ಇಂಚಿಂಚೂ ಭೂಮಿ ಜಾಲಾಡುವ ‘ನಿಸಾರ್‌’ ಉಪಗ್ರಹ ಸಿದ್ಧ: ಇಸ್ರೋ ಸಾಧನೆ

By Kannadaprabha NewsFirst Published Feb 7, 2023, 11:14 AM IST
Highlights

ಇಸ್ರೋ- ನಾಸಾದಿಂದ ಜಂಟಿಯಾಗಿ ‘ನಿಸಾರ್‌’ ಉಪಗ್ರಹ ಅಭಿವೃದ್ಧಿ ಪಡಿಸುತ್ತಿದ್ದು, ಪ್ರತಿ 12 ದಿನಕ್ಕೊಮ್ಮೆ ಭೂಮಂಡಲದ ಚಿತ್ರವನ್ನು ಈ ಸ್ಯಾಟಲೈಟ್‌ ಸೆರೆ ಹಿಡಿಯಲಿದೆ. ಭೂಕಂಪ, ಭೂಕುಸಿತ ಬಗ್ಗೆಯೂ ಮುನ್ಸೂಚನೆ ನೀಡಲಿದೆ. ಇದು 2024ರ ಜನವರಿಗೆ ಉಡಾವಣೆಯಾಗಲಿದೆ ಎಂದೂ ಹೇಳಲಾಗಿದೆ.

ನವದೆಹಲಿ (ಫೆಬ್ರವರಿ 7, 2023): ಭೂಕಂಪ, ಭೂಕುಸಿತದ ಕುರಿತು ಮುನ್ಸೂಚನೆ ನೀಡಲು ವಿಜ್ಞಾನಿಗಳಿಗೆ ಪ್ರಯೋಜನಕಾರಿಯಾಗುವ, ಮೂರು ವರ್ಷಗಳ ಕಾಲ ಪ್ರತಿ 12 ದಿನಗಳಿಗೊಮ್ಮೆ ಇಡೀ ಭೂಮಂಡಲದ ಚಿತ್ರ ಸೆರೆ ಹಿಡಿಯುವ, ಕಂಡುಕೇಳರಿಯದ ರೀತಿಯಲ್ಲಿ ಭೂಮಿಯ ಸಣ್ಣಸಣ್ಣ ಬದಲಾವಣೆಗಳನ್ನೂ ಪತ್ತೆ ಹಚ್ಚುವ ಉಪಗ್ರಹವೊಂದು ಸಜ್ಜಾಗುತ್ತಿದೆ. ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಹಾಗೂ ಅಮೆರಿಕದ ನಾಸಾ ಸಂಸ್ಥೆಗಳು ಜತೆಗೂಡಿ ಈ ಉಪಗ್ರಹಕ್ಕೆ ಅಂತಿಮ ಸ್ಪರ್ಶ ನೀಡುವಲ್ಲಿ ನಿರತವಾಗಿವೆ.

ನಾಸಾ (NASA) - ಇಸ್ರೋ (ISRO) ಜತೆಗೂಡಿ ತಯಾರಿಸುತ್ತಿರುವ ಈ ಉಪಗ್ರಹಕ್ಕೆ (Satellite) ‘ನಿಸಾರ್‌’ (NISAR) ಎಂದು ನಾಮಕರಣ ಮಾಡಲಾಗಿದೆ. ನಾಸಾ ಹಾಗೂ ಇಸ್ರೋದ ಅಕ್ಷರಗಳನ್ನು ಕ್ರಮವಾಗಿ ಜೋಡಿಸಿ ಈ ಹೆಸರು ಸೂಚಿಸಲಾಗಿದೆ. ಕಳೆದ 8 ವರ್ಷಗಳಿಂದ ಇದರ ತಯಾರಿ ನಡೆಯುತ್ತಿದೆ. ಈ ಉಪಗ್ರಹ 12 ಮೀಟರ್‌ ಅಗಲದ ಆ್ಯಂಟೆನಾ ಹೊಂದಿದೆ. ನಾಸಾ ಈವರೆಗೂ ಉಡಾವಣೆ ಮಾಡಿರುವ ಯಾವುದೇ ಭೂಸರ್ವೇಕ್ಷಣಾ ಉಪಗ್ರಹದಲ್ಲೂ ಇಷ್ಟೊಂದು ದೈತ್ಯ ಆ್ಯಂಟೆನಾ ಇರಲಿಲ್ಲ. 2024ರ ಜನವರಿಯಲ್ಲಿ ಜಿಎಸ್‌ಎಲ್‌ವಿ (GSLC) ರಾಕೆಟ್‌ ಬಳಸಿ ಆಂಧ್ರಪ್ರದೇಶದ (Andhra Pradesh) ಶ್ರೀಹರಿಕೋಟದಿಂದ (Sriharikota) ಇದನ್ನು ಉಡಾವಣೆ ಮಾಡಲು ನಿರ್ಧರಿಸಲಾಗಿದೆ.

ಇದನ್ನು ಓದಿ: ಅಭಿವೃದ್ಧಿಯ ಪ್ರತೀಕ: ಭಾರತ ಪ್ರಕಾಶಿಸುತ್ತಿದೆ: ಇಸ್ರೋ ವರದಿ ಬಿಡುಗಡೆ

ಏನಿದರ ವಿಶೇಷತೆ?:
ಬಾಹ್ಯಾಕಾಶದಲ್ಲಿ ಸಾಕಷ್ಟು ಭೂಸರ್ವೇಕ್ಷಣಾ ಉಪಗ್ರಹಗಳು ಇವೆ. ಆದರೆ, ‘ನಿಸಾರ್‌’ ಆ ಉಪಗ್ರಹಗಳ ರೀತಿ ಅಲ್ಲ. ಎಷ್ಟೇ ಉಪಗ್ರಹ ಇದ್ದರೂ ಭೂಮಂಡಲದ ಕೆಲವೊಂದು ಭಾಗಗಳ ಚಿತ್ರವನ್ನು ಪ್ರತಿಕೂಲ ಹವಾಮಾನ ಅಥವಾ ದಟ್ಟ ಮೋಡಗಳಿಂದಾಗಿ ಸೆರೆ ಹಿಡಿಯಲು ಆಗಿಲ್ಲ. ಆದರೆ ನಿಸಾರ್‌ ಹಗಲು - ರಾತ್ರಿ ಎನ್ನದೆ ದಟ್ಟ ಮೋಡಗಳು ಇದ್ದರೂ ಚಿತ್ರ ಸೆರೆ ಹಿಡಿಯುತ್ತದೆ. 10 ಮೀಟರ್‌ನಷ್ಟು  ಸಣ್ಣ ಬದಲಾವಣೆಯನ್ನೂ ಗುರುತಿಸುತ್ತದೆ. ಇದರಿಂದಾಗಿ ನಗರ ಪ್ರದೇಶಗಳು, ಕೃಷಿ ಪ್ರದೇಶಗಳಲ್ಲಿ ಆಗುವ ಬದಲಾವಣೆಯನ್ನು ತಜ್ಞರು ಬೇಗ ಪತ್ತೆ ಹಚ್ಚಬಹುದು.

ಭೂಕಂಪ, ಭೂಕುಸಿತ ಮುನ್ಸೂಚನೆ ಹೇಗೆ?:
ಅಂತಜರ್ಲ ಮಟ್ಟ ಕುಸಿತವನ್ನು ಪತ್ತೆ ಹಚ್ಚಿ, ಸುತ್ತಲಿನ ಪ್ರದೇಶಗಳಿಗೆ ಅದರಿಂದ ಎಷ್ಟು ಹಾನಿಯಾಗಿದೆ, ಭೂಕುಸಿತ ಏನಾದರೂ ಆಗುತ್ತಿದೆಯೇ ಎಂಬುದನ್ನು ಗುರುತಿಸುತ್ತದೆ. ಭೂಮಿಯ ಆಳಕ್ಕೆ ರಾಡಾರ್‌ ಸಿಗ್ನಲ್‌ಗಳು ಪ್ರವೇಶಿಸುವುದರಿಂದ ಭೂಪದರ ಎಲ್ಲಾದರೂ ಜಾರುತ್ತಿದೆಯೇ ಎಂಬ ಸುಳಿವು ಲಭಿಸುತ್ತದೆ. ಈ ಮೂಲಕ ಭೂಕಂಪ ಹಾಗೂ ಭೂಕುಸಿತಗಳನ್ನು ಪತ್ತೆ ಹಚ್ಚಲು ವಿಜ್ಞಾನಿಗಳಿಗೆ ಅನುಕೂಲವಾಗುತ್ತದೆ. ಇದಲ್ಲದೆ, ಜ್ವಾಲಾಮುಖಿ ಏಳುವ ಮುನ್ನ ಅಗ್ನಿ ಪರ್ವತಗಳಲ್ಲಿ ಆಗುವ ಬದಲಾವಣೆಯನ್ನೂ ಗುರುತಿಸುವುದರಿಂದ ಮುನ್ಸೂಚನೆ ನೀಡಲು ಸಹಾಯವಾಗುತ್ತದೆ.

ಇದನ್ನೂ ಓದಿ: ಭಾರತದ ಗಗನಯಾನಕ್ಕೆ ನಾಸಾ ಸಹಕಾರ: ಕ್ಯಾಥರಿನ್‌ ಲ್ಯೂಡರ್ಸ್‌

click me!