ಭಾರತದ ರಾಷ್ಟ್ರೀಯ ಬಾಹ್ಯಾಕಾಶ ದಿನ: ಚಂದ್ರನಂಗಳ ದಾಟಿ, ಜನಜೀವನದಲ್ಲಿ ಬದಲಾವಣೆ ತರುವ ಸಾಧನೆ

By Suvarna NewsFirst Published Aug 22, 2024, 6:33 PM IST
Highlights

ವಿಕ್ರಮ್ ಸಾರಾಭಾಯಿ ಅವರು 'ಲೀಪ್ ಫ್ರಾಗಿಂಗ್' (ದೂರದ ಜಿಗಿತ) ಎಂಬ ಪರಿಕಲ್ಪನೆಯನ್ನು ಮಂಡಿಸಿ, ಅದರಡಿಯಲ್ಲಿ ಸಣ್ಣಪುಟ್ಟ ಹಂತಗಳನ್ನು ಬಿಟ್ಟು ಮುಂದೆ ಸಾಗುವ ಕಲ್ಪನೆ ನೀಡಿದರು. ಈ ದೃಷ್ಟಿಕೋನ ಈಗಾಗಲೇ ಇರುವ ಜಾಗತಿಕ ಜ್ಞಾನವನ್ನು ಬಳಸಿಕೊಂಡು, ಸ್ಥಳೀಯ ಪ್ರಾವೀಣ್ಯತೆಯನ್ನು ಸೃಷ್ಟಿಸುವುದಾಗಿತ್ತು. 
 

ಗಿರೀಶ್ ಲಿಂಗಣ್ಣ, (ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

2023ರ ಆಗಸ್ಟ್ 23ರಂದು ಭಾರತದ ಮಹತ್ವಾಕಾಂಕ್ಷಿ ಚಂದ್ರಯಾನ-3 ಯೋಜನೆಯ ವಿಕ್ರಮ್ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವ ಪ್ರದೇಶದ ಬಳಿಯ 'ಶಿವ ಶಕ್ತಿ' ಬಿಂದುವಿನಲ್ಲಿ ಯಶಸ್ವಿಯಾಗಿ ಇಳಿಯಿತು. ಈ ಮೂಲಕ, ಚಂದ್ರನ ದಕ್ಷಿಣ ಧ್ರುವ ಪ್ರದೇಶದ ಬಳಿ ಲ್ಯಾಂಡರ್ ಇಳಿಸಿದ ಮೊದಲ ರಾಷ್ಟ್ರ ಎಂಬ ಕೀರ್ತಿಗೆ ಭಾರತ ಪಾತ್ರವಾಯಿತು. ಈ ಮಹತ್ವದ ದಿನದ ನೆನಪಿಗಾಗಿ, ಭಾರತ ಸರ್ಕಾರ ಆಗಸ್ಟ್ 23, 2024ರಂದು ಭಾರತದ 'ರಾಷ್ಟ್ರೀಯ ಬಾಹ್ಯಾಕಾಶ ದಿನ' ಎಂದು ಘೋಷಿಸಿತು. ಭಾರತದ ಐತಿಹಾಸಿಕ ಸಾಧನೆಯನ್ನು ಸ್ಮರಿಸುವ ಸಲುವಾಗಿ, ಇನ್ನು ಮುಂದೆ ಪ್ರತಿ ವರ್ಷವೂ ಆಗಸ್ಟ್ 23 ರಾಷ್ಟ್ರೀಯ ಬಾಹ್ಯಾಕಾಶ ದಿನವೆಂದು ಆಚರಿಸಲಾಗುತ್ತದೆ.

Latest Videos

ಈ ಮೂಲಕ ದೇಶದ ಯುವ ಜನತೆಯಲ್ಲಿ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನದ ಕುರಿತು ಆಸಕ್ತಿ ಮೂಡಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ಇವೆಲ್ಲ ಯಶಸ್ವಿ ಯೋಜನೆಗಳ ಹಿಂದೆ, ಭಾರತದ ಬಾಹ್ಯಾಕಾಶ ಯೋಜನೆಗಳಿಗೆ 1960ರ ದಶಕದಲ್ಲಿ ಚಾಲನೆ ನೀಡಿದ ವಿಕ್ರಮ್ ಸಾರಾಭಾಯಿ ಅವರ ಯೋಗದಾನ ಮಹತ್ವದ್ದಾಗಿದ್ದು, ಅವರನ್ನು 'ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮದ ಪಿತಾಮಹ' ಎಂದೇ ಕರೆದು ಗೌರವಿಸಲಾಗಿದೆ. ಭಾರತ ಬಾಹ್ಯಾಕಾಶ ಹಾರಾಟದ ಪ್ರತಿ ಹಂತಗಳನ್ನು ಒಂದೊಂದಾಗಿ ಕಲಿತು, ನಿಧಾನವಾಗಿ ಮುಂದೆ ಸಾಗಬೇಕು ಎಂಬ ಧೋರಣೆಯನ್ನು ತಳ್ಳಿಹಾಕಿ, ಕ್ಷಿಪ್ರ ಪ್ರಗತಿಗೆ ಸಾರಾಭಾಯಿ ಕಾರಣವಾಗಿದ್ದರು.

ಬಂಗಾಳ ಕೊಲ್ಲಿಯಲ್ಲಿ ತಳಮಳ: ಸೈಂಟ್ ಮಾರ್ಟಿನ್ಸ್ ದ್ವೀಪ ಮತ್ತು ಶೇಖ್ ಹಸೀನಾ ಪದಚ್ಯುತಿ ನಡುವೆ ಒಳಸಂಚು?

ವಿಕ್ರಮ್ ಸಾರಾಭಾಯಿ ಅವರು 'ಲೀಪ್ ಫ್ರಾಗಿಂಗ್' (ದೂರದ ಜಿಗಿತ) ಎಂಬ ಪರಿಕಲ್ಪನೆಯನ್ನು ಮಂಡಿಸಿ, ಅದರಡಿಯಲ್ಲಿ ಸಣ್ಣಪುಟ್ಟ ಹಂತಗಳನ್ನು ಬಿಟ್ಟು ಮುಂದೆ ಸಾಗುವ ಕಲ್ಪನೆ ನೀಡಿದರು. ಈ ದೃಷ್ಟಿಕೋನ ಈಗಾಗಲೇ ಇರುವ ಜಾಗತಿಕ ಜ್ಞಾನವನ್ನು ಬಳಸಿಕೊಂಡು, ಸ್ಥಳೀಯ ಪ್ರಾವೀಣ್ಯತೆಯನ್ನು ಸೃಷ್ಟಿಸುವುದಾಗಿತ್ತು. ಕಳೆದ 40 ವರ್ಷಗಳಿಂದ ಬಾಹ್ಯಾಕಾಶ ವಲಯದ ಕುರಿತು ಭಾರತ ಬದ್ಧತೆಯಿಂದ ಹೂಡಿಕೆ ಮಾಡಿದ್ದರ ಪ್ರತಿಫಲವನ್ನು ನಾವಿಂದು  ಯಶಸ್ವಿ ಯೋಜನೆಗಳ ಮೂಲಕ ಕಾಣುತ್ತಿದ್ದೇವೆ. ಇನ್ನೂ ಅಭಿವೃದ್ಧಿ ಹೊಂದುತ್ತಿರುವ ದೇಶವಾದ ಭಾರತ ಬಾಹ್ಯಾಕಾಶ ಅನ್ವೇಷಣೆಗೆ ಇಷ್ಟೊಂದು ಹಣ ವೆಚ್ಚ ಮಾಡುವುದು ಸೂಕ್ತವಲ್ಲ ಎಂದು ಟೀಕಾಕಾರರು ವಾದಿಸಿದ್ದರಾದರೂ, ಭಾರತ ಸಾಧಿಸಿದ ಯಶಸ್ಸು ಆ ನಿರ್ಧಾರ ಸೂಕ್ತವಾಗಿತ್ತು ಎಂಬುದನ್ನು ದೃಢಪಡಿಸಿದೆ.

ಈ ಅವಧಿಯಲ್ಲಿ, ಭಾರತ ವಿವಿಧ ದೇಶಗಳಿಂದ ಪ್ರಮುಖ ತಂತ್ರಜ್ಞಾನಗಳನ್ನು ತನ್ನದಾಗಿಸಿಕೊಂಡಿತು. ಭಾರತ ಅವೆಲ್ಲ ತಂತ್ರಜ್ಞಾನಗಳನ್ನು ವಿಶಿಷ್ಟವಾಗಿ ಮಿಳಿತಗೊಳಿಸಿ, ಭಾರತದ್ದೇ ಆದ ಹೊಸ ತಂತ್ರಜ್ಞಾನವನ್ನು ನಿರ್ಮಿಸಿಕೊಂಡಿತು. ಭಾರತದ ಇಂತಹ ಪ್ರಯತ್ನಕ್ಕೆ ಚಂದ್ರಯಾನ-3 ಒಂದು ಮಹತ್ವದ ಉದಾಹರಣೆ. ಇಸ್ರೋ ಚಂದ್ರಯಾನ-3 ಯೋಜನೆಗೆ ಕೇವಲ 74 ಮಿಲಿಯನ್ ಡಾಲರ್ (610 ಕೋಟಿ ರೂಪಾಯಿ) ಮಾತ್ರ ವೆಚ್ಚವಾಗಿದೆ ಎಂದಿದೆ. ಈ ಹಣ ವಾಣಿಜ್ಯಿಕ ವಿಮಾನದ ಮೊತ್ತಕ್ಕಿಂತಲೂ ಕಡಿಮೆಯಾಗಿದ್ದು, ಬಾಹ್ಯಾಕಾಶ ನೌಕೆ ಇಷ್ಟು ಕಡಿಮೆ ವೆಚ್ಚದಲ್ಲಿ ನಿರ್ಮಿಸುವುದು ಬಹುತೇಕ ಅಸಾಧ್ಯವೇ ಸರಿ! ವಿವಿಧ ಖಾಸಗಿ ಸಂಸ್ಥೆಗಳ ಜೊತೆಗೆ ಸಹಯೋಗ ಹೊಂದಿ ಸ್ವಂತ ಉಪಕರಣಗಳನ್ನು ನಿರ್ಮಿಸಿ, ಮಾರುಕಟ್ಟೆಯಲ್ಲಿ ಲಭ್ಯವಿಲ್ಲದಂತಹ ಬಿಡಿಭಾಗಗಳನ್ನು ಬಳಸುವ ಮೂಲಕ ಭಾರತ ಈ ಸಾಧನೆ ನಿರ್ಮಿಸಲು ಸಾಧ್ಯವಾಯಿತು.

ಖಾಸಗಿ ಸಂಸ್ಥೆಗಳನ್ನು ಜೊತೆಯಾಗಿಸಿಕೊಂಡು, ಬಾಹ್ಯಾಕಾಶ ಅನ್ವೇಷಣೆ ನಡೆಸುವುದು ಇಸ್ರೋಗೆ ಹೊಸ ವಿಚಾರವಾಗಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದಡಿ ಇಂತಹ ಬದಲಾವಣೆಗಳೂ ಸಾಧ್ಯವಾಗಿವೆ. ಮೋದಿಯವರು ಖಾಸಗಿ ವಲಯದ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸುವ ವಿಶಿಷ್ಟ ನಡೆಯನ್ನು ಪ್ರದರ್ಶಿಸಿದ್ದು, ಇಂತಹ ಕ್ರಮವನ್ನು ಹಿಂದಿನ ಭಾರತ ಸರ್ಕಾರಗಳು ಕೈಗೊಂಡಿರಲಿಲ್ಲ. 2022ರ ವೇಳೆಗೆ ಭಾರತದಲ್ಲಿ ಕೇವಲ ಒಂದು ಬಾಹ್ಯಾಕಾಶ ಸಂಬಂಧಿತ ಸ್ಟಾರ್ಟಪ್ ಸಂಸ್ಥೆ ಇದ್ದರೆ, 2024ರ ವೇಳೆಗೆ ಬಹುತೇಕ 200 ಬಾಹ್ಯಾಕಾಶ ಸ್ಟಾರ್ಟಪ್ ಸಂಸ್ಥೆಗಳಾಗಿವೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಜಿತೇಂದ್ರ ಸಿಂಗ್ ಅವರು ಹೇಳಿದ್ದಾರೆ. ಬಾಹ್ಯಾಕಾಶ ವಲಯದಲ್ಲಿ ತಂದಿರುವ ಸುಧಾರಣೆಗಳಿಂದಲೇ ಇದು ಸಾಧ್ಯವಾಯಿತು ಎಂದು ಸಚಿವರು ಬಣ್ಣಿಸಿದ್ದಾರೆ.

ಪ್ರಸ್ತುತ ಭಾರತದ ಬಾಹ್ಯಾಕಾಶ ವಲಯದ ಮೌಲ್ಯ 8 ಬಿಲಿಯನ್ ಡಾಲರ್ ಆಗಿದ್ದು, ಜಾಗತಿಕ ಬಾಹ್ಯಾಕಾಶ ಉದ್ಯಮದ 2% - 3% ಪಾಲು ಹೊಂದಿದೆ. ಸರ್ಕಾರ ಭಾರತದ ಬಾಹ್ಯಾಕಾಶ ವಲಯವನ್ನು 2040ರ ವೇಳೆಗೆ 100 ಬಿಲಿಯನ್ ಡಾಲರ್ ಉದ್ಯಮವನ್ನಾಗಿ ಬೆಳೆಸುವ ಗುರಿ ಹಾಕಿಕೊಂಡಿದೆ. 2023-24ರ ಆರ್ಥಿಕ ಸಮೀಕ್ಷೆಯ ಪ್ರಕಾರ, ಜನವರಿ 2024ರ ವೇಳೆಗೆ, 300ಕ್ಕೂ ಹೆಚ್ಚು ಭಾರತೀಯ ಸಂಸ್ಥೆಗಳು ಇನ್-ಸ್ಪೇಸ್‌ಗೆ (IN-SPACe) ಬಾಹ್ಯಾಕಾಶ ಸಂಬಂಧಿ ಯೋಜನೆಗಳಿಗೆ ಬೆಂಬಲ ಒದಗಿಸುವಂತೆ ಕೋರಿ ಅರ್ಜಿ ಸಲ್ಲಿಸಿವೆ. ಇನ್-ಸ್ಪೇಸ್ ಎನ್ನುವುದು ಬಾಹ್ಯಾಕಾಶ ಇಲಾಖೆಯಡಿ ಸ್ವತಂತ್ರವಾಗಿ ಕಾರ್ಯಾಚರಿಸುವ ಸಂಸ್ಥೆಯಾಗಿದ್ದು, 2020ರಲ್ಲಿ ಬಾಹ್ಯಾಕಾಶ ವಲಯದಲ್ಲಿ ಖಾಸಗಿ ಸಂಸ್ಥೆಗಳನ್ನು ಒಳಗೊಳ್ಳುವ ಸುಧಾರಣೆಗಳನ್ನು ತಂದ ಬಳಿಕ ಅದನ್ನು ಸ್ಥಾಪಿಸಲಾಯಿತು. ಭಾರತೀಯ ಸಂಸ್ಥೆಗಳು ಪ್ರಮಾಣೀಕರಣ, ಮಾರ್ಗದರ್ಶನ, ಸರ್ಕಾರಿ ವ್ಯವಸ್ಥೆಗಳ ಬಳಕೆಗೆ ಅನುಮತಿ, ತಂತ್ರಜ್ಞಾನ ವರ್ಗಾವಣೆ ಮತ್ತು ನೆರವುಗಳನ್ನು ಕೋರಿ ಅರ್ಜಿ ಸಲ್ಲಿಸಿವೆ. ಜನವರಿ 1, 2024ರ ವೇಳೆಗೆ, ವಿವಿಧ ಖಾಸಗಿ ಸಂಸ್ಥೆಗಳು 51 ಮೆಮೊರಾಂಡಂ ಆಫ್ ಅಂಡರ್ಸ್ಟಾಂಡಿಂಗ್ (ಎಂಒಯು) ಸಹಿ ಹಾಕಿದ್ದು, ಬಾಹ್ಯಾಕಾಶ ಚಟುವಟಿಕೆಗಳಿಗೆ ಸಂಬಂಧಿಸಿದಂತೆ 34 ಜಂಟಿ ಯೋಜನೆಗಳನ್ನು ರೂಪಿಸಿವೆ.

ಅನ್ವೇಷಣೆಗಳಿಗೆ ಸ್ಫೂರ್ತಿ, ಜನಜೀವನಕ್ಕೆ ನೆರವು
ಭಾರತ ಇದೇ ಮೊದಲ ಬಾರಿಗೆ 'ರಾಷ್ಟ್ರೀಯ ಬಾಹ್ಯಾಕಾಶ ದಿನ'ವನ್ನು ಆಚರಿಸುತ್ತಿದ್ದು, ಇದಕ್ಕಾಗಿ ಆಗಸ್ಟ್ 23ರಿಂದ ಒಂದು ತಿಂಗಳ ಕಾಲ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಈ ವಿಶೇಷ ದಿನದಂದು ಭಾರತದ ಮಹೋನ್ನತ ಬಾಹ್ಯಾಕಾಶ ಯೋಜನೆಗಳನ್ನು ಸಂಭ್ರಮಿಸಿ, ಭಾರತೀಯ ಯುವ ಜನರಲ್ಲಿ ನವ ಸ್ಫೂರ್ತಿ ತುಂಬಲಾಗುತ್ತದೆ. ಇದಕ್ಕಾಗಿ 'ಟಚಿಂಗ್ ಲೈವ್ಸ್ ವೈಲ್ ಟಚಿಂಗ್ ದ ಮೂನ್: ಇಂಡಿಯಾಸ್ ಸ್ಪೇಸ್ ಸಾಗಾ' (ಚಂದ್ರನನ್ನು ಸ್ಪರ್ಶಿಸುತ್ತಾ ಜನಜೀವನಕ್ಕೂ ಸ್ಪರ್ಶ: ಭಾರತದ ಬಾಹ್ಯಾಕಾಶ ಯಾನ) ಎಂಬ ಧ್ಯೇಯವಾಕ್ಯವನ್ನು ಆರಿಸಲಾಗಿದೆ. ಈ ಥೀಮ್ ಹೇಗೆ ಭಾರತದ ಬಾಹ್ಯಾಕಾಶ ಯೋಜನೆಗಳು ಚಂದ್ರನ ಅಂಗಳವನ್ನು ತಲುಪುವಂತಹ ಮಹತ್ತರ ಮೈಲಿಗಲ್ಲುಗಳನ್ನು ಸ್ಥಾಪಿಸುವ ಜೊತೆಗೆ, ಜನರ ದೈನಂದಿನ ಜೀವನದಲ್ಲೂ ಧನಾತ್ಮಕ ಬದಲಾವಣೆ ತರುತ್ತಿವೆ ಎನ್ನುವುದನ್ನು ಸಂಕೇತಿಸುತ್ತದೆ.

ರಾಷ್ಟ್ರೀಯ ಬಾಹ್ಯಾಕಾಶ ದಿನದ ಉದ್ದೇಶವೇನು?
ಈ ದಿನ ಬಾಹ್ಯಾಕಾಶ ಅನ್ವೇಷಣೆಗೆ ಸಂಬಂಧಿಸಿದ ಸಾಧನೆಗಳನ್ನು ಸಂಭ್ರಮಿಸುವ ಉದ್ದೇಶ ಹೊಂದಿದ್ದು, ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಭಾರತದ ಪ್ರಗತಿಯನ್ನು ಸಾರಿ, ವಿದ್ಯಾರ್ಥಿಗಳಲ್ಲಿ ಬಾಹ್ಯಾಕಾಶ ವಿಜ್ಞಾನದಲ್ಲಿ ಹೊಸ ಆಸಕ್ತಿ ಮೂಡಿಸಲಿದೆ. ಅದರೊಡನೆ, ಬಾಹ್ಯಾಕಾಶ ಅನ್ವೇಷಣೆಯ ಪ್ರಯೋಜನಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ, ಅವರಲ್ಲಿ ರಾಷ್ಟ್ರೀಯ ಹೆಮ್ಮೆ ಮತ್ತು ಐಕ್ಯತೆ ಮೂಡಿಸಲಿದೆ.

ತಿಂಗಳ ಕಾಲ ನಡೆಯುವ ಸಂಭ್ರಮಾಚರಣೆಗಳು: 'ರಾಷ್ಟ್ರೀಯ ಬಾಹ್ಯಾಕಾಶ ದಿನ'ವನ್ನು ದೇಶಾದ್ಯಂತ ವಿವಿಧ ಆಸಕ್ತಿಕರ ಸರಣಿ ಕಾರ್ಯಕ್ರಮಗಳ ಮೂಲಕ ಆಚರಿಸಲಾಗುತ್ತದೆ. ಇದು ಭಾರತದ ಭವಿಷ್ಯದ ತಲೆಮಾರುಗಳಲ್ಲೂ ಬಾಹ್ಯಾಕಾಶ ಅನ್ವೇಷಣೆಗಳ ಕುರಿತು ಆಸಕ್ತಿ ಮೂಡಿಸಲಿದೆ.

1. ಭಾರತ್ ಮಂಡಪಂನಲ್ಲಿ ಸಮಾರಂಭ
ನವದೆಹಲಿಯ ಭಾರತ್ ಮಂಡಪಂ ಸಮುದಾಯ ಭವನದಲ್ಲಿ ಬಾಹ್ಯಾಕಾಶ ದಿನದ ಆಚರಣೆಗಳು ಆರಂಭಗೊಳ್ಳಲಿವೆ. ಅಲ್ಲಿ ವಿವಿಧ ಪ್ರಮುಖ ಅವಧಿಗಳು, ಸಂವಾದಗಳು ಮತ್ತು ಸುಂದರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಈ ಸಮಾರಂಭದಲ್ಲಿ ಬಾಹ್ಯಾಕಾಶ ಪ್ರದರ್ಶನಗಳ ವಿವಿಐಪಿ ಪ್ರವಾಸ, ಬಾಹ್ಯಾಕಾಶ ಸಚಿವಾಲಯದ ಕಾರ್ಯದರ್ಶಿ, ಇಸ್ರೋ ಅಧ್ಯಕ್ಷರು, ಇನ್-ಸ್ಪೇಸ್ ಅಧ್ಯಕ್ಷರು ಸೇರಿದಂತೆ ಪ್ರಮುಖ ವ್ಯಕ್ತಿಗಳ ಭಾಷಣಗಳು ಮತ್ತು ಪ್ರಮುಖ ಘೋಷಣೆಗಳು ಸೇರಿವೆ. ಇಂತಹ ಭಾಷಣಗಳು, ಭಾರತದ ಬಾಹ್ಯಾಕಾಶ ಯೋಜನೆಗಳು ಭಾರತಕ್ಕೆ ಹೇಗೆ ಸಮಾಜೋ ಆರ್ಥಿಕ ಪ್ರಯೋಜನಗಳನ್ನು ಕಲ್ಪಿಸಿದೆ ಎಂಬುದನ್ನು ವಿವರಿಸಲಿವೆ. ಅದರೊಡನೆ, ಬಾಹ್ಯಾಕಾಶ ಆಧರಿತ ಆಡಳಿತ ಮತ್ತು ಭವಿಷ್ಯದ ಯೋಜನೆಗಳನ್ನು ತೋರಿಸಲಿವೆ. ಇದೇ ಸಂದರ್ಭದಲ್ಲಿ, ಚಂದ್ರಯಾನ-3 ಯೋಜನೆಗೆ ಸಂಬಂಧಿಸಿದ ಒಂದು ಚಲನಚಿತ್ರ ಮತ್ತು ವಿಶೇಷ ನೃತ್ಯವನ್ನು ಪ್ರದರ್ಶಿಸಲಾಗುತ್ತದೆ.

2. ಸ್ಪೇಸ್ ಆನ್ ವೀಲ್ಸ್: ಇಸ್ರೋದ ನವ ದೃಷ್ಟಿಕೋನ
'ಸ್ಪೇಸ್ ಆನ್ ವೀಲ್ಸ್' ಯೋಜನೆಯಡಿ ಸಂಚಾರಿ ವಸ್ತು ಪ್ರದರ್ಶನದ ಬಸ್‌ಗಳು ಭಾರತದಾದ್ಯಂತ ವಿವಿಧ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಿಗೆ ಭೇಟಿ ನೀಡಲಿವೆ. ವಿಜ್ಞಾನ ಭಾರತಿ (ವಿಭಾ) ಒಡನೆ ಸಹಭಾಗಿತ್ವದಿಂದ ನಡೆಯಲಿರುವ ಈ ಯೋಜನೆ ಇಸ್ರೋದ ಕಾರ್ಯಗಳು ಮತ್ತು ಸಾಧನೆಗಳ ಕುರಿತು ಮಾಹಿತಿ ಒದಗಿಸಲಿದೆ. ಈ ವಸ್ತು ಪ್ರದರ್ಶನ ಚಂದ್ರಯಾನ-1, ಮಂಗಳಯಾನದಂತಹ ಯೋಜನೆಗಳು, ರಿಮೋಟ್ ಸೆನ್ಸಿಂಗ್ ಮತ್ತು ಉಪಗ್ರಹ ಸಂವಹನಗಳ ಮಾದರಿಗಳನ್ನು ಪ್ರದರ್ಶಿಸಲಿದೆ. ಸಂವಾದಾತ್ಮಕ ಪ್ರದರ್ಶನಗಳು ಮತ್ತು ಇತರ ಚಟುವಟಿಕೆಗಳು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಲ್ಲಿ ಮಾಹಿತಿ ಮತ್ತು ಅರಿವು ಮೂಡಿಸಲಿವೆ.

3. ಇಸ್ರೋ ಸ್ಪೇಸ್ ಟ್ಯೂಟರ್ಸ್: ಆಸಕ್ತಿದಾಯಕ ಮತ್ತು ಶೈಕ್ಷಣಿಕ ಯೋಜನೆ
ಇಸ್ರೋದ 120 ನೋಂದಾಯಿತ ಬಾಹ್ಯಾಕಾಶ ಬೋಧಕರು ದೇಶಾದ್ಯಂತ ಔಟ್ ರೀಚ್ ಚಟುವಟಿಕೆಗಳನ್ನು ನಡೆಸಲಿದ್ದಾರೆ. ಇದರಲ್ಲಿ ಮಾತುಕತೆಗಳು, ರಸಪ್ರಶ್ನೆಗಳು, ಮತ್ತು ವಸ್ತು ಪ್ರದರ್ಶನಗಳು ಸೇರಿವೆ. ಇದಕ್ಕೆ ಸರ್ಕಾರೇತರ ಸಂಸ್ಥೆಗಳು ಮತ್ತು ಶೈಕ್ಷಣಿಕ ಸಂಸ್ಥೆಗಳು ಬೆಂಬಲ ಒದಗಿಸುತ್ತಿವೆ. ಬಾಹ್ಯಾಕಾಶ ಬೋಧಕರು ಬಾಹ್ಯಾಕಾಶ ಶಿಕ್ಷಣವನ್ನು ಉತ್ತೇಜಿಸಿ, ವೈಜ್ಞಾನಿಕ ಆಸಕ್ತಿ ಹೆಚ್ಚಿಸುವ ಗುರಿ ಹೊಂದಿದ್ದಾರೆ. ಶೈಕ್ಷಣಿಕ ಮಾದರಿಗಳು ಮತ್ತು ಡಿಜಿಟಲ್ ಮಾಹಿತಿಗಳು ಸಾಂಪ್ರದಾಯಿಕ ತರಗತಿ ಅಧ್ಯಯನಕ್ಕಿಂತ ಭಿನ್ನವಾಗಿದ್ದು, ವಿದ್ಯಾರ್ಥಿಗಳಿಗೆ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನದ ಕುರಿತು ಹೆಚ್ಚಿನ ಜ್ಞಾನ ನೀಡಲಿವೆ.

4. ಭಾರತೀಯ ಅಂತರಿಕ್ಷ್ ಹ್ಯಾಕಥಾನ್
ಇಸ್ರೋ ಆಯೋಜಿಸುತ್ತಿರುವ 'ಭಾರತೀಯ ಅಂತರಿಕ್ಷ್ ಹ್ಯಾಕಥಾನ್' ಬಾಹ್ಯಾಕಾಶ ಸಂಬಂಧಿ ಸವಾಲುಗಳಿಗೆ ನವೀನ ಪರಿಹಾರಗಳನ್ನು ಒದಗಿಸಲು ವಿದ್ಯಾರ್ಥಿಗಳನ್ನು ಆಹ್ವಾನಿಸಲಿದೆ. ಇದರ ಕೊನೆಗೆ ಒಂದು ಫೈನಲ್ ಸ್ಪರ್ಧೆ ಇರಲಿದ್ದು, ಅತ್ಯುತ್ತಮ ತಂಡಗಳು ತಮ್ಮ ಯೋಜನೆ - ಯೋಚನೆಗಳನ್ನು ಪ್ರದರ್ಶಿಸಲಿವೆ. ಅತ್ಯುತ್ತಮ ಪ್ರದರ್ಶನ ನೀಡಿದ ವಿದ್ಯಾರ್ಥಿಗಳಿಗೆ ಇಸ್ರೋದ ಕೇಂದ್ರಗಳಲ್ಲಿ ಇಂಟರ್ನ್‌ಶಿಪ್ ಒದಗಿಸಲಾಗುತ್ತದೆ. ಮೊದಲ ಮೂರು ಸ್ಥಾನಗಳನ್ನು ಪಡೆದ ತಂಡಗಳು 'ರಾಷ್ಟ್ರೀಯ ಬಾಹ್ಯಾಕಾಶ ದಿನ'ದಂದು ತಮ್ಮ ಯೋಜನೆಗಳನ್ನು ಪ್ರದರ್ಶಿಸಲಿವೆ.

ಮಾಸ್ಕೋದಲ್ಲಿ ಮೋದಿ: ರಾಜತಾಂತ್ರಿಕತೆ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ ಸಮತೋಲನದ ನಾಜೂಕಿನ ಹಾದಿ

5. ಇಸ್ರೋ ರೋಬೋಟಿಕ್ಸ್ ಚಾಲೆಂಜ್ ಯೋಜನೆ
'ಇಸ್ರೋ ರೋಬೋಟಿಕ್ಸ್ ಚಾಲೆಂಜ್ - 2024' ವಿದ್ಯಾರ್ಥಿಗಳನ್ನು ಭೂಮಿಯ ಹೊರಗಿನ ವಾತಾವರಣದಲ್ಲೂ ಕಾರ್ಯಾಚರಿಸುವ ರೋಬೋಟ್‌ಗಳನ್ನು ವಿನ್ಯಾಸಗೊಳಿಸಲು, ಮತ್ತು ಒದಗಿಸಲು ಆಹ್ವಾನಿಸುತ್ತಿದೆ. ಬಾಹ್ಯಾಕಾಶ ರೋಬೋಟಿಕ್ಸ್ ಮೇಲೆ ಗಮನ ಹರಿಸುವ ಈ ಯೋಜನೆ, ವಾಸ್ತವ ಜಗತ್ತಿನ ಸವಾಲುಗಳನ್ನು ಎದುರಿಸುವ ಮತ್ತು ಭವಿಷ್ಯದ ತಂತ್ರಜ್ಞಾನಗಳನ್ನು ನಿರ್ಮಿಸುವ ಸವಾಲುಗಳನ್ನು ಒದಗಿಸುತ್ತದೆ. ಈ ಯೋಜನೆಯೂ ರಾಷ್ಟ್ರೀಯ ಬಾಹ್ಯಾಕಾಶ ದಿನದಂದು ಪ್ರಶಸ್ತಿ ಪ್ರದಾನದ ಮೂಲಕ ಪೂರ್ಣಗೊಳ್ಳಲಿದೆ.

click me!