈತನ ಪ್ರಾಮಾಣಿಕತೆಯನ್ನು ಸಚಿವರು ಅಭಿನಂದಿಸಿದರು. ದೇಶದ ಸಾಂಸ್ಕೃತಿಕ ಪರಂಪರೆಯನ್ನು ಕಾಪಾಡುವಲ್ಲಿ ಸಮಾನ್ಯ ನಾಗರಿಕರು ಎಷ್ಟು ಪ್ರಮುಖ ಪಾತ್ರ ವಹಿಸಬಹುದು ಎಂಬುದಕ್ಕೆ ಈ ಘಟನೆ ಮಾದರಿಯಾಗಿದೆ ಎಂದು ಹೇಳಿದರು. ಪ್ರಸ್ತುತ ಪುರಾತತ್ವ ಇಲಾಖೆಯ ತಂಡವು ಆ ಸ್ಥಳದಲ್ಲಿ ವೈಜ್ಞಾನಿಕ ಉತ್ಖನನವನ್ನು ಮುಂದುವರಿಸಿದೆ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ನಿಮ್ಮ ಹಿಂದೆ ಯಾರೋ ನಿಂತಂತೆ, ಮಾತನಾಡಿದಂತ ಅನುಭವ ಆಗ್ತಿದ್ಯಾ? ಈ ದೆವ್ವದ ಬಗ್ಗೆ ವಿಜ್ಞಾನ ಹೇಳೋದೇನು?
ಹಲಸಿನ ಹಣ್ಣಿನಿಂದ ಸಾರದಿಂದ ನೀರಿನ ಫ್ಲೋರೈಡ್‌ ತೆಗೆಯುವ ಟೆಕ್‌ ಅವಿಷ್ಕರಿಸಿದ ಎನ್‌ಐಟಿ