ಸೂರ್ಯನ ದಶಕದ ಅವಧಿಒಂದೇ ತಾಸಲ್ಲಿ ನೋಡಿ| ನಾಸಾದಿಂದ ಅಪರೂಪದ ವಿಡಿಯೋ ಬಿಡುಗಡೆ
ನವದೆಹಲಿ(ಜೂ.28): ಸೌರಮಂಡಲದ ಕೇಂದ್ರವಾಗಿರುವ ಸೂರ್ಯನಲ್ಲಿ ಒಂದು ದಶಕದ ಅವಧಿಯಲ್ಲಿ ಆಗುವ ಬದಲಾವಣೆಗಳನ್ನು ಅಮೆರಿಕದ ವೈಮಾಂತರಿಕ್ಷ ಸಂಸ್ಥೆ (ನಾಸಾ) ಕೇವಲ ಒಂದು ತಾಸಿನಲ್ಲಿ ಹಿಡಿದುಕೊಟ್ಟಿದೆ. ಈ ವಿಡಿಯೋ ಯುಟ್ಯೂಬ್‌ನಲ್ಲಿ ಬಿಡುಗಡೆಯಾಗಿದ್ದು, ಅಲ್ಪಾವಧಿಯಲ್ಲೇ ಲಕ್ಷಾಂತರ ಮಂದಿ ಇದನ್ನು ವೀಕ್ಷಣೆ ಮಾಡಿ ಸೂರ್ಯನ ಕೌತುಕವನ್ನು ಕಣ್ತುಂಬಿಕೊಂಡಿದ್ದಾರೆ.
ನಾಸಾದ ಸೋಲಾರ್ ಡೈನಾಮಿಕ್ಸ್ ಅಬ್ಸರ್ವೇಟರಿ (ಎಸ್‌ಡಿಒ) ಕಳೆದ ಒಂದು ದಶಕದಿಂದ ನಿರಂತರವಾಗಿ ಸೂರ್ಯನನ್ನು ವೀಕ್ಷಿಸುತ್ತಿದೆ. 2010ರ ಫೆಬ್ರವರಿಯಲ್ಲಿ ಉಡಾವಣೆಯಾದ ಈ ಸಾಧನ ಅದೇ ವರ್ಷದ ಜೂ.2ರಿಂದ 2020ರ ಜೂ.1ರವರೆಗೆ ಸತತ 10 ವರ್ಷಗಳ ಕಾಲ 42.5 ಕೋಟಿ ಅತ್ಯುತ್ಕೃಷ್ಟದರ್ಜೆಯ ಚಿತ್ರಗಳನ್ನು ಸೆರೆ ಹಿಡಿದಿದೆ. ಇವುಗಳ ಗಾತ್ರ 2 ಕೋಟಿ ಗಿಗಾಬೈಟ್ಸ್‌ನಷ್ಟಿದೆ. ಇವನ್ನೇ ಕುಗ್ಗಿಸಿ 61 ನಿಮಿಷಗಳ ವಿಡಿಯೋವನ್ನು ನಾಸಾ ಬುಧವಾರ ಬಿಡುಗಡೆ ಮಾಡಿದೆ.
undefined
‘ಎ ಡೆಕೇಡ್ ಆಫ್ ಸನ್’ ಎಂಬ ಹೆಸರಿನ ಈ ವಿಡಿಯೋದಲ್ಲಿರುವ ಪ್ರತಿ ಸೆಕೆಂಡ್, ಸೂರ್ಯನ ಪ್ರತಿ ದಿನವನ್ನು ಸೂಚಿಸುತ್ತದೆ. ಸೂರ್ಯನ 11 ವರ್ಷಗಳ ಸೌರ ಚಕ್ರದ ಅವಧಿಯಲ್ಲಿ ಉದಯ ಹಾಗೂ ಮುಳುಗುವ ಚಟುವಟಿಕೆಯನ್ನು ವಿಡಿಯೋ ತೋರಿಸುತ್ತದೆ. ಸೂರ್ಯ ಭೂಮಿಯ ಮೇಲೆ ಯಾವ ರೀತಿಯ ಪ್ರಭಾವ ಬೀರುತ್ತಾನೆ ಎಂಬುದನ್ನು ಅರ್ಥೈಸಿಕೊಳ್ಳಲು ಅನುಕೂಲವಾಗಿದೆ. ಪ್ರತಿ 11 ವರ್ಷಕ್ಕೆ ಒಮ್ಮೆ ಸೂರ್ಯನ ಕಾಂತೀಯ ವಲಯ ಅದಲು ಬದಲಾಗುತ್ತದೆ. ಅಂದರೆ ಉತ್ತರ ದಿಕ್ಕು ದಕ್ಷಿಣಕ್ಕೂ, ದಕ್ಷಿಣವು ಉತ್ತರ ದಿಕ್ಕಿಗೂ ವರ್ಗಾವಣೆಯಾಗುತ್ತದೆ ಎಂದು ನಾಸಾ ಮಾಹಿತಿ ನೀಡಿದೆ.