ಖಗೋಳ ಛಾಯಾಗ್ರಹಣದ ಕೆಲವು ಗುಟ್ಟುಗಳು!

By Kannadaprabha News  |  First Published Oct 20, 2019, 3:38 PM IST

ರಾತ್ರಿ ಆಕಾಶದ ಛಾಯಾಚಿತ್ರ ತೆಗೆಯುವುದೇನು ಮಹಾ ಕಾರ್ಯ, ಒಂದು ಡಿಎಸ್‌ಎಲ್ ಆರ್ ಕ್ಯಾಮೆರಾಗೆ ಒಂದು ವೈಡ್-ಆಂಗಲ್ ಲೆನ್ಸ್ ಹಾಕಿ, ಟ್ರೈಪಾಡ್‌ನ ಮೇಲಿರಿಸಿ ಮನೆಯ ಹೊರಗೆ ತೆಗೆದುಕೊಂಡು ಹೋಗಿ ಆಕಾಶಕ್ಕೆ ತೋರಿಸಿದರೆ ಮುಗಿಯಿತು, ಮೂಗಿನ ಮೇಲೆ ಬೆರಳನ್ನಿರಿಸಿಕೊಳ್ಳುವಂತಹ ಚಿತ್ರಗಳನ್ನು ಯಾರು ಬೇಕಾದರೂ ತೆಗೆಯುತ್ತಾರೆ ಎಂದುಕೊಂಡಿದ್ದರೆ, ಸ್ವಲ್ಪ ತಾಳಿ. ವಾಸ್ತವವಾಗಿ, ಖಗೋಳ ಛಾಯಾಗ್ರಹಣ ಅಥವಾ ಆಸ್ಟ್ರೋಫೋಟೋಗ್ರಫಿ ಅಷ್ಟು ಸರಳವಲ್ಲ. 


ರಾತ್ರಿಯ ಆಕಾಶದಲ್ಲಿ ಹೊಳೆಯುವ ಚಂದ್ರ, ಮೋಡಗಳ ಮರೆಯಲ್ಲಿ ಇಣುಕುವ ಗುರು ಗ್ರಹ, ಭೂಮಿಯಿಂದ ಹಲವು ಬೆಳಕಿನ ವರ್ಷಗಳ ದೂರದಲ್ಲಿರುವ ಬಹುವರ್ಣದ ನೀಹಾರಿಕೆಗಳ ಚಿತ್ರಗಳು ಎಲ್ಲರನ್ನೂ ರೋಮಾಂಚನಗೊಳಿಸುವ ಸಾಮರ್ಥ್ಯವನ್ನು ಹೊಂದಿವೆ. ದಿನಪತ್ರಿಕೆಗಳಲ್ಲಿ, ಇಂಟರ್ನೆಟ್ಟಿನಲ್ಲಿ ಬಾಹ್ಯಾಕಾಶದ ಚಿತ್ರಗಳನ್ನು, ನಕ್ಷತ್ರಪುಂಜದ ಅಥವಾ ಗ್ರಹಗಳ ಚಿತ್ರಗಳನ್ನು ಕಂಡಾಗ ನಾನೂ ಒಂದು ದಿನ ಅವುಗಳನ್ನು ಸೆರೆಹಿಡಿಯಬಹುದೆಂಬ ಕಲ್ಪನೆಯೂ ಬಂದಿರಲಿಲ್ಲ.

ಕಳೆದ ವರ್ಷ ಅಚಾನಕ್ಕಾಗಿ ಕೆಲವು ಗೆಳೆಯರೊಡನೆ ಬಾಹ್ಯಾಕಾಶದ ಚಿತ್ರಗಳನ್ನು ತೆಗೆಯಲು ಹೋಗುತ್ತಿದ್ದೇವೆ, ನೀವೂ ಬರುತ್ತೀರಾ ಎಂದು ಕೇಳಿದಾಗ ಅಳುಕುತ್ತಲೇ ಅವರ ಜೊತೆ ಹೋಗಲು ಒಪ್ಪಿದೆ. ಪ್ರತಿಯೊಂದರಲ್ಲೂ ನಾಲ್ಕು ಮಂದಿಯನ್ನು ಹೊತ್ತು ಹತ್ತನ್ನೆರಡು ಕಾರುಗಳು ಕತಾರಿನ ರಾಜಧಾನಿ ದೋಹಾದಿಂದ ಕತಾರ್-ಸೌದಿ ಅರೇಬಿಯಾದ ಗಡಿಯಲ್ಲಿರುವ ಅಲ್ -ಅಮ್ರಿಯಕ್ಕೆ ಹೊರಟಾಗ ಸಂಜೆ 6.30 . ಸುಮಾರು ಒಂದೂವರೆ ಗಂಟೆ ಪ್ರಯಾಣದ ಬಳಿಕ 100  ಕಿಮಿ ದೂರದಲ್ಲಿರುವ ನಿರ್ಜನ ಪ್ರದೇಶ ಅಲ್-ಅಮ್ರಿಯ ತಲುಪುವಷ್ಟರಲ್ಲಿ ಕತ್ತಲಾವರಿಸಿಕೊಂಡಿತ್ತು. ಅಲ್ಲಿ ಮತ್ತೆ ಮುಖ್ಯ ರಸ್ತೆಯಿಂದ ೧೦ ಕಿಮಿ ಮರಳುಗಾಡಿನೊಳಗೆ ಒಳಗೆ ಪ್ರಯಾಣ ಮಾಡಬೇಕು ಎಂದಾಗ ಎಲ್ಲಾ ಕಾರುಗಳೂ ಒಂದರ ಹಿಂದೆ ಒಂದು ಇರುವೆಗಳ ಹಾಗೆ ೨೦-೩೦ ಕಿಮಿ ವೇಗದಲ್ಲಿ ಮೆಲ್ಲಗೆ ಚಲಿಸತೊಡಗಿದವು.

Tap to resize

Latest Videos

undefined

ಮಂಗಳನಲ್ಲಿತ್ತು ಉಪ್ಪು ಸರೋವರ: ಅಂಗಾರಕ ಅದಿನ್ನೆಷ್ಟು ಕುತೂಹಲಗಳ ಆಗರ?

ನನಗೆ ಮಲಯಾಳಂ ಅರ್ಥವಾಗುವುದಿಲ್ಲವೆಂದುಕೊಂಡು ಗುಂಪಿಗೆ ಹೊಸದಾಗಿ ಸೇರಿದ್ದ ಹುಡುಗನೊಬ್ಬ, ‘ಗಾಡಿಯಲ್ಲಿ ಚೇಚಿ ಇರುವುದರಿಂದ ಭಯವಿಲ್ಲ ಅಲ್ಲವೇ ಚೇಟ..’ ಎಂದು ಗಾಡಿ ಓಡಿಸುತ್ತಿದ್ದ ಗೆಳೆಯನನ್ನು ಮಲಯಾಳಂನಲ್ಲಿ ಕೇಳಿದ. ಕಾರಿನಲ್ಲಿದ್ದ ಇತರರು ಮಾತು ಮುಂದುವರೆಸದಂತೆ ಅವನನ್ನು ತಡೆದರು. ನಾನು ವಿಷಯವೇನೆಂದು ಕೇಳಿದಾಗ ಏನಿಲ್ಲವೆಂದು ಮಾತನ್ನು ಬೇರೆಡೆಗೆ ತಿರುಗಿಸಿದರು. ರಾತ್ರಿ ಎಂಟೂವರೆ ಸುಮಾರಿಗೆ ಮರಳಿನ ಗುಡ್ಡಗಳಿದ್ದ ಪ್ರದೇಶ ತಲುಪಿದ ನಾವು ಟ್ರೈಪಾಡ್ ಮೇಲೆ ಕ್ಯಾಮೆರಾಗಳನ್ನು ಇರಿಸಿ ಯುದ್ಧಕ್ಕೆ ಸಜ್ಜಾಗಿ ನಿಂತೆವು. ದೂರದೂರಕ್ಕೂ ಗಾಢಾಂಧಕಾರ, ಗವ್ವೆನ್ನುವ ಅಮಾವಾಸ್ಯೆ ಕತ್ತಲು ಅಂಥದ್ದರಲ್ಲಿ ಫೋಕಸ್ ಮಾಡುವ ರೀತಿ ಹೇಗೆ? ಕತ್ತಲಿಗೆ ಕಣ್ಣುಗಳು ಹೊಂದಿಕೊಳ್ಳಲು ಹದಿನೈದು ಇಪ್ಪತ್ತು ನಿಮಿಷಗಳೇ ಬೇಕಾದವು.

ಕತ್ತಲಿಗೆ, ಕಣ್ಣು ಮನಸ್ಸುಗಳೆರಡೂ ಹೊಂದಿಕೊಂಡ ಮೇಲೆ, ಸುತ್ತಮುತ್ತಲಿರುವ ಪ್ರದೇಶ ನಕ್ಷತ್ರಗಳ ಬೆಳಕಿನಲ್ಲಿ ತನ್ನದೇ ರೀತಿಯಲ್ಲಿ ಬೆಳಗುತ್ತಿರುವಂತೆ ಭಾಸವಾಯಿತು. ಮೊಬೈಲಿನ ಬೆಳಕಿನ ಸಹಾಯದೊಂದಿಗೆ, ಕ್ಷೀರಪಥದ ದಿಕ್ಕಿನಲ್ಲಿ ಇನ್‌ಫಿನಿಟಿಗೆ ಫೋಕಸ್ ಮಾಡಿ ಮರಳಿನ ಪುಟ್ಟ ಗುಡ್ಡವೊಂದನ್ನು ಮುನ್ನೆಲೆ ಮಾಡಿಕೊಂಡು, ಶಟರ್ ವೇಗವನ್ನು 30 ಸೆಕೆಂಡ್ ಗೆ ತಗ್ಗಿಸಿ, ಎರಡು ಸೆಕೆಂಡ್ ಟೈಮರ್ ಹಾಕಿ, ಮೆಲ್ಲನೆ ಕ್ಯಾಮೆರಾ ಟ್ರಿಗರ್ ಮಾಡಿ ಕ್ಯಾಮೆರಾದ ಹಿಂದೆ  ಕುಕ್ಕರುಗಾಲಿನಲ್ಲಿ ಕುಳಿತು ಚಿತ್ರಕ್ಕಾಗಿ ಧ್ಯಾನಸ್ಥಳಾದೆ. ಕ್ಯಾಮೆರಾ ಸೆರೆ ಹಿಡಿದ ಮೊದಲ ಚಿತ್ರದಲ್ಲಿ ಬಂದ ಕ್ಷೀರಪಥವನ್ನು ಕಂಡಾಗ ನರನಾಡಿಗಳಲ್ಲಿ ವಿದ್ಯುತ್ ಸಂಚಲನವಾದಂತೆ ಮೈಮೇಲಿನ ರೋಮ ರೋಮಗಳೂ ಸೆಟೆದು ನಿಂತವು.

ಆದರೆ ನಕ್ಷತ್ರಗಳು ಚುಕ್ಕಿಯ ಹಾಗಿರದೆ ಟ್ರೇಲ್ ಗಳ ಹಾಗಿರುವುದು ಕಂಡು, ಕ್ಯಾಮೆರಾದ ಶಟರ್ ವೇಗವನ್ನು ೨೦ ಸೆಕೆಂಡ್ ಗೆ ತಗ್ಗಿಸಿ ಮತ್ತೆ ಧ್ಯಾನಸ್ಥಳಾದೆ. ಕ್ಷೀರಪಥವನ್ನು ಮೊದಲ ಬಾರಿಗೆ ಸರಿಯಾದ ಹಾಗೆ ಸೆರೆಹಿಡಿದ ಆ ಕ್ಷಣದಲ್ಲಿ ನನಗೇ ಅರಿವಿಲ್ಲದ ಹಾಗೆ ಸಂತಸದಲ್ಲಿ ಕಣ್ಣು ತುಂಬಿ ಬಂದವು, ಮನಸ್ಸು ಪುಟ್ಟ ಮಗುವಿನ ಹಾಗೆ ಖುಷಿ ಪಡುತ್ತಿತ್ತು. ಅಲ್ಲಿಂದಾಚೆಗೆ ವಿವಿಧ ರೀತಿಯ ಕಂಪೋಸಿಷನ್ ಗಳಲ್ಲಿ, ಮುಂಜಾನೆಯವರೆಗೆ ಸುಮಾರು ಐನೂರಕ್ಕೂ ಹೆಚ್ಚು ಚಿತ್ರಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದವು.

ಆ ರಾತ್ರಿ ನಾನು ತೆಗೆದ ಚಿತ್ರಗಳು ಹಬಲ್ ಮತ್ತಿತ್ತರ ಆಕಾಶನೌಕೆಗಳು ತೆಗೆದ ಭವ್ಯ ಫೋಟೋಗಳ ಹಾಗಿಲ್ಲದಿದ್ದರೂ, ಮೊದಲ ಪ್ರಯತ್ನದಲ್ಲೇ ದೊರೆತ ಫಲಿತಾಂಶ ಬಾಹ್ಯಾಕಾಶದ ಚಿತ್ರಗಳ ಬಗೆಗಿನ ನನ್ನ ಆಸಕ್ತಿಯನ್ನು ಮತ್ತಷ್ಟು ಇಮ್ಮಡಿಗೊಳಿಸಿತು. ಅದಾದ ಬಳಿಕ ಪ್ರತಿ ತಿಂಗಳೂ ಕ್ಷೀರಪಥದ ವಿವಿಧ ಚಿತ್ರಗಳನ್ನು ತೆಗೆಯಲು ವಿವಿಧ ಸ್ಥಳಗಳಿಗೆ ಹೋಗುವುದು ಮಾಮೂಲಿಯಾಯಿತು. ಕಬ್ಬಿಣದ ಕಡಲೆ ರಾತ್ರಿ ಆಕಾಶದ ಛಾಯಾಚಿತ್ರ ತೆಗೆಯುವುದೇನು ಮಹಾ ಕಾರ್ಯ, ಒಂದು ಡಿಎಸ್‌ಎಲ್ ಆರ್ ಕ್ಯಾಮೆರಾಗೆ ಒಂದು ವೈಡ್-ಆಂಗಲ್ ಲೆನ್ಸ್ ಹಾಕಿ, ಟ್ರೈಪಾಡ್‌ನ ಮೇಲಿರಿಸಿ ಮನೆಯ ಹೊರಗೆ ತೆಗೆದುಕೊಂಡು ಹೋಗಿ ಆಕಾಶಕ್ಕೆ ತೋರಿಸಿದರೆ ಮುಗಿಯಿತು, ಮೂಗಿನ ಮೇಲೆ ಬೆರಳನ್ನಿರಿಸಿಕೊಳ್ಳುವಂತಹ ಚಿತ್ರಗಳನ್ನು ಯಾರು ಬೇಕಾದರೂ ತೆಗೆಯುತ್ತಾರೆ ಎಂದುಕೊಂಡಿದ್ದರೆ, ಸ್ವಲ್ಪ ತಾಳಿ.

ಮಂಗಳನ ಅಂಗಳದಲ್ಲಿ ಜೀವಿಗಳಿವೆ: ನಾಸಾ ವಿಜ್ಞಾನಿಯ ಅಚ್ಚರಿಯ ಘೋಷಣೆ!

ವಾಸ್ತವವಾಗಿ, ಖಗೋಳ ಛಾಯಾಗ್ರಹಣ ಅಥವಾ ಆಸ್ಟ್ರೋಫೋಟೋಗ್ರಫಿ ಅಷ್ಟು ಸರಳವಲ್ಲ. ನಕ್ಷತ್ರಗಳನ್ನು ಅಥವಾ ಗ್ರಹಗಳನ್ನು ಇಂಟರ್‌ನೆಟ್ಟಿನಲ್ಲಿ ಕಾಣುವ ಹಾಗೆ ಮನಸೂರೆಗೊಳ್ಳುವ ಚಿತ್ರವನ್ನಾಗಿಸಲು, ಉತ್ತಮ ಸ್ಥಳ, ಸರಿಯಾದ ಕ್ಯಾಮೆರಾ ಮತ್ತು ಲೆನ್ಸ್, ಮುಖ್ಯವಾಗಿ ನಮ್ಮ ಚಿತ್ರದ ವಿಷಯ ಏನೆಂಬುದರ ಸರಿಯಾದ ಕಲ್ಪನೆ ಇರಬೇಕು. ಮೊದಲ ಸಲ ನಿಗದಿತ ಸ್ಥಳಕ್ಕೆ ಹೊರಡುವ ಮುನ್ನ ನಾನು ಬೇಕಾಗಿರುವ ಕ್ಷೀರಪಥದ ತಕ್ಕ ಮಟ್ಟಿಗೆ ಇಂಟರ್ನೆಟ್ಟಿನಲ್ಲಿ ಓದಿಕೊಂಡೆ. ಸ್ಫೂರ್ತಿಗಾಗಿ, ಇತರರು ಈಗಾಗಲೇ ತೆಗೆದ ಕ್ಷೀರಪಥದ ಛಾಯಾಚಿತ್ರಗಳನ್ನು ನೋಡಿ ತಲೆ ತುಂಬಿಕೊಂಡೆ.

ಆಸ್ಟ್ರೋಫೋಟೋಗ್ರಫಿ ಬಹಳ ಕಷ್ಟ, ಬಾಹ್ಯಾಕಾಶದ ಬೆನ್ನು ಹತ್ತಿದವರಿಗೆ ಗೊತ್ತು ಅದು ಕಬ್ಬಿಣದ ಕಡಲೆಯೆಂದು. ಪ್ರತಿಯೊಂದೂ ಸರಿಯಾಗಿರಬೇಕು, ಕ್ಯಾಮೆರಾ ಅಥವಾ ಟೆಲಿಸ್ಕೋಪ್ ಚೂರೂ ಅಲುಗಾಡುವ ಹಾಗಿಲ್ಲ. ಕ್ಯಾಮೆರಾದ ಸೆಟ್ಟಿಂಗ್‌ಗಳಲ್ಲಿ ಅಲ್ಪ ವ್ಯತ್ಯಾಸವಾದರೂ ಚಿತ್ರಗಳು ಸರಿ ಬರುವುದಿಲ್ಲ. ನಾವು ತೆಗೆಯಬೇಕೆಂಬ ಗ್ರಹಗಳು ಅಥವಾ ನಕ್ಷತ್ರಗಳು ಆಗಾಗ್ಗೆ ಬಹಳ ದೂರದಲ್ಲಿ ಮಸುಕಾಗಿದ್ದು, ಚಿತ್ರ ತೆಗೆದ ನಂತರವಷ್ಟೇ ಅವುಗಳನ್ನು ನೋಡಲು ಸಾಧ್ಯವಾಗುವುದರಿಂದ ಅವುಗಳನ್ನು ಕ್ಯಾಮೆರಾದಲ್ಲಿ ಅಥವಾ ಟೆಲಿಸ್ಕೋಪಿನಲ್ಲಿ ಕೇಂದ್ರೀಕರಿಸುವುದು ಮತ್ತೊಂದು ದುಃಸ್ವಪ್ನ.

ಇಷ್ಟೆಲ್ಲಾ ಕಷ್ಟವಿರುವಾಗ ಬಾಹ್ಯಾಕಾಶದ ಚಿತ್ರಗಳನ್ನು ತೆಗೆಯಲೇ ಬೇಕೆನ್ನುವ ಹುಚ್ಚಿಗೆ ಕಾರಣವೂ ಇದೆ. ನಾವು ತೆಗೆಯುವ ಪ್ರತಿಯೊಂದು ಚಿತ್ರವೂ ಕಂಪ್ಯೂಟರ್ ಡೆಸ್ಕ್‌ಟಾಪ್ನಲ್ಲಿರುವ ಯಾವುದೇ ಹಬಲ್ ವಾಲ್‌ಪೇಪರ್‌ಗಿಂತಲೂ ಮನಸ್ಸಿಗೆ ಆಪ್ತವಾಗುತ್ತದೆ, ಬ್ರಹ್ಮಾಂಡದ ವಿಶಾಲತೆಯಲ್ಲಿ ತೇಲುತ್ತಿರುವ ಗ್ರಹ ನಕ್ಷತ್ರಗಳನ್ನು ಹೆಚ್ಚು ನೈಜವಾಗಿಸುತ್ತದೆ. ಕ್ಷೀರಪಥ ಅಥವಾ ಆಕಾಶಗಂಗೆಯ ವೈಭವವನ್ನು ಆಕಾಶದಲ್ಲಿ ನೋಡುವುದು, ಕ್ಯಾಮೆರಾದಲ್ಲಿ ಸೆರೆ ಹಿಡಿಯುವುದು ಒಂದು ವಿಸ್ಮಯಕಾರಿ ಸಂಗತಿ. ಕಾರಿರುಳಿನಲ್ಲಿ ಕಾಣುವ ಸೊಬಗಿನ ನಕ್ಷತ್ರಪುಂಜದ ಸಾಮರ್ಥ್ಯದೆದುರು ನಾವೆಷ್ಟು ಚಿಕ್ಕವರು ಎನಿಸಿಬಿಡುತ್ತದೆ.

ಪೂರ್ವ ತಯಾರಿ

ಪ್ರಯತ್ನ ಪಟ್ಟರೆ ಕ್ಷೀರಪಥದ ಚೆಲುವನ್ನು ಸೆರೆಹಿಡಿಯುವುದು ಅಂದುಕೊಂಡಷ್ಟು ಕಷ್ಟವೇನಲ್ಲ, ಆದರೆ ಅದಕ್ಕೆ ತಕ್ಕನಾದ ತಯಾರಿಗಳು ಬೇಕೇ ಬೇಕಾಗುತ್ತವೆ. ಕ್ಷೀರಪಥವನ್ನು ಸೆರೆಹಿಡಿಯುವಲ್ಲಿ ಸುಮಾರು 20 % ಪಾತ್ರ ತಂತ್ರದ್ದಾದರೆ, 30 % ಸರಿಯಾದ ಗೇರ್ ಮತ್ತು 50% ಪಾತ್ರ ಪೂರ್ವ ತಯಾರಿಯದ್ದಾಗಿರುತ್ತದೆ. ಹಗಲಿನಲ್ಲಿ ಸರಿಯಾದ ಪ್ರದೇಶವನ್ನು ಹುಡುಕಿಕೊಳ್ಳುವುದು ಎಷ್ಟು ಮುಖ್ಯವೋ, ರಾತ್ರಿಯಲ್ಲಿ ಬಳಸಲು ಉತ್ತಮ ಸೆಟ್ಟಿಂಗ್ ಹುಡುಕಿಕೊಳ್ಳುವುದೂ ಅಷ್ಟೇ ಮುಖ್ಯ. ಏಕೆಂದರೆ, ರಾತ್ರಿಯ ಹೊತ್ತು ಚಿತ್ರಗಳನ್ನು ತೆಗೆಯುವುದು ಆಸಕ್ತಿಕರವಾದರೂ, ಆ ಸಮಯದಲ್ಲಿ ಎಲ್ಲವೂ ಬದಲಾಗುತ್ತವೆ - ಭೂದೃಶ್ಯ, ಬಣ್ಣಗಳು, ಬೆಳಕು ಎಲ್ಲವೂ ಹಗಲಿನ ಸಮಯಕ್ಕಿಂತ ಭಿನ್ನವಾಗಿರುತ್ತವೆ.

ಸ್ಥಳ ಒಂದೇ ಆದರೂ ರಾತ್ರಿಯ ಹೊತ್ತಿನಲ್ಲಿ ಬಹಳ ಭಿನ್ನವಾಗಿಬಿಡುತ್ತದೆ. ಬೆಳಗಿನ ಹೊತ್ತಿನಲ್ಲಿ ಬಳಸುವ ಸೆಟ್ಟಿಂಗ್‌ಗಳು ರಾತ್ರಿಯಲ್ಲಿ ಕೆಲಸಕ್ಕೆ ಬರುವುದಿಲ್ಲ. ಆ್ಯಪ್‌ಗಳ ನೆರವು ಆಕಾಶದ ತುಂಬಾ ನಕ್ಷತ್ರಗಳು ಇರುವಾಗ, ಅವುಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುವುದರಲ್ಲಿ ಏನಿದೆ ಕಷ್ಟವೆಂದುಕೊಂಡರೆ ಅಲ್ಲೇ ತಪ್ಪಾಗುವುದು. ತಲೆಯ ಮೇಲೆ ಮಿನುಗುವ ಈ ನಕ್ಷತ್ರಗಳ ಚಿತ್ರಗಳನ್ನು ತೆಗೆಯುವುದು ಎಷ್ಟು ಸುಲಭವೋ, ಅಷ್ಟೇ ಕಠಿಣವೂ ಹೌದು. ಅವುಗಳ ಚಿತ್ರ ತೆಗೆಯುವುದು ಸುಲಭ, ಏಕೆಂದರೆ ಆಗಸದ ತುಂಬಾ ಎಣಿಸಲಾರದಷ್ಟು ಇವೆ. ಕ್ಯಾಮೆರಾವನ್ನು ಆಕಾಶಕ್ಕೆ ತೋರಿಸಿ, ಲಾಂಗ್ ಎಕ್ಸ್‌ಪೋಷರ್ ಬಳಸಿದರೆ ಮುಗಿಯಿತು, ನಕ್ಷತ್ರದ ಚಿತ್ರ ರೆಡಿ. ಆದರೆ, ಇಲ್ಲಿ ನಮ್ಮನ್ನು ಮೋಸಗೊಳಿಸುವ ವಿಚಾರವೊಂದಿದೆ.

ನಕ್ಷತ್ರಗಳು ಸ್ವಾಭಾವಿಕವಾಗಿ ಮಸುಕಾಗಿರುತ್ತವೆ, ಬೀದಿ ದೀಪಗಳ ಅಥವಾ ಹತ್ತಿರದ ನಗರದ ಕಣ್ಣು ಕೋರೈಸುವ ದೀಪಗಳ ಹೊಳಪಿನಲ್ಲಿ ಕಣ್ಮರೆಯಾಗಿಬಿಡುತ್ತವೆ. ಈ ಬೆಳಕಿನ ಮಾಲಿನ್ಯ ಸರ್ವವ್ಯಾಪಿಯಾಗಿದ್ದು ಪ್ರಪಂಚದಾದ್ಯಂತ ಎಲ್ಲಾ ಖಗೋಳ ಛಾಯಾಗ್ರಾಹಕರಿಗೂ ತಲೆನೋವು ಕೊಡುವ ಸಂಗತಿಯಾಗಿದೆ. ಗ್ರಹಗಳ, ನಕ್ಷತ್ರಗಳ ಉತ್ತಮ ಫೋಟೋಗಳನ್ನು ತೆಗೆಯಲು ಬೆಳಕಿನ ಮಾಲಿನ್ಯವಿಲ್ಲದೆ ಕತ್ತಲೆಯಾಗಿರುವ ಸ್ಥಳ ಹುಡುಕಿಕೊಂಡು ಹೋಗಲೇಬೇಕು. ಕ್ಷೀರಪಥದ ಫೋಟೋಗಳನ್ನು ತೆಗೆಯಲು ನಗರದ ದೀಪಗಳ ಕಿತ್ತಳೆ ವಲಯದಿಂದ ದೂರ ಹೋಗಬೇಕಾಗುತ್ತದೆ. 

ನಗರಗಳ ಸಮೀಪ ಕ್ಷೀರಪಥದ ಕೆಲವು ಭಾಗಗಳನ್ನು ಸೆರೆಹಿಡಿಯಲು ಸಾಧ್ಯವಾದರೂ, ಅದ್ಭುತವಾದ ಚಿತ್ರಗಳನ್ನು ಪಡೆಯಲು ಬೆಳಕಿನ ಮಾಲಿನ್ಯವಿಲ್ಲದ, ನಿಜವಾಗಿಯೂ ಕತ್ತಲಾದ ಸ್ಥಳವನ್ನು ಕಂಡು ಹಿಡಿಯಬೇಕು. ರಾತ್ರಿಯ ಆಕಾಶವನ್ನು ಚಿತ್ರೀಕರಿಸಲು ಹೊರಡುವ ಮುನ್ನ, ಆ ಸ್ಥಳದ ಬೆಳಕಿನ ಮಾಲಿನ್ಯ ಎಷ್ಟಿದೆ ಎಂದು ತಿಳಿದುಕೊಳ್ಳಬೇಕು. ಅಂತಹ ಸ್ಥಳಗಳನ್ನು ಹುಡುಕಲು ಸಹಾಯ ಮಾಡಲು ಉತ್ತಮ ಸಾಧನಗಳೂ ಇವೆ. ಇದಕ್ಕಾಗಿ ನಾನು ‘ಡಾರ್ಕ್ ಸ್ಕೈ ಫೈಂಡರ್’ ಎಂಬ ಐಫೋನ್ ಅಪ್ಲಿಕೇಶನ್ ಅಲ್ಲದೆ, ‘ಬೋರ್ಟಲ್ ಸ್ಕೇಲ್’ ಎನ್ನುವ ಆ್ಯಪ್‌ನ ನೆರವು ಪಡೆಯುತ್ತೇನೆ.

ಕತ್ತಲಿನ ಸ್ಥಳವಲ್ಲದೆ, ಕ್ಷೀರಪಥದೊಂದಿಗೆ ಹೊಂದುವ ಸ್ಥಳಗಳನ್ನೂ ಹುಡುಕಬೇಕಾಗುತ್ತದೆ. ಸರೋವರಗಳು, ಪ್ರತ್ಯೇಕವಾದ ಮರಗಳು, ಬಂಡೆ ಕಲ್ಲುಗಳು, ಅಥವಾ ಬೆಟ್ಟ ಗುಡ್ಡಗಳಂತಹ ಉತ್ತಮ ಹಿನ್ನೆಲೆ ಇರುವ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳಲು ಗೂಗಲ್ ಮ್ಯಾಪ್ಸ್ ನೆರವಿಗೆ ಬರುತ್ತದೆ. ಖುಷಿ ಮತ್ತು ನಿರಾಸೆ: ಆಸ್ಟ್ರೋಫೋಟೋಗ್ರಫಿಯೊಂದಿಗಿನ ಅನುಭವ ಖುಷಿಯ ಜೊತೆಗೆ ನಿರಾಶಾದಾಯಕವೂ ಆಗಿರುತ್ತದೆ ಎಂದರೆ ಸುಳ್ಳಲ್ಲ. ಈ ಪ್ರಕಾರದ ಛಾಯಾಗ್ರಹಣದಲ್ಲಿ ನಾನು ಒಂದು ವರ್ಷಕ್ಕೂ ಮೇಲೆ ಸಮಯ ವಿನಿಯೋಗಿಸಿದ ಮೇಲೆ ಕಂಡುಕೊಂಡಿರುವ ಸತ್ಯ; ಆಸ್ಟ್ರೋಫೋಟೋಗ್ರಫಿ ಛಾಯಾ ಗ್ರಹಣದ ಅತ್ಯಂತ ಕಠಿಣ ರೂಪ, ಸರಿಯಾದ ಸಂಶೋಧನೆಯಿಲ್ಲದೆ ರಾತ್ರಿ ಹೊರ ಹೋದರೆ ನಿರಾಸೆ ಕಟ್ಟಿಟ್ಟ ಬುತ್ತಿ.

ಸೆಂಟರ್ ಆಫ್ ಮಿಲ್ಕಿ ವೇ ನೋಡಿ: ಅಂತಿಂಥದ್ದಲ್ಲ 'ದೊಡ್ಮನೆ' ಮೋಡಿ!

ಕೆಲವು ರಾತ್ರಿಗಳು ಇತರೆ ರಾತ್ರಿಗಳಿಗಿಂತಲೂ ಹೆಚ್ಚು ಯಶಸ್ವಿಯಾಗುತ್ತವೆ. ನಾವು ಬಯಸಿದಂತಹ ಚಿತ್ರಗಳು ದೊರಕುತ್ತವೆ. ಮತ್ತೆ ಕೆಲವು ರಾತ್ರಿಗಳು ಯಾವ ಚಿತ್ರವೂ ಸರಿಯಾಗಿ ದಕ್ಕದೆ ಮರಳುವುದೂ ಇದೆ. ಆದರೆ ಪ್ರತಿ ಬಾರಿಯೂ ಕತ್ತಲಿನಲ್ಲಿ ಆಗಸದತ್ತ ಮುಖ ಮಾಡಿ ನೆಲದ ಮೇಲೆ ಕುಳಿತಾಗ, ಕ್ಷೀರಪಥ ಅಥವಾ ಆಕಾಶಗಂಗೆಯನ್ನು ಕೇವಲ ಟೆಸ್ಟ್ ಶಾಟ್‌ನಲ್ಲಿ ನೋಡಿದಾಗಲೂ ರೋಮಾಂಚನವಾಗುತ್ತದೆ, ಮೊದಲ ಬಾರಿ ಚಾಕಲೇಟ್ ಸವಿದ ಮಗುವಿನ ಹಾಗೆ ಮನಸ್ಸು ಹುಚ್ಚೆದ್ದು ಕುಣಿಯುತ್ತದೆ.

ರಾತ್ರಿಯ ಆಕಾಶವನ್ನು ನೋಡುವ ಅನುಭವವನ್ನು ಪದಗಳಲ್ಲಿ ವರ್ಣಿಸಲಾಗುವುದಿಲ್ಲ, ಅದನ್ನು ಅನುಭವಿಸಿಯೇ ತಿಳಿಯಬೇಕು. ಹೆಚ್ಚಿನ ಜನರು ಗಮನಿಸದೆ ಇರುವ ಆಕಾಶಕಾಯಗಳ ಸುಂದರವಾದ ಚಿತ್ರಗಳನ್ನು ಸೆರೆ ಹಿಡಿಯುವುದಕ್ಕಿಂತ ತೃಪ್ತಿಕರ ಸಂಗತಿ ಮತ್ತೇನಿದೆ.. ನಕ್ಷತ್ರಗಳನ್ನು, ಗ್ರಹಗಳನ್ನು ಚಿತ್ರಗಳಲ್ಲಿ ಸೆರೆಹಿಡಿಯಲು ಮೋಡವಿಲ್ಲದ ಸ್ಪಷ್ಟ ಆಕಾಶ ಬೇಕೇ ಬೇಕು. ಹಾಗಾಗಿ, ಎಲ್ಲಾ ಖಗೋಳ ಛಾಯಾಗ್ರಾಹಕರಿಗೂ ಹವಾಮಾನದ ಜೊತೆಯಲ್ಲಿ ಒಂದು ರೀತಿಯ ಅವಿನಾಭಾವ ಪ್ರೀತಿ-ದ್ವೇಷದ ಸಂಬಂಧವಿರುತ್ತದೆ.

ಕೆಲವೊಮ್ಮೆ ಸ್ಪಷ್ಟವಾದ ಆಕಾಶವನ್ನು ತೋರಿಸುವ ಮುನ್ಸೂಚನೆಯನ್ನು ನೋಡಿ, ಸ್ಥಳಕ್ಕೆ ಹೋದರೆ ಸಂಪೂರ್ಣವಾಗಿ ಮೋಡ ಕವಿದು ನಿರಾಸೆಯಾಗುತ್ತದೆ. ಅಂತಹ ಸಮಯದಲ್ಲಿ ಟೈಮ್ ಲ್ಯಾಪ್ಸ್ ಅಥವಾ ಸ್ಟಾರ್ ಟ್ರೇಲ್‌ಗಳ ಚಿತ್ರಗಳನ್ನು ತೆಗೆದುಕೊಂಡು ಮರಳುತ್ತೇನೆ.

ಕ್ಷೀರಪಥದ ಉತ್ತಮ ಸಮಯ:

ಒಂದೇ ಸ್ಥಳದಲ್ಲಿ ಕ್ಷೀರಪಥವನ್ನು ವರ್ಷವಿಡೀ ಸೆರೆ ಹಿಡಿಯಲು ಸಾಧ್ಯವಿಲ್ಲ. ಆದರೆ, ವರ್ಷದ ಯಾವ ಸಮಯದಲ್ಲಾದರೂ ನಿರ್ದಿಷ್ಟ ರಾತ್ರಿಯಲ್ಲಿ ಅದರ ಒಂದು ಭಾಗವನ್ನು ನೋಡಲು ಸಾಧ್ಯವಿದೆ. ಉದಾಹರಣೆಗೆ, ಉತ್ತರ ಗೋಳಾರ್ಧದಲ್ಲಿ, ಕ್ಷೀರಪಥದ ಪ್ರಕಾಶಮಾನವಾದ ಭಾಗವಾದ ಗ್ಯಾಲಕ್ಸಿಯ ಕೋರ್ ಚಳಿಗಾಲದ ತಿಂಗಳುಗಳಲ್ಲಿ ರಾತ್ರಿಯಲ್ಲಿ ಗೋಚರಿಸುವುದಿಲ್ಲ. ಬೇಸಿಗೆಯ ತಿಂಗಳುಗಳಲ್ಲಿ, ಅದರಲ್ಲೂ ಏಪ್ರಿಲ್‌ನಲ್ಲಿ ನಿಚ್ಚಳವಾಗಿ ಗೋಚರಿಸುತ್ತದೆ. ನಾವಿರುವ ಸ್ಥಳದಲ್ಲಿ ಕ್ಷೀರಪಥವನ್ನು ವೀಕ್ಷಿಸಲು, ಸೆರೆ ಹಿಡಿಯಲು ಉತ್ತಮ ಸಮಯ ಯಾವುದೆಂದು ತಿಳಿಸಲು ಹಲವು ಅಪ್ಲಿಕೇಶನ್ ಗಳಿವೆ.

ಕ್ಷೀರಪಥವನ್ನು ಚಿತ್ರೀಕರಿಸುವಾಗ ಪರಿಗಣಿಸಬೇಕಾದ ಕೊನೆಯ ಮತ್ತು ಮುಖ್ಯವಾದ ವಿಷಯವೆಂದರೆ ಚಂದ್ರ ಯಾವ ಹಂತದಲ್ಲಿದ್ದಾನೆ ಎನ್ನುವುದು. ಸಾಮಾನ್ಯವಾಗಿ, ಕ್ಷೀರಪಥವನ್ನು ಸೆರೆ ಹಿಡಿಯಲು ಚಂದ್ರನಿಲ್ಲದ ನಿಚ್ಚಳ ಆಕಾಶ ಬೇಕಾಗುತ್ತದೆ. ಚಂದ್ರನ ಬೆಳಕಿನಲ್ಲಿ ನಕ್ಷತ್ರಗಳು ಮಸುಕಾಗಿ, ಕ್ಷೀರಪಥ ಸರಿಯಾಗಿ ಕಾಣಿಸುವುದಿಲ್ಲ. ಚಂದ್ರನ ಪಥವನ್ನು ಗುರುತಿಸಲು ಮತ್ತು ಖಗೋಳ ಚಿತ್ರಗಳನ್ನು ತೆಗೆಯಲು ಯೋಜಿಸಲು ಉಪಯೋಗವಾಗಲು ‘ಸ್ಕೈ ವ್ಯೆ’ ಅಪ್ಲಿಕೇಶನ್
ಬಳಸಬಹುದು.

ನಮ್ಮ ಸುರಕ್ಷತೆ: ಮೊದಲ ಸಲ ಆಸ್ಟ್ರೋಫೋಟೋಗ್ರಫಿಗೆ ಹೋಗುವಾಗ ಗೆಳೆಯನೊಬ್ಬ ಕೇಳಿದ ಪ್ರಶ್ನೆಗೆ ಬೆಳಗ್ಗೆ ಮರಳುವಾಗ ಉತ್ತರ ದೊರಕಿತು. ಆ ನಿರ್ಜನ ಪ್ರದೇಶದಲ್ಲಿ ಬಿಳಿಯ ವಸ್ತ್ರದಲ್ಲಿರುವ ಮಹಿಳೆಯೊಬ್ಬಳ ಆಕೃತಿ ರಾತ್ರಿಯ ಸಮಯದಲ್ಲಿ ಕಾರಿನ ಪ್ರಯಾಣಿಕರಿಗೆ ಕಾಣಿಸಿಕೊಂಡಿರುವ ಬಗ್ಗೆ ತಿಳಿದು ಮೈ ಜುಮ್ಮೆಂದಿತು. ಅದಾದ ಬಳಿಕ ಮೂರ್ನಾಲ್ಕು ಸಲ ಅದೇ ಪ್ರದೇಶಕ್ಕೆ ಭೇಟಿ ನೀಡಿದೆವಾದರೂ, ನಮಗೆ ಆ\ ಅನುಭವವಾಗಲಿಲ್ಲ. ಆದರೆ ನಮ್ಮ ಗುಂಪಿನಲ್ಲಿದ್ದ ಗೆಳೆಯನೊಬ್ಬನಿಗೆ ಮೂರು ನಾಲ್ಕು ಬಾರಿ ಅಂತಹ ಅನುಭವಗಳು ಇತರೆ ಸ್ಥಳಗಳಲ್ಲಿ ಆಗಿದ್ದವು.

ಒಮ್ಮೆ ಎಷ್ಟು ಪ್ರಯತ್ನ ಪಟ್ಟರೂ, ಮರಳುಗಾಡಿನಿಂದ ಹೊರಬರಲಾಗದೆ, ಎಷ್ಟು ಸುತ್ತಿದರೂ ಮತ್ತೆ ಮತ್ತೆ ಪಾಳು ಬಿದ್ದ ಹಳ್ಳಿಯೊಂದರ ಬಳಿಗೆ ಕಾರು ಬಂದು ನಿಲ್ಲುವ ಅನುಭವದಿಂದ ಹಿಡಿದು, ಕ್ಷೀರಪಥದ ಚಿತ್ರ ತೆಗೆಯುವ ಸಮಯದಲ್ಲಿ ಪಕ್ಕದಲ್ಲಿ ಯಾರೋ ನಿಂತು ನೋಡುವ ಅನುಭವ, ಮತ್ತೊಮ್ಮೆ ಕಾರಿನ ಬಳಿ ನಿಂತು ಯಾರೋ ಮಾತನಾಡುತ್ತಿರುವ ಅನುಭವಗಳ ಬಗ್ಗೆ ತಿಳಿದಾಗ ಚಳಿಯಲ್ಲೂ ಬೆವರು ಬಂದದ್ದು ನಿಜ. ಅಗೋಚರ ಶಕ್ತಿಗಳ ಭಯವೊಂದೆಡೆಯಾದರೆ, ನಿರ್ಜನ ಪ್ರದೇಶಗಳಲ್ಲಿ ಜನರ ಭಯವೂ ಇದ್ದದ್ದೇ. ಇದರ ಜೊತೆಗೆ ಹಾವು, ಚೇಳು, ಜೇಡ, ಕ್ರಿಮಿ ಕೀಟಗಳು, ನರಿಗಳ ಭಯ ಮತ್ತೊಂದೆಡೆ.

ಒಮ್ಮೆಯಂತೂ, ಕಪ್ಪು ಇರುವೆಗಳು ಕಚ್ಚಿ ಕೈ ಕಾಲುಗಳೆಲ್ಲಾ ತುರಿಕೆಯಾಗಿ ಆಸ್ಪತ್ರೆಯ ಕದ ತಟ್ಟಿದ್ದನ್ನು ನೆನೆಸಿಕೊಂಡರೆ, ಆಸ್ಟ್ರೋಫೋಟೋಗ್ರಫಿಯೂ ಬೇಡ, ಇರುವೆಗಳ ಕಡಿತವೂ ಬೇಡವೆನಿಸಿದ್ದಿದೆ. ಆಸ್ಟ್ರೋಫೋಟೋಗ್ರಫಿಯಲ್ಲಿ ನಮ್ಮ ಸುರಕ್ಷತೆಯ ಬಗ್ಗೆ ಸದಾ ಜಾಗೃತವಾಗಿರಬೇಕಾಗುತ್ತದೆ. ರಾತ್ರಿಯ ಹೊತ್ತು ಚಿತ್ರಗಳನ್ನು ತೆಗೆಯಬೇಕಾಗಿರುವುದರಿಂದ ಎಷ್ಟು ಸಾವಧಾನವಾಗಿದ್ದರೂ ಸಾಲದು. ಆಸ್ಟ್ರೋಫೋಟೋಗ್ರಫಿಗೆ ಗೆಳೆಯರೊಡನೆ ಗುಂಪಿನಲ್ಲಿ ಹೋಗುವುದು ಹೆಚ್ಚು ಸುರಕ್ಷಿತ. ಒಂದು ವೇಳೆ ಒಂಟಿಯಾಗಿ ಹೋಗಲು ನಿರ್ಧರಿಸಿದರೆ, ಹೋಗುವ ಸ್ಥಳದ ಬಗ್ಗೆ ನಿಖರವಾದ ಮಾಹಿತಿಯನ್ನು ಯಾರ ಜೊತೆಯಲ್ಲಾದರೂ ಹಂಚಿಕೊಳ್ಳುವುದು ಒಳ್ಳೆಯದು. ನಿಗದಿತ ಸಮಯದಲ್ಲಿ ಅವರು ನಮಗೆ ಕರೆ ಮಾಡಿ ನಮ್ಮ ಸುರಕ್ಷತೆಯ ಬಗ್ಗೆ ತಿಳಿದುಕೊಳ್ಳುವ ಹಾಗೆ ವ್ಯವಸ್ಥೆ ಮಾಡಿಕೊಳ್ಳುವುದು ಬಹಳ ಮುಖ್ಯ. ಯಾವುದೇ ಚಿತ್ರಗಳು ನಮ್ಮ ವೈಯಕ್ತಿಕ ಸುರಕ್ಷತೆಗಿಂತ ಮುಖ್ಯವಲ್ಲ ಎನ್ನುವುದು ಮನಸ್ಸಿನಲ್ಲಿ ಸದಾ ಇದ್ದರೆ  ಮಹಾಯುದ್ಧ ಗೆದ್ದ ಹಾಗೆಯೇ! 

- ಚೈತ್ರಾ ಅಜ್ಜಂಪುರಿ 

click me!