NASA ರಾಕೆಟ್‌ ಡಿಕ್ಕಿ ಹೊಡೆಸಿ ಕ್ಷುದ್ರಗ್ರಹದ ದಿಕ್ಕೇ ಬದಲು: ಅಮೆರಿಕ ಅಪೂರ್ವ ಸಾಹಸ

By Kannadaprabha News  |  First Published Sep 28, 2022, 10:32 AM IST

ಕ್ಷುದ್ರಗ್ರಹ ದಾಳಿ ತಡೆ ರಕ್ಷಣಾ ಪರೀಕ್ಷೆ ಯಶಸ್ವಿಯಾಗಿದ್ದು, ನಾಸಾದ ನೌಕೆ ಕ್ಷುದ್ರಗ್ರಹಕ್ಕೆ ಡಿಕ್ಕಿ ಹೊಡೆದು ಅದರ ಪಥವನ್ನೇ ಬದಲಿಸಿದೆ. ಈ ಮೂಲಕ ಭವಿಷ್ಯದ ಸಂಭವನೀಯ ದಾಳಿ ತಡೆ ಯತ್ನದಲ್ಲಿ ವಿಜ್ಞಾನಿಗಳಿಗೆ ಯಶಸ್ಸು ಸಿಕ್ಕಿದೆ. 


ವಾಷಿಂಗ್ಟನ್‌: ಕ್ಷುದ್ರಗ್ರಹಗಳು ಸೇರಿದಂತೆ ಬಾಹ್ಯಾಕಾಶದ ಯಾವುದೇ ಗ್ರಹಗಳು ಭೂಮಿಗೆ ಡಿಕ್ಕಿ ಹೊಡೆಯುವ ಅಪಾಯ ಎದುರಾದಲ್ಲಿ ಅದನ್ನು ತಡೆಯುವುದು ಸಾಧ್ಯವೇ ಎಂಬ ನಿಟ್ಟಿನಲ್ಲಿ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ನಡೆಸಿದ್ದ ಪರೀಕ್ಷೆಯೊಂದು ಯಶಸ್ವಿಯಾಗಿದೆ. ಡಿಮೋರ್‌ಫೋಸ್‌ ಎಂಬ ಕ್ಷುದ್ರಗ್ರಹಕ್ಕೆ ಅಮೆರಿಕ ಹಾರಿಬಿಟ್ಟಿದ್ದ ನೌಕೆ ಯಶಸ್ವಿಯಾಗಿ ಡಿಕ್ಕಿ ಹೊಡೆದು, ಅದರ ಪಥವನ್ನು ಬದಲಿಸಿದೆ. ಜಾಗತಿಕ ಬಾಹ್ಯಾಕಾಶ ಇತಿಹಾಸದಲ್ಲೇ ಇಂಥ ಪ್ರಯತ್ನ ಇದೇ ಮೊದಲಾಗಿದ್ದು, ಈ ಬಗ್ಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ನಾಸಾ ‘ಅಂತಾರಾಷ್ಟ್ರೀಯ ಸಹಕಾರವು, ಕಾಲ್ಪನಿಕ ವೈಜ್ಞಾನಿಕ ಕಥನವನ್ನು ವೈಜ್ಞಾನಿಕ ವಾಸ್ತವವನ್ನಾಗಿ ಬದಲಾಯಿಸಿದೆ. ಈ ಮೂಲಕ ಭೂಮಿಯನ್ನು ರಕ್ಷಿಸುವ ಪ್ರಯತ್ನಕ್ಕೆ ಮುನ್ನುಡಿ ಬರೆಯಲಾಗಿದೆ’ ಎಂದು ಹೇಳಿದೆ.

ಏನಿದು ಪ್ರಯೋಗ?:
ಬಾಹ್ಯಾಕಾಶದಲ್ಲಿ ಲಕ್ಷಾಂತರ ಕ್ಷುದ್ರಗ್ರಹಗಳು ಸೇರಿದಂತೆ ನಾನಾ ರೀತಿಯ ಸಣ್ಣ, ದೊಡ್ಡ ಗ್ರಹಗಳು ಭಾರಿ ವೇಗದಲ್ಲಿ ಒಂದೆಡೆಯಿಂದ ಇನ್ನೊಂದೆಡೆಗೆ ಚಲಿಸುತ್ತಿರುತ್ತವೆ. ಇಂಥ ಯಾವುದೇ ವಸ್ತು ಭೂಮಿಯ ಮೇಲೆ ಅಪ್ಪಳಿಸಿದರೆ ಆಗುವ ಅನಾಹುತ ಅಪಾರ. ಆದರೆ ಬಾಹ್ಯಾಕಾಶದ ಮೇಲೆ ಸದಾ ವಿಜ್ಞಾನಿಗಳು ಕಣ್ಣಿಟ್ಟಿರುವ ಕಾರಣ ಇಂಥ ಅಪಾಯಗಳ ಬಗ್ಗೆ ಸಾಕಷ್ಟು ಮೊದಲೇ ಮಾಹಿತಿ ಸಿಕ್ಕಿರುತ್ತದೆ. ಅಂಥ ಸಂದರ್ಭದಲ್ಲಿ ಯಾವುದೇ ಗ್ರಹವು ಭೂಮಿಯ ಮೇಲೆ ಅಪ್ಪಳಿಸದಂತೆ ತಡೆಯಬಹುದೇ? ಅದಕ್ಕೆ ಯಾವುದಾದರೂ ವಿಧಾನ ಇದೆಯೇ ಎಂಬುದರ ಬಗ್ಗೆ ಅಧ್ಯಯನ ಮಾಡಲು ನಾಸಾ ವಿಜ್ಞಾನಿಗಳು ‘ದ ಡಬಲ್‌ ಆಸ್ಟರಾಯ್ಡ್‌ ರೀಡೈರೆಕ್ಷನ್‌ ಟೆಸ್ಟ್‌’ ಡಾರ್ಟ್‌ ಎಂಬ ಪ್ರಯೋಗ ನಡೆಸಿದ್ದರು.

Latest Videos

undefined

ಇದನ್ನು ಓದಿ: ಭೂಮಿಯ ಕಡೆಗೆ ಬರುತ್ತಿರುವ ಅಪಾಯಕಾರಿ ಕ್ಷುದ್ರಗ್ರಹ, ನಾಸಾ ಎಚ್ಚರಿಕೆ!

ಪ್ರಯೋಗ ಹೇಗೆ?:
ಭೂಮಿಯಿಂದ 70 ಲಕ್ಷ ಮೈಲು ದೂರದಲ್ಲಿರುವ ‘ಡಿಡಿಮೋಸ್‌’ (780 ಮೀಟರ್‌ ಸುತ್ತಳತೆ) ಎಂಬ ಕ್ಷುದ್ರಗ್ರಹವನ್ನು ‘ಮೂನ್‌ಲೆಟ್‌ ಡಿಮೋರ್‌ಫೋಸ್‌’ (160 ಮೀಟರ್‌ ಸುತ್ತಳತೆ) ಎಂಬ ಮತ್ತೊಂದು ಕ್ಷುದ್ರಗ್ರಹ ಸುತ್ತು ಹೊಡೆಯುತ್ತಿದೆ. ಈ ಎರಡೂ ಕ್ಷುದ್ರಗ್ರಹಗಳಿಂದ ಭೂಮಿಗೆ ಅಪಾಯ ಇರಲಿಲ್ಲ. ಆದರೆ ಪ್ರಯೋಗಕ್ಕಾಗಿ ಈ ಡಿಮೋರ್‌ಫೋಸ್‌ ಎಂಬ ಕ್ಷುದ್ರಗ್ರಹಕ್ಕೆ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆಸಲು ನಾಸಾ ವಿಜ್ಞಾನಿಗಳು 570 ಕೆಜಿ ತೂಕದ ಬಾಹ್ಯಾಕಾಶ ನೌಕೆಯೊಂದನ್ನು ಅಭಿವೃದ್ಧಿಪಡಿಸಿ ಅದನ್ನು 10 ತಿಂಗಳ ಹಿಂದೆ ಹಾರಿಬಿಟ್ಟಿದ್ದರು. ಆ ನೌಕೆ ಮಂಗಳವಾರ ಗಂಟೆಗೆ 22530 ಕಿ.ಮೀ ವೇಗದಲ್ಲಿ ಡಿಮೋರ್‌ಫೋಸ್‌ಗೆ ಅಪ್ಪಳಿಸಿದೆ. ಈ ಡಿಕ್ಕಿಯಿಂದ ಡಿಮೋರ್‌ಫೋಸ್‌ ಚಲಿಸುವ ಪಥ ಶೇ.1 ರಷ್ಟು ಮತ್ತು ಸಮಯದಲ್ಲಿ 10 ನಿಮಿಷಗಳಷ್ಟು ವ್ಯತ್ಯಯವಾಗಿರಬಹುದು ಎಂದು ವಿಜ್ಞಾನಿಗಳ ಲೆಕ್ಕಾಚಾರ ಹಾಕಿದ್ದಾರೆ.

ಪರಿಣಾಮ ಏನು?:
ಗ್ರಹಗಳ ವೇಗ ಮತ್ತು ಪಥದಲ್ಲಿನ ಸಣ್ಣ ಬದಲಾವಣೆ ಕೂಡಾ ಅವುಗಳ ದಾಳಿಯ ಸಾಧ್ಯತೆಯನ್ನು ಪೂರ್ಣವಾಗಿ ತಪ್ಪಿಸಬಲ್ಲದು. ಹೀಗಾಗಿ ಈ ಪ್ರಯತ್ನಕ್ಕೆ ಸಿಕ್ಕಿರುವ ಯಶಸ್ಸು ಭೂಮಿಯನ್ನು ಉಳಿಸುವ ನಿಟ್ಟಿನಲ್ಲಿ ಮಹತ್ವದ ಬೆಳವಣಿಗೆ ಎಂದು ವಿಜ್ಞಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: James Webb Telescope ತೆಗೆದ ಅದ್ಭುತ ಚಿತ್ರ, ಬಾಹ್ಯಾಕಾಶದಲ್ಲಿ ಕಂಡಿತು ಕೃಷ್ಣನ ಸುದರ್ಶನ ಚಕ್ರ!

ಇನ್ನಷ್ಟು ಮಾಹಿತಿ:
ಇದೀಗ ಡಿಕ್ಕಿ ಹೊಡೆಸಿಕೊಂಡ ಕ್ಷುದ್ರಗ್ರಹದ ಮೇಲೆ ಜಾಗತಿಕವಾಗಿ ಹಲವು ದೇಶಗಳು ಕಣ್ಣಿಟ್ಟಿವೆ. ಮುಂದಿನ ದಿನಗಳಲ್ಲಿ ಅವುಗಳ ಮೇಲಿನ ಇನ್ನಷ್ಟು ನಿಖರ ಅಧ್ಯಯನವು, ಡಿಕ್ಕಿಯ ಪರಿಣಾಮ ಡಿಮೋರ್‌ಫೋಸ್‌ ಪಥದಲ್ಲಿ ಎಷ್ಟು ಬದಲಾವಣೆ ಆಗಿದೆ, ಸಂಚಾರದ ಸಮಯದಲ್ಲಿ ಎಷ್ಟು ವ್ಯತ್ಯಯವಾಗಿದೆ ಎಂಬುದರ ಮಾಹಿತಿ ಸಿಗಲಿದೆ. ಬಳಿಕ ಡಿಕ್ಕಿಯ ನಿಖರ ಪರಿಣಾಮವನ್ನು ಹೇಳಬಹುದಾಗಿದೆ ಎಂದು ನಾಸಾ ವಿಜ್ಞಾನಿಗಳು ಹೇಳಿದ್ದಾರೆ.

click me!