
ವಾಷಿಂಗ್ಟನ್: ಬಾಹ್ಯಾಕಾಶ ಸಂಶೋಧನೆಯಲ್ಲಿ ನಾಸಾ ಮತ್ತೊಂದು ಮೈಲಿಗಲ್ಲು ಸಾಧಿಸಿದೆ. 2024 ರಲ್ಲಿ ಆರು ಅಂತಸ್ತಿನ ಕಟ್ಟಡದಷ್ಟು ಬೃಹತ್ ಪ್ರಮಾಣದ ಬಾಹ್ಯಾಕಾಶ ಬಂಡೆಯೊಂದು ಚಂದ್ರನ ಮೇಲ್ಮೈಗೆ ತೀವ್ರವಾಗಿ ಡಿಕ್ಕಿಯಾದ ಪರಿಣಾಮ ರಚನೆಯಾಗಿದ್ದ ದೈತ್ಯ ಕುಳಿಯನ್ನು ನಾಸಾದ 'ಲೂನಾರ್ ರಿಕಾನಿಸನ್ಸ್ ಆರ್ಬಿಟರ್' ಪತ್ತೆ ಹಚ್ಚಿದೆ. ವಿಜ್ಞಾನ ನಿಯತಕಾಲಿಕ ಸೈನ್ಸ್ ಅಡ್ವಾನ್ಸಸ್‌ನಲ್ಲಿ ಈ ಕುರಿತು ಸಂಶೋಧನಾ ಲೇಖನ ಪ್ರಕಟವಾಗಿದ್ದು, ಹೊಸದಾಗಿ ರೂಪುಗೊಂಡ ಈ ಕುಳಿಗೆ ಅಧಿಕೃತವಾಗಿ 'ಮೆಕ್‌ಗೆಚಿನ್' (McGetchin) ಎಂದು ಹೆಸರಿಡಲಾಗಿದೆ. ಇದು ಸೌರವ್ಯೂಹದಲ್ಲಿ ಇತ್ತೀಚಿನ ದಶಕಗಳಲ್ಲಿ ಗುರುತಿಸಲಾದ ಅತಿದೊಡ್ಡ ಹೊಸ ಘರ್ಷಣೆಯ ಕುಳಿಯಾಗಿದೆ.
ಈ ತೀವ್ರ ಸ್ಫೋಟದ ಪರಿಣಾಮವಾಗಿ ಚಂದ್ರನ ಮೇಲೆ ಸುಮಾರು 728 ಅಡಿ ಅಗಲ ಹಾಗೂ 141 ಅಡಿ ಆಳದ ಬೃಹತ್ ಕುಳಿ ಸೃಷ್ಟಿಯಾಗಿದೆ. ಇದರ ಉದ್ದವು ಸರಿಸುಮಾರು ಎರಡು ಫುಟ್‌ಬಾಲ್ ಮೈದಾನಗಳಷ್ಟು ದೊಡ್ಡದಿದೆ. ಚಂದ್ರನ ಮೇಲೆ ಈ ಮಟ್ಟದ ದೈತ್ಯ ಪ್ರಭಾವದ ಘರ್ಷಣೆಗಳು ಪ್ರತಿಯೊಂದು ಶತಮಾನಕ್ಕೆ ಒಮ್ಮೆ ಇಲ್ಲವೇ ಅದಕ್ಕಿಂತಲೂ ಕಡಿಮೆ ಬಾರಿ ಸಂಭವಿಸುತ್ತವೆ ಎಂದು ನಾಸಾ ವಿಜ್ಞಾನಿಗಳು ಅಂದಾಜು ಮಾಡಿದ್ದಾರೆ.
ಇಂಟ್ಯೂಟಿವ್ ಮೆಷಿನ್ಸ್‌ನ ಇಮೇಜ್ ಪ್ರೊಸೆಸಿಂಗ್ ತಜ್ಞ ರಾಬರ್ಟ್ ವ್ಯಾಗ್ನರ್, ಎಲ್‌ಆರ್‌ಒ ಕ್ಯಾಮೆರಾ ದತ್ತಾಂಶಗಳನ್ನು ಚೆಕ್ ಮಾಡುವಾಗ, ಚಂದ್ರನ ಪ್ರಪಂಚದ ನಕ್ಷೆಯಲ್ಲಿ ಗಾಢವಾದ ಪ್ರಭಾವಲಯದಿಂದ ಸುತ್ತುವರೆದಿರುವ ಅಸಾಮಾನ್ಯ ಪ್ರಕಾಶಮಾನವಾದ ಜಾಗವನ್ನು ಗಮನಿಸಿದರು. ನಂತರ ಡಿಕ್ಕಿಗೂ ಮುನ್ನ ಹಾಗೂ ನಂತರದ ಹೈ-ರೆಸಲ್ಯೂಶನ್ ಚಿತ್ರಗಳನ್ನು ಹೋಲಿಸಿ ನೋಡಿದಾಗ, ಕ್ಷುದ್ರಗ್ರಹ ಡಿಕ್ಕಿಯಿಂದ ಚೆಲ್ಲಾಪಿಲ್ಲಿಯಾದ ಶಿಲಾಖಂಡರಾಶಿಗಳು ಮತ್ತು ಬೃಹತ್ ಕುಳಿ ಕಾಣಿಸಿತು. ಕಳೆದ 17 ವರ್ಷಗಳಿಂದ ಚಂದ್ರನ ಕಕ್ಷೆಯಲ್ಲಿದ್ದು ಅಧ್ಯಯನ ನಡೆಸುತ್ತಿರುವ ಎಲ್‌ಆರ್‌ಒ, ಇದುವರೆಗೆ 1,000ಕ್ಕೂ ಹೆಚ್ಚು ಸಣ್ಣ ಹಾಗೂ ದೊಡ್ಡ ಪ್ರಭಾವದ ಕುಳಿಗಳನ್ನು ಪತ್ತೆ ಹಚ್ಚಿದೆ.
ಚಂದ್ರನಿಗೆ ಯಾವುದೇ ವಾತಾವರಣವಿಲ್ಲದಿರುವುದರಿಂದ, ಆಕಾಶದಿಂದ ಬರುವ ಕ್ಷುದ್ರಗ್ರಹಗಳು ನೇರವಾಗಿ ಅತ್ಯಂತ ವೇಗದಲ್ಲಿ ಬಂದು ಮೇಲ್ಮೈಗೆ ಅಪ್ಪಳಿಸುತ್ತವೆ. ಎಲ್‌ಆರ್‌ಒ ದ 'ಡಿವೈನರ್' ಉಪಕರಣದ ದತ್ತಾಂಶಗಳ ಪ್ರಕಾರ, 'ಮೆಕ್‌ಗೆಚಿನ್' ಕುಳಿಯ ಸುತ್ತಲಿನ ಸುಮಾರು 4 ಮೈಲಿ ವ್ಯಾಪ್ತಿಯಲ್ಲಿ ಉಷ್ಣಾಂಶ ತೀವ್ರವಾಗಿ ಇಳಿಕೆಯಾಗಿದೆ. ರಾತ್ರಿ ವೇಳೆಯಲ್ಲಿ ಈ ಭಾಗವು ಸುತ್ತಮುತ್ತಲಿನ ಭೂಪ್ರದೇಶಕ್ಕಿಂತ 9 ಡಿಗ್ರಿ ಸೆಲ್ಸಿಯಸ್ ಕಡಿಮೆ ಉಷ್ಣಾಂಶ ಇರುತ್ತದೆ. ಘರ್ಷಣೆಯ ತೀವ್ರತೆಗೆ ಚಂದ್ರನ ಮಣ್ಣು (ರೆಗೋಲಿತ್) ಹಗುರವಾಗಿ, ಶಾಖವನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಕಳೆದುಕೊಂಡಿರುವುದು ಇದಕ್ಕೆ ಮುಖ್ಯ ಕಾರಣವಾಗಿದೆ.
ಈ ಅಪರೂಪದ ಸಂಶೋಧನೆಯು ಭವಿಷ್ಯದಲ್ಲಿ ಚಂದ್ರನ ಮೇಲೆ ಇಳಿಯಲಿರುವ ಮಾನವಸಹಿತ ನೌಕೆಗಳು, ರೋವರ್‌ಗಳು ಮತ್ತು ಸಂಶೋಧನಾ ಕೇಂದ್ರಗಳ ಸುರಕ್ಷತೆಗೆ ಅತ್ಯಂತ ನಿರ್ಣಾಯಕ ಮಾಹಿತಿಯನ್ನು ನೀಡಿದಂತಾಗಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.