ಖಾಸಗಿ ಸಂಸ್ಥೆಗೆಂದೇ ಉಪಗ್ರಹ: ಇಸ್ರೋಗೆ ಮತ್ತೊಂದು ಯಶಸ್ಸು

By Kannadaprabha NewsFirst Published Jun 24, 2022, 7:27 AM IST
Highlights

*   ಟಾಟಾ ಡಿಟಿಎಚ್‌ಗಾಗಿ ಇಸ್ರೋ ಉಪಗ್ರಹ
*   ಫ್ರೆಂಚ್‌ ಗಯಾನಾದಿಂದ ಜಿಸ್ಯಾಟ್‌-24 ಯಶಸ್ವಿ ಉಡಾವಣೆ
*   ದೇಶದ ಮೊತ್ತ ಮೊದಲ ‘ಬೇಡಿಕೆ ಆಧರಿತ’ ಉಪಗ್ರಹ ಇದು
 

ಬೆಂಗಳೂರು(ಜೂ.24):   ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ)ಯ ವಾಣಿಜ್ಯ ವಿಭಾಗವಾಗಿರುವ ನ್ಯೂಸ್ಪೇಸ್‌ ಇಂಡಿಯಾ ಲಿಮಿಟೆಡ್‌ (ಎನ್‌ಎಸ್‌ಐಎಲ್‌) ಗುರುವಾರ ಜಿಸ್ಯಾಟ್‌-24 ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡುವಲ್ಲಿ ಸಫಲವಾಗಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ 2020ರಲ್ಲಿ ಸುಧಾರಣೆಗಳು ಆದ ಬಳಿಕ ಬೇಡಿಕೆ ಆಧರಿಸಿ ಉಪಗ್ರಹ ಉಡಾವಣೆ ಮಾಡಿದ್ದು ಇದೇ ಮೊದಲು ಎಂಬುದು ಗಮನಾರ್ಹ. ಈಗ ಉಡಾವಣೆಯಾಗಿರುವ ಇಡೀ ಉಪಗ್ರಹವನ್ನು ಟಾಟಾ ಕಂಪನಿಯ ಡಿಟಿಎಚ್‌ ಸೇವೆಯಾಗಿರುವ ಟಾಟಾ ಪ್ಲೇಗಾಗಿ ಬಳಸಿಕೊಳ್ಳಲಾಗುತ್ತದೆ. ಇದರಿಂದ ಆ ಕಂಪನಿಗೆ ದೇಶಾದ್ಯಂತ ಇನ್ನಷ್ಟು ಉತ್ಕೃಷ್ಟಸೇವೆ ಕೊಡಲು ಅನುಕೂಲವಾಗಲಿದೆ.

ಜಿಸ್ಯಾಟ್‌-24 ಉಪಗ್ರಹವನ್ನು ಎನ್‌ಎಸ್‌ಐಎಲ್‌ಗಾಗಿ ಇಸ್ರೋ ಅಭಿವೃದ್ಧಿಪಡಿಸಿಕೊಟ್ಟಿದೆ. 4180 ಕೆ.ಜಿ. ತೂಕವಿರುವ ಈ ಉಪಗ್ರಹವನ್ನು ದಕ್ಷಿಣ ಅಮೆರಿಕದ ಫ್ರೆಂಚ್‌ ಗಯಾನಾದಲ್ಲಿರುವ ಕೌರು ಬಾಹ್ಯಾಕಾಶ ಕೇಂದ್ರದಿಂದ ಏರಿಯಾನ್‌ 5 ರಾಕೆಟ್‌ನಲ್ಲಿಟ್ಟು ಗುರುವಾರ ಬೆಳಗ್ಗೆ 3.20ಕ್ಕೆ ಉಡಾವಣೆ ಮಾಡಲಾಗಿದೆ. ಬಳಿಕ ಹಾಸನದಲ್ಲಿರುವ ಇಸ್ರೋ ಮಾಸ್ಟರ್‌ ಕಂಟ್ರೋಲ್‌ ಘಟಕದ ನಿಯಂತ್ರಣಕ್ಕೆ ಉಪಗ್ರಹ ಬಂದಿದ್ದು, ಅದು ಉತ್ತಮ ಸ್ಥಿತಿಯಲ್ಲಿರುವ ಸಂಬಂಧ ಸಂಕೇತಗಳು ಲಭಿಸಿವೆ. ಜಿಸ್ಯಾಟ್‌-24 ಜತೆಗೆ ಮಲೇಷ್ಯಾದ ಮತ್ತೊಂದು ಉಪಗ್ರಹವನ್ನೂ ಏರಿಯಾನ್‌ ನೌಕೆ ಕಕ್ಷೆಗೆ ಸೇರಿಸಿದೆ.

ISRO Rocket ಇಸ್ರೋದ ಮಾನವ ಶ್ರೇಣಿಯ ಘನ ರಾಕೆಟ್‌ ಬೂಸ್ಟರ್‌ ಪರೀಕ್ಷೆ ಯಶಸ್ವಿ

ಏನಿದು ಬೇಡಿಕೆ ಆಧರಿತ ಉಪಗ್ರಹ?:

ಈವರೆಗೆ ಇಸ್ರೋ ತಾನಾಗಿಯೇ ಉಪಗ್ರಹಗಳನ್ನು ಉಡಾವಣೆ ಮಾಡಿ, ಕಕ್ಷೆಗೆ ಸೇರಿಸಿದ ಬಳಿಕ ಅದನ್ನು ಅಗತ್ಯ ಇರುವವರಿಗೆ ಗುತ್ತಿಗೆ ಕೊಡುತ್ತಿತ್ತು. ಹೀಗಾಗಿ ಉಡಾವಣೆಗೂ ಮೊದಲೇ ಅದನ್ನು ಗುತ್ತಿಗೆ ಪಡೆಯುವ ಬದ್ಧತೆ ಬಹುತೇಕ ಗ್ರಾಹಕರಿಂದ ಇಸ್ರೋಗೆ ಸಿಗುತ್ತಿರಲಿಲ್ಲ. 2020ರಲ್ಲಿ ಬಾಹ್ಯಾಕಾಶ ರಂಗ ಸುಧಾರಣೆಯಾದ ಬಳಿಕ ಬೇಡಿಕೆ ಆಧರಿಸಿದ ಉಡಾವಣೆ ಸೌಲಭ್ಯವನ್ನು ಜಾರಿಗೆ ತರಲಾಯಿತು. ಇದರರ್ಥ- ಉಪಗ್ರಹ ಉಡಾವಣೆಗೂ ಮುನ್ನ ಅದರ ಗ್ರಾಹಕರು ಯಾರು, ಅದು ಯಾವ ಉದ್ದೇಶಕ್ಕೆ ಬಳಕೆಯಾಗುತ್ತದೆ ಎಂಬ ಬದ್ಧತೆ ಲಭಿಸುತ್ತದೆ. ಇಂತಹ ಉಪಗ್ರಹಗಳ ನಿರ್ಮಾಣ, ಸಾಗಣೆ, ವಿಮೆ, ಉಡಾವಣೆ, ಕಕ್ಷೆಯಲ್ಲಿ ನಿರ್ವಹಣೆ, ಮಾಲೀಕತ್ವ ಎಲ್ಲವೂ ಎನ್‌ಎಸ್‌ಐಎಲ್‌ ಹೊಂದಿರುತ್ತದೆ. ಅದಕ್ಕೆ ಗ್ರಾಹಕರು ಬಾಡಿಗೆ ಪಾವತಿ ಮಾಡಬೇಕಾಗುತ್ತದೆ. ಈ ಮಾದರಿಯ ಮೊದಲ ಉಪಗ್ರಹ ಇದಾಗಿದ್ದು, ಮುಂಬರುವ ವರ್ಷಗಳಲ್ಲಿ ಮತ್ತಷ್ಟುಉಪಗ್ರಹ ಉಡಾವಣೆಯಾಗುವ ನಿರೀಕ್ಷೆ ಇದೆ.
 

click me!