ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿಗೂ ಅವಕಾಶ| ಕೇಂದ್ರ ಸಂಪುಟದಿಂದ ಐತಿಹಾಸಿಕ ನಿರ್ಧಾರ| ಸ್ಪೇಸ್ ಎಕ್ಸ್ ರೀತಿ ಚಟುವಟಿಕೆಗೆ ಅನುಕೂಲ
ನವದೆಹಲಿ(ಜೂ.25):: ಬಾಹ್ಯಾಕಾಶ ಅನ್ವೇಷಣೆ ಸೇರಿದಂತೆ ಎಲ್ಲಾ ರೀತಿಯ ಅಂತರಿಕ್ಷ ಚಟುವಟಿಕೆಗಳಲ್ಲಿ ಖಾಸಗಿ ವಲಯ ತೊಡಗಿಸಿಕೊಳ್ಳುವುದಕ್ಕೆ ಅನುಮತಿ ನೀಡಿ ಕೇಂದ್ರ ಸಚಿವ ಸಂಪುಟ ಸಭೆ ಬುಧವಾರ ಐತಿಹಾಸಿಕ ತೀರ್ಮಾನ ಕೈಗೊಂಡಿದೆ. ಇದೇ ವೇಳೆ, ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಉತ್ತೇಜನ ಹಾಗೂ ಮಂಜೂರಾತಿ ಕೇಂದ್ರ (ಇನ್-ಸ್ಪೇಸ್) ಸ್ಥಾಪನೆಗೆ ಅನುಮತಿ ನೀಡಿದೆ.
ಕಳೆದ ತಿಂಗಳಷ್ಟೇ ಅಮೆರಿಕದ ಸ್ಪೇಸ್ ಎಕ್ಸ್ ಕಂಪನಿ ವಿಶ್ವದ ಮೊದಲ ಖಾಸಗಿ ರಾಕೆಟ್ ಅನ್ನು ಉಡಾವಣೆ ಮಾಡಿ, ಅಮೆರಿಕದ ಗಗನಯಾತ್ರಿಗಳನ್ನು ಯಶಸ್ವಿಯಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಮುಟ್ಟಿಸಿತ್ತು. ಇದರ ಬೆನ್ನಲ್ಲೇ ಭಾರತ ಕೂಡ ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ವಲಯಕ್ಕೆ ಅವಕಾಶ ಕಲ್ಪಿಸಿರುವುದು ಮಹತ್ವ ಪಡೆದುಕೊಂಡಿದೆ.
undefined
ಆರ್ಥಿಕ ಪ್ಯಾಕೇಜ್ 4ನೇ ಕಂತು; ಕಲ್ಲಿದಲ್ಲು, ವಿದ್ಯುತ್ ಕ್ಷೇತ್ರ ಖಾಸಗೀಕರಣಕ್ಕೆ ನಿರ್ಧಾರ!
ದೇಶದ ಬಾಹ್ಯಾಕಾಶ ಮೂಲಸೌಕರ್ಯವನ್ನು ಬಳಸಿಕೊಳ್ಳಲು ಹಾಗೂ ಅಂತರಿಕ್ಷ ಚಟುವಟಿಕೆಗಳಲ್ಲಿ ಮಾರ್ಗದರ್ಶನ ಮಾಡಲು ಇನ್-ಸ್ಪೇಸ್ ಸಮಾನ ಅವಕಾಶ ಒದಗಿಸಲಿದೆ ಎಂದು ಸರ್ಕಾರ ತಿಳಿಸಿದೆ.
ಇಷ್ಟುದಿನ ಇಸ್ರೋ ಭಾರತದಲ್ಲಿ ಬಾಹ್ಯಾಕಾಶ ಸಂಶೋಧನೆಯಲ್ಲಿ ತೊಡಗಿರುವ ಏಕೈಕ ಸಂಸ್ಥೆ ಎನಿಸಿಕೊಂಡಿತ್ತು. ಖಾಸಗಿ ಸಂಸ್ಥೆಗಳಿಗೂ ಬಾಹ್ಯಾಕಾಶ ಸಂಶೋಧನೆಗೆ ಅನುವು ಮಾಡಿಕೊಡುವ ನಿಟ್ಟಿನಿಂದ ಸರ್ಕಾರ ‘ಇಂಡಿಯನ್ ನ್ಯಾಷನಲ್ ಸ್ಪೇಸ್ ಪ್ರಮೋಷನ್ ಆ್ಯಂಡ್ ಆಥರೈಸೇಷನ್ ಸೆಂಟರ್’ (ಇನ್-ಸ್ಪೇಸ್)ಅನ್ನು ಸ್ಥಾಪಿಸಿದೆ. ಈ ಸಂಸ್ಥೆ ಖಾಸಗಿ ಕಂಪನಿಗಳು ಭಾರತೀಯ ಬಾಹ್ಯಾಕಾಶ ಕ್ಷೇತ್ರದ ಮೂಲಸೌಕರ್ಯಗಳ ಬಳಕೆಗೆ ಸಮಾನ ಅವಕಾಶ ಕಲ್ಪಿಸಲಿದೆ ಎಂದು ಪ್ರಧಾನಿ ಕಚೇರಿಯ ರಾಜ್ಯ ಖಾತೆ ಸಚಿವ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.
ಬಾಹ್ಯಾಕಾಶ ವಲಯವನ್ನು ಖಾಸಗಿ ಸಂಸ್ಥೆಗಳಿಗೆ ಮುಕ್ತಗೊಳಿಸುವುದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 20 ಲಕ್ಷ ಕೋಟಿ ರು. ಪ್ಯಾಕೇಜ್ ಘೋಷಣೆ ವೇಳೆ ಪ್ರಕಟಿಸಿದ್ದರು. ಅದಕ್ಕೆ ಈಗ ಸಚಿವ ಸಂಪುಟ ಅನುಮತಿ ನೀಡಿದೆ. ಇದನ್ನು ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಕೂಡ ಸ್ವಾಗತಿಸಿದೆ.
ಸಾರಿಗೆ ಇಲಾಖೆಯಲ್ಲಿ ಇಸ್ರೋ ತಂತ್ರಜ್ಞಾನ ಬಳಕೆ!
ಇನ್-ಸ್ಪೇಸ್‌ಇ ಬಾಹ್ಯಾಕಾಶ ಚಟುವಟಿಕೆಗಳಿಗೆ ಖಾಸಗಿ ಸಂಸ್ಥೆಗಳನ್ನು ಉತ್ತೇಜಿಸುವುದರ ಜೊತೆ ಅವುಗಳಿಗೆ ಮಾರ್ಗದಶನ ನೀಡುವ ಮತ್ತು ಕೈಹಿಡಿದು ನಡೆಸುವ ಕಾರ್ಯವನ್ನು ಮಾಡಲಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಇತ್ತೀಚೆಗೆ ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್ ಎಂಬ ಸಾರ್ವಜನಿಕ ವಲಯದ ಸಂಸ್ಥೆಯೊಂದನ್ನು ಸ್ಥಾಪಿಸಿದ್ದು, ಈ ಸಂಸ್ಥೆ ಭಾರತದ ಬಾಹ್ಯಾಕಾಶ ಸೌಕರ್ಯವನ್ನು ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳುವ ಮೂಲಕ ಬಾಹ್ಯಾಕಾಶ ಚಟುವಟಿಕೆಗಳಿಗೆ ಹೊಸ ರೂಪ ನೀಡುವ ಉದ್ದೇಶ ಹೊಂದಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿನ ಈ ಸುಧಾರಣೆ ಇಸ್ರೋಗೆ ಸಂಶೋಧನೆಯ ಮೇಲೆ ಹೆಚ್ಚಿನ ಒತ್ತು ನೀಡಲು, ಅಭಿವೃದ್ಧಿ ಚಟುವಟಿಕೆಗಳು, ನವೀನ ತಂತ್ರಜ್ಞಾನಗಳು, ಬಾಹ್ಯಾಕಾಶ ಅನ್ವೇಷಣೆ ಮತ್ತು ಮಾನವ ಸಹಿತ ಬಾಹ್ಯಾಕಾಶ ಯೋಜನೆಗೆ ಗಮನ ನೀಡಲು ಸಾಧ್ಯವಾಗಲಿದೆ. ಅಲ್ಲದೇ ಖಾಸಗಿ ಸಹಭಾಗಿತ್ವದ ಮೂಲಕ ಬಾಹ್ಯಾಕಾಶ ಅನ್ವೇಷಣಾ ಯೋಜನೆ ಕೈಗೊಳ್ಳುವ ಅವಕಾಶವನ್ನು ಕಲ್ಪಿಸಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.