ಬಾಹ್ಯಾಕಾಶದಿಂದ ಭೂಮಿಗೆ ಸೌರವಿದ್ಯುತ್: ಚೀನಾ ಸಾಹಸ

By Kannadaprabha News  |  First Published Jun 28, 2022, 6:39 AM IST

* ಆಗಸದಲ್ಲಿ ಸೋಲಾರ್‌ ಘಟಕ ಸ್ಥಾಪಿಸಲಿದೆ ಚೀನಾ!

* ಈಗಾಗಲೇ ಘಟಕ ನಿರ್ಮಾಣ ಕಾರ‍್ಯ ಆರಂಭ, 2028ರಲ್ಲಿ ಪೂರ್ಣ

* ಅಂತರಿಕ್ಷ ಸೌರ ಕೇಂದ್ರದಿಂದ ಉಪಗ್ರಹಗಳಿಗೆ ವಿದ್ಯುತ್‌ ರವಾನೆ

* ಭೂಮಿಗೂ ಅಲ್ಲಿಂದ ಸೌರವಿದ್ಯುತ್‌ ಕಳಿಸಲು ವಿಜ್ಞಾನಿಗಳ ಸಿದ್ಧತೆ

* 10 ಕಿಲೋವ್ಯಾಟ್‌ ಘಟಕ ಹಾಟ್‌ಸ್ಪಾಟ್‌ ಮೂಲಕ ಕಾರಾರ‍ಯಚರಣೆ


ನವದೆಹಲಿ(ಜೂ.28): ಅಂತರಿಕ್ಷದಲ್ಲಿ ಒಂದಾದ ಮೇಲೊಂದು ವಿಕ್ರಮಗಳನ್ನು ಸಾಧಿಸುತ್ತಿರುವ ಚೀನಾ ಇದೀಗ ಬಾಹ್ಯಾಕಾಶದಲ್ಲಿ ಸೌರವಿದ್ಯುತ್‌ ಉತ್ಪಾದನಾ ಕೇಂದ್ರ ಸ್ಥಾಪಿಸಲು ಮುಂದಾಗಿದೆ. ಈಗಾಗಲೇ ಇದರ ಕೆಲಸ ಆರಂಭವಾಗಿದ್ದು, ಗುರಿಗಿಂತ ಎರಡು ವರ್ಷ ಮೊದಲೇ, ಅಂದರೆ 2028ರಲ್ಲಿ ಘಟಕ ಕಾರ್ಯಾಚರಣೆ ಆರಂಭಿಸಲಿದೆ.

ಅಂತರಿಕ್ಷ ಸೌರವಿದ್ಯುತ್‌ ಕೇಂದ್ರವು ಸೂರ್ಯನ ಶಕ್ತಿಯನ್ನು ವಿದ್ಯುತ್ತನ್ನಾಗಿ ಹಾಗೂ ಮೈಕ್ರೋವೇವ್‌ಗಳನ್ನಾಗಿ ಪರಿವರ್ತಿಸಲಿದೆ. ಅಂತರಿಕ್ಷದಲ್ಲಿ ಸುತ್ತುತ್ತಿರುವ ಉಪಗ್ರಹಗಳಿಗೆ ಸೌರವಿದ್ಯುತ್‌ ಪೂರೈಸಲು ಚೀನಾ ಈ ಕೇಂದ್ರವನ್ನು ಬಳಕೆ ಮಾಡಲಿದೆ. ಜೊತೆಗೆ ಭೂಮಿಗೂ ಕೆಲ ನಿರ್ದಿಷ್ಟಪ್ರದೇಶಕ್ಕೆ ವೈರ್‌ಲೆಸ್‌ ಹಾಟ್‌ಸ್ಪಾಟ್‌ ತಂತ್ರಜ್ಞಾನದ ಮೂಲಕ ಸೌರವಿದ್ಯುತ್ತನ್ನು ರವಾನಿಸಲಿದೆ ಎಂದು ವಿಜ್ಞಾನಿಗಳು ಹೇಳಿಕೊಂಡಿದ್ದಾರೆ.

Latest Videos

undefined

ಪ್ರಾಥಮಿಕ ಪರೀಕ್ಷೆ ಯಶಸ್ವಿ:

ಚೀನಾದ ಕ್ಸಿಡಿಯಾನ್‌ ವಿಶ್ವವಿದ್ಯಾಲಯ ಈ ಕುರಿತು ನಡೆಸಿದ ಸಂಶೋಧನೆ ಈಗಾಗಲೇ ಯಶಸ್ವಿಯಾಗಿದೆ. ಪ್ರಾಥಮಿಕ ಪರೀಕ್ಷೆಗಳು ಕೂಡ ಯಶಸ್ವಿಯಾಗಿದ್ದು, 10 ಕಿಲೋವ್ಯಾಟ್‌ ಸೌರಶಕ್ತಿ ಉತ್ಪಾದಿಸುವ ಘಟಕವನ್ನು ಆರಂಭಿಸಲು ಸಿದ್ಧತೆ ನಡೆಯುತ್ತಿದೆ. ಈ ಮೊದಲು 2030ರಲ್ಲಿ ಘಟಕವನ್ನು ಕಾರ್ಯಾರಂಭ ಮಾಡಲು ಯೋಜಿಸಲಾಗಿತ್ತು. ಆದರೆ ಈಗ 2028ರಲ್ಲೇ ಘಟಕದಿಂದ ಸೌರವಿದ್ಯುತ್‌ ರವಾನೆ ಆರಂಭಿಸಲು ನಿರ್ಧರಿಸಲಾಗಿದೆ. ಒಮ್ಮೆ ಇದು ಕಾರ್ಯಾರಂಭ ಮಾಡಿದರೆ ಪ್ರಗತಿಯಲ್ಲಿರುವ ಚೀನಾದ ಅಂತರಿಕ್ಷ ಯೋಜನೆಗಳಿಗೆ ವಿದ್ಯುತ್‌ ಸಮಸ್ಯೆ ಇರುವುದಿಲ್ಲ. ಅಲ್ಲದೆ, ಬಾಹ್ಯಾಕಾಶದಲ್ಲಿ ವಿದ್ಯುತ್‌ ಉತ್ಪಾದಿಸಿ ಭೂಮಿಗೆ ತರುವ ಕ್ರಾಂತಿಕಾರಿ ತಂತ್ರಜ್ಞಾನವನ್ನು ಜಗತ್ತಿಗೆ ನೀಡುವ ಮೊದಲ ದೇಶವೆಂಬ ಹೆಗ್ಗಳಿಕೆಯನ್ನು ಚೀನಾ ಪಡೆಯಲಿದೆ.

75 ಮೀಟರ್‌ ಎತ್ತರದ ಸೌರ ಕೇಂದ್ರ:

ಅಂತರಿಕ್ಷ ಸೌರವಿದ್ಯುತ್‌ ಘಟಕ ಹೇಗಿರುತ್ತದೆ ಎಂಬ ಮಾದರಿಯನ್ನು ಕ್ಸಿಡಿಯಾನ್‌ ವಿಶ್ವವಿದ್ಯಾಲಯದಲ್ಲಿ ಸಂಶೋಧಕರು ಸ್ಥಾಪಿಸಿದ್ದಾರೆ. 75 ಮೀಟರ್‌ ಎತ್ತರವಿರುವ ಈ ಘಟಕವು ಐದು ಸಬ್‌ಸಿಸ್ಟಮ್‌ಗಳನ್ನು ಹೊಂದಿದೆ. ಅವು ಆಕಾಶದತ್ತ ಮುಖ ಮಾಡಿರುತ್ತವೆ. 2014ರಲ್ಲಿ ಅಂತರಿಕ್ಷದಲ್ಲಿ ಸೌರಶಕ್ತಿ ಉತ್ಪಾದಿಸಲು ಚೀನಾ ಆರಂಭಿಸಿದ್ದ ಒಮೆಗಾ ಯೋಜನೆಯ ಭಾಗವಾಗಿ ಈ ಘಟಕವನ್ನು ನಿರ್ಮಿಸಲಾಗಿದೆ.

ಭೂಮಿಯಿಂದಲೇ ಘಟಕ ಉಡಾವಣೆ:

ಭೂಮಿಯಲ್ಲೇ 75 ಮೀಟರ್‌ ಎತ್ತರವಿರುವ ಸೌರವಿದ್ಯುತ್‌ ಘಟಕವನ್ನು ನಿರ್ಮಿಸಿ, ಅದನ್ನು ಅಂತರಿಕ್ಷಕ್ಕೆ ಕಳುಹಿಸಿ ಭೂಸ್ಥಿರ ಕಕ್ಷೆಯಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ಅದು ಸೌರವಿದ್ಯುತ್ತನ್ನು ಉತ್ಪಾದಿಸಿ ಉಪಗ್ರಹಗಳಿಗೆ ಹಾಗೂ ಭೂಮಿಗೆ ಕಳುಹಿಸುತ್ತದೆ. ಅಲ್ಲದೆ, ಅದೇ ಘಟಕದಲ್ಲಿ ಮೈಕ್ರೋವೇವ್‌ ವಿಕಿರಣಗಳನ್ನು ಭೂಮಿಗೆ ಕಳುಹಿಸಿದ ಮೇಲೆ ಅದರಿಂದ ಜೀವಿಗಳ ಮೇಲೆ ಯಾವ ರೀತಿಯ ಪರಿಣಾಮ ಉಂಟಾಗುತ್ತದೆ ಎಂಬುದನ್ನೂ ಅಧ್ಯಯನ ಮಾಡಲಾಗುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

click me!