ಬಾಹ್ಯಾಕಾಶ ಕ್ಷೇತ್ರದಲ್ಲಿ ಯಾವುದೇ ದೇಶ ಮಾಡದ ಸಾಧನೆಯನ್ನು ಭಾರತ ಮಾಡಿದೆ. ಭಾರತದ ಚಂದ್ರಯಾನ 3 ಯಶಸ್ವಯಾಗಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ಭಾರತತ ಯಶಸ್ವಿಯಾಗಿ ವಿಕ್ರಮ್ ಲ್ಯಾಂಡರ್ ಇಳಿಸಿದೆ. ಇಸ್ರೋ ಸಾಧನೆಯನ್ನು ಇದೀಗ ವಿಶ್ವವೇ ಕೊಂಡಾಡುತ್ತಿದೆ.
ನವದೆಹಲಿ(ಆ.23) ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ವಿಶ್ವಗುರುವಾಗಿದೆ. ಭಾರತದ ಚಂದ್ರಯಾನ 3 ಯೋಜನೆ ಯಶಸ್ವಿಯಾಗಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಲ್ಯಾಂಡರ್ ಇಳಿಸುವ ಮೂಲಕ ಇಸ್ರೋ ಮೈಲಿಗಲ್ಲು ನಿರ್ಮಿಸಿದೆ. ಈವರೆಗೂ ವಿಶ್ವದ ಯಾವುದೇ ದೇಶವೂ ಭೇದಿಸದ ಚಂದ್ರನ ದಕ್ಷಿಣ ಧ್ರುವದಲ್ಲಿ ಇಸ್ರೋ ವಿಜ್ಞಾನಿಗಳು ಲ್ಯಾಂಡರ್ ಇಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಐತಿಹಾಸಿಕ ಕ್ಷಣಕ್ಕೆ ವಿಶ್ವ ಸಾಕ್ಷಿಯಾಗಿದೆ. ಸೌತ್ ಆಫ್ರಿಕಾದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಇಸ್ರೋ ನೇರ ಪ್ರಸಾರದಲ್ಲಿ ಭಾಗಿಯಾದ ಪ್ರಧಾನಿ ನರೇಂದ್ರ ಮೋದಿ ಚಂದ್ರಯಾನ ಯಶಸ್ವಿ ಲ್ಯಾಂಡಿಂಗ್‌ಗೆ ಅತೀವ ಸಂತಸ ವ್ಯಕ್ತಪಡಿಸಿದ್ದಾರೆ.
5.44ಕ್ಕೆ ಇಸ್ರೋ ವಿಕ್ರಮ್ ಲ್ಯಾಂಡರ್ ಇಳಿಕೆ ಪ್ರಕ್ರಿಯೆ ಆರಂಭಿಸಿತು. ಹಂತ ಹಂತವಾಗಿ ವೇಗ ತಗ್ಗಿಸಿದ ಇಸ್ರೋ ಯಶಸ್ವಿಯಾಗಿ ಚಂದ್ರನ ಮೇಲೆ ಲ್ಯಾಂಡರ್ ಇಳಿಸಿ ಇತಿಹಾಸ ರಚಿಸಿತು. ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆ ಇಳಿಸಿದ ವಿಶ್ವದ ಮೊದಲ ದೇಶ ಎಂಬ ದಾಖಲೆಗೆ ಭಾರತ ಪಾತ್ರವಾಗಿದೆ. ಜತೆಗೆ ಚಂದ್ರನ ಮೇಲೆ ಯಶಸ್ವಿಯಾಗಿ ನೌಕೆ ಇಳಿಸಿ ಅಧ್ಯಯನ ಕೈಗೊಂಡ ವಿಶ್ವದ 4ನೇ ರಾಷ್ಟ್ರ ಎಂಬ ಹೊಸ ಇತಿಹಾಸವನ್ನು ಭಾರತ ಹಾಗೂ ಇಸ್ರೋ ಬರೆದಿದೆ. ಈವರೆಗೆ ಅಮೆರಿಕ, ಚೀನಾ ಹಾಗೂ ಸೋವಿಯತ್ ಒಕ್ಕೂಟಗಳು ಈ ಮಾತ್ರ ಈ ಸಾಧನೆ ಮಾಡಿವೆ.
ಕೊನೆಯ 17 ನಿಮಿಷಗಳಲ್ಲಿ ಲ್ಯಾಂಡರ್ ಸೂಕ್ತ ಸಮಯ ಹಾಗೂ ಎತ್ತರ ನೋಡಿಕೊಂಡು, ಸೂಕ್ತ ಪ್ರಮಾಣದ ಇಂಧನ ಬಳಸಿಕೊಂಡು, ಚಂದ್ರನ ನೆಲವನ್ನು ಪರಿಶೀಲಿಸಿ ಸ್ವಯಂಚಾಲಿತವಾಗಿ ಎಂಜಿನ್ ಚಾಲೂ ಮಾಡಿಕೊಂಡು ಇಳಿಯುವ ಪ್ರಕ್ರಿಯೆ ಆರಂಭಿಸಲಾಗಿತ್ತು. ಯಾವುದೇ ಅಡ್ಡಿ ಅಥವಾ ಪರ್ವತ ಅಥವಾ ಕಂದಕ ಇಲ್ಲದ ಜಾಗವನ್ನು ಪರಿಶೀಲಿಸಿ ಲ್ಯಾಂಡರ್‌ನ್ನು ಯಶಸ್ವಿಯಾಗಿ ಇಳಿಸಲಾಗಿದೆ.
ಚಂದ್ರಯಾನ 3 ಯಶಸ್ವಿಯಾಗಿ ದೇಶದ ಮೂಲೆ ಮೂಲೆಯಲ್ಲಿ ಪೂಜೆ, ಹೋಮ ಹವನಗಳು ನಡೆದಿತ್ತು. ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿತ್ತು. 140 ಕೋಟಿ ಭಾರತೀಯರು ಚಂದ್ರಯಾನ ಯಶಸ್ವಿಯಾಗಿ ಪ್ರಾರ್ಥಿಸಿದ್ದರು. ಇದೀಗ ಎಲ್ಲರ ಪ್ರಾರ್ಥನೆ ಕೈಗೂಡಿದೆ. 41 ದಿನದ ನೌಕೆ ಪ್ರಯಾಣ ಇದೀಗ ಚಂದ್ರನ ಮೇಲೆ ಲ್ಯಾಂಡರ್ ಇಳಿಯುವ ಮೂಲಕ ಸಂಪನ್ನಗೊಂಡಿದೆ. ಇನ್ನು ಅಧ್ಯಯನ, ಸಂಶೋಧನೆಗಳು ಆರಂಭಗೊಳ್ಳಲಿದೆ.
ಜುಲೈ 14 ರಂದು ಶ್ರೀಹರಿಕೋಟಾದಿಂದ ವಿಕ್ರಮ್ ಲ್ಯಾಂಡರ್ ಹೊತ್ತ ಉಪಗ್ರಹ ಉಡಾವಣೆ ಮಾಡಲಾಗಿತ್ತು. ಬರೋಬ್ಬರಿ 3.84 ಲಕ್ಷ ಕಿಮೀ ದೂರವನ್ನು ಕಳೆದ 41 ದಿನಗಳಲ್ಲಿ ಕ್ರಮಿಸಿ ಇದೀಗ ಚಂದ್ರನ ಮೇಲೆ ಲ್ಯಾಂಡ್ ಆಗಿದೆ. ಚಂದ್ರನ ಮೇಲೆ ಲ್ಯಾಂಡ್ ಆಗಿರುವ ವಿಕ್ರಮ ಲ್ಯಾಂಡರ್ 1758 ಕೆ.ಜಿ.ತೂಕ ಹೊಂದಿದೆ. ಈ ಲ್ಯಾಂಡರ್‌ನಲ್ಲಿರುವ ಪ್ರಜ್ಞಾನ್ ರೋವರ್ 26 ಕೆಜಿ ತೂಕ ಹೊಂದಿದ್ದು, 14 ದಿನ ಚಂದ್ರನ ಮೇಲೆ ಓಡಾಡಿ ಅಧ್ಯಯನ ಮಾಡಲಿದೆ. ಲ್ಯಾಂಡರ್, ರೋವರಲ್ಲಿರುವ 5 ಉಪಕರಣ ಬಳಸಿ ಚಂದ್ರನ ಅಧ್ಯಯನವನ್ನು ಇಸ್ರೋ ಮಾಡಲಿದೆ.