ಗಗನಯಾನಕ್ಕೆ ಸಿದ್ಧತೆ ಮಾಡುವಾಗಲೇ ಇಸ್ರೋದಲ್ಲಿ ಬಿಕ್ಕಟ್ಟು; ಬಾಹ್ಯಾಕಾಶ ಸಂಸ್ಥೆ ತೊರೆದ 100ಕ್ಕೂ ಅಧಿಕ ವಿಜ್ಞಾನಿಗಳು!

Published : Jul 16, 2026, 07:24 PM IST
ISro

ಸಾರಾಂಶ

ಗಗನಯಾನದಂತಹ ರಾಷ್ಟ್ರೀಯ ಯೋಜನೆಗಳಲ್ಲಿ ತೊಡಗಿದ್ದ ನೂರಕ್ಕೂ ಹೆಚ್ಚು ಅನುಭವಿ ವಿಜ್ಞಾನಿಗಳು ಇಸ್ರೋವನ್ನು ತೊರೆದಿದ್ದಾರೆ. ಈ ಸಾಮೂಹಿಕ ನಿರ್ಗಮನದಿಂದ ಉಂಟಾಗಬಹುದಾದ ಹಿನ್ನಡೆಯನ್ನು ತಡೆಯಲು, ಕೇಂದ್ರ ಬಾಹ್ಯಾಕಾಶ ಇಲಾಖೆಯು ವಿಜ್ಞಾನಿಗಳ ರಾಜೀನಾಮೆ ಮತ್ತು ಸ್ವಯಂ ನಿವೃತ್ತಿ ನಿಯಮಗಳನ್ನು ಕಠಿಣಗೊಳಿಸಿದೆ.

ಬೆಂಗಳೂರು (ಜು.16): ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಅತ್ಯಂತ ಮಹತ್ವಾಕಾಂಕ್ಷೆಯ 'ಗಗನಯಾನ' ಸೇರಿದಂತೆ ಪ್ರಮುಖ ರಾಷ್ಟ್ರೀಯ ಯೋಜನೆಗಳಲ್ಲಿ ತೊಡಗಿಸಿಕೊಂಡಿದ್ದ ನೂರಕ್ಕೂ ಹೆಚ್ಚು ಅನುಭವಿ ವಿಜ್ಞಾನಿಗಳು ಸದ್ದಿಲ್ಲದೆ ಸಂಸ್ಥೆಯನ್ನು ತೊರೆದಿದ್ದಾರೆ. ಇಸ್ರೋ ಇತಿಹಾಸದಲ್ಲೇ ಅತ್ಯಂತ ಗಂಭೀರ ಎನ್ನಲಾದ ಈ ಸಾಮೂಹಿಕ ರಾಜೀನಾಮೆ ಹಾಗೂ ಸ್ವಯಂ ನಿವೃತ್ತಿ (VRS) ಪ್ರಕ್ರಿಯೆಗೆ ಬ್ರೇಕ್ ಹಾಕಲು ಕೇಂದ್ರ ಬಾಹ್ಯಾಕಾಶ ಇಲಾಖೆಯು (DoS) ಇದೀಗ ನಿಯಮಗಳನ್ನು ತೀವ್ರವಾಗಿ ಬಿಗಿಗೊಳಿಸಿದೆ. ವಿಜ್ಞಾನಿಗಳು ದಿಢೀರನೆ ಹೊರಹೋಗುವುದರಿಂದ ರಾಷ್ಟ್ರೀಯ ಪ್ರಾಮುಖ್ಯತೆಯ ಕಾರ್ಯತಂತ್ರದ ಯೋಜನೆಗಳ ಮೇಲಾಗುವ ಭಾರಿ ಹಿನ್ನಡೆಯನ್ನು ತಡೆಯಲು ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ.

ಜುಲೈ 14 ರಂದು ಬಾಹ್ಯಾಕಾಶ ಇಲಾಖೆಯು ಹೊರಡಿಸಿರುವ ಆಂತರಿಕ ಮೆಮೊ ಪ್ರಕಾರ, ಗಗನಯಾನ ಮತ್ತು ಇತರ ಪ್ರಮುಖ ಮಿಷನ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರೂಪ್ ‘ಎ’ (Group A) ದರ್ಜೆಯ ವೈಜ್ಞಾನಿಕ ಮತ್ತು ತಾಂತ್ರಿಕ ಸಿಬ್ಬಂದಿಯ ರಾಜೀನಾಮೆ ಅಥವಾ ಸ್ವಯಂ ನಿವೃತ್ತಿ ವಿನಂತಿಗಳನ್ನು ಇಸ್ರೋ ಕೇಂದ್ರಗಳು ಇನ್ನು ಮುಂದೆ ನೇರವಾಗಿ ಸ್ವೀಕರಿಸುವಂತಿಲ್ಲ. ಇಂತಹ ಎಲ್ಲಾ ವಿನಂತಿಗಳನ್ನು ಕಡ್ಡಾಯವಾಗಿ ಅಂತಿಮ ಅನುಮೋದನೆಗಾಗಿ ಕೇಂದ್ರ ಬಾಹ್ಯಾಕಾಶ ಇಲಾಖೆಗೆ ಕಳುಹಿಸಿಕೊಡಬೇಕು ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ.

ರಾಜೀನಾಮೆ ನೀಡಿದ ಪ್ರಮುಖರು ಯಾರು?

ಅಧಿಕೃತವಾಗಿ ಬಾಹ್ಯಾಕಾಶ ಇಲಾಖೆಯು ಹೊರಹೋಗಿರುವ ವಿಜ್ಞಾನಿಗಳ ನಿಖರ ಸಂಖ್ಯೆಯನ್ನು ಬಹಿರಂಗಪಡಿಸದಿದ್ದರೂ, ಮೂಲಗಳ ಪ್ರಕಾರ ಕಳೆದ ಕೆಲವು ತಿಂಗಳುಗಳಲ್ಲಿ ಸುಮಾರು 100 ರಿಂದ 120 ಕ್ಕೂ ಹೆಚ್ಚು ತಜ್ಞ ವಿಜ್ಞಾನಿಗಳು ಇಸ್ರೋ ತೊರೆದಿದ್ದಾರೆ.ಬೆಂಗಳೂರಿನ ಯು ಆರ್ ರಾವ್ ಉಪಗ್ರಹ ಕೇಂದ್ರ (URSC) ಇಲ್ಲಿಂದಲೇ ಅತಿ ಹೆಚ್ಚು ಅಂದರೆ ಸುಮಾರು 80 ವಿಜ್ಞಾನಿಗಳು ಹೊರನಡೆದಿದ್ದಾರೆ. ತಿರುವನಂತಪುರದ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ (VSSC) ಸಂಸ್ಥೆಯಿಂದ 20 ಕ್ಕೂ ಹೆಚ್ಚು ವಿಜ್ಞಾನಿಗಳು ರಾಜೀನಾಮೆ ನೀಡಿದ್ದಾರೆ.

ಇದರಲ್ಲಿ ಅತ್ಯಂತ ಹಿರಿಯ ಮತ್ತು ಹೈ-ಪ್ರೊಫೈಲ್ ವಿಜ್ಞಾನಿಗಳೂ ಸೇರಿದ್ದಾರೆ. ಎಲ್‌ವಿಎಂ3 (LVM3) ಪ್ರಾಜೆಕ್ಟ್ ಡೈರೆಕ್ಟರ್ ವಿಕ್ಟರ್ ಜೋಸೆಫ್, ಯುಆರ್‌ಎಸ್‌ಸಿಯ ಸ್ಪೇಸ್‌ಡೆಕ್ಸ್ (SpaDeX) ಪ್ರಾಜೆಕ್ಟ್ ಡೈರೆಕ್ಟರ್ ಹಾಗೂ ಚಂದ್ರಯಾನ-3 ಮಿಷನ್‌ನಲ್ಲಿ ಮಹತ್ವದ ಪಾತ್ರ ವಹಿಸಿದ್ದ ಪ್ರಮುಖ ವಿಜ್ಞಾನಿ ಆದಿತ್ಯ ರಾಲ್ಲಪಲ್ಲಿ ಅವರು ಇಸ್ರೋ ತೊರೆದ ಪ್ರಮುಖರಾಗಿದ್ದಾರೆ. ಆದಿತ್ಯ ರಾಲ್ಲಪಲ್ಲಿ ಅವರು ಚಂದ್ರಯಾನ ನೌಕೆಯ ಐತಿಹಾಸಿಕ ಸಾಫ್ಟ್ ಲ್ಯಾಂಡಿಂಗ್ ಪ್ರಕ್ರಿಯೆಯನ್ನು ಯಶಸ್ವಿಗೊಳಿಸಲು 1,00,000 ಕ್ಕೂ ಹೆಚ್ಚು ಸಿಮ್ಯುಲೇಶನ್‌ಗಳ ಮೂಲಕ ಸುಮಾರು 25 ಟೆರಾಬೈಟ್‌ಗಳಷ್ಟು ಮಿಷನ್ ಡೇಟಾವನ್ನು ಸಿದ್ಧಪಡಿಸಿದ ತಂಡದ ನೇತೃತ್ವ ವಹಿಸಿದ್ದರು.

2020ರ ಸುಧಾರಣಾ ನಿಯಮ ಉಲ್ಟಾ

ಬಾಹ್ಯಾಕಾಶ ಇಲಾಖೆಯ ಈ ಹೊಸ ಆದೇಶವು ನವೆಂಬರ್ 2020 ರಲ್ಲಿ ಜಾರಿಗೆ ತರಲಾಗಿದ್ದ ಆಡಳಿತಾತ್ಮಕ ಸುಧಾರಣಾ ನಿಯಮವನ್ನು ಸಂಪೂರ್ಣವಾಗಿ ರದ್ದುಗೊಳಿಸಿದೆ. ಈ ಹಿಂದೆ ಇಸ್ರೋ ಕೇಂದ್ರಗಳ ನಿರ್ದೇಶಕರಿಗೆ 'ಸೈಂಟಿಸ್ಟ್/ಇಂಜಿನಿಯರ್-ಎಸ್‌ಜಿ' ದರ್ಜೆಯವರೆಗಿನ ಅಧಿಕಾರಿಗಳ ರಾಜೀನಾಮೆ ಅಂಗೀಕರಿಸುವ ಸ್ವಾಯತ್ತ ಅಧಿಕಾರ ನೀಡಲಾಗಿತ್ತು. ಆದರೆ ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸಿ, ಪ್ರಮುಖ ಮಿಷನ್‌ಗಳು ಪೂರ್ಣಗೊಳ್ಳುವವರೆಗೆ ಯಾವುದೇ ರಾಜೀನಾಮೆಯನ್ನು ಸ್ವೀಕರಿಸದಂತೆ ಕೇಂದ್ರಗಳ ನಿರ್ದೇಶಕರಿಗೆ ಸೂಚಿಸಲಾಗಿದೆ.

ಕಳವಳಕ್ಕೆ ಕಾರಣವೇನು?

ಇಸ್ರೋ ಹೊಂದಿರುವ ಒಟ್ಟು 14,600 ಕ್ಕೂ ಹೆಚ್ಚು ಉದ್ಯೋಗಿಗಳಿಗೆ ಹೋಲಿಸಿದರೆ ಈ ರಾಜೀನಾಮೆಗಳ ಸಂಖ್ಯೆ ಚಿಕ್ಕದಾಗಿ ಕಂಡರೂ, ಹೊರ ಹೋಗುತ್ತಿರುವವರೆಲ್ಲರೂ ದೇಶದ ಫ್ಲ್ಯಾಗ್‌ಶಿಪ್ ಯೋಜನೆಗಳ ಮುಂಚೂಣಿಯಲ್ಲಿದ್ದವರಾಗಿದ್ದಾರೆ. ಹೊಸದಾಗಿ ನೇಮಕಾತಿ ಮಾಡಿಕೊಳ್ಳುವುದು ಸುಲಭ, ಆದರೆ ಗಗನಯಾನ, ಚಂದ್ರಯಾನದಂತಹ ಜಟಿಲ ಯೋಜನೆಗಳ ಮೂಲಕ ವಿಜ್ಞಾನಿಗಳು ಗಳಿಸಿರುವ ವರ್ಷಗಳ ಮಿಷನ್-ನಿರ್ದಿಷ್ಟ ಪರಿಣತಿ ಹಾಗೂ ಸಾಂಸ್ಥಿಕ ಜ್ಞಾನವನ್ನು ತಕ್ಷಣಕ್ಕೆ ಭರ್ತಿ ಮಾಡುವುದು ಅಸಾಧ್ಯ ಎಂಬುದು ಇಲಾಖೆಯ ಆತಂಕವಾಗಿದೆ.

ಈ ಬೆಳವಣಿಗೆಯನ್ನು ಒಪ್ಪಿಕೊಂಡಿರುವ ಇಸ್ರೋ ಅಧ್ಯಕ್ಷ ವಿ. ನಾರಾಯಣನ್ ಅವರು ಆತಂಕವನ್ನು ತಳ್ಳಿಹಾಕಿದ್ದಾರೆ. "ಹೌದು, ಅನೇಕ ಜನರು ಹೋಗುತ್ತಾರೆ, ಇದು ಪ್ರತಿಯೊಂದು ಸಂಸ್ಥೆಯಲ್ಲೂ ಸಾಮಾನ್ಯ ಪ್ರಕ್ರಿಯೆ. ಈ ಹೊಸ ನಿಯಮವು ಕೇವಲ ವಿಜ್ಞಾನಿಗಳನ್ನು ಹಿಡಿದಿಟ್ಟುಕೊಳ್ಳಲು ಮಾತ್ರವಲ್ಲ, ಪ್ರಮುಖ ಯೋಜನೆಗಳು ದಿಢೀರನೆ ಅರ್ಧಕ್ಕೆ ನಿಂತು ತೊಂದರೆಯಾಗಬಾರದು ಎಂಬ ಮುನ್ನೆಚ್ಚರಿಕೆಯಾಗಿದೆ. ಯಾರಾದರೂ ಹೋದರೆ, ಅವರ ಜವಾಬ್ದಾರಿಯನ್ನು ಮತ್ತೊಬ್ಬರು ವಹಿಸಿಕೊಳ್ಳುತ್ತಾರೆ. ನಾವು ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಭಾಯಿಸುತ್ತಿದ್ದೇವೆ," ಎಂದು ಸ್ಪಷ್ಟಪಡಿಸಿದ್ದಾರೆ.

ಇಸ್ರೋದಲ್ಲಿ ಇಂತಹ ವಲಸೆ ಹೊಸದೇನಲ್ಲ. ಅಧಿಕೃತ ಅಂಕಿ-ಅಂಶಗಳ ಪ್ರಕಾರ 2012 ರಿಂದ 2024 ರ ನಡುವೆ ಸುಮಾರು 700 ಉದ್ಯೋಗಿಗಳು ರಾಜೀನಾಮೆ ನೀಡಿದ್ದರು. ಹಾಗೆಯೇ 2004 ರಿಂದ 2007 ರ ಅವಧಿಯಲ್ಲಿ ನೇಮಕಗೊಂಡಿದ್ದ ಹೊಸಬರಲ್ಲಿ ಅರ್ಧದಷ್ಟು ಜನ ಸಂಸ್ಥೆ ತೊರೆದಿದ್ದರು. ಪ್ರಸ್ತುತ 1,050 ಕ್ಕೂ ಹೆಚ್ಚು ವೈಜ್ಞಾನಿಕ ಮತ್ತು ತಾಂತ್ರಿಕ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಆದರೆ, ಗಗನಯಾನ, ಭಾರತೀಯ ಅಂತರಿಕ್ಷ ನಿಲ್ದಾಣ ಮತ್ತು ಭವಿಷ್ಯದ ಚಂದ್ರನ ಪರಿಶೋಧನಾ ಯೋಜನೆಗಳ ಹಿನ್ನೆಲೆಯಲ್ಲಿ ಅನುಭವಿಗಳನ್ನು ಉಳಿಸಿಕೊಳ್ಳುವುದು ಇಸ್ರೋಗೆ ಈಗ ತಾಂತ್ರಿಕ ಸವಾಲಾಗಿ ಪರಿಣಮಿಸಿದೆ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

Why snakes like Sandalwood: ಶ್ರೀಗಂಧದ ಮರಕ್ಕೆ ಹಾವು ಸುತ್ತಿಕೊಳ್ಳೋದು ಏಕೆ? ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!
ಸೋಪಿನ ಬಣ್ಣ ಯಾವುದೇ ಇರಲಿ, ಆದರೆ ನೊರೆ ಮಾತ್ರ ಬಿಳಿಯಾಗಿರಲು ಕಾರಣವೇನು?