ಭಾರತದ ಶಾಶ್ವತ ಬಾಹ್ಯಾಕಾಶ ನಿವಾಸ ಬಿಎಎಸ್-01ಕ್ಕೆ ನೀಲಿ ನಕ್ಷೆ ಅಂತಿಮಗೊಳಿಸಿದ ಇಸ್ರೋ

Published : Dec 05, 2025, 01:42 PM IST
bharatiya antariksh station

ಸಾರಾಂಶ

ಭಾರತದ ಶಾಶ್ವತ ಬಾಹ್ಯಾಕಾಶ ನಿವಾಸ ಬಿಎಎಸ್-01ಕ್ಕೆ ನೀಲಿ ನಕ್ಷೆ ಅಂತಿಮಗೊಳಿಸಿದ ಇಸ್ರೋ, ಭಾರತದ ವಿಶಾಲವಾದ ಬಾಹ್ಯಾಕಾಶ ದೃಷ್ಟಿಕೋನದಲ್ಲಿ ಇದು ಪ್ರಮುಖ ಹೆಜ್ಜೆ. ಮುಂದಿನ ಎರಡು ದಶಕಗಳ ಅವಧಿಯಲ್ಲಿ ಮಾನವ ಸಹಿತ ಬಾಹ್ಯಾಕಾಶ ಅನ್ವೇಷಣೆ ನಡೆಸುವ ಭಾರತದ ಮಾರ್ಗಸೂಚಿಗೆ ಈ ಯೋಜನೆ ಸೂಕ್ತವಾಗಿ ಹೊಂದಿಕೊಳ್ಳುತ್ತದೆ.

ಗಿರೀಶ್ ಲಿಂಗಣ್ಣ

(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಬಾಹ್ಯಾಕಾಶದಲ್ಲಿರುವ ಒಂದು ಕಕ್ಷೆಯಲ್ಲಿ, ಅಸಾಧಾರಣ ವೇಗದಲ್ಲಿ ಭೂಮಿಯ ಸುತ್ತಲೂ ಪರಿಭ್ರಮಣೆ ನಡೆಸುವ ಭಾರತದ ಸ್ವಂತ 'ಬಾಹ್ಯಾಕಾಶ ನಿವಾಸ'ದಲ್ಲಿ ವಿಜ್ಞಾನಿಗಳು ಅಸಾಧಾರಣ ಪ್ರಯೋಗಗಳನ್ನು ನಡೆಸುವುದನ್ನು ಕಲ್ಪಿಸಿಕೊಳ್ಳಿ. ಇದು ಈಗ ಕೇವಲ ಒಂದು ದೂರದ ಕನಸಾಗಿ ಉಳಿದಿಲ್ಲ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ), ಈಗಷ್ಟೇ ಭೂಮಿಯ ಮೇಲೆ ತೇಲುತ್ತಾ, ನಮ್ಮ ಭವಿಷ್ಯದ ಆಳ ಬಾಹ್ಯಾಕಾಶ ಅನ್ವೇಷಣೆಗಳಿಗೆ ಹಾದಿ ತೆರೆಯುವ ಭಾರತೀಯ ಅಂತರಿಕ್ಷ ಸ್ಟೇಷನ್ನಿನ (ಬಿಎಎಸ್) ನೀಲಿನಕ್ಷೆಯನ್ನು ಪೂರ್ಣಗೊಳಿಸಿದೆ.

ಸಂಪೂರ್ಣ ಬಾಹ್ಯಾಕಾಶ ನಿಲ್ದಾಣ ಯಾವಾಗ ಕಾರ್ಯಾಚರಣೆಗೆ ಸಿದ್ದ?

ಬಾಹ್ಯಾಕಾಶ ನಿಲ್ದಾಣ ಎಂದರೆ, ಆಕಾಶದಲ್ಲಿರುವ ಒಂದು ದೊಡ್ಡದಾದ ಪ್ರಯೋಗಾಲಯವಾಗಿದ್ದು, ಅಲ್ಲಿ ಗಗನಯಾತ್ರಿಗಳು ಹಲವು ತಿಂಗಳುಗಳ ಕಾಲ ವಾಸಿಸುತ್ತಾ, ಪ್ರಯೋಗಗಳನ್ನು ನಡೆಸುತ್ತಾರೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು (ಐಎಸ್ಎಸ್) ನೀವು ಚಿತ್ರಗಳಲ್ಲಿ, ದೃಶ್ಯಾವಳಿಗಳಲ್ಲಿ ನೋಡಿರುತ್ತೀರಿ. ಭಾರತದ ಬಾಹ್ಯಾಕಾಶ ನಿಲ್ದಾಣವೂ ಅಂತಹ ಒಂದು ನಿಲ್ದಾಣವಾಗಿರಲಿದ್ದು, ಇದನ್ನು ಐದು ಪ್ರತ್ಯೇಕ ಮಾಡ್ಯೂಲ್‌ಗಳನ್ನು ಅಳವಡಿಸುವ ಮೂಲಕ ತಯಾರಿಸಲಾಗುತ್ತದೆ. ಇದು ಬಾಹ್ಯಾಕಾಶದಲ್ಲಿ ವಿವಿಧ ಭಾಗಗಳನ್ನು ಒಂದಕ್ಕೊಂದು ಜೋಡಿಸುವಂತಹ ಪ್ರಕ್ರಿಯೆಯಾಗಿದೆ. ಸಂಪೂರ್ಣ ಬಾಹ್ಯಾಕಾಶ ನಿಲ್ದಾಣ 2035ರ ವೇಳೆಗೆ ಪೂರ್ಣ ಕಾರ್ಯಾಚರಣೆಗೆ ಸಿದ್ಧವಾಗುವ ನಿರೀಕ್ಷೆಗಳಿದ್ದು, ಅದು ಕೇವಲ ಒಂದು ದಶಕದಷ್ಟು ದೂರದಲ್ಲಿದೆ. ಬಾಹ್ಯಾಕಾಶ ನಿಲ್ದಾಣದ ವಿನ್ಯಾಸವನ್ನು ಒಂದು ವಿಶೇಷ ರಾಷ್ಟ್ರೀಯ ಮಟ್ಟದ ಪರಿಶೀಲನಾ ಸಮಿತಿ ಸಂಪೂರ್ಣವಾಗಿ ಪರೀಕ್ಷಿಸಿ, ಬಳಿಕ ಅನುಮೋದನೆ ನೀಡಿದೆ. ಪ್ರಸ್ತುತ ವಿನ್ಯಾಸ ಭಾರತದ ದೀರ್ಘಾವಧಿಯ ಗುರಿಯಾದ ಮಾನವ ಸಹಿತ ಬಾಹ್ಯಾಕಾಶ ಅನ್ವೇಷಣೆಗೆ ಪೂರಕವಾಗಿದೆ ಎನ್ನಲಾಗಿದೆ.

ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆಯ ರಾಜ್ಯ ಸಚಿವರಾದ ಜಿತೇಂದ್ರ ಸಿಂಗ್ ಅವರು ಈ ಮಹತ್ವದ ಮಾಹಿತಿಯನ್ನು ಇತ್ತೀಚೆಗೆ ಲೋಕಸಭೆಯಲ್ಲಿ ಹಂಚಿಕೊಂಡಿದ್ದರು. ಈ ಘೋಷಣೆಯೊಡನೆ ಇನ್ನಷ್ಟು ಒಳ್ಳೆಯ ಸುದ್ದಿಗಳೂ ಬಂದಿದ್ದವು. ಸೆಪ್ಟೆಂಬರ್ 2024ರಲ್ಲಿ, ಕೇಂದ್ರ ಸಚಿವ ಸಂಪುಟ ಬಾಹ್ಯಾಕಾಶ ನಿಲ್ದಾಣದ ಮೊದಲ ಮಾಡ್ಯುಲ್ ಆಗಿರುವ ಬಿಎಎಸ್-01 ನಿರ್ಮಾಣ ಮತ್ತು ಉಡಾವಣೆಗೆ ಹಸಿರು ನಿಶಾನೆ ನೀಡಿದೆ. ನಮ್ಮ ಬಾಹ್ಯಾಕಾಶ ನಿಲ್ದಾಣದ ಮೊದಲ ಭಾಗ 2028ರಲ್ಲಿ ಉಡಾವಣೆಗೆ ಸಜ್ಜಾಗಿದ್ದು, ಇಂಜಿನಿಯರಿಂಗ್ ತಂಡಗಳು ಅದರ ನಿರ್ಮಾಣದಲ್ಲಿ ಸಾಕಷ್ಟು ಪ್ರಗತಿ ಸಾಧಿಸಿವೆ. ಈ ಬೃಹತ್ ಯೋಜನೆಯ ಒಟ್ಟು ವೆಚ್ಚವನ್ನು ಜಾಗರೂಕವಾಗಿ ಲೆಕ್ಕಾಚಾರ ಮಾಡಲಾಗಿದೆ. ಮಾನವರನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಮತ್ತು ಬಾಹ್ಯಾಕಾಶ ನಿಲ್ದಾಣದ ನಿರ್ಮಾಣವನ್ನು ಒಳಗೊಂಡಿರುವ ಗಗನಯಾನ ಯೋಜನೆಯ ಮೊತ್ತವನ್ನು ಬೃಹತ್ ಮೊತ್ತವಾದ 20,193 ಕೋಟಿ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ.

ಈ ಯೋಜನೆಯನ್ನು ಇನ್ನಷ್ಟು ಪ್ರಭಾವಿಯಾಗಿಸುವುದು ಇದನ್ನು ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ತಲುಪಿಸುವ ಇಸ್ರೋದ ಬದ್ಧತೆ. ಬಿಎಎಸ್-01 ಉಪ ವ್ಯವಸ್ಥೆಗಳನ್ನು ಜಾಗತಿಕ ಗುಣಮಟ್ಟಕ್ಕೆ ಹೊಂದುವಂತೆ ವಿನ್ಯಾಸಗೊಳಿಸಲಾಗುತ್ತಿದೆ. ಅಂದರೆ, ನಮ್ಮ ಬಾಹ್ಯಾಕಾಶ ನಿಲ್ದಾಣ ತಂತ್ರಜ್ಞಾನ ವಿಚಾರದಲ್ಲಿ ಇತರ ಮುಂದುವರಿದ ದೇಶಗಳ ಬಾಹ್ಯಾಕಾಶ ನಿಲ್ದಾಣಗಳಿಗೆ ಸೂಕ್ತವಾಗಿರಲಿದೆ. ಇದು ಒಂದು ರೀತಿ ನಮ್ಮ ಫೋನಿನ ಚಾರ್ಜರ್ ಬೇರೆ ದೇಶಗಳ ಫೋನ್‌ಗಳಿಗೂ ಕೆಲಸ ಮಾಡುವಂತಾಗುತ್ತದೆ. ಈ ಜಾಗತಿಕ ಗುಣಮಟ್ಟವನ್ನು ಅನುಸರಿಸಿ ಕಾರ್ಯಾಚರಿಸುವ ಮೂಲಕ, ಭಾರತ ಅಂತಾರಾಷ್ಟ್ರೀಯ ವೈಜ್ಞಾನಿಕ ಸಹಯೋಗಗಳಿಗೆ ಬಾಗಿಲು ತೆರೆಯುತ್ತಿದೆ. ವಿವಿಧ ದೇಶಗಳ ವಿಜ್ಞಾನಿಗಳು ಭಾರತೀಯ ಅಂತರಿಕ್ಷ ಸ್ಟೇಷನ್ನಿನಲ್ಲಿ ಕಾರ್ಯಾಚರಿಸಬಹುದಾಗಿದ್ದು, ಪರಸ್ಪರ ಜ್ಞಾನದ ಹಂಚಿಕೆ ಮತ್ತು ಜಂಟಿ ಸಂಶೋಧನೆಗಳನ್ನು ಕೈಗೊಳ್ಳಬಲ್ಲರು. ಇಸ್ರೋ ಈಗಾಗಲೇ ಭಾರತದಲ್ಲಿ ಲಭ್ಯವಿಲ್ಲದ ತಂತ್ರಜ್ಞಾನ ಅಭಿವೃದ್ಧಿಗೆ ಮತ್ತು ವಿಶೇಷ ಪರೀಕ್ಷೆಗಳಿಗೆ ಸೂಕ್ತವಾದ ಸಹಯೋಗಿಗಳಿಗಾಗಿ ಇತರ ಬಾಹ್ಯಾಕಾಶ ಸಂಸ್ಥೆಗಳೊಡನೆ ಸಮಾಲೋಚಿಸುತ್ತಿದೆ.

ಮಾನವ ಸಹಿತ ಬಾಹ್ಯಾಕಾಶ ಯೋಜನೆ

ಬಾಹ್ಯಾಕಾಶ ನಿಲ್ದಾಣವನ್ನು ನಿರ್ಮಿಸುವ ಮುನ್ನ, ನಾವು ಮಾನವರನ್ನು ಸುರಕ್ಷಿತವಾಗಿ ಬಾಹ್ಯಾಕಾಶಕ್ಕೆ ಕಳುಹಿಸಿ, ಅಲ್ಲಿಂದ ಅವರನ್ನು ಭೂಮಿಗೆ ಮರಳಿಸುವ ತಂತ್ರಜ್ಞಾನದಲ್ಲಿ ಪ್ರಾವೀಣ್ಯತೆ ಗಳಿಸಬೇಕು. ಈ ನಿಟ್ಟಿನಲ್ಲಿ ಗಗನಯಾನ ಯೋಜನೆ ಮುಖ್ಯವಾಗುತ್ತದೆ. ಭಾರತದ ಮೊದಲ ಮಾನವ ಸಹಿತ ಬಾಹ್ಯಾಕಾಶ ಯೋಜನೆಯಾದ ಗಗನಯಾನ ಭಾರತೀಯ ಗಗನಯಾತ್ರಿಗಳನ್ನು ಭೂಮಿಯ ಮೇಲ್ಮೈಯಿಂದ ಅಂದಾಜು 400 ಕಿಲೋಮೀಟರ್ ಎತ್ತರದಲ್ಲಿರುವ ಭೂಮಿಯ ಕೆಳ ಕಕ್ಷೆಗೆ ಕಳುಹಿಸಿ, ಅವರನ್ನು ಅಲ್ಲಿಂದ ಸುರಕ್ಷಿತವಾಗಿ ಭೂಮಿಗೆ ಮರಳಿ ಕರೆತರುವ ಗುರಿ ಹೊಂದಿದೆ. ಈ ಯೋಜನೆ ಇಸ್ರೋಗೆ ಬಾಹ್ಯಾಕಾಶದಲ್ಲಿ ಸುದೀರ್ಘ ಕಾಲ ಗಗನಯಾತ್ರಿಗಳ ವಾಸ ಮತ್ತು ಪ್ರಯೋಗಗಳಿಗೆ ಬೇಕಾದ ತಂತ್ರಜ್ಞಾನ ಮತ್ತು ಅನುಭವಗಳನ್ನು ನೀಡುವುದರಿಂದ, ಇದರ ಯಶಸ್ಸು ಇಸ್ರೋಗೆ ಮಹತ್ವದ್ದಾಗಿದೆ. ಗಗನಯಾನ ಯೋಜನೆಯನ್ನು ಮುಖ್ಯ ಕಾರ್ಯಕ್ರಮಕ್ಕೆ ಮುನ್ನ ನಡೆಸುವ ಪೂರ್ವಾಭ್ಯಾಸದಂತೆ ಪರಿಗಣಿಸಬಹುದು.

ಒಂದು ಬಾರಿ ಕಾರ್ಯಾಚರಣೆಗೆ ಸಜ್ಜಾದರೆ, ಭಾರತೀಯ ಅಂತರಿಕ್ಷ ಸ್ಟೇಷನ್ ಒಂದು ಆಧುನಿಕ ಸಂಶೋಧನಾ ವ್ಯವಸ್ಥೆಯಂತೆ ಕಾರ್ಯಾಚರಿಸಲಿದೆ. ಬಾಹ್ಯಾಕಾಶದಲ್ಲಿ ಸೂಕ್ಷ್ಮ ಗುರುತ್ವಾಕರ್ಷಣೆ ಇದ್ದು, ಅಲ್ಲಿ ವಸ್ತುಗಳು ಬಹುತೇಕ ತೂಕ ರಹಿತ ಸ್ಥಿತಿಯಲ್ಲಿರುತ್ತವೆ. ಈ ವಿಶೇಷ ವಾತಾವರಣ ವಿಜ್ಞಾನಿಗಳಿಗೆ ಭೂಮಿಯಲ್ಲಿ ನಡೆಸಲು ಸಾಧ್ಯವೇ ಇಲ್ಲದ ಪ್ರಯೋಗಗಳನ್ನು ನಡೆಸಲು ಅವಕಾಶ ಮಾಡಿಕೊಡುತ್ತದೆ. ಹೊಸ ಔಷಧಗಳ ಅಭಿವೃದ್ಧಿಯಿಂದ, ಬಾಹ್ಯಾಕಾಶದಲ್ಲಿ ವಿವಿಧ ವಸ್ತುಗಳು ಹೇಗೆ ಭಿನ್ನವಾಗಿ ವರ್ತಿಸುತ್ತವೆ ಎನ್ನುವುದನ್ನು ಅರ್ಥ ಮಾಡಿಕೊಳ್ಳುವ ತನಕ, ಬಾಹ್ಯಾಕಾಶ ನಿಲ್ದಾಣ ಅಸಂಖ್ಯಾತ ಸಾಧ್ಯತೆಗಳನ್ನು ತೆರೆದಿಡುತ್ತದೆ. ಈ ಬಾಹ್ಯಾಕಾಶ ನಿಲ್ದಾಣ ವಿವಿಧ ರೀತಿಯ ಸಂಶೋಧನೆಗಳಿಗೆ ಅವಕಾಶ ಮಾಡಿಕೊಟ್ಟು, ಭಾರತ ಮತ್ತು ವಿದೇಶಗಳ ವಿಜ್ಞಾನಿಗಳಿಗೆ ಮಾನವರ ಜ್ಞಾನದ ಮಿತಿಗಳನ್ನು ವಿಸ್ತರಿಸಲು ಮಾರ್ಗಗಳನ್ನು ನೀಡಲಿದೆ.

ಈ ಬಾಹ್ಯಾಕಾಶ ನಿಲ್ದಾಣ ಭಾರತದ ಅಂತಿಮ ಗುರಿಯಲ್ಲ. ಆದರೆ, ಭಾರತದ ವಿಶಾಲವಾದ ಬಾಹ್ಯಾಕಾಶ ದೃಷ್ಟಿಕೋನದಲ್ಲಿ ಇದು ಪ್ರಮುಖ ಹೆಜ್ಜೆ. ಮುಂದಿನ ಎರಡು ದಶಕಗಳ ಅವಧಿಯಲ್ಲಿ ಮಾನವ ಸಹಿತ ಬಾಹ್ಯಾಕಾಶ ಅನ್ವೇಷಣೆ ನಡೆಸುವ ಭಾರತದ ಮಾರ್ಗಸೂಚಿಗೆ ಈ ಯೋಜನೆ ಸೂಕ್ತವಾಗಿ ಹೊಂದಿಕೊಳ್ಳುತ್ತದೆ. ಭೂಮಿಯ ಕೆಳ ಕಕ್ಷೆಯಲ್ಲಿ ಶಾಶ್ವತ ಉಪಸ್ಥಿತಿಯನ್ನು ಹೊಂದಿದ ಬಳಿಕ, ಭಾರತ ಇನ್ನೂ ಎತ್ತರದ ಗುರಿಗಳನ್ನು ಸಾಧಿಸುವ ಬಯಕೆ ಹೊಂದಿದೆ. ಭವಿಷ್ಯದಲ್ಲಿ ಇನ್ನಷ್ಟು ಚಂದ್ರ ಅನ್ವೇಷಣೆ ನಡೆಸುವುದು ಭಾರತದ ಆಸಕ್ತಿಯ ವಿಚಾರ. ಭಾರತೀಯ ಅಂತರಿಕ್ಷ ಸ್ಟೇಷನ್ ಇಂದಿನ ಸಾಧನೆಗಳು ಮತ್ತು ನಾಳೆಯ ಚಂದ್ರಾನ್ವೇಷಣೆಯ ಮಹತ್ವಾಕಾಂಕ್ಷೆಗಳ ನಡುವೆ ಸೇತುವೆಯಾಗಲಿದೆ.

ಈ ಬೆಳವಣಿಗೆಯನ್ನು ಗಮನಿಸುತ್ತಿರುವ ಯುವ ಭಾರತೀಯರಿಗೆ ಇದೊಂದು ರೋಮಾಂಚಕ ಸಮಯ. ಕೇವಲ ಕೆಲವು ದಶಕಗಳ ಹಿಂದೆ ತನ್ನ ಮೊದಲ ಉಪಗ್ರಹವನ್ನು ಉಡಾವಣೆಗೊಳಿಸಿದ ಭಾರತ, ಈಗ ಸ್ವಂತ ಬಾಹ್ಯಾಕಾಶ ನಿಲ್ದಾಣಗಳನ್ನು ಹೊಂದಿರುವ ಕೆಲವೇ ದೇಶಗಳ ಸಾಲಿಗೆ ಸೇರ್ಪಡೆಯಾಗಲು ಸಜ್ಜಾಗಿದೆ. ಭಾರತದ ಈ ಯಾತ್ರೆ ನಿರ್ಣಾಯಕ ಮನಸ್ಥಿತಿ, ವೈಜ್ಞಾನಿಕ ಪ್ರಾವೀಣ್ಯತೆ, ಮತ್ತು ಸಾಧಿಸಲು ಸ್ಪಷ್ಟ ಗುರಿ ಹೊಂದಿದ್ದರೆ ಏನು ಮಾಡಬಹುದು ಎನ್ನುವುದನ್ನು ತೋರಿಸಿದೆ. 2028 ಹತ್ತಿರ ಬರುತ್ತಿದ್ದು, ಬಿಎಎಸ್-01 ಉಡಾವಣೆಗೆ ಸಜ್ಜಾಗುತ್ತಿದೆ. 2035 ಇನ್ನು ಒಂದು ದಶಕಕ್ಕೂ ಕಡಿಮೆ ದೂರದಲ್ಲಿದ್ದು, ಭಾರತದ ಬಾಹ್ಯಾಕಾಶ ನಿಲ್ದಾಣ ಸಂಪೂರ್ಣ ಕಾರ್ಯಾಚರಣೆಗೆ ತಯಾರಾಗಲಿದೆ. ಭಾರತ ತನ್ನ ಬಾಹ್ಯಾಕಾಶ ಅನ್ವೇಷಣೆಯಲ್ಲಿ ಹೊಸ ಅಧ್ಯಾಯ ಬರೆಯುತ್ತಿದೆ. ಆಕಾಶ ಎಂದಿಗೂ ಮಿತಿಯಲ್ಲ. ಬದಲಿಗೆ, ಅದು ಮುಂದಿನ ತಲೆಮಾರುಗಳನ್ನು ಇನ್ನಷ್ಟು ದೊಡ್ಡ ಕನಸು ಕಾಣಲು, ಅವುಗಳನ್ನು ನನಸಾಗಿಸುತ್ತಾ ಇನ್ನಷ್ಟು ಎತ್ತರಕ್ಕೆ ಸಾಗಲು ಪ್ರೇರೇಪಿಸುವ ಆರಂಭವಷ್ಟೇ.

(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಖಗೋಳ ವಿಜ್ಞಾನ ಪ್ರಯೋಗಾಲಯ ಉದ್ಘಾಟನೆ
ಬ್ರಹ್ಮೋಸ್‌ ವಿಜ್ಞಾನಿ ಸೇರಿ ಒಂದೇ ತಿಂಗಳ ಅಂತರದಲ್ಲಿಒಂದೇ ರೀತಿ 2 ವಿಜ್ಞಾನಿಗಳ ಹಠಾತ್ ಸಾವು: ವೈದ್ಯರ ಅನುಮಾನ