ನಾಸಾದಿಂದ ಇಬ್ಬರು ಇಸ್ರೋ ಗಗನಯಾತ್ರಿಗಳಿಗೆ ತರಬೇತಿ ಪೂರ್ಣ: 2025ರ ಏಪ್ರಿಲ್‌ನಲ್ಲಿ ನಭಕ್ಕೆ

By Kannadaprabha News  |  First Published Dec 1, 2024, 7:35 AM IST

ಇಬ್ಬರು ಭಾರತೀಯ ಗಗನಯಾತ್ರಿಗಳು ನಾಸಾದಲ್ಲಿ ಮೊದಲ ಹಂತದ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. 2025ರ ಏಪ್ರಿಲ್‌ನಲ್ಲಿ ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಪ್ರಯಾಣ ಬೆಳೆಸಲಿದ್ದಾರೆ.


ನವದೆಹಲಿ: ಅಮೆರಿಕದ ನಾಸಾ ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋದ ಸಹಭಾಗಿತ್ವದಲ್ಲಿ ನಡೆಯಲಿರುವ ಚೊಚ್ಚಲ ಬಾಹ್ಯಾಕಾಶ ಯಾನಕ್ಕೆ ಆಯ್ಕೆಯಾಗಿರುವ ಇಬ್ಬರು ಭಾರತೀಯ ಗಗನಯಾತ್ರಿಗಳು ಮೊದಲ ಹಂತದ ತರಬೇತಿಯನ್ನು ಅಮೆರಿಕದಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಯಾನಕ್ಕೆ ಆಯ್ಕೆಯಾಗಿರುವ ಗ್ರೂಪ್ ಕ್ಯಾಪ್ಟನ್ ಶುಭಾನ್ಷು ಶುಕ್ಲಾ ಮತ್ತು ಪ್ರಶಾಂತ್ ಬಾಲಕೃಷ್ಣನ್ ಅವರು ಕಳೆದ ಆಗಸ್ಟ್‌ನಲ್ಲಿ ಅಮೆರಿಕಕ್ಕೆ ತೆರಳಿ ಅಲ್ಲಿ ಮೊದಲ ಹಂತದ ಹಲವು ತರಬೇತಿಯನ್ನು ಯಶಸ್ವಿಯಾಗಿ ಪಡೆದುಕೊಂಡಿದ್ದಾರೆ ಎಂದು ಇಸ್ರೋ ಮಾಹಿತಿ ನೀಡಿದೆ. ನಾಸಾ-ಇಸ್ರೋ ಸಹಭಾಗಿತ್ವದ ಈ ಉಡ್ಡಯನ 2025ರ ಏಪ್ರಿಲ್‌ನಲ್ಲಿ ನಡೆಯುವ ಸಾಧ್ಯತೆ ಇದೆ.

ನಾಸಾ ತಜ್ಞರಿಂದ ಏನೇನು ತರಬೇತಿ?
ಅಂತಾರಾಷ್ಟ್ರೀಯ ಬಾಹ್ಯಾಕಾಶ ಉಡ್ಡಯನ ಸಂಬಂಧ ಕೇಂದ್ರಗಳ ಪ್ರವಾಸ, ಉಡ್ಡಯನ ಸಂಬಂಧಿ ಪ್ರಾಥಮಿಕ ಮಾಹಿತಿ, ಉಡ್ಡಯನದ ವೇಳೆ ಧರಿಸುವ ಸ್ಪೇಸ್ ಎಕ್ಸ್‌ನ ವಸ್ತ್ರಗಳ ಅಳತೆ, ಬಾಹ್ಯಾಕಾಶದ ವೇಳೆ ಸೇವಿಸುವ ಆಹಾರ, ಗಗನಯಾತ್ರಿಗಳನ್ನು ಹೊತ್ತೊಯ್ಯುವ ಸ್ಪೇಸ್ ಎಕ್ಸ್ ಡ್ರಾಗನ್ ಸ್ಟೇಸ್‌ಕ್ರಾಫ್ಟ್‌ನ ಕುರಿತು ಮಾಹಿತಿ, ಬಾಹ್ಯಾಕಾಶ ಕೇಂದ್ರದಲ್ಲಿರುವ ವ್ಯವಸ್ಥೆಗಳ ಮಾಹಿತಿ, ಅಲ್ಲಿನ ನಿತ್ಯದ ಕಾರ್ಯ ಚಟುವಟಿಕೆ, ಪರಸ್ಪರರ ನಡುವೆ ಸಂವಹನದ ರೀತಿಗಳ ಕುರಿತು ಇಬ್ಬರೂ ಗಗನಯಾತ್ರಿಗಳು ಮಾಹಿತಿ ಪಡೆದುಕೊಂಡಿದ್ದಾರೆ. ಅದರಲ್ಲೂ ವಿಶೇಷವಾಗಿ ಬಾಹ್ಯಾಕಾಶದಲ್ಲಿ ಯಾವ್ಯಾವ ರೀತಿಯಲ್ಲಿ ತುರ್ತು ಪರಿಸ್ಥಿತಿ ಎದುರಾಗಬಹುದು, ಅದರ ನಿರ್ವಹಣೆ ಹೇಗೆ, ಅನಾರೋಗ್ಯ ಸಮಸ್ಯೆ ಮೊದಲಾದ ವಿಷಯಗಳ ಕುರಿತು ನಾಸಾದ ತಜ್ಞರ ತಂಡ ಇಸ್ರೋದ ಗಗನಯಾತ್ರಿಗಳಿಗೆ ಮಾಹಿತಿ ನೀಡಿದೆ. ಮುಂದಿನ ಹಂತದ ತರಬೇತಿಯಲ್ಲಿ ಉಡ್ಡಯನದ ಉಳಿದ ಭಾಗಗಳ ಕುರಿತಾದ ಮಾಹಿತಿ, ಶೂನ್ಯ ಗುರುತ್ವಾಕರ್ಷಣೆ ಇರುವ ಬಾಹ್ಯಾಕಾಶದಲ್ಲಿ ಸಂಶೋಧನೆ ನಡೆಸುವ ಬಗ್ಗೆ ತರಬೇತಿ ನೀಡಲಾಗುವುದು.

ಇದನ್ನೂ ಓದಿ: ನಿಜಕ್ಕೂ ಏಲಿಯನ್‌ಗಳು ಇವೆಯಾ? ಇಸ್ರೋ ಅಧ್ಯಕ್ಷ ಡಾ.ಸೋಮನಾಥ್‌ರಿಂದ ಅಚ್ಚರಿಯ ವಿಷಯ ರಿವೀಲ್!

Latest Videos

ಇದನ್ನೂ ಓದಿ: ಇಸ್ರೋದಿಂದ ಮೇಡ್ ಇನ್ ಇಂಡಿಯಾ ಕಾರು ಸೆನ್ಸಾರ್, ಇನ್ಮುಂದೆ ಇಳಿಕೆಯಾಗಲಿದೆ ವಾಹನ ದರ!

click me!