
ಈಜಿಪ್ಟ್: ಮೂರು ಸಹಸ್ರಮಾನಗಳಿಗೂ ಹೆಚ್ಚು ಕಾಲ ಅಂದರೆ 3,000 ವರ್ಷಗಳ ಪ್ರಾಚೀನ ಚಾರಿತ್ರಿಕ ದಾಖಲೆಗಳಲ್ಲಿ ಮಾತ್ರವೇ ಉಳಿದುಕೊಂಡಿದ್ದ 'ಮೆಸೆನ್' (Mesen) ಎಂಬ ರಹಸ್ಯಮಯ ನಗರಕ್ಕೆ ಕೊನೆಗೂ ಭೌಗೋಳಿಕ ಅಸ್ತಿತ್ವ ಸಿಗುವ ಲಕ್ಷಣಗಳು ಕಾಣಿಸುತ್ತಿದೆ. ಈಜಿಪ್ಟ್‌ನ ಉತ್ತರ ಸಿನೈ ಮರುಭೂಮಿ ಹಾಗೂ ಪೂರ್ವ ನೈಲ್ ಡೆಲ್ಟಾ ಬಳಿಯ ಸೂಯೆಜ್ ಕಾಲುವೆಯ ಸಮೀಪವಿರುವ 'ಟೆಲ್ ಅಬು ಸೀಫಿ' (Tel Abu Seifi) ಎಂಬಲ್ಲಿ ದೊರೆತಿರುವ ಬೃಹತ್ ಶಾಸನವೊಂದು ಈ ಕಳೆದುಹೋದ ಪ್ರಾಚೀನ ನಗರದ ಅಸ್ತಿತ್ವಕ್ಕೆ ಬಲವಾದ ಸಾಕ್ಷಿ ಒದಗಿಸಿದೆ ಎಂದು ವರದಿ ತಿಳಿಸಿದೆ.
ಪುರಾತತ್ತ್ವ ತಜ್ಞರು ನಡೆಸಿದ ಸುದೀರ್ಘ ಉತ್ಖನನದ ವೇಳೆ, ಈಜಿಪ್ಟ್‌ನ ಶಕ್ತಿಶಾಲಿ ದೇವತೆ 'ಹೋರಸ್' (Horus) ಆರಾಧನೆಗೆ ಸಂಬಂಧಿಸಿದ ಹಾಗೂ ಲೆವಂಟ್ ಮಾರ್ಗದಲ್ಲಿದ್ದ ಪ್ರಮುಖ ಮಿಲಿಟರಿ ನೆಲೆಯಾಗಿದ್ದ ಮೆಸೆನ್‌ನ ಸುಳಿವುಗಳು ಪತ್ತೆಯಾಗಿವೆ.
ಈ ಶಾಸನಗಳ ಪೈಕಿ ಅತ್ಯಂತ ಪ್ರಮುಖವಾದದ್ದು ಮರಳುಗಲ್ಲಿನಲ್ಲಿ ಕೆತ್ತಲಾದ ಬೃಹತ್ ಆಕಾರದ ತುಂಡು. ಮೂರು ಬದಿಗಳಲ್ಲಿ ಅತ್ಯಂತ ಸೂಕ್ಷ್ಮವಾಗಿ ಕೆತ್ತಲಾಗಿರುವ ಈ ಶಾಸನವು, ಕ್ರಿ.ಪೂ 1279 ರಿಂದ 1213 ರವರೆಗೆ ಈಜಿಪ್ಟ್ ಅನ್ನು ಆಳಿದ ಪ್ರಸಿದ್ಧ ಫೇರೋ ರಾಮೆಸ್ಸೆಸ್ II (Ramesses II) ನ ಬಿರುದುಗಳು ಮತ್ತು ಹೋರಸ್ ಪ್ರತಿಮೆಯ ಜೀರ್ಣೋದ್ಧಾರ ಕಾರ್ಯಗಳನ್ನು ಉಲ್ಲೇಖಿಸುತ್ತದೆ.
ಅತ್ಯಂತ ಪ್ರಮುಖವಾಗಿ, ಈ ಪ್ರಾಚೀನ ಪಠ್ಯವು ಗಿಡುಗನ ಮುಖಹೊಂದಿರುವ ಈಜಿಪ್ಟಿಯನ್ ದೇವರು ಹೋರಸ್‌ನನ್ನು 'ಮೆಸೆನ್‌ನ ಪ್ರಭು' (Lord of Mesen) ಎಂದು ಕೊಂಡಾಡುತ್ತದೆ. ಚಾರಿತ್ರಿಕ ಪಠ್ಯಗಳಲ್ಲಿ ಮೆಸೆನ್ ನಗರದ ಪ್ರಸ್ತಾಪವಿದ್ದರೂ, ಇಷ್ಟು ದಿನಗಳ ಕಾಲ ಅದರ ನಿಖರವಾದ ಲೊಕೇಶನ್ ಪತ್ತೆಹಚ್ಚಲು ಯಾರಿಗೂ ಸಾಧ್ಯವಾಗಿರಲಿಲ್ಲ.
ಕೇವಲ ಒಂದು ಶಾಸನ ಮಾತ್ರವಲ್ಲದೆ, 'ಟೆಲ್ ಅಬು ಸೀಫಿ' ಪ್ರದೇಶವು ಒಂದು ಬೃಹತ್ ವಸಾಹತು, ಮಿಲಿಟರಿ ಹಾಗೂ ಪವಿತ್ರ ನಗರವಾಗಿತ್ತು ಎಂಬುದಕ್ಕೆ ಸಾಕ್ಷಿಯಾಗಿ ಹಲವು ಆಧಾರಗಳು ಸಿಕ್ಕಿವೆ. ಉತ್ಖನನದ ವೇಳೆ ಹೋರಸ್ ದೇವರಿಗೆ ಸಮರ್ಪಿತವಾಗಿದ್ದ ದೇವಾಲಯದ ಶಿಥಿಲಗೊಂಡ ಅವಶೇಷಗಳು ಸಿಕ್ಕಿವೆ. ನಗರದ ರಕ್ಷಣೆಗೆ ನಿರ್ಮಿಸಲಾಗಿದ್ದ ಬೃಹತ್ ಆವರಣ ಕೋಟೆ ಗೋಡೆ ಹಾಗೂ ಅದರ ಸಿಂಹದ್ವಾರಗಳನ್ನು ಪತ್ತೆಹಚ್ಚಲಾಗಿದೆ. ಕ್ರಿ.ಪೂ 304 ರಿಂದ 30 ರವರೆಗಿನ ಟಾಲೆಮಿಕ್ ಅವಧಿಗೆ ಸೇರಿದ ಕಂಚಿನ ಮುದ್ರೆ ಹಾಗೂ ಶವಪೆಟ್ಟಿಗೆಗಳು ದೊರೆತಿದ್ದು, ಅವುಗಳ ಮೇಲೆಯೂ ಹೋರಸ್ ಮತ್ತು ಮೆಸೆನ್ ನಡುವಿನ ಬಾಂಧವ್ಯದ ಕೆತ್ತನೆಗಳಿವೆ.
ಈ ಆವಿಷ್ಕಾರಗಳು, ರಾಮೆಸ್ಸೆಸ್ II ರ ಆಳ್ವಿಕೆಯ ನಂತರವೂ ನೂರಾರು ವರ್ಷಗಳ ಕಾಲ ಈ ನಗರವು ಜೀವಂತವಾಗಿತ್ತು ಮತ್ತು ಹೋರಸ್ ದೇವತೆಯ ಆರಾಧನೆಯ ಕೇಂದ್ರವಾಗಿ ಮುಂದುವರಿದಿತ್ತು ಎಂಬುದನ್ನೆ ದಾಖಲೆಯಾಗಿದೆ.
ಪ್ರಾಚೀನ ಈಜಿಪ್ಟ್‌ನಲ್ಲಿ ಮೆಸೆನ್ ನಗರವು ಅತ್ಯಂತ ಆಯಕಟ್ಟಿನ ಮಿಲಿಟರಿ ಮತ್ತು ವ್ಯಾಪಾರ ವಲಯವಾಗಿತ್ತು. ಇದು ನೈಲ್ ಡೆಲ್ಟಾ, ಸಿನೈ ಮರುಭೂಮಿ ಹಾಗೂ ಲೆವಂಟ್ ಪ್ರದೇಶಗಳನ್ನು ಸಂಪರ್ಕಿಸುವ ಪ್ರಸಿದ್ಧ 'ಹೋರಸ್‌ನ ಪ್ರಾಚೀನ ಮಾರ್ಗ' ದಲ್ಲಿದ್ದ ಪ್ರಮುಖ ಸೇನಾ ತಾಣವಾಗಿತ್ತು. ಈ ನಗರವು ಈಜಿಪ್ಟ್‌ನ ಈಶಾನ್ಯ ಗಡಿಯನ್ನು ವೈರಿಗಳ ದಾಳಿಯಿಂದ ರಕ್ಷಿಸುವ ಪ್ರಮುಖ ಸೈನಿಕ ಕಾರ್ಯತಂತ್ರದ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿತ್ತು.
ಟೆಲ್ ಅಬು ಸೀಫಿ ಸ್ಥಳವೇ ಪ್ರಾಚೀನ 'ಮೆಸೆನ್' ನಗರ ಎಂದು ಪುರಾತತ್ತ್ವಜ್ಞರು ಬಲವಾಗಿ ನಂಬಿದ್ದರೂ, ಅಧಿಕೃತವಾಗಿ ಇದನ್ನು ಘೋಷಿಸಲು ಇನ್ನೂ ಹೆಚ್ಚಿನ ಪುರಾವೆಗಳ ಅಗತ್ಯವಿದೆ ಎಂದು ಹೇಳಿದ್ದಾರೆ. ದೇವಸ್ಥಾನದ ಹೆಚ್ಚಿನ ಭಾಗಗಳು ನಾಶವಾಗಿರುವುದರಿಂದ ಪ್ರಮುಖ ಸಾಕ್ಷ್ಯಗಳು ಕಳೆದುಹೋಗಿರುವ ಸಾಧ್ಯತೆಯಿದೆ. ಪ್ರಸ್ತುತ ಈ ಪ್ರದೇಶದ ಒಟ್ಟು ಜನಸಂಖ್ಯೆ ಅಥವಾ ನಗರದ ವ್ಯಾಪ್ತಿಯನ್ನು ನಿಖರವಾಗಿ ಅಂದಾಜಿಸಲು ಸದ್ಯದ ಸಾಕ್ಷ್ಯಗಳು ಸಾಲವು.
ಸುಮಾರು 3,200 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ದೊರೆತಿರುವ ಈ ಆವಿಷ್ಕಾರವು, ಇತಿಹಾಸದ ಪುಸ್ತಕಗಳಲ್ಲಿ ಮಾತ್ರವೇ ಜೀವಂತವಾಗಿದ್ದ ಈಜಿಪ್ಟ್‌ನ ಕಳೆದುಹೋದ ಪವಿತ್ರ ನಗರವನ್ನು ಕೊನೆಗೂ ಆಧುನಿಕ ಭೂಪಟಕ್ಕೆ ತಂದುನಿಲ್ಲಿಸುವ ಭರವಸೆ ಮೂಡಿಸಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.