
ಸ್ಟಾಕ್‌ಹೋಮ್ (ಅ.9): ಮೂವರು ದಿಗ್ಗಜ ವಿಜ್ಞಾನಿಗಳಾದ ಜಪಾನಿನ ಸುಸುಮು ಕಿಟಗವಾ, ಆಸ್ಟ್ರೇಲಿಯಾದ ರಿಚರ್ಡ್ ರಾಬ್ಸನ್ ಮತ್ತು ಅಮೆರಿಕದ ಒಮರ್ ಎಂ.ಯಾಗಿ ಅವರಿಗೆ ಈ ಬಾರಿಯ ರಸಾಯನ ಶಾಸ್ತ್ರದ ನೊಬೆಲ್ ಒಲಿದಿದೆ. 'ಮೆಟಲ್-ಆರ್ಗಾನಿಕ್ ಚೌಕಟ್ಟು' (ಎಂಒಎಫ್) ಅಭಿವೃದ್ಧಿಪಡಿಸಿದ ಹಿನ್ನೆಲೆಯಲ್ಲಿ ಈ ಪ್ರಶಸ್ತಿ ಘೋಷಿಸಲಾಗಿದೆ. ಇವರ ಈ ಸಂಶೋಧನೆಯು ರಸಾಯನಶಾಸ್ತ್ರದ ಅಧ್ಯಯನಕ್ಕೆ ಹೊಸ ದಿಕ್ಕು ನೀಡಿದೆ ಎಂದು ಹೇಳಲಾಗಿದೆ.
ಏನಿದು ಎಂಒಎಫ್?: ವಿಭಿನ್ನ ಅಣುಗಳನ್ನು ವಿಶೇಷ ರೀತಿಯಲ್ಲಿ ಸಂಯೋಜಿಸಿ ವಿಶಿಷ್ಟವಾದ ಸಂರಚನೆಯನ್ನು ಈ ಮೂವರು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ. ಈ ಸಂರಚನೆ ಅಥವಾ ಎಂಒಎಫ್‌ನ ವಿಶೇಷವೇನೆಂದರೆ ಇದರಲ್ಲಿ ಸಾಕಷ್ಟು ಖಾಲಿ ಜಾಗಗಳೂ ಇದ್ದು, ಅದರ ಮೂಲಕ ಗ್ಯಾಸ್ ಮತ್ತು ಇತರೆ ರಾಸಾಯನಿಕಗಳನ್ನು ಸುಲಭವಾಗಿ ಹರಿಸಬಹುದಾಗಿದೆ. ಈ ಸಂರಚನೆ ಇದೀಗ'ಮೆಟಲ್ ಆರ್ಗಾನಿಕ್ ಪ್ರೇಮ್‌ವರ್ಕ್' ಆಗಿ ಕರೆಯಲ್ಪಟ್ಟಿದೆ. ಇದನ್ನು ನಾವು 'ಅಣು ಆರ್ಕಿಟೆಕ್ಟರ್' ಎಂದೂ ಕರೆಯಬಹುದಾಗಿದೆ. ಪರಮಾಣು ಮತ್ತು ಅಣುಗಳನ್ನು ಇಟ್ಟಿಗೆಗಳ ರೀತಿ ಬಳಸಿ ಈ ವಿಶೇಷವಾದ ಸಂರಚನೆ ನಿರ್ಮಿಸಲಾಗಿದೆ.
ಇದೀಗ ನೊಬೆಲ್ ಗೌರವಕ್ಕೆ ಪಾತ್ರವಾಗಿರುವ ರಾಬ್ಸನ್ (88) ಅವರು ಆಸ್ಟ್ರೇಲಿಯಾದ ಮೆಲ್ಬರ್ನ್ ವಿವಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಕಿಟಾಗವಾ(74) ಅವರು ಜಪಾನಿನ ಕ್ಯೋಟೋ ವಿವಿಯಲ್ಲಿ ಹಾಗೂ ಯಾ (60) ಅವರು ಅಮೆರಿಕದ ಕ್ಯಾಲಿಫೋರ್ನಿಯಾ ವಿವಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಮೂವರೂ ವಿಜ್ಞಾನಿಗಳು ಪ್ರತ್ಯೇಕವಾಗಿ ಸಂಶೋಧನೆ ನಡೆಸಿದರೂ ಪರಸ್ಪರರ ಸಂಶೋಧನೆಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಈ ಮೂಲಕ 1989ರಲ್ಲಿ ಎಂಒಎಫ್‌ಗಳನ್ನು ಕಂಡುಹಿಡಿದು ರಸಾಯನ ಶಾಸ್ತ್ರಜಗತ್ತಿಗೆ ಹೊಸ ಬೆಳಕು ನೀಡಿದ್ದಾರೆ.
ಇವರು ಅಭಿವೃದ್ಧಿಪಡಿಸಿದ ಸಂರಚನೆಯು ವಿಷಕಾರಿ ಗ್ಯಾಸ್‌ಗಳನ್ನು ಹೀರಿಕೊಳ್ಳಲು, ಹಿಡಿದಿಟ್ಟುಕೊಳ್ಳಲು ನೆರವು ನೀಡುತ್ತದೆ. ಜತೆಗೆ, ಈಗ ಸಾಮಾನ್ಯವಾಗಿ ಬಳಕೆ ಯಾಗುವ ವಾತಾವರಣದಿಂದ ಕಾರ್ಬನ್ ಡೈಆಕ್ಸೆಡ್ ಅನ್ನು ಹೀರಿಕೊಳ್ಳುವ ಅಥವಾ ಶುಷ್ಕ ಮರುಭೂಮಿಯ ಗಾಳಿಯಲ್ಲಿ ನೀರನ್ನು ಹೀರಿಕೊಳ್ಳುವ ವಸ್ತುಗಳ ಅಭಿವೃದ್ಧಿಗೆ ಪೂರಕವಾಗಿದೆ.
ಸ್ಟಾಕ್‌ಹೋಮ್: ಗುರುವಾರ ನೊಬೆಲ್ ಸಾಹಿತ್ಯ ಪ್ರಶಸ್ತಿ, ಶುಕ್ರವಾರ ನೊಬೆಲ್ ಶಾಂತಿ ಪ್ರಶಸ್ತಿ ಮತ್ತು ಸೋಮವಾರ ಅರ್ಥಶಾಸ್ತ್ರ ಪ್ರಶಸ್ತಿ ಘೋಷಣೆ ಆಗಲಿವೆ. ಈಗಾಗಲೇ ವೈದ್ಯಕೀಯ ಹಾಗೂ ಭೌತಶಾಸ್ತ್ರ ನೊಬೆಲ್ ಪ್ರಕಟವಾಗಿದ್ದವು.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.