ತಾಂತ್ರಿಕ ಸವಾಲುಗಳ ಸುಳಿಯಲ್ಲಿ ಇಸ್ರೋದ ಮಹತ್ವಾಕಾಂಕ್ಷಿ ಬಾಹ್ಯಾಕಾಶ ಡಾಕಿಂಗ್ ಯೋಜನೆ

Published : Feb 07, 2025, 03:10 PM IST
ತಾಂತ್ರಿಕ ಸವಾಲುಗಳ ಸುಳಿಯಲ್ಲಿ ಇಸ್ರೋದ ಮಹತ್ವಾಕಾಂಕ್ಷಿ ಬಾಹ್ಯಾಕಾಶ ಡಾಕಿಂಗ್ ಯೋಜನೆ

ಸಾರಾಂಶ

ಇಸ್ರೋದ ಸ್ಪೇಡೆಕ್ಸ್ ಯೋಜನೆಯು ಡಾಕಿಂಗ್‌ನಲ್ಲಿ ಯಶಸ್ವಿಯಾಗಿದ್ದರೂ, ಅನ್‌ಡಾಕಿಂಗ್ ಪ್ರಕ್ರಿಯೆಯಲ್ಲಿ ತಾಂತ್ರಿಕ ಸವಾಲುಗಳು ಎದುರಾಗಿವೆ. ವಿದ್ಯುತ್ ಉತ್ಪಾದನಾ ಸಮಸ್ಯೆ ಮತ್ತು ಸಂಯೋಜಿತ ನಿಯಂತ್ರಣದಲ್ಲಿನ ವಿಳಂಬಗಳು ಈ ಸವಾಲುಗಳಿಗೆ ಕಾರಣವಾಗಿವೆ. ಇಸ್ರೋ ಇಂಜಿನಿಯರ್‌ಗಳು ಸಮಸ್ಯೆ ನಿವಾರಣೆಗೆ ಕಾರ್ಯನಿರ್ವಹಿಸುತ್ತಿದ್ದಾರೆ.


ಗಿರೀಶ್ ಲಿಂಗಣ್ಣ, ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಮಹತ್ವಾಕಾಂಕ್ಷಿ ಯೋಜನೆಯಾದ ಸ್ಪೇಸ್ ಡಾಕಿಂಗ್ ಎಕ್ಸ್‌ಪರಿಮೆಂಟ್ (ಸ್ಪೇಡೆಕ್ಸ್) ಬಾಹ್ಯಾಕಾಶದ ಕಕ್ಷೆಯಲ್ಲಿರುವ ಬಾಹ್ಯಾಕಾಶ ನೌಕೆಗಳನ್ನು ಸ್ವಾಯತ್ತವಾಗಿ ಜೋಡಿಸುವ ಸಾಮರ್ಥ್ಯವನ್ನು ಪ್ರದರ್ಶಿಸುವ ಸಲುವಾಗಿ ವಿನ್ಯಾಸಗೊಂಡಿದೆ. ಎರಡು ಉಪಗ್ರಹಗಳಾದ ಎಸ್‌ಡಿಎಕ್ಸ್-01 (ಚೇಸರ್) ಮತ್ತು ಎಸ್‌ಡಿಎಕ್ಸ್-02 (ಟಾರ್ಗೆಟ್) ಗಳನ್ನು ಒಳಗೊಂಡಿರುವ ಈ ಯೋಜನೆ, ಜನವರಿ 16, 2025ರಂದು ಯಶಸ್ವಿಯಾಗಿ ಡಾಕಿಂಗ್ ನಡೆಸಿತು. ಮೂಲತಃ ಡಾಕಿಂಗ್ ಪ್ರಕ್ರಿಯೆಯನ್ನು ಜನವರಿ 7ರಂದು ನಡೆಸಲು ಉದ್ದೇಶಿಸಲಾಗಿತ್ತಾದರೂ, ಅದು ಒಂಬತ್ತು ದಿನ ತಡವಾಗಿ ಯಶಸ್ವಿಯಾಯಿತು. ಡಿಸೆಂಬರ್ 30, 2024ರಂದು ಸ್ಪೇಡೆಕ್ಸ್ ಯೋಜನೆಯನ್ನು ಶ್ರೀಹರಿಕೋಟಾದಿಂದ ಪಿಎಸ್ಎಲ್‌ವಿ-ಸಿ60 ರಾಕೆಟ್ ಮೂಲಕ ಉಡಾವಣೆಗೊಳಿಸಲಾಗಿತ್ತು. ಈ ಯೋಜನೆ ಭಾರತದ ಭವಿಷ್ಯದ ಬಾಹ್ಯಾಕಾಶ ಯೋಜನೆಗಳಾದ ಬಾಹ್ಯಾಕಾಶ ನಿಲ್ದಾಣ ನಿರ್ಮಾಣ ಮತ್ತು ಅಂತರಗ್ರಹ ಬಾಹ್ಯಾಕಾಶ ಯೋಜನೆಗಳಿಗೆ ಅತ್ಯಂತ ಅವಶ್ಯಕವಾದ ಡಾಕಿಂಗ್ ಮತ್ತು ಅನ್ ಡಾಕಿಂಗ್ ತಂತ್ರಜ್ಞಾನವನ್ನು ಪರೀಕ್ಷಿಸುವ ಗುರಿ ಹೊಂದಿತ್ತು.

ಯಶಸ್ವಿಯಾಗಿ ಡಾಕಿಂಗ್ ನಡೆಸಿದ ಬಳಿಕ, ಯೋಜನೆಯ ಮುಂದಿನ ಹಂತದಲ್ಲಿ ಎರಡು ಉಪಗ್ರಹಗಳನ್ನು ಬೇರ್ಪಡಿಸುವ ಅನ್ ಡಾಕಿಂಗ್ ಪ್ರಕ್ರಿಯೆ ನಡೆಸಬೇಕಿದ್ದು, ಇದನ್ನು ಜನವರಿ ಕೊನೆಯ ಭಾಗದಲ್ಲಿ ಅಥವಾ ಫೆಬ್ರವರಿ ತಿಂಗಳ ಮೊದಲ ವಾರದಲ್ಲಿ ನಡೆಸಲು ಉದ್ದೇಶಿಸಲಾಗಿತ್ತು. ಆದರೆ, ಒಂದಷ್ಟು ತಾಂತ್ರಿಕ ಸವಾಲುಗಳು ಈಗ ಅನ್ ಡಾಕಿಂಗ್ ಪ್ರಕ್ರಿಯೆಯನ್ನು ವಿಳಂಬಗೊಳಿಸಿವೆ. ಈ ತಾಂತ್ರಿಕ ಸವಾಲುಗಳು ಯಾವ ರೀತಿಯವು ಎಂಬ ಕುರಿತು ನಿಖರವಾದ ಮಾಹಿತಿಯನ್ನು ಇಸ್ರೋ ಇನ್ನಷ್ಟೇ ಒದಗಿಸಬೇಕಿದೆ. ಯೋಜನೆಯ ಸ್ಥಿತಿಯ ಕುರಿತು ಜನವರಿ 29ರಂದು ಮಾತನಾಡಿದ ಇಸ್ರೋ ಮುಖ್ಯಸ್ಥರು, "ನಾವು ಎರಡೂ ಉಪಗ್ರಹಗಳಿಗೆ ತಲಾ ಐದು ಕೆಜಿ ಪ್ರೊಪೆಲೆಂಟ್ ತುಂಬಿಸಿದ್ದೇವೆ. ಈ ಪ್ರೊಪೆಲೆಂಟ್ ಡಾಕಿಂಗ್ ಮತ್ತು ಅನ್ ಡಾಕಿಂಗ್ ಪ್ರಕ್ರಿಯೆಗೆ ಅತ್ಯಂತ ಅವಶ್ಯಕವಾಗಿದೆ. ಪ್ರಸ್ತುತ ಬಾಹ್ಯಾಕಾಶ ನೌಕೆಗಳಲ್ಲಿ ಅಂದಾಜು 60ರಿಂದ 70% ಪ್ರೊಪೆಲೆಂಟ್ ಉಳಿದಿದೆ. ಪ್ರಸ್ತುತ ಯೋಜನೆಯಲ್ಲಿ ಡಾಕಿಂಗ್, ಅನ್ ಡಾಕಿಂಗ್, ವಿದ್ಯುತ್ ಶಕ್ತಿ ಪೂರೈಕೆಗೆ ಸಂಬಂಧಿಸಿದಂತಹ ಹಲವಾರು ಪ್ರಯೋಗಗಳನ್ನು ನಡೆಸಲಾಗುತ್ತದೆ. ಇವೆಲ್ಲ ಕೇವಲ ಒಂದು ಬಾರಿಯ ಪರೀಕ್ಷೆಗಳಲ್ಲ" ಎಂದು ವಿವರಿಸಿದ್ದರು. ಅವರ ಮಾತಿನ ಪ್ರಕಾರ, ಈಗ ಇಸ್ರೋ ಅನ್ ಡಾಕಿಂಗ್‌ಗೆ ಸಂಬಂಧಿಸಿದಂತೆ ಸವಾಲುಗಳನ್ನು ಎದುರಿಸುತ್ತಿದ್ದರೂ, ಇಸ್ರೋಗೆ ಹಲವು ಬಾರಿ ಪ್ರಯತ್ನ ನಡೆಸಲು ಮತ್ತು ಸಂಬಂಧಿಸಿದ ಪ್ರಯೋಗಗಳನ್ನು ಕೈಗೊಳ್ಳಲು ಅನುಕೂಲವಾಗುವಂತೆ ಪ್ರೊಪೆಲೆಂಟ್ ಲಭ್ಯತೆಯಿದೆ.

ಭವಿಷ್ಯದ ಯೋಜನೆಗಳಿಗೆ ಅನ್ ಡಾಕಿಂಗ್ ಯಾಕೆ ಅವಶ್ಯಕ?: ಅನ್ ಡಾಕಿಂಗ್ ಎಂದರೆ ಪರಸ್ಪರ ಜೋಡಿಸಲ್ಪಟ್ಟಿರುವ (ಡಾಕಿಂಗ್ ನಡೆಸಿರುವ) ಎರಡು ಬಾಹ್ಯಾಕಾಶ ನೌಕೆಗಳನ್ನು ಬೇರ್ಪಡಿಸುವ ಪ್ರಕ್ರಿಯೆಯಾಗಿದೆ. ಸ್ಪೇಡೆಕ್ಸ್ ಒಂದು ಪರೀಕ್ಷಾರ್ಥ ಯೋಜನೆಯಾಗಿದ್ದರೂ, ಭವಿಷ್ಯದ ವಾಸ್ತವ ಬಾಹ್ಯಾಕಾಶ ಯೋಜನೆಗಳಿಗೆ ಅನ್ ಡಾಕಿಂಗ್ ಬಹಳಷ್ಟು ಮುಖ್ಯ ಹಂತವಾಗಿದೆ. ಯಾವುದಾದರೂ ಪ್ರಮುಖ ಯೋಜನೆಯ ಸಂದರ್ಭದಲ್ಲಿ, ಅನ್ ಡಾಕಿಂಗ್ ನಡೆಸಲು ಸಾಧ್ಯವಾಗದಿದ್ದರೆ, ಯೋಜನೆಯ ಗುರಿಗಳನ್ನು ಸಾಧಿಸುವುದು ಕಷ್ಟಕರವಾಗಲಿದೆ. ಇದರಿಂದಾಗಿ ಅನ್ ಡಾಕಿಂಗ್ ಈ ಪ್ರಯೋಗದಲ್ಲಿ ಬಹಳ ಮುಖ್ಯವಾದ ಸಾಮರ್ಥ್ಯವಾಗಿದೆ. ಅನ್ ಡಾಕಿಂಗ್ ಪ್ರಕ್ರಿಯೆ ಆರಂಭಿಸುವ ಮುನ್ನ, ಇಸ್ರೋ ಎಸ್‌ಡಿಎಕ್ಸ್-01 ಮತ್ತು ಎಸ್‌ಡಿಎಕ್ಸ್-02 ಉಪಗ್ರಹಗಳ ನಡುವೆ ವಿದ್ಯುತ್ ಶಕ್ತಿ ಹಂಚಿಕೆ ನಡೆಸುವ ಸಾಮರ್ಥ್ಯ ಪ್ರದರ್ಶಿಸಲು ಉದ್ದೇಶಿಸಿತ್ತು. ಬಾಹ್ಯಾಕಾಶದ ಕಕ್ಷೆಯಲ್ಲಿರುವಾಗಲೇ ಶಕ್ತಿ ಹಂಚಿಕೆ ನಡೆಸಬೇಕಾಗಿ ಬರುವ ಭವಿಷ್ಯದ ಯೋಜನೆಗಳಲ್ಲಿ ಈ ಸಾಮರ್ಥ್ಯ ಬಹಳಷ್ಟು ಮುಖ್ಯವಾಗಿರಲಿದೆ.

ಆದರೆ, ಎಸ್‌ಡಿಎಕ್ಸ್-01 ಮತ್ತು ಎಸ್‌ಡಿಎಕ್ಸ್-02 ಉಪಗ್ರಹಗಳಲ್ಲಿ ವಿದ್ಯುತ್ ಉತ್ಪಾದನಾ ಸಮಸ್ಯೆಯ ಕಾರಣದಿಂದಾಗಿ ಅನ್ ಡಾಕಿಂಗ್ ಪ್ರಕ್ರಿಯೆಯಲ್ಲಿ ತೊಡಕುಂಟಾಯಿತು. ಇಲ್ಲಿ ಉತ್ಪತ್ತಿಯಾಗುವ ವಿದ್ಯುತ್ ಶಕ್ತಿ ಅವಶ್ಯಕತೆಯನ್ನು ಪೂರೈಸುವಷ್ಟಿಲ್ಲ. ಇದು ಉದ್ದೇಶಿತ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಕಷ್ಟಕರವಾಗಿಸಿದೆ. ಅದರೊಡನೆ, ಉಭಯ ಬಾಹ್ಯಾಕಾಶ ನೌಕೆಗಳ ಸಂಯೋಜಿತ ನಿಯಂತ್ರಣ ನಿರೀಕ್ಷೆಗಿಂತ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿದ್ದು, ಅನ್ ಡಾಕಿಂಗ್ ಪ್ರಕ್ರಿಯೆಯನ್ನು ಇನ್ನಷ್ಟು ವಿಳಂಬಗೊಳಿಸುತ್ತಿದೆ.

ಸ್ಪೇಡೆಕ್ಸ್ ಯೋಜನೆಯಲ್ಲಿರುವ ಆಧುನಿಕ ತಂತ್ರಜ್ಞಾನಗಳು

ಜನವರಿ 16ರಂದು ಡಾಕಿಂಗ್ ನಡೆಸಿದ ಬಳಿಕ, ಎಸ್‌ಡಿಎಕ್ಸ್-01 ಮತ್ತು ಎಸ್‌ಡಿಎಕ್ಸ್-02ಗಳು ಬಾಹ್ಯಾಕಾಶ ಡಾಕಿಂಗ್ ಮತ್ತು ಅನ್ ಡಾಕಿಂಗ್‌ಗೆ ಸಂಬಂಧಿಸಿದ ಹಲವು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಪರೀಕ್ಷಿಸುತ್ತಿವೆ. ಇವುಗಳಲ್ಲಿ ಮುಖ್ಯವಾದವೆಂದರೆ:

ನಾಲ್ಕು ರಾಂಡೇವೂ ಮತ್ತು ಡಾಕಿಂಗ್ ಸೆನ್ಸರ್‌ಗಳು: ಸ್ವಾಯತ್ತ ಡಾಕಿಂಗ್ ಪ್ರಕ್ರಿಯೆ ನಡೆಸಲು ಈ ಸೆನ್ಸರ್‌ಗಳು ಅತ್ಯಂತ ಅವಶ್ಯಕವಾಗಿವೆ. ಇವುಗಳು ಬಾಹ್ಯಾಕಾಶ ನೌಕೆಗಳಿಗೆ ಪರಸ್ಪರ ಪತ್ತೆಹಚ್ಚಲು, ಸನಿಹಕ್ಕೆ ತೆರಳಲು ಮತ್ತು ಒಂದನ್ನೊಂದು ಸಂಪರ್ಕಿಸಲು ನೆರವಾಗುತ್ತವೆ. ಇವುಗಳು ಜೊತೆಯಾಗಿ ಕಾರ್ಯ ನಿರ್ವಹಿಸಿ, ಎರಡು ಬಾಹ್ಯಾಕಾಶ ನೌಕೆಗಳ ಸ್ಥಾನಗಳು ಮತ್ತು ಚಲನೆಯನ್ನು ಸರಿಯಾಗಿ ತಿಳಿಯಲು ಸಹಕರಿಸುತ್ತವೆ.

ಇನ್‌ಫ್ರಾರೆಡ್ ಸೆನ್ಸರ್‌ಗಳು: ಟಾರ್ಗೆಟ್ ಬಾಹ್ಯಾಕಾಶ ನೌಕೆಯಿಂದ ಹೊರಸೂಸುವ ಉಷ್ಣತೆಯನ್ನು ಗುರುತಿಸಿ, ಆ ಮೂಲಕ ಬಹಳಷ್ಟು ದೂರದಿಂದಲೇ ಚೇಸರ್ ಬಾಹ್ಯಾಕಾಶ ನೌಕೆಗೆ ಅದನ್ನು ಪತ್ತೆಹಚ್ಚಿ, ಹಿಂಬಾಲಿಸಲು ಅನುವು ಮಾಡಿಕೊಡುತ್ತದೆ.

ಲಿಡಾರ್ ಸೆನ್ಸರ್‌ಗಳು: ಈ ಸೆನ್ಸರ್‌ಗಳು ಎರಡು ಬಾಹ್ಯಾಕಾಶ ನೌಕೆಗಳ ನಡುವಿನ ನಿಖರವಾದ ಅಂತರವನ್ನು ಅಳೆಯಲು ಲೇಸರ್ ಕಿರಣಗಳನ್ನು ಬಳಸಿಕೊಳ್ಳುತ್ತವೆ. ಇವು ಅಂತಿಮ ಹಂತದ ಸಮೀಪಿಸುವಿಕೆ ಮತ್ತು ಡಾಕಿಂಗಿಗೆ ಅವಶ್ಯಕವಾದ ಮಾಹಿತಿಗಳನ್ನು ಒದಗಿಸುತ್ತವೆ.

ಆಪ್ಟಿಕಲ್ ಕ್ಯಾಮರಾಗಳು: ಟಾರ್ಗೆಟ್ ಬಾಹ್ಯಾಕಾಶ ನೌಕೆಯ ನೈಜ ಸಮಯದ ಛಾಯಾಚಿತ್ರಗಳನ್ನು ಸೆರೆಹಿಡಿದು, ಅದರ ಸ್ಥಾನ ಮತ್ತು ಚಲನೆಯ ಕುರಿತು ಚಿತ್ರ ಸಹಿತ ಸಾಕ್ಷಿ ಒದಗಿಸುತ್ತವೆ. ಈ ಚಿತ್ರಗಳನ್ನು ಡಾಕಿಂಗ್ ಪ್ರಕ್ರಿಯೆಯ ವೇಳೆ ನ್ಯಾವಿಗೇಶನ್ ಮತ್ತು ಹೊಂದಾಣಿಕೆಗೆ ಬಳಸಲಾಗುತ್ತದೆ.

ರೇಡಾರ್ ಸೆನ್ಸರ್‌ಗಳು: ಇವುಗಳು ಟಾರ್ಗೆಟ್ ಬಾಹ್ಯಾಕಾಶ ನೌಕೆಯ ಚಲನೆ ಮತ್ತು ಉಪಸ್ಥಿತಿಯನ್ನು ಗುರುತಿಸಲು ರೇಡಿಯೋ ತರಂಗಗಳನ್ನು ಬಳಸುತ್ತವೆ. ಇವುಗಳು ಅತ್ಯಂತ ಸವಾಲಿನ ಬೆಳಕಿನ ಸನ್ನಿವೇಶ ಮತ್ತು ಅತ್ಯಂತ ಹೆಚ್ಚಿನ ದೂರದಲ್ಲೂ ಕಾರ್ಯಾಚರಿಸುತ್ತವೆ. ಆರಂಭಿಕ ಪತ್ತೆಹಚ್ಚುವಿಕೆ ಮತ್ತು ದೀರ್ಘ ವ್ಯಾಪ್ತಿಯ ಗುರುತಿಸುವಿಕೆಗೆ ರೇಡಾರ್ ಹೆಚ್ಚು ಉಪಯುಕ್ತವಾಗಿದೆ.

ವಿದ್ಯುತ್ ಹಂಚಿಕೆಯ ತಂತ್ರಜ್ಞಾನ: ಎರಡು ಬಾಹ್ಯಾಕಾಶ ನೌಕೆಗಳು ಬಾಹ್ಯಾಕಾಶದಲ್ಲಿ ಡಾಕಿಂಗ್ ನಡೆಸಿರುವಾಗ, ಅವುಗಳ ನಡುವೆ ವಿದ್ಯುತ್ ಶಕ್ತಿಯ ಹಂಚಿಕೆ ನಡೆಸಲು ನೆರವಾಗುತ್ತದೆ.

ಇಂಟರ್ ಸ್ಯಾಟಲೈಟ್ ಕಮ್ಯುನಿಕೇಶನ್ ಲಿಂಕ್ (ಐಎಸ್ಎಲ್): ಇದು ಎಸ್‌ಡಿಎಕ್ಸ್-01 ಮತ್ತು ಎಸ್‌ಡಿಎಕ್ಸ್-02 ನಡುವೆ ನಿರಂತರವಾಗಿ ಮಾಹಿತಿ ವಿನಿಮಯ ನಡೆಸಲು ನೆರವಾಗುತ್ತದೆ. ಆ ಮೂಲಕ ಸಂಯೋಜಿತ ಚಲನೆ ಮತ್ತು ಕಾರ್ಯಾಚರಣೆಗಳನ್ನು ಕೈಗೊಳ್ಳಲು ಅನುಕೂಲವಾಗುತ್ತದೆ.

ಗ್ಲೋಬಲ್ ನ್ಯಾವಿಗೇಶನ್ ಸ್ಯಾಟಲೈಟ್ ಸಿಸ್ಟಮ್ (ಜಿಎನ್ಎಸ್ಎಸ್) ಆಧರಿತ ಸಂಚರಣಾ (ನ್ಯಾವಿಗೇಶನ್) ವ್ಯವಸ್ಥೆ: ಆರಂಭಿಕ ರಾಂಡೇವೂ ಮತ್ತು ಒಟ್ಟಾರೆ ಯೋಜನಾ ಸಂಚರಣೆಗೆ ಎರಡೂ ಬಾಹ್ಯಾಕಾಶ ನೌಕೆಗಳ ನಿಖರವಾದ ಸ್ಥಾನ ಮತ್ತು ವೇಗ ಅವಶ್ಯಕವಾಗಿದ್ದು, ಈ ವ್ಯವಸ್ಥೆ ಅದನ್ನು ಒದಗಿಸುತ್ತದೆ.

ವೈಜ್ಞಾನಿಕ ಪೇಲೋಡ್‌ಗಳು ಮತ್ತು ಅವುಗಳ ಮಹತ್ವ

ಎರಡೂ ಬಾಹ್ಯಾಕಾಶ ನೌಕೆಗಳು ಛಾಯಾಗ್ರಹಣ, ವೀಕ್ಷಣೆ ಮತ್ತು ಸಂಶೋಧನಾ ಉದ್ದೇಶಗಳಿಗಾಗಿ ತಮ್ಮದೇ ಆದ ವೈಜ್ಞಾನಿಕ ಉಪಕರಣಗಳನ್ನು ಹೊಂದಿವೆ.

ಎಸ್‌ಡಿಎಕ್ಸ್-01: ಈ ಬಾಹ್ಯಾಕಾಶ ನೌಕೆ ಭೂಮಿಯ ಚಿತ್ರಣ ನಡೆಸಲು ಹೈ ರೆಸಲ್ಯೂಷನ್ ಕ್ಯಾಮರಾ (ಎಚ್ಆರ್‌ಸಿ) ಒಳಗೊಂಡಿದೆ.

ಎಸ್‌ಡಿಎಕ್ಸ್-02: ನೈಸರ್ಗಿಕ ಸಂಪನ್ಮೂಲಗಳನ್ನು ಗಮನಿಸಲು ಮಿನಿಯೇಚರ್ ಮಲ್ಟಿ ಸ್ಪೆಕ್ಟ್ರಲ್ ಪೇಲೋಡ್ (ಎಂಎಂಎಕ್ಸ್) ಮತ್ತು ಬಾಹ್ಯಾಕಾಶದ ವಿಕಿರಣ ಮಟ್ಟವನ್ನು ಅಳೆಯಲು ರೇಡಿಯೇಶನ್ ಮಾನಿಟರ್‌ಗಳನ್ನು ಒಳಗೊಂಡಿದೆ.

ಯೋಜನಾ ಗುರಿಗಳ ಮೇಲೆ ತಾಂತ್ರಿಕ ಸಮಸ್ಯೆಗಳ ಪರಿಣಾಮವೇನು?: ಸ್ಪೇಡೆಕ್ಸ್ ಯೋಜನಾ ವಿನ್ಯಾಸದ ಪ್ರಕಾರ, ಒಂದು ಬಾರಿ ಡಾಕಿಂಗ್ ಪ್ರಕ್ರಿಯೆ ಪೂರ್ಣಗೊಂಡ ಬಳಿಕ, ಉಪಗ್ರಹಗಳಾದ ಎಸ್‌ಡಿಎಕ್ಸ್-01 ಮತ್ತು ಎಸ್‌ಡಿಎಕ್ಸ್-02 ನಡುವೆ ವಿದ್ಯುತ್ ಶಕ್ತಿ ಹಂಚಿಕೆ ನಡೆಸಿ, ಬಳಿಕ ಅನ್ ಡಾಕಿಂಗ್ ನಡೆಸಲಾಗುತ್ತದೆ. ಎರಡೂ ಉಪಗ್ರಹಗಳು ಪ್ರತ್ಯೇಕಗೊಂಡ ಬಳಿಕ, ಅವುಗಳು ಮುಂದಿನ ಎರಡು ವರ್ಷಗಳ ಕಾಲ ಸ್ವತಂತ್ರವಾಗಿ ಕಾರ್ಯಾಚರಿಸುವ ನಿರೀಕ್ಷೆಯಿದೆ. ಆ ಅವಧಿಯಲ್ಲಿ ಅವುಗಳು ವೈಜ್ಞಾನಿಕ ಪ್ರಯೋಗಗಳನ್ನು ನಡೆಸಲಿವೆ.

ಇಸ್ರೋ ಶತಕ: ಎನ್‌ವಿಎಸ್-02 ಉಪಗ್ರಹದ ತಾಂತ್ರಿಕ ದೋಷವನ್ನು ಪರಿಹರಿಸುತ್ತಿದೆ ಹಾಸನ ಎಂಸಿಎಫ್

ಆದರೆ, ಈಗ ಅನ್ ಡಾಕಿಂಗ್ ನಡೆಸಲು ತಾಂತ್ರಿಕ ಸವಾಲುಗಳು ಎದುರಾಗಿದ್ದು, ಇದರ ಪರಿಣಾಮವಾಗಿ ಉದ್ದೇಶಿತ ವೈಜ್ಞಾನಿಕ ಪ್ರಯೋಗಗಳು ವಿಳಂಬಗೊಳ್ಳಬಹುದು, ಅಥವಾ ಅವುಗಳನ್ನು ಕೈಬಿಡಬೇಕಾಗಿ ಬರಬಹುದು. ಒಂದು ವೇಳೆ ಎಸ್‌ಡಿಎಕ್ಸ್-01 ಮತ್ತು ಎಸ್‌ಡಿಎಕ್ಸ್-02ಗಳು ಉದ್ದೇಶಿತ ಅವಧಿಗಿಂತಲೂ ಹೆಚ್ಚು ಕಾಲ ಡಾಕಿಂಗ್ ನಡೆಸಿದ್ದರೆ, ಆಗ ಅವುಗಳಿಗೆ ಭೂಮಿಯ ಚಿತ್ರಣ, ನೈಸರ್ಗಿಕ ಸಂಪನ್ಮೂಲಗಳ ವೀಕ್ಷಣೆ, ವಿಕಿರಣ ಸಂಬಂಧಿತ ಮಾಹಿತಿ ಕಲೆಹಾಕಲು ಮತ್ತು ಇತರ ವೈಜ್ಞಾನಿಕ ಸಂಶೋಧನಾ ಚಟುವಟಿಕೆಗಳನ್ನು ನಡೆಸಲು ತಮ್ಮ ಪೇಲೋಡ್‌ಗಳನ್ನು ಸಂಪೂರ್ಣವಾಗಿ ಬಳಸಲು ಸಾಧ್ಯವಾಗದಿರಬಹುದು.

 

ಯಶಸ್ವಿಯಾಗಿ ಉಡಾವಣೆಗೊಂಡ ಇಸ್ರೋ 100ನೇ ಉಪಗ್ರಹಕ್ಕೆ ಎದುರಾಯ್ತು ತಾಂತ್ರಿಕ ದೋಷ

ಸಮಸ್ಯೆ ಪರಿಹರಿಸಲು ಇಸ್ರೋ ಪ್ರಯತ್ನಗಳು: ಇಸ್ರೋ ಇಂಜಿನಿಯರ್‌ಗಳು ಈ ಸಮಸ್ಯೆಯನ್ನು ನಿವಾರಿಸುವ ಸಲುವಾಗಿ ನಿರಂತರವಾಗಿ ಕಾರ್ಯಾಚರಿಸುತ್ತಿದ್ದಾರೆ. ಸ್ವಾಯತ್ತ ಬಾಹ್ಯಾಕಾಶ ಕಾರ್ಯಾಚರಣೆಗಳನ್ನು ನಡೆಸಲು ಅನ್ ಡಾಕಿಂಗ್ ಪ್ರಕ್ರಿಯೆ ಬಹಳ ಮುಖ್ಯವಾಗಿದೆ. ಈ ಕಾರ್ಯಾಚರಣೆಗಳು ಭಾರತದ ಭವಿಷ್ಯದ ಬಾಹ್ಯಾಕಾಶ ನಿಲ್ದಾಣ, ಉಪಗ್ರಹ ದುರಸ್ತಿ ಯೋಜನೆಗಳು, ಮತ್ತು ಅಂತರಗ್ರಹ ಅನ್ವೇಷಣೆಗಳಂತಗ ಮಹತ್ವಾಕಾಂಕ್ಷಿ ಯೋಜನೆಗಳಿಗೆ ಅವಶ್ಯಕವಾಗಿವೆ. ಸ್ಪೇಡೆಕ್ಸ್ ಯೋಜನೆಯ ಮೂಲಕ ಡಾಕಿಂಗ್ ಮತ್ತು ಅನ್ ಡಾಕಿಂಗ್ ಪ್ರಕ್ರಿಯೆಗಳು ಯಶಸ್ವಿಯಾದರೆ, ಅದು ಭವಿಷ್ಯದ ಬಾಹ್ಯಾಕಾಶ ಯೋಜನೆಗಳಿಗೆ ಹಾದಿ ಮಾಡಿಕೊಟ್ಟು, ಬಾಹ್ಯಾಕಾಶ ತಂತ್ರಜ್ಞಾನ ಮತ್ತು ಅನ್ವೇಷಣೆಯಲ್ಲಿ ಭಾರತದ ಪ್ರಗತಿಗೆ ಹಾದಿಮಾಡಿಕೊಡಲಿದೆ.

(ಈ ಲೇಖನದ ಬರಹಗಾರರು ಪ್ರಶಸ್ತಿ ಪುರಸ್ಕೃತ ವಿಜ್ಞಾನ ಬರಹಗಾರರು, ಮತ್ತು ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ನೀವು ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಭಾರತದ ಶಾಶ್ವತ ಬಾಹ್ಯಾಕಾಶ ನಿವಾಸ ಬಿಎಎಸ್-01ಕ್ಕೆ ನೀಲಿ ನಕ್ಷೆ ಅಂತಿಮಗೊಳಿಸಿದ ಇಸ್ರೋ
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಖಗೋಳ ವಿಜ್ಞಾನ ಪ್ರಯೋಗಾಲಯ ಉದ್ಘಾಟನೆ