
ಟೌನ್ಸ್‌ವಿಲ್ಲೆ(ಜು.7): ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್ ಕಡಲತೀರದಲ್ಲಿ ಬಿದ್ದಿರುವ ಆರು ನಿಗೂಢ ಮತ್ತು ವಿಸ್ಮಯಕಾರಿ ಬೃಹತ್ ಗೋಳಾಕಾರದ ವಸ್ತುಗಳು (Spherical Objects) ಅಲ್ಲಿನ ನಿವಾಸಿಗಳು ಹಾಗೂ ಬಾಹ್ಯಾಕಾಶ ತಜ್ಞರಲ್ಲಿ ಭಾರಿ ಕುತೂಹಲ ಮತ್ತು ಆತಂಕ ಮೂಡಿಸಿವೆ. ಕರಾವಳಿಗೆ ತೇಲಿ ಬಂದಿರುವ ಈ ನಿಗೂಢ ವಸ್ತುಗಳು ಬಾಹ್ಯಾಕಾಶದ ಕಸ (Space Debris) ಇರಬಹುದು ಎಂದು ಶಂಕಿಸಲಾಗಿದ್ದು, ರಾಕೆಟ್ ಉಡಾವಣೆಗಳ ನಂತರ ಉಳಿದುಕೊಳ್ಳುವ 'ಸ್ಪೇಸ್ ಬಾಲ್ಸ್' (Space Balls) ಇವು ಇರಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ.
ಟೌನ್ಸ್‌ವಿಲ್ಲೆ ನಗರದ ಉತ್ತರ ಭಾಗದಲ್ಲಿರುವ ಫಾರೆಸ್ಟ್ ಬೀಚ್ (Forrest Beach) ಕರಾವಳಿ ಪ್ರದೇಶದಲ್ಲಿ ಈ ವಸ್ತುಗಳು ಪತ್ತೆಯಾಗಿವೆ. ಆಸ್ಟ್ರೇಲಿಯನ್ ಸ್ಪೇಸ್ ಏಜೆನ್ಸಿ (ASA) ಭಾನುವಾರ ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಈ ಗೋಳಗಳ ಸ್ವರೂಪ ಮತ್ತು ಮೂಲವನ್ನು ಪತ್ತೆಹಚ್ಚಲು ತುರ್ತು ಸೇವೆಗಳ ಅಧಿಕಾರಿಗಳೊಂದಿಗೆ ಜಂಟಿಯಾಗಿ ಕೆಲಸ ಮಾಡುತ್ತಿರುವುದಾಗಿ ಸ್ಪಷ್ಟಪಡಿಸಿದೆ.
ಕ್ವೀನ್ಸ್‌ಲ್ಯಾಂಡ್ ಅಗ್ನಿಶಾಮಕ ಇಲಾಖೆಯ ಪ್ರಕಾರ, ಸ್ಥಳೀಯ ಕಡಲತೀರಗಳಿಂದ ಒಟ್ಟು ಆರು ನಿಗೂಢ ಗೋಳಾಕಾರದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಗೋಳಗಳಲ್ಲಿ ಅಪಾಯಕಾರಿ ಹಾಗೂ ವಿಷಕಾರಿ ರಾಸಾಯನಿಕಗಳ (Residual Chemicals) ಅವಶೇಷಗಳು ಇರುವ ಸಾಧ್ಯತೆ ಇರುವುದರಿಂದ, ಪೊಲೀಸರು ಇವುಗಳನ್ನು ಅತ್ಯಂತ ಗಂಭೀರ ಹಾಗೂ ಅಪಾಯಕಾರಿ ವಸ್ತುಗಳೆಂದು ಪರಿಗಣಿಸಿದ್ದಾರೆ. ಸದ್ಯ ಪತ್ತೆಯಾಗಿರುವ ಆರು ಗೋಳಗಳ ಪೈಕಿ ಐದನ್ನು ಈಗಾಗಲೇ ಅತ್ಯಂತ ಸುರಕ್ಷಿತವಾಗಿ 'ಅಪಾಯಕಾರಿ ವಸ್ತುಗಳ ನಿಯಂತ್ರಣ ಡ್ರಮ್‌ಗಳಲ್ಲಿ' (Hazardous Materials Drums) ಇರಿಸಲಾಗಿದೆ. ಆರನೇ ಗೋಳವನ್ನು ಸುರಕ್ಷಿತವಾಗಿ ಮರಳಿ ಪಡೆಯಲು ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಇಂತಹ ಇನ್ನಷ್ಟು ಅವಶೇಷಗಳು ಕಡಲತೀರಕ್ಕೆ ತೇಲಿ ಬರುವ ಸಾಧ್ಯತೆ ಇರುವುದರಿಂದ, ಸಾರ್ವಜನಿಕರು ಯಾವುದೇ ಶಂಕಾಸ್ಪದ ವಸ್ತುಗಳ ಬಳಿ ಹೋಗಬಾರದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
ಈ ನಿಗೂಢ ವಸ್ತುಗಳ ವಿನ್ಯಾಸ ಮತ್ತು ತಾಂತ್ರಿಕತೆಯನ್ನು ವಿಶ್ಲೇಷಿಸಿರುವ ಬಾಹ್ಯಾಕಾಶ ತಜ್ಞರೊಬ್ಬರು, ಇವುಗಳು ರಾಕೆಟ್ ಹಂತಗಳ (Rocket Stages) ಭಾಗವಾಗಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. "ಉಪಗ್ರಹ ಅಥವಾ ಪೇಲೋಡ್ ಅನ್ನು ಬಾಹ್ಯಾಕಾಶಕ್ಕೆ ತಲುಪಿಸಿ ಭೂಮಿಗೆ ಮರಳಿ ಬೀಳುವ ರಾಕೆಟ್‌ನ ಮೊದಲ ಅಥವಾ ಎರಡನೇ ಹಂತದ ಭಾಗಗಳು ಇವಾಗಿರಬಹುದು. ಇವುಗಳ ವಿನ್ಯಾಸವು ರಾಕೆಟ್‌ನ ಇಂಧನ ವ್ಯವಸ್ಥೆಗೆ (Fuel System) ಬಳಸುವ ಸಾಧನಗಳಂತೆ ಕಾಣುತ್ತಿವೆ. ಇವು ಹೈ ಮೆಲ್ಟಿಂಗ್ ಪಾಯಿಂಟ್ ಹೊಂದಿರುವ ಟೈಟಾನಿಯಂ ಮಿಶ್ರಲೋಹಗಳಿಂದ (Titanium Alloys) ಮಾಡಲ್ಪಟ್ಟ ಒತ್ತಡದ ಇಂಧನ ಪಾತ್ರೆಗಳಾಗಿವೆ (Pressurised Fuel Vessels)," ಎಂದು ವಿವರಿಸಿದ್ದಾರೆ.
Queensland Fire and Rescue crews are continuing to assist partner agencies following the discovery of several potentially hazardous objects around Forrest Beach in North Queensland.
Specialist QFR Scientific teams have safely secured a number of the items throughout the weekend… pic.twitter.com/BVq9xJPPlX— Queensland Fire Department (@QldFireDept) July 5, 2026
ಬಾಹ್ಯಾಕಾಶ ವಿಜ್ಞಾನದ ಪರಿಭಾಷೆಯಲ್ಲಿ ಇವುಗಳನ್ನು 'ಸ್ಪೇಸ್ ಬಾಲ್ಸ್' ಎಂದೇ ಕರೆಯಲಾಗುತ್ತದೆ. ರಾಕೆಟ್ ಉಡಾವಣೆಯಾಗಿ ಹಲವು ವರ್ಷಗಳ ಕಳೆದ ನಂತರವೂ ಇವು ಭೂಮಿಯ ಮೇಲೆ ಪತ್ತೆಯಾಗುವ ಸಾಧ್ಯತೆಗಳಿರುತ್ತವೆ. ಇವು ಭೂಮಿಗೆ ಮರಳಿ ಬೀಳುವ ಕ್ಷಣವನ್ನು ಯಾರೂ ಕಣ್ಣಾರೆ ನೋಡಿರುವ ಸಾಧ್ಯತೆ ಇರುವುದಿಲ್ಲ ಎಂದು ತಜ್ಞರು ತಿಳಿಸಿದ್ದಾರೆ.
ಆಸ್ಟ್ರೇಲಿಯನ್ ಸ್ಪೇಸ್ ಏಜೆನ್ಸಿ (ASA) ತನ್ನ ಇತ್ತೀಚಿನ ಹೇಳಿಕೆಯಲ್ಲಿ, ಈ ಗೋಳಗಳು ಪತ್ತೆಯಾಗಿರುವ ಸ್ಥಳ ಮತ್ತು ಅವುಗಳ ವಿಶಿಷ್ಟ ಲಕ್ಷಣಗಳನ್ನು ಗಮನಿಸಿದರೆ, ಇತ್ತೀಚೆಗಷಟೇ ಭೂಮಿಯ ವಾತಾವರಣವನ್ನು ಮರು-ಪ್ರವೇಶಿಸಿದ (Re-entered) ಯಾವುದೇ ವಿದೇಶಿ ರಾಕೆಟ್‌ಗೆ (Foreign Rocket Body) ಸೇರಿದ ಅವಶೇಷಗಳಾಗಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಹೇಳಿದೆ. ಈ ನಿಗೂಢ ವಸ್ತುಗಳ ನಿಖರವಾದ ಮೂಲವನ್ನು ಕಂಡುಹಿಡಿಯಲು ತನಿಖೆ ಮುಂದುವರಿದಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.