ಗಗನ್ಯಾನ್‌ ಸಂಬಂಧಿತ 1800 ಕೋಟಿಯ ಇಸ್ರೋ ವ್ಯವಸ್ಥೆ ಲೋಕಾರ್ಪಣೆ ಮಾಡಿದ ಮೋದಿ!

By Santosh Naik  |  First Published Feb 27, 2024, 4:43 PM IST

Gaganyaan human space flight mission ಗಗನ್ಯಾನ್ ಮಿಷನ್‌ನ ಗಗನಯಾತ್ರಿಗಳಾಗಿ ಪ್ರಶಾಂತ್ ಬಾಲಕೃಷ್ಣನ್ ನಾಯರ್, ಅಜಿತ್ ಕೃಷ್ಣನ್, ಅಂಗದ್ ಪ್ರತಾಪ್ ಮತ್ತು ಶುಭಾಂಶು ಶುಕ್ಲಾ  ಹೆಸರನ್ನು ಪ್ರಧಾನಿ ಮೋದಿ ಘೋಷಣೆ ಮಾಡಿದರು. ಇವರಿಗೆ ಮೋದಿ ಆಸ್ಟ್ರೋನಟ್ಸ್‌ ವಿಂಗ್‌ಅನ್ನು ನೀಡಿದರು.


ತಿರುವನಂತಪುರ (ಫೆ.27):  ನಾಲ್ವರು ಭಾರತೀಯ ವಾಯುಪಡೆಯ (ಐಎಎಫ್) ಪೈಲಟ್‌ಗಳನ್ನು 2025ರಲ್ಲಿ ಇಸ್ರೋ ನಡೆಸಲಿರುವ ಮಾನವ ಸಹಿತ ಬಾಹ್ಯಾಕಾಶಯಾನಕ್ಕಾಗಿ ತರಬೇತಿ ಪಡೆಯಲಿರುವ ಗಗನಯಾತ್ರಿಗಳಾಗಿ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಘೋಷಣೆ ಮಾಡಿದ್ದಾರೆ. ಗ್ರೂಪ್ ಕ್ಯಾಪ್ಟನ್ ಪ್ರಶಾಂತ್ ಬಾಲಕೃಷ್ಣನ್ ನಾಯರ್, ಗ್ರೂಪ್ ಕ್ಯಾಪ್ಟನ್ ಅಜಿತ್ ಕೃಷ್ಣನ್, ಗ್ರೂಪ್ ಕ್ಯಾಪ್ಟನ್ ಅಂಗದ್ ಪ್ರತಾಪ್ ಮತ್ತು ವಿಂಗ್ ಕಮಾಂಡರ್ ಶುಭಾಂಶು ಶುಕ್ಲಾ ಭಾರತದ ಬಹುನಿರೀಕ್ಷಿತ ಮಾನವ ಸಹಿತ ಬಾಹ್ಯಾಕಾಶ ಯೋಜನೆಯ ಮೊಟ್ಟಮೊದಲ ಗಗನಯಾತ್ರಿಗಳಾಗಿ ನಿಯೋಜಿತರಾಗಿದ್ದಾರೆ. ಫೆಬ್ರವರಿ 27 ರಂದು ತಿರುವನಂತಪುರಂನ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರಕ್ಕೆ (ವಿಎಸ್‌ಎಸ್‌ಸಿ) ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ಮೊದಲ ಬಾರಿಗೆ ಗಗನಯಾತ್ರಿಗಳ ಹೆಸರನ್ನು ಬಹಿರಂಗಪಡಿಸಿದರು. ಮಿಷನ್‌ಗಾಗಿ ಅಂತಿಮ ಸಿಬ್ಬಂದಿಯನ್ನು ಈ ನಾಲ್ವರಿಂದಲೇ ಆಯ್ಕೆ ಮಾಡಲಾಗುತ್ತದೆ. ಕಠಿಣ ಆಯ್ಕೆ ಪ್ರಕ್ರಿಯೆಯ ಮೂಲಕ ಶಾರ್ಟ್‌ಲಿಸ್ಟ್ ಮಾಡಿದ ಇವರು ಈಗಾಗಲೇ, ರಷ್ಯಾದಲ್ಲಿ ಮತ್ತು ನಂತರ ಬೆಂಗಳೂರಿನಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸ್ಥಾಪಿಸಿದ ಗಗನಯಾತ್ರಿ ತರಬೇತಿ ಫೆಸಿಲಿಟಿಯಲ್ಲಿ ಬಾಹ್ಯಾಕಾಶ ಹಾರಾಟದ ವಿವಿಧ ಅಂಶಗಳಲ್ಲಿ ತರಬೇತಿ ಪಡೆಯುತ್ತಿದ್ದಾರೆ. 

ನಿಯೋಜಿತ ಗಗನಯಾತ್ರಿಗಳನ್ನು ಘೋಷಣೆ ಮಾಡಿರುವ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಗಗನ್ಯಾನ್‌ ಮಿಷನ್‌ನ ಸಂಬಂಧಿತ ಆಸ್ಟ್ರೋನಟ್‌ ವಿಂಗ್‌ಗಳನ್ನು ಇವರಿಗೆ ನೀಡಿದರು. ಇಸ್ರೋ ಪ್ರಕಾರ, ಗಗನ್ಯಾನ್ ಕಾರ್ಯಕ್ರಮವನ್ನು ಲೋ ಅರ್ಥ್ ಆರ್ಬಿಟ್ (LEO) ಗೆ ಮಾನವ ಬಾಹ್ಯಾಕಾಶ ಹಾರಾಟದ ಕಾರ್ಯಾಚರಣೆಯನ್ನು ಕೈಗೊಳ್ಳಲು ಸ್ಥಳೀಯ ಸಾಮರ್ಥ್ಯವನ್ನು ಪ್ರದರ್ಶಿಸಲು ವಿನ್ಯಾಸಗೊಳಿಸಲಾಗಿದೆ. ಈ ಮಿಷನ್ ದೀರ್ಘಾವಧಿಯಲ್ಲಿ "ಸುಸ್ಥಿರ ಭಾರತೀಯ ಮಾನವ ಬಾಹ್ಯಾಕಾಶ ಪರಿಶೋಧನೆ ಕಾರ್ಯಕ್ರಮ" ಕ್ಕೆ ದಾರಿ ಮಾಡಿಕೊಡುವ ನಿರೀಕ್ಷೆಯಿದೆ.

ಲೋ ಅರ್ಥ್‌ ಆರ್ಬಿಟ್‌ನಲ್ಲಿ ಮಾನವ ಸಹಿತ ಬಾಹ್ಯಾಕಾಶ ನೌಕೆಯನ್ನು ಕಳಿಸುವ ಮಿಷನ್‌ನ ನಿಟ್ಟಿನಲ್ಲಿ ಇಸ್ರೋ ಈಗಾಗಲೇ ಹಲವು ಪರೀಕ್ಷೆಗಳನ್ನು ಮಾಡುತ್ತಿದೆ. ಇವುಗಳಲ್ಲಿ ಇಂಟಿಗ್ರೇಟೆಡ್ ಏರ್ ಡ್ರಾಪ್ ಪರೀಕ್ಷೆಗಳು, ಟೆಸ್ಟ್ ವೆಹಿಕಲ್ ಮಿಷನ್‌ಗಳು, ಪ್ಯಾಡ್ ಅಬಾರ್ಟ್ ಪರೀಕ್ಷೆಗಳು ಸೇರಿವೆ. ನಮಾನವ ಸಹಿತ ಬಾಹ್ಯಾಕಾಶ ನೌಕೆ ಕಳಿಸುವ ಯೋಜನೆಗೂ ಮುನ್ನ, ಮಾನವ ರಹಿತ ನೌಕೆಗಳನ್ನು ಕೂಡ ಇಸ್ರೋ ಕಳಿಸಲಿದೆ.

ಪ್ರಧಾನಿ ಮೋದಿ ಗಗನ್ಯಾನ್‌ ಮಿಷನ್‌ನ ಪ್ರಗತಿಯನ್ನು ಪರಿಶೀಲನೆ ಮಾಡಿದ್ದಲ್ಲದ,ೆ ಸುಮಾರು ₹1,800 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಿದ ಮೂರು ತಾಂತ್ರಿಕ ಸೌಲಭ್ಯಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಇದು VSSC ನಲ್ಲಿ ಅತ್ಯಾಧುನಿಕ ಟ್ರೈಸಾನಿಕ್ ವಿಂಡ್ ಟನಲ್, ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (PSLV)ಸೌಲಭ್ಯಗಳು ಮತ್ತು ತಮಿಳುನಾಡಿನ ಮಹೇಂದ್ರಗಿರಿಯಲ್ಲಿರುವ ISRO ಪ್ರೊಪಲ್ಷನ್ ಕಾಂಪ್ಲೆಕ್ಸ್ (IPRC) ನಲ್ಲಿ ಸೆಮಿ-ಕ್ರಯೋಜೆನಿಕ್ ಇಂಟಿಗ್ರೇಟೆಡ್ ಇಂಜಿನ್ ಮತ್ತು ಸ್ಟೇಜ್ ಟೆಸ್ಟ್ ಫೆಸಿಲಿಟಿ (SIET) ಅನ್ನು ಒಳಗೊಂಡಿದೆ. 

ಟ್ರೈಸಾನಿಕ್ ವಿಂಡ್ ಟನಲ್,  ರಾಕೆಟ್‌ಗಳು ಮತ್ತು ವಿಮಾನಗಳ ವಾಯುಬಲವೈಜ್ಞಾನಿಕ ಗುಣಲಕ್ಷಣಗಳನ್ನು ನಿರ್ಣಯಿಸಲು ಸ್ಕೇಲ್ ಮಾದರಿಗಳ ಮೇಲೆ ನಿಯಂತ್ರಿತ ಏಕರೂಪದ ಗಾಳಿಯ ಹರಿವನ್ನು ಉತ್ಪಾದಿಸುತ್ತದೆ. ಮುಂಬರುವ ಉಡಾವಣಾ ವಾಹನ ಯೋಜನೆಗಳ ಎಂಡ್‌-ಟು-ಎಂಟ್‌ ವಿನ್ಯಾಸದಲ್ಲಿ ಇಸ್ರೋವನ್ನು ಸ್ವಾವಲಂಬಿಯನ್ನಾಗಿ ಮಾಡಲು ಇದನ್ನು ವಿನ್ಯಾಸಗೊಳಿಸಲಾಗಿದೆ. ಶ್ರೀಹರಿಕೋಟಾದಲ್ಲಿರುವ PSLV ಇಂಟಿಗ್ರೇಷನ್ ಫೆಸಿಲಿಟೀಸ್ (PIF) ಇಸ್ರೋಗೆ ಒಂದು ವರ್ಷದಲ್ಲಿ ಪಿಎಸ್‌ಎಲ್‌ವಿ ಕಾರ್ಯಾಚರಣೆಗಳ ಸಂಖ್ಯೆಯನ್ನು 6 ರಿಂದ 15 ಕ್ಕೆ ಹೆಚ್ಚಿಸುವ ಸಾಮರ್ಥ್ಯವನ್ನು ನೀಡುತ್ತದೆ. ಎಷ್‌ಐಇಟಿಅನ್ನು SCE-2000 ಸೆಮಿ-ಕ್ರಯೋಜೆನಿಕ್ ಎಂಜಿನ್ ಮತ್ತು ಹಂತಗಳನ್ನು ಪರೀಕ್ಷಿಸಲು ಬಳಸಲಾಗುತ್ತದೆ ಮತ್ತು ಇದು ಉಡಾವಣಾ ವಾಹನಗಳ  ಪೇಲೋಡ್ ಸಾಮರ್ಥ್ಯಅನ್ನು ಹೆಚ್ಚಿಸುತ್ತದೆ. 

ಗಗನಯಾನ ಯೋಜನೆಯ ಸ್ಪೇಸ್ ಕ್ಯಾಪ್ಸುಲ್‌ ಸಿಮ್ಯುಲೇಟರ್ ನಿರ್ಮಾಣಕ್ಕೆ ಬೋಯಿಂಗ್ - ಇಸ್ರೋ ಸಹಯೋಗ

ಪ್ರಧಾನಿ ಮೋದಿ ಆಗಮನದ ವೇಳೆ ಇಸ್ರೋ ಚೇರ್ಮನ್‌ ಎಸ್‌ ಸೋಮನಾಥ್‌, ಪ್ರಧಾನಿಗೆ ಗಗನ್ಯಾನ್‌ ಮಿಷನ್‌ ಸಂಬಂಧಿತ ಸಾಧನಗಳನ್ನು ತೋರಿಸಿದರು. ಗಗನ್ಯಾನ್‌ ಕಾರ್ಯಕ್ರಮಕ್ಕಾಗಿ ಅಭಿವೃದ್ಧಿಪಡಿಸಲಾಗಿರುವ  ರೋಬೋಟ್ 'ವ್ಯೋಮಿತ್ರ' ಅನ್ನೂ ಕೂಡ ಮೋದಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ಮುಖ್ಯಮಂತ್ರಿ ಪಿಣರಾಯಿ ವಿಜಯನ್, ವಿದೇಶಾಂಗ ಖಾತೆ ರಾಜ್ಯ ಸಚಿವ ವಿ.ಮುರಳೀಧರನ್ ಉಪಸ್ಥಿತರಿದ್ದರು.

Tap to resize

Latest Videos

ಇಸ್ರೋ ಗಗನಯಾನಕ್ಕೆ ಮಹಿಳೆಯರನ್ನು ಕಳಿಸುವ ಉದ್ದೇಶ

click me!