*ಗುರು ಗೃಹವನ್ನು ಪರಿಭ್ರಮಿಸು ಜುನೋ ಮಿಷನ್
*ಸೌರವ್ಯೂಹದ ಅತಿದೊಡ್ಡ ಚಂದ್ರ ಗ್ಯಾನಿಮೀಡ್
*ಜುನೋಸ್ ವೇವ್ಸ್ ಉಪಕರಣದಿಂದ ಧ್ವನಿ ರೆಕಾರ್ಡ್!
Tech Desk: ಅಮೆರಿಕಾದ ಅಂತರಿಕ್ಷ ನೌಕಾ ಸಂಸ್ಥೆ ನಾಸಾದ (NASA) ಗುರು ಗೃಹವನ್ನು ಪರಿಭ್ರಮಿಸು ಜುನೋ ಮಿಷನ್ (Juno mission) ಸೌರವ್ಯೂಹದ ಅತಿದೊಡ್ಡ ಚಂದ್ರ ಗ್ಯಾನಿಮೀಡ್‌ನಿಂದ ಮಾಹಿತಿಯನ್ನು ರವಾನಿಸಿದೆ. ಗುರುಗ್ರಹದ (Jupiter) ಉಪಗ್ರಹವಾದ ಗ್ಯಾನಿಮೀಡ್ (Ganymede) ಸೌರವ್ಯೂಹದ ಉಪಗ್ರಹಗಳಲ್ಲಿ ಅತಿ ದೊಡ್ಡ ಮತ್ತು ಅತ್ಯಂತ ಬೃಹತ್ತಾಗಿದೆ. ಸೌರವ್ಯೂಹದ ಒಂಬತ್ತನೇ ಅತಿ ದೊಡ್ಡ ವಸ್ತು ಇದಾಗಿದೆ. ಚಂದ್ರನ ಮೇಲ್ಮೈಯಿಂದ ಬರುವ ಶಬ್ದಗಳನ್ನು ಒಳಗೊಂಡಿರುವ ಈ ಮಾಹಿತಿಯೂ ಚಂದ್ರನ ಪ್ರದೇಶದ ಬಗ್ಗೆ ಸಾಕಷ್ಟು ವಿಚಾರಗಳನ್ನುಬಹಿರಂಗಪಡಿಸುತ್ತದೆ. ವಿಜ್ಞಾನಿಗಳು ಗುರುತಿಸಿರುವಂತೆ ಗುರುಗ್ರಹದಲ್ಲಿ 80 ಚಂದ್ರಗಳಿದ್ದು (Moon), ಇವುಗಳು ಒಟ್ಟಾಗಿ ಜೋವಿಯನ್ ಎಂದು ಕರೆಯಲ್ಪಡುತ್ತವೆ. ಈ ಉಪಗ್ರಹದ ಬಳಿ ಹಾರಾಟದ ಸಮಯದಲ್ಲಿ ಸಂಗ್ರಹಿಸಿದ ಡೇಟಾದಿಂದ 50-ಸೆಕೆಂಡ್ ಆಡಿಯೊ ಟ್ರ್ಯಾಕ್ ಅನ್ನು ರಚಿಸಲಾಗಿದೆ.
ಅಮೆರಿಕಾದ ನ್ಯೂ ಓರ್ಲಿಯನ್ಸ್‌ನಲ್ಲಿ ನಡೆದ ಅಮೇರಿಕನ್ ಜಿಯೋಫಿಸಿಕಲ್ ಯೂನಿಯನ್ ಫಾಲ್ ಮೀಟಿಂಗ್‌ನಲ್ಲಿ ಈ ಧ್ವನಿಯನ್ನು ಬಹಿರಂಗಪಡಿಸಲಾಗಿದೆ. ಗುರುಗ್ರಹದ ಕಾಂತಗೋಳದಲ್ಲಿ ಉತ್ಪತ್ತಿಯಾಗುವ ವಿದ್ಯುತ್ ಮತ್ತು ಕಾಂತೀಯ ರೇಡಿಯೋ ತರಂಗಗಳಿಗೆ ಟ್ಯೂನ್ ಮಾಡುವ ಜುನೋಸ್ ವೇವ್ಸ್ ಉಪಕರಣದಿಂದ (Juno’s Waves instrument) ಧ್ವನಿಗಳನ್ನು ರೆಕಾರ್ಡ್ ಮಾಡಲಾಗಿದೆ. ವಿಜ್ಞಾನಿಗಳು ಆಡಿಯೊ ಟ್ರ್ಯಾಕ್ ಮಾಡಲು ಈ ಆವರ್ತನಗಳನ್ನು ಮಾನವನ ಕಿವಿಗೆ ಕೇಳಬಲ್ಲ ಆಡಿಯೊ ಶ್ರೇಣಿಗೆ (Audio Range) ಬದಲಾಯಿಸಿದ್ದಾರೆ.
undefined
ಬಾಹ್ಯಾಕಾಶ ನೌಕೆಯು ಚಂದ್ರನ ಮೇಲ್ಮೈಯಿಂದ 1,038 ಕಿಲೋಮೀಟರ್‌ಗಳ ಒಳಗೆ ಮತ್ತು ಗಂಟೆಗೆ 67,000 ಕಿಲೋಮೀಟರ್‌ಗಳ ಸಾಪೇಕ್ಷ ವೇಗದಲ್ಲಿ ಚಲಿಸುತ್ತದೆ ಎಂದು ನಾಸಾ ಹೇಳಿದೆ. ಧ್ವನಿಯ ಜೊತೆಗೆ, ಜುನೋ ತಂಡವು ಗುರುಗ್ರಹದ ಮಸುಕಾದ ಧೂಳಿನ ಉಂಗುರದ ಚಿತ್ರವನ್ನು ಬಿಡುಗಡೆ ಮಾಡಿದೆ. ಈ ಚಿತ್ರವು ಪರ್ಸೀಯಸ್ ನಕ್ಷತ್ರಪುಂಜವನ್ನು ಸಹ ಸೆರೆಹಿಡಿದಿದೆ. ಗುರು ಗೃಹ ಪರಿಭ್ರಮಿಸುವ ಜುನೋ ಮಿಷನ್ ರವಾನಿಸಿದ ಧ್ವನಿಯನ್ನು ನೀವು ಇಲ್ಲಿ ಕೇಳಬಹುದು.
ಗುರುಗ್ರಹದ ಮ್ಯಾಗ್ನೆಟಿಕ್ ಫೀಲ್ಡ್ ಮ್ಯಾಪಿಂಗ್
ಗೊಡ್ಡಾರ್ಡ್ ಬಾಹ್ಯಾಕಾಶ ಹಾರಾಟ ಕೇಂದ್ರದ (Goddard Space Flight Center) ಖಗೋಳಶಾಸ್ತ್ರಜ್ಞರು ಗುರುಗ್ರಹದ ಕಾಂತಕ್ಷೇತ್ರದ (Magnetic Field) ಅತ್ಯಂತ ವಿವರವಾದ ನಕ್ಷೆಯನ್ನು ತಯಾರಿಸಿದ್ದಾರೆ. ಜುನೋದ ಪ್ರಧಾನ ಕಾರ್ಯಾಚರಣೆಯ ಸಮಯದಲ್ಲಿ 32 ಕಕ್ಷೆಗಳಿಂದ ನಕ್ಷೆಯನ್ನು ರಚಿಸಲಾಗಿದೆ. ಇದು ಗ್ರಹದ ಸಮಭಾಜಕದಲ್ಲಿನ ಕಾಂತೀಯ ಅಸಹಜತೆಯಿಂದ (magnetic anomaly) ಕೂಡಿರುವ ನಿಗೂಢ ಗ್ರೇಟ್ ಬ್ಲೂ ಸ್ಪಾಟ್‌ನ (Great Blue Spot) ಒಳನೋಟಗಳನ್ನು ಒದಗಿಸುತ್ತದೆ.
ಜುನೋ ಬಾಹ್ಯಾಕಾಶ ನೌಕೆಯ ದತ್ತಾಂಶವು, ಗ್ರಹವು ಕಳೆದ ಐದು ವರ್ಷಗಳಲ್ಲಿ ಕಾಂತೀಯ ಕ್ಷೇತ್ರದಲ್ಲಿ ಬದಲಾವಣೆಗಳನ್ನು ಕಂಡಿದೆ ಮತ್ತು ಗ್ರೇಟ್ ಬ್ಲೂ ಸ್ಪಾಟ್ ಗುರುಗ್ರಹದ ಉಳಿದ ಆಂತರಿಕ ಭಾಗಗಳಿಗೆ ಹೋಲಿಸಿದರೆ ಪ್ರತಿ ಸೆಕೆಂಡಿಗೆ ಸುಮಾರು ಎರಡು ಇಂಚುಗಳಷ್ಟು ವೇಗದಲ್ಲಿ ಪೂರ್ವಕ್ಕೆ ಚಲಿಸುತ್ತಿದೆ ಎಂದು ಸೂಚಿಸುತ್ತದೆ.
ಗುರುವು ನಮ್ಮ ಸಾಗರಗಳ ಬಗೆಗಿನ ತಿಳುವಳಿಕೆಯನ್ನು ಹೆಚ್ಚಿಸಬಹುದು
ಗುರುಗ್ರಹದ ಧ್ರುವಗಳಲ್ಲಿನ ಚಂಡಮಾರುತಗಳು ಸಮುದ್ರದ ಸುಳಿಗಳೊಂದಿಗೆ ಹೋಲಿಕೆಗಳನ್ನು ಹಂಚಿಕೊಳ್ಳುತ್ತವೆ ಹಾಗಾಗಿ ಭೂಮಿಯಲ್ಲಿನ ಭೌತಿಕ ಕಾರ್ಯವಿಧಾನಗಳ ಬಗ್ಗೆ ಒಳನೋಟವನ್ನು ನೀಡಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ. ಗುರುಗ್ರಹದಲ್ಲಿ ಸುಳಿಗಳ ಜ್ಯಾಮಿತೀಯ ಮಾದರಿಗಳು ಕಂಡುಬರುವಂತೆ, ಭೂಮಿಯ ಧ್ರುವಗಳ ಇತ್ತೀಚಿನ ಮಾದರಿಗಳು ಕೂಡ ಸ್ವಯಂಪ್ರೇರಿತವಾಗಿ ಹೊರಹೊಮ್ಮುತ್ತವೆ ಮತ್ತು ಶಾಶ್ವತವಾಗಿ ಉಳಿಯುತ್ತವೆ ಎಂದು ಕಂಡುಬಂದಿದೆ. ಗುರುಗ್ರಹದ ಶಕ್ತಿ ವ್ಯವಸ್ಥೆಯು ಭೂಮಿಗಿಂತ ದೊಡ್ಡ ಪ್ರಮಾಣದಲ್ಲಿದ್ದರೂ, ಅದು ನಮ್ಮ ಗ್ರಹದಲ್ಲಿನ ಬೆಳವಣಿಗೆಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.