ಭೂಮಿಯ ಅತ್ಯುತ್ಕೃಷ್ಟ ಚಿತ್ರ ತೆಗೆವ ಇಸ್ರೋ ರಾಡಾರ್ ಸಿದ್ಧ| ನಾಸಾ ಜತೆ ಜಂಟಿ ಭೂಸರ್ವೇಕ್ಷಣೆಗೆ ಸಿದ್ಧತೆ| ಮುಂದಿನ ವರ್ಷ ಭಾರತದಲ್ಲಿ ಉಡಾವಣೆ
ಬೆಂಗಳೂರು(ಮಾ.10): ಅಮೆರಿಕದ ವೈಮಾಂತರಿಕ್ಷ ಸಂಸ್ಥೆ ನಾಸಾ ಜತೆಗೂಡಿ ಭೂ ಸರ್ವೇಕ್ಷಣಾ ಉಪಗ್ರಹ ಯೋಜನೆಯನ್ನು ಕೈಗೆತ್ತಿಕೊಳ್ಳಲು ಉದ್ದೇಶಿಸಿರುವ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ), ಭೂಮಿಯ ಅತ್ಯುತ್ಕೃಷ್ಟಚಿತ್ರಗಳನ್ನು ಸೆರೆ ಹಿಡಿಯುವ ಸಾಮರ್ಥ್ಯ ಹೊಂದಿರುವ ಸಿಂಥೆಟಿಕ್ ಅಪರ್ಚರ್ ರಾಡಾರ್ (ಎಸ್‌ಎಆರ್) ಅಭಿವೃದ್ಧಿ ಕಾರ್ಯವನ್ನು ಪೂರ್ಣಗೊಳಿಸಿದೆ.
ಜಂಟಿ ಭೂಸರ್ವೇಕ್ಷಣಾ ಉಪಗ್ರಹ ಯೋಜನೆಗೆ 2014ರ ಸೆ.30ರಂದು ಇಸ್ರೋ ಹಾಗೂ ನಾಸಾ ಒಪ್ಪಂದ ಮಾಡಿಕೊಂಡಿದ್ದವು. ನಾಸಾ- ಇಸ್ರೋ ಎಸ್‌ಎಆರ್ ಎಂಬ ಈ ಯೋಜನೆಯನ್ನು ಸಂಕ್ಷಿಪ್ತವಾಗಿ ನಿಸಾರ್ ಎಂದು ಕರೆಯಲಾಗುತ್ತದೆ. ಎಲ್ ಹಾಗೂ ಎಸ್ ಬ್ಯಾಂಡ್ ಸಿಂಥೆಟಿಕ್ ಅಪರ್ಚರ್ ರಾಡಾರ್ (ಎಸ್‌ಎಆರ್)ಗಳನ್ನು ಭೂ ಸರ್ವೇಕ್ಷಣೆಗೆ ಬಳಸುತ್ತಿರುವ ಮೊದಲ ಉಪಗ್ರಹ ಯೋಜನೆ ಇದಾಗಿದೆ. 2022ರ ಆರಂಭದಲ್ಲಿ ಆಂಧ್ರದ ಶ್ರೀಹರಿಕೋಟಾದಿಂದ ಉಡಾವಣೆ ಮಾಡುವ ಗುರಿಯನ್ನು ಎರಡೂ ಸಂಸ್ಥೆಗಳೂ ಹೊಂದಿವೆ.
undefined
ಭೂಮಿಯ ಮೇಲ್ಮೈನಲ್ಲಿ ಆಗುತ್ತಿರುವ ಬದಲಾವಣೆಗಳು, ಅದಕ್ಕೆ ಕಾರಣಗಳು ಹಾಗೂ ಅದರಿಂದಾಗುವ ಪರಿಣಾಮಗಳನ್ನು ಅತ್ಯಾಧುನಿಕ ರಾಡಾರ್ ಇಮೇಜಿಂಗ್ ಬಳಸಿ ಅಧ್ಯಯನ ನಡೆಸುವ ಯೋಜನೆ ಇದಾಗಿದೆ. ಹಿಮಬಂಡೆ ಕುಸಿತ, ಭೂಕಂಪ, ಸುನಾಮಿ, ಜ್ವಾಲಾಮುಖಿ, ಭೂಕುಸಿತ, ಸಮುದ್ರ ಮಟ್ಟಏರಿಕೆ, ಅಂತರ್ಜಲ ಕುರಿತಂತೆ ಮಾಹಿತಿಯನ್ನು ಒದಗಿಸುವ ಉದ್ದೇಶ ಈ ಯೋಜನೆಗೆ ಇದೆ.
ಉಪಗ್ರಹ ಯೋಜನೆಗೆ ಒಮ್ಮೆಲೆ 240 ಕಿ.ಮೀ. ವಿಸ್ತೀರ್ಣದ ಚಿತ್ರ ತೆಗೆಯುವ ಸಾಮರ್ಥ್ಯವಿದೆ. ಹೀಗಾಗಿ ಒಟ್ಟಾರೆ 12 ದಿನಗಳಲ್ಲಿ ಇಡೀ ಭೂಮಿಯ ಚಿತ್ರ ಸೆರೆ ಹಿಡಿಯಲು ಸಾಧ್ಯವಿದೆ.