ಮಣ್ಣಿಲ್ಲದೇ ಸೊಪ್ಪು ಹೂವುಗಳನ್ನು ಬೆಳೆಯಬಹುದು. ಅದು ಹೇಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
ಬೆಂಗಳೂರು [ಅ.25]: ಮಣ್ಣನ್ನು ಬಳಸದೆ ನೀರಿನಲ್ಲಿ ಪೋಷಕಾಂಶಗಳ ದ್ರಾವಣವನ್ನು ಬಳಸಿಕೊಂಡು ಸೊಪ್ಪು, ಹೂವು ಮತ್ತು ಅಲಂಕಾರಿಕ ಸಸ್ಯಗಳನ್ನು ಬೆಳೆಯುವ ಹೈಡ್ರೋಪೋನಿಕ್ಸ್(ಜಲಕೃಷಿ) ಕೃಷಿ ಪದ್ಧತಿ ಕೃಷಿ ಮೇಳದಲ್ಲಿ ನಗರವಾಸಿಗಳ ಮನ ಸೆಳೆಯುತ್ತಿದೆ.
ನಗರದ ಜೆ.ಪಿ.ನಗರದ ಅರ್ಬನ್ ಫಾರ್ಮಿಂಗ್ ಆ್ಯಂಡ್ ಸಲ್ಯೂಷನ್ ಸಂಸ್ಥೆಯ ಆ್ಯನ್ ವಿನಯಾ ಥಾಮಸ್ ಅವರು, ಜಲಕೃಷಿ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ. ಟೆರೆಸ್ ಗಾರ್ಡನ್‌ನಲ್ಲಿ ಜಲಕೃಷಿ ಪದ್ಧತಿ ಅಳವಡಿಸಿಕೊಳ್ಳಲು ಇಚ್ಛಿಸುವವರಿಗೆ ತರಬೇತಿ ಕೂಡ ನೀಡುತ್ತಿದ್ದಾರೆ.
ಬಹುತೇಕ ಎಲ್ಲ ಬಗೆಯ ಸೊಪ್ಪನ್ನು ಮಣ್ಣಿನಲ್ಲಿಯೇ ಬೆಳೆಯಲಾಗುತ್ತದೆ. ಜಲಕೃಷಿಯಲ್ಲಿ ಸೊಪ್ಪನ್ನು ನೀರಿನಿಂದ ಬೆಳೆಯಬಹುದು. ಮಣ್ಣಿನಲ್ಲಿ ಇರುವ ಪೋಷಕಾಂಶಗಳನ್ನು ನೀರಿನಲ್ಲಿ ಮಿಶ್ರಣ ಮಾಡಿ ಸಸ್ಯಗಳಿಗೆ ಕೊಡಲಾಗುತ್ತದೆ. ಎಲ್ಲ ಪೋಷಕಾಂಶಗಳು ಸಸ್ಯಗಳಿಗೆ ಸುಲಭವಾಗಿ ಸಿಗುವುದರಿಂದ ಬೇರು ಆಳವಾಗಿ ಹೋಗುವುದಿಲ್ಲ. ಜತೆಗೆ ಫಸಲು ಕೂಡ ಬೇಗ ಬರುತ್ತದೆ. ಇದರಿಂದ ಶೇ.90ರಷ್ಟುನೀರು ಉಳಿತಾಯ ಮಾಡಬಹುದು. ಇದರೊಂದಿಗೆ ಜಲಕೃಷಿಗೆ ಬಳಸಿದ ನೀರನ್ನು ಕೂಡ ಪುನರ್ ಬಳಕೆ ಮಾಡಬಹುದು ಎನ್ನುತ್ತಾರೆ ಆ್ಯನ್ ವಿನಯಾ ಥಾಮಸ್.
ಉಡುಪಿ ಶೈಲಿಯ ಸಾಂಬಾರ್ ಪುಡಿ ಮಾಡೋದು ಹೇಗೆ?...
ಜಲಕೃಷಿಯಲ್ಲಿ ಸಸ್ಯಗಳ ಬೇರು, ಎಲೆಯನ್ನು ಸುಲಭವಾಗಿ ಗುರುತಿಸಿ ಅದು ರೋಗಕ್ಕೆ ತುತ್ತಾಗಿದೆಯೇ ಇಲ್ಲವೇ ಎಂಬುದನ್ನು ಗುರುತಿಸಬಹುದು. ಮಹಡಿ ಅಥವಾ ಬಾಲ್ಕನಿಯಲ್ಲಿ ಈ ಕೃಷಿ ಮಾಡುವುದರಿಂದ ಮನೆ ಅಥವಾ ಕಟ್ಟಡ ತಂಪಾಗಿರುತ್ತದೆ. ಈ ಪದ್ಧತಿಯಲ್ಲಿ ಸಸ್ಯಗಳಿಗೆ ನೀಡುವ ನೀರನ್ನು 15 ದಿನಕ್ಕೊಮ್ಮೆ ಬದಲಿಸಿದರೆ ಸಾಕು. ಎನ್‌ಎಫ್‌ಟಿ(ನ್ಯೂಟ್ರಿಯೆಂಟ್ ಫಿಲ್ಮ್ ಟೆಕ್ನಿಕ್) ಸಮತೋಲನ ಕಾಯ್ದುಕೊಳ್ಳಬೇಕು. ಸಸ್ಯಗಳನ್ನು ಅಳವಡಿಸಲಾಗಿರುವ ಪೈಪ್‌ನಲ್ಲಿ ಬೇರುಗಳಿಗೆ ತಗುಲಿದಂತೆ ನೀರು ಹರಿಯುತ್ತಿರುವಂತೆ ನೋಡಿಕೊಳ್ಳಬೇಕು. ಪ್ರತಿದಿನ ಇಸಿ(ಎಲೆಕ್ಟ್ರಿಕಲ್ ಕಂಡೆಕ್ಟಿಂಗ್) ಮತ್ತು ನೀರಿನ ಪಿಎಚ್ ಮಟ್ಟವನ್ನು ಪರಿಶೀಲಿಸುತ್ತಿರುವುದು ಅವಶ್ಯಕ. ಪ್ರತಿ ಬೆಳೆಗೆ ಇಸಿ ಮತ್ತು ಪಿಎಚ್ ಬೇರೆ ಬೇರೆ ಇರುತ್ತದೆ.
ಬೇಕಿರುವ ಉಪಕರಣಗಳು : ವಾಟರ್ ಪಂಪ್, ಏರ್‌ಪಂಪ್, ಪೈಪ್‌ಗಳು, 50 ಲೀಟರ್‌ನ ವಾಟರ್ ಟ್ಯಾಂಕ್, ನೆಟ್‌ಪಾಟ್ಸ್, 21 ಪಾಟ್‌ಗಳು(ಪೈಪ್ ಅಳತೆಗೆ ತಕ್ಕಂತೆ ಅದನ್ನು ಹೆಚ್ಚು ಮಾಡಿಕೊಳ್ಳಬಹುದು.) ಈ ಹೈಡ್ರೋಪೋನಿಕ್ಸ್ ಕೃಷಿಗೆ ಬೇಕಾದ ಉಪಕರಣಗಳು ಅರ್ಬನ್ ಫಾರ್ಮಿಂಗ್ ಅಂಡ್ ಸಲ್ಯೂಷನ್ ಸಂಸ್ಥೆಯಲ್ಲಿ ದೊರೆಯುತ್ತವೆ. ಹೆಚ್ಚಿನ ಮಾಹಿತಿಗೆ ಮೊಬೈಲ್: 9886398948 ಸಂಪರ್ಕಿಸಬಹುದು.
ಅಕ್ಟೋಬರ್ 25ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: