
ಬೆಂಗಳೂರು: ನಮ್ಮ ಭಾರತೀಯ ಸಂಸ್ಕೃತಿ ಹಾಗೂ ನಂಬಿಕೆಗಳಲ್ಲಿ ಗಣೇಶ ಚೌತಿಯ ಆಚರಣೆಗೆ ಅತ್ಯಂತ ಮಹತ್ವದ ಸ್ಥಾನವಿದೆ. ಚೌತಿಯ ದಿನದಂದು ಆಕಾಶದಲ್ಲಿ ಚಂದ್ರನನ್ನು ನೋಡಬಾರದು, ನೋಡಿದರೆ ಅನಗತ್ಯ ಸುಳ್ಳು ಆಪಾದನೆ ಅಥವಾ ಅಪಕೀರ್ತಿ ಎದುರಿಸಬೇಕಾಗುತ್ತದೆ ಎಂಬ ಬಲವಾದ ನಂಬಿಕೆ ಪುರಾಣದಲ್ಲಿ ಉಲ್ಲೇಖವಿದೆ.
ದ್ವಾಪರ ಯುಗದಲ್ಲಿ ಗಣಪತಿಯ ವಿಚಿತ್ರ ರೂಪವನ್ನು ಕಂಡು ಚಂದ್ರನು ಗೇಲಿ ಮಾಡಿ ನಕ್ಕಿದ್ದನಂತೆ. ಇದರಿಂದ ಕೋಪಗೊಂಡ ಗಣೇಶನು, ಯಾರು ಚೌತಿಯ ದಿನದಂದು ನಿನ್ನನ್ನು ನೋಡುತ್ತಾರೋ, ಅವರು ಸಮಾಜದಲ್ಲಿ ಅಪವಾದ ಹಾಗೂ ಕಳಂಕಕ್ಕೆ ಗುರಿಯಾಗಲಿ ಎಂದು ಶಾಪ ನೀಡಿದನು. ಸ್ವತಃ ಶ್ರೀಕೃಷ್ಣನೇ ಚೌತಿಯ ದಿನ ಚಂದ್ರನನ್ನು ನೋಡಿ, ಸ್ಯಮಂತಕ ಮಣಿಯನ್ನು ಕದ್ದ ಕಳ್ಳ ಎಂಬ ಸುಳ್ಳು ಅಪವಾದಕ್ಕೆ ಗುರಿಯಾಗಬೇಕಾಯಿತು ಎಂಬ ಪೌರಾಣಿಕ ಕಥೆಯಿದೆ
ಇಂತಹ ಪೌರಾಣಿಕ ನಂಬಿಕೆಗಳ ಚರ್ಚೆಯ ಮಧ್ಯೆಯೇ, ಇತ್ತೀಚೆಗೆ ಸೆಪ್ಟೆಂಬರ್ 14, 2026 ಪಶ್ಚಿಮ ಆಕಾಶದಲ್ಲಿ ಅದ್ಭುತ ಹಾಗೂ ಅಪರೂಪದ ಖಗೋಳ ಘಟನೆಯೊಂದು ಸಂಭವಿಸಿತು. ಆಕಾಶ ಪ್ರಿಯರನ್ನು ಮಂತ್ರಮುಗ್ಧಗೊಳಿಸಿದ 'ಚಂದ್ರನ ಗುಪ್ತ ಕ್ರಿಯೆ' (Lunar Occultation of Venus) ಯಲ್ಲಿ ಚಂದ್ರ ಮತ್ತು ಅತ್ಯಂತ ಪ್ರಕಾಶಮಾನವಾದ ಶುಕ್ರ ಗ್ರಹ ಪರಸ್ಪರ ಮುಖಾಮುಖಿಯಾದವು. ಸಂಜೆಯ ವೇಳೆಗೆ ಬೆಂಗಳೂರು ಸೇರಿದಂತೆ ಮಧ್ಯ ಮತ್ತು ದಕ್ಷಿಣ ಭಾರತದಾದ್ಯಂತ, ಪಶ್ಚಿಮ ಆಕಾಶದಲ್ಲಿ ಅರ್ಧಚಂದ್ರ ಹಾಗೂ ಅತ್ಯಂತ ಪ್ರಕಾಶಮಾನವಾದ ಶುಕ್ರ ಗ್ರಹ ಒಂದೇ ಕಡೆ ಕಂಗೊಳಿಸುವ ದೃಶ್ಯ ಕಾಣಿಸಿತು. ಹಲವರು ಸೆಪ್ಟೆಂಬರ್ 14ರಂದು ಗಣೇಶ ಚತುರ್ಥಿ ಹಬ್ಬ ಇದ್ದ ಕಾರಣಕ್ಕೆ ಇದನ್ನು ನೋಡಲು ಹಿಂದೇಟು ಹಾಕಿದರು.
ಚಂದ್ರನು ಶುಕ್ರ ಗ್ರಹದ ನೇರ ಪಥದಲ್ಲಿ ಹಾದುಹೋದ ಕಾರಣ, ಶುಕ್ರ ಗ್ರಹವು ತಾತ್ಕಾಲಿಕವಾಗಿ ಚಂದ್ರನ ಮರೆಯಲ್ಲಿ ಕಣ್ಮರೆಯಾಯಿತು. ಭಾರತೀಯ ಕಾಲಮಾನ ಸಂಜೆ 5:22 ಕ್ಕೆ ಚಂದ್ರನ ಹಿಂದೆ ಮರೆಯಾದ ಶುಕ್ರ ಗ್ರಹವು, ನಂತರ ಸಂಜೆ 6:18 ರ ಸುಮಾರಿಗೆ ಮತ್ತೆ ಪ್ರತ್ಯಕ್ಷವಾಯಿತು.
ಖಗೋಳ ವಿಜ್ಞಾನದಲ್ಲಿ ಈ ಘಟನೆಯನ್ನು ಚಂದ್ರನ ಗುಪ್ತ ಕ್ರಿಯೆ ಅಥವಾ Lunar Occultation ಎಂದು ಕರೆಯಲಾಗುತ್ತದೆ. ಇದರಲ್ಲಿ ಶುಕ್ರ ಗ್ರಹವು ನಿಧಾನವಾಗಿ ಚಂದ್ರನ ಅಂಚಿಗೆ ಸಮೀಪಿಸಿ, ಚಂದ್ರನ ಡಿಸ್ಕ್‌ನ ಹಿಂದೆ ಸಂಪೂರ್ಣವಾಗಿ ಮರೆಯಾಗುತ್ತದೆ. ಸ್ವಲ್ಪ ಸಮಯದ ನಂತರ, ಚಂದ್ರನ ಇನ್ನೊಂದು ಬದಿಯಿಂದ ಗ್ರಹವು ಮತ್ತೆ ಕಾಣಿಸುತ್ತದೆ ಇದು ಕೇವಲ ಎರಡು ಆಕಾಶ ಕಾಯಗಳು ಹತ್ತಿರ ಬರುವುದಷ್ಟೇ ಅಲ್ಲ, ಒಂದರ ಹಿಂದೆ ಇನ್ನೊಂದು ಸಂಪೂರ್ಣವಾಗಿ ಮರೆಯಾಗುವ ರೋಮಾಂಚಕಾರಿ ಪ್ರಕ್ರಿಯೆಯಾಗಿದೆ.
ಈ ಆಕಾಶ ವಿದ್ಯಮಾನದ ಅತ್ಯಂತ ಅಸಾಮಾನ್ಯ ವೈಶಿಷ್ಟ್ಯವೆಂದರೆ ಇದರ ಸಮಯ. ಅನೇಕ ದೇಶಗಳಲ್ಲಿ ಸೂರ್ಯ ಇನ್ನೂ ಆಕಾಶದಲ್ಲಿರುವಾಗಲೇ ಹಗಲಿನಲ್ಲೇ ಈ ಘಟನೆ ನಡೆದಿದೆ. ಆದಾಗ್ಯೂ, ಶುಕ್ರ ಗ್ರಹವು ಅತ್ಯಂತ ಪ್ರಕಾಶಮಾನವಾಗಿರುವುದರಿಂದ ಸೂಕ್ತ ವಾತಾವರಣವಿದ್ದರೆ ಹಗಲಿನ ವೇಳೆಯಲ್ಲೂ ಇದು ಕಾಣಿಸುತ್ತದೆ. ಈ ಸಮಯದಲ್ಲಿ ಚಂದ್ರನು ತೆಳುವಾದ ಅರ್ಧಚಂದ್ರಾಕಾರದಲ್ಲಿದ್ದರೆ, ಶುಕ್ರ ಗ್ರಹವೂ ಅರ್ಧಚಂದ್ರ ಸಮೀಪ ಕಾಣಿಸುತ್ತದೆ.
ಈ ಘಟನೆಯು ಸೆಪ್ಟೆಂಬರ್ 14 ರಂದು ಸುಮಾರು 09:26 UTC ಯಿಂದ 13:42 UTC ನಡುವೆ ಸಂಭವಿಸಿತು. ಅಮೆರಿಕದ ಪೂರ್ವ ಕರಾವಳಿ ಭಾಗಗಳಲ್ಲಿ ಇದು ಬೆಳಿಗ್ಗೆ 5:26 ರಿಂದ 9:42 EDT ವರೆಗೆ ನಡೆದಿತ್ತು.
ಭಾರತದಲ್ಲಿ ಈ ಪ್ರಕ್ರಿಯೆಯ ವಿಶಾಲ ಸಮಯ ಸಂಜೆ 2:56 ರಿಂದ 7:12 ರವರೆಗೆ ಇತ್ತು. ವೀಕ್ಷಕರ ಭೌಗೋಳಿಕ ಸ್ಥಳವನ್ನು ಆಧರಿಸಿ ಗ್ರಹ ಕಣ್ಮರೆಯಾಗುವ ಮತ್ತು ಪ್ರತ್ಯಕ್ಷವಾಗುವ ನಿಖರ ಸಮಯ ಸಲ್ಪ ವ್ಯತ್ಯಾಸವಾಗಿತ್ತು.
ಯುರೋಪ್, ಆಫ್ರಿಕಾ, ಪಶ್ಚಿಮ ರಷ್ಯಾ, ಮಧ್ಯಪ್ರಾಚ್ಯ ಮತ್ತು ಭಾರತವೂ ಸೇರಿದಂತೆ ದಕ್ಷಿಣ ಏಷ್ಯಾದ ಕೆಲವು ಭಾಗಗಳಲ್ಲಿ ಈ ಚಂದ್ರನ ಗುಪ್ತ ಕ್ರಿಯೆ ಸ್ಪಷ್ಟವಾಗಿ ಗೋಚರಿಸಿತು. ಆದರೆ, ಅಮೆರಿಕ ಖಂಡದ ವೀಕ್ಷಕರಿಗೆ ಶುಕ್ರನು ಚಂದ್ರನ ಹಿಂದೆ ಮರೆಯಾಗುವುದು ಕಾಣಿಸಲಿಲ್ಲ. ಬದಲಿಗೆ ಅವರಿಗೆ ಚಂದ್ರ ಮತ್ತು ಶುಕ್ರ ಪರಸ್ಪರ ಅತ್ಯಂತ ಹತ್ತಿರದಲ್ಲಿರುವಂತೆ ಮಾತ್ರ ಗೋಚರಿಸಿದವು. ಕರ್ನಾಟಕ ಹಲವು ಕಡೆ ಇದು ಘೋಚರಿಸಿತು ಮತ್ತು ಚೌತಿ ಹಬ್ಬದ ದಿನ ಹಲವು ಮಂದಿ ಬೆಂಗಳೂರು, ಮಂಗಳೂರು ಸೇರಿದಂತೆ ಹಲವು ಕಡೆ ಜನ ನೋಡಿ ಖುಷಿಪಟ್ಟರು. ಕೆಲವರು ಚೌತಿ ಹಬ್ಬವೆಂದು ಆಕಾಶದಲ್ಲಿನ ಚಂದ್ರನನ್ನು ನೋಡಲು ಹಿಂದೇಟು ಹಾಕಿದರು.
ಈ ರೀತಿಯ ಆಕಾಶ ವಿದ್ಯಮಾನಗಳನ್ನು ಸ್ಪಷ್ಟವಾಗಿ ವೀಕ್ಷಿಸಲು ದೂರದರ್ಶಕ ಅಥವಾ ಬೈನಾಕ್ಯುಲರ್ ಬಳಸುವುದು ಸೂಕ್ತ. ಹಗಲಿನ ವೇಳೆಯಲ್ಲಿ ವೀಕ್ಷಿಸುವಾಗ ಸೂರ್ಯನು ನಿಮ್ಮ ದೂರದರ್ಶಕ ಅಥವಾ ಬೈನಾಕ್ಯುಲರ್‌ನ ವೀಕ್ಷಣಾ ಕ್ಷೇತ್ರಕ್ಕೆ ಬಾರದಂತೆ ಅತ್ಯಂತ ಜಾಗರೂಕರಾಗಿರಬೇಕು. ಆಪ್ಟಿಕಲ್ ಉಪಕರಣಗಳ ಮೂಲಕ ನೇರವಾಗಿ ಸೂರ್ಯನನ್ನು ನೋಡುವುದರಿಂದ ಕಣ್ಣಿನ ದೃಷ್ಟಿ ಶಾಶ್ವತವಾಗಿ ಹಾನಿಗೊಳಗಾಗಬಹುದು.
ಗುಪ್ತ ಮಾರ್ಗದ ಹೊರಗಿದ್ದ ವೀಕ್ಷಕರಿಗೂ ಸಹ, ಆಕಾಶದಲ್ಲಿ ಚಂದ್ರ ಮತ್ತು ಶುಕ್ರ ಗ್ರಹಗಳ ಈ ಸುಂದರ ಜೋಡಿ ಹಗಲು ಮತ್ತು ಸಂಜೆಯ ವೇಳೆಯಲ್ಲಿ ಅತ್ಯಂತ ಆಕರ್ಷಕ ದೃಶ್ಯ ವೈಭವವನ್ನು ಒದಗಿಸಿತು.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.