‘ಪುನೀತ್‌’ ಉಪಗ್ರಹ ಡಿ.31ರೊಳಗೆ ಉಡಾವಣೆ: ಸಚಿವ ಅಶ್ವತ್ಥನಾರಾಯಣ

By Kannadaprabha NewsFirst Published Aug 26, 2022, 4:30 AM IST
Highlights

ಶಾಲಾ ಮಕ್ಕಳೇ ಸಿದ್ಧಪಡಿಸಿರುವ ಸರ್ವೇಕ್ಷಣ ಉಪಗ್ರಹ, 1000 ಮಕ್ಕಳಿಗೆ ಶ್ರೀಹರಿಕೋಟಾ ಪ್ರವಾಸ: ಸಚಿವ ಅಶ್ವತ್ಥ್‌

ಬೆಂಗಳೂರು(ಆ.26):  ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳೇ ನಿರ್ಮಿಸುತ್ತಿರುವ ‘ಪುನೀತ್‌’ ಹೆಸರಿನ ಸರ್ವೇಕ್ಷಣ ಉಪಗ್ರಹವನ್ನು ನ.15ರಿಂದ ಡಿ.31ರ ನಡುವೆ ಶ್ರೀಹರಿಕೋಟಾದಿಂದ ಉಡಾವಣೆ ಮಾಡಲಾಗುವುದು ಎಂದು ಉನ್ನತ ಶಿಕ್ಷಣ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ತಿಳಿಸಿದ್ದಾರೆ.

ಈ ಬಗ್ಗೆ ಅರಿವು ಮೂಡಿಸಲು ಹಲವು ಸ್ಪರ್ಧೆ ಏರ್ಪಡಿಸಿದ್ದು, ಆಯ್ಕೆಯಾದ ಒಂದು ಸಾವಿರ ವಿದ್ಯಾರ್ಥಿಗಳನ್ನು ಉಪಗ್ರಹ ಉಡಾವಣೆ ಕಾರ್ಯಕ್ರಮಕ್ಕಾಗಿ ಶ್ರೀಹರಿಕೋಟಾಗೆ ಕರೆದುಕೊಂಡು ಹೋಗಲಾಗುವುದು ಎಂದೂ ಅವರು ಹೇಳಿದ್ದಾರೆ.
ಉಪಗ್ರಹ ಯೋಜನೆಯ ಪ್ರಗತಿ ಕುರಿತು ಗುರುವಾರ ವಿಕಾಸಸೌಧದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಶಾಲಾ ಮಕ್ಕಳಲ್ಲಿ ವೈಜ್ಞಾನಿಕ ಕುತೂಹಲ ಮತ್ತು ಆಸಕ್ತಿ ಬೆಳೆಸಲು ಪ್ರೌಢಶಾಲಾ ಮತ್ತು ಪದವಿಪೂರ್ವ ವಿದ್ಯಾರ್ಥಿಗಳಿಗೆ ಜಿಲ್ಲೆ, ವಿಭಾಗೀಯ ಮತ್ತು ರಾಜ್ಯ ಮಟ್ಟದ ಸ್ಪರ್ಧೆಗಳನ್ನು ನಡೆಸಲಾಗುತ್ತಿದೆ. ಸೆ.10 ರವರೆಗೆ ನೋಂದಣಿಗೆ ಅವಕಾಶ ಕಲ್ಪಿಸಲಾಗಿದ್ದು, ಜಿಲ್ಲಾ ಮಟ್ಟದ ಕ್ವಿಜ್‌ ಸ್ಪರ್ಧೆ ಸೆ.19ರಿಂದ 23ರವರೆಗೆ ನಡೆಯಲಿದೆ. ಪ್ರಬಂಧಗಳನ್ನು ಸೆ.20ರವರೆಗೆ ಅಪ್‌ಲೋಡ್‌ ಮಾಡಲು ಅವಕಾಶ ನೀಡಲಾಗಿದೆ. ಜಿಲ್ಲಾ ಮಟ್ಟದ ವಿಜ್ಞಾನ ಚಿತ್ರಕಲೆ ಸ್ಪರ್ಧೆ ಸೆ.26ರಿಂದ 30, ವಿಭಾಗ ಮಟ್ಟದ ಪೋಸ್ಟರ್‌ ಸ್ಪರ್ಧೆ ಅ.3ರಿಂದ 7, ರಾಜ್ಯ ಮಟ್ಟದ ಕ್ವಿಜ್‌ ಅ.17ರಿಂದ 19 ರವರೆಗೆ, ರಾಜ್ಯ ಮಟ್ಟದ ಪೋಸ್ಟರ್‌ ಸ್ಪರ್ಧೆ (ಆನ್‌ಲೈನ್‌) ಅ.18ರಿಂದ 20 ರವರೆಗೆ ಆಯೋಜಿಸಲಾಗಿದ್ದು, ಅಕ್ಟೋಬರ್‌ ಕೊನೆಯ ವಾರ ಅಂತಿಮ ಫಲಿತಾಂಶ ಪ್ರಕಟಿಸಲಾಗುವುದು ಎಂದು ತಿಳಿಸಿದರು.

ISRO: ಅಪರೂಪದ ವೈಫಲ್ಯ! 750 ಮಕ್ಕಳು ಸಿದ್ಧಪಡಿಸಿದ ಆಜಾದಿ ಉಪಗ್ರಹ ಸೇರಿ 2 ಉಪಗ್ರಹ ವ್ಯರ್ಥ

ಸ್ಪರ್ಧೆಯ ಭಾಗವಾಗಿ ಪ್ರೌಢಶಾಲಾ ಮಕ್ಕಳಿಗೆ ಆನ್‌ಲೈನ್‌ ರಸಪ್ರಶ್ನೆ, ಸ್ಥಳದಲ್ಲೇ ಚಿತ್ರ ಬಿಡಿಸುವ ಸ್ಪರ್ಧೆ, ಪಿಯುಸಿ ವಿದ್ಯಾರ್ಥಿಗಳಿಗೆ ಪ್ರಬಂಧ ರಚನೆ, ಖಗೋಳ ವಿಜ್ಞಾನಕ್ಕೆ ಸಂಬಂಧಿಸಿದ ಪೋಸ್ಟರ್‌ ರಚನೆ ಏರ್ಪಡಿಸಲಾಗುತ್ತಿದೆ. ಈ ಸಂಬಂಧ ಎಲ್ಲಾ 31 ಜಿಲ್ಲೆಗಳ ಡಿಡಿಪಿಐಗಳಿಗೆ ಈಗಾಗಲೇ ಸೂಚನೆ ಕೊಡಲಾಗಿದೆ ಎಂದು ಅವರು ತಿಳಿಸಿದರು.

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ವ್ಯವಸ್ಥಾಪಕ ನಿರ್ದೇಶಕ ಬಸವರಾಜ ಸೇರಿದಂತೆ ಇತರ ಹಿರಿಯ ವಿಜ್ಞಾನಿಗಳು ಸಭೆಯಲ್ಲಿ ಹಾಜರಿದ್ದರು.
 

click me!