
ಶ್ರೀಹರಿಕೋಟ: ಚಂದ್ರನ ಒಡಲಲ್ಲಿ ಇರುವ ಹಲವು ನಿಗೂಢಗಳನ್ನು ಭೇದಿಸುವ ಗುರಿಯೊಂದಿಗೆ, ಅನ್ಯಗ್ರಹದಲ್ಲಿ ನೌಕೆ ಇಳಿಸುವ ಕಲೆಯನ್ನು ಕರಗತ ಮಾಡಿಕೊಳ್ಳುವ ಛಲದೊಂದಿಗೆ ನೂರಾ ನಲವತ್ತು ಕೋಟಿ ಭಾರತೀಯರ ಶುಭ ಹಾರೈಕೆ ಹೊತ್ತು ಭಾರತದ ಮಹತ್ವಾಕಾಂಕ್ಷಿ ‘ಚಂದ್ರಯಾನ 3’ ನೌಕೆ ಯಶಸ್ವಿಯಾಗಿ ಉಡಾವಣೆಯಾಗಿದೆ. ಸುದೀರ್ಘ 40 ದಿನಗಳ ಪ್ರಯಾಣದ ಬಳಿಕ ಇದು ಆ.23ರಂದು ಚಂದ್ರನ ಮೇಲೆ ಇಳಿಯುವ ನಿರೀಕ್ಷೆ ಇದೆ. ಉಡಾವಣೆಗಿಂತ ಚಂದ್ರನ ಮೇಲೆ ನೌಕೆ ಇಳಿಸುವುದು ಅತ್ಯಂತ ಸಂಕೀರ್ಣ ಸವಾಲು. ಈ ಕಾರ್ಯದಲ್ಲಿ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಯಶಸ್ವಿಯಾದರೆ ಅಂತರಿಕ್ಷ ಲೋಕದಲ್ಲಿ ಭಾರತ ಹೊಸ ಇತಿಹಾಸವೊಂದನ್ನು ಸೃಷ್ಟಿಸಲಿದೆ.
ಆಂಧ್ರಪ್ರದೇಶದ ಶ್ರೀಹರಿಕೋಟದಿಂದ ಶುಕ್ರವಾರ ಮಧ್ಯಾಹ್ನ 2.35ಕ್ಕೆ ಸರಿಯಾಗಿ ‘ಚಂದ್ರಯಾನ 3’ ನೌಕೆ ಹೊತ್ತ, ಭಾರಿ ತೂಕ ಹೊರುವ ಸಾಮರ್ಥ್ಯದಿಂದಾಗಿ ‘ಫ್ಯಾಟ್‌ಬಾಯ್’ ಅಥವಾ ‘ಬಾಹುಬಲಿ’ ಎಂದೂ ಕರೆಸಿಕೊಳ್ಳುವ ಇಸ್ರೋದ ಎಲ್‌ವಿಎಂ3-ಎಂ4 ರಾಕೆಟ್ ನಭೋಮಂಡಲದತ್ತ ಚಿಮ್ಮಿತು. ಇದರ ಬೆನ್ನಲ್ಲೇ ಎದ್ದ ದಟ್ಟವಾದ ಕಿತ್ತಳೆ ಬಣ್ಣದ ಹೊಗೆಯನ್ನು ಕಂಡು ವಿಜ್ಞಾನಿಗಳು ಅತಿಥಿ ಗಣ್ಯರು ಚಪ್ಪಾಳೆ ತಟ್ಟಿಸಂತಸ ಪಟ್ಟರು. ಪ್ರತಿ ಹಂತವನ್ನೂ ಯಶಸ್ವಿಯಾಗಿ ದಾಟಿ ರಾಕೆಟ್ ಮುನ್ನುಗ್ಗುತ್ತಿದ್ದ ಘೋಷಣೆಯನ್ನು ಇಸ್ರೋ ವಿಜ್ಞಾನಿಗಳು ಮಾಡುತ್ತಿದ್ದಾಗ ಚಪ್ಪಾಳೆಗಳ ಸುರಿಮಳೆಯಾದವು. ಇಸ್ರೋದ ಮಾಜಿ ಮುಖ್ಯಸ್ಥರು ಹಾಗೂ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಈ ಕ್ಷಣಗಳಿಗೆ ಸಾಕ್ಷಿಯಾದರು. ಉಡಾವಣೆ ಸ್ಥಳದಿಂದ 7 ಕಿ.ಮೀ. ದೂರದಲ್ಲಿರುವ ವೀಕ್ಷಣಾ ಸ್ಥಳದಲ್ಲಿ ನೆರೆದಿದ್ದ 10 ಸಾವಿರಕ್ಕೂ ಅಧಿಕ ಜನರು ಇಸ್ರೋದ ಅಮೋಘ ಸಾಧನೆಯನ್ನು ಕಂಡು ಕುಣಿದು ಕುಪ್ಪಳಿಸಿದರು.
ಉಡಾವಣೆಯಾದ 16 ನಿಮಿಷಗಳಲ್ಲೇ ರಾಕೆಟ್‌ನಿಂದ ಪ್ರತ್ಯೇಕಗೊಂಡ ಚಂದ್ರಯಾನ ನೌಕೆ ಭೂ ಕಕ್ಷೆಯನ್ನು ಸುರಕ್ಷಿತವಾಗಿ ತಲುಪಿತು. ಇದರೊಂದಿಗೆ ಚಂದ್ರನ ಮೇಲೆ ನೌಕೆ ಇಳಿಸುವ ಭಾರತದ ಪ್ರಯತ್ನಕ್ಕೆ ಆರಂಭಿಕ ಯಶಸ್ಸು ದೊರೆಯಿತು. ಇನ್ನು ಮುಂದೆ ಈ ನೌಕೆ 5ರಿಂದ 6 ಸಲ ಭೂಕಕ್ಷೆಯಲ್ಲಿ ಅಂಡಾಕಾರದಲ್ಲಿ ಗಿರಕಿ ಹೊಡೆಯಲಿದೆ. ಭೂಮಿಗೆ 170 ಕಿ.ಮೀ. ಸನಿಹ ಹಾಗೂ 36500 ಕಿ.ಮೀ. ದೂರದಲ್ಲಿ ಸುತ್ತಲಿದೆ. ಬರುವ ದಿನಗಳಲ್ಲಿ ಈ ನೌಕೆ ಚಂದ್ರನತ್ತ ತನ್ನ ಪ್ರಯಾಣ ಆರಂಭಿಸಲಿದೆ. ಆಗಸ್ಟ್‌ನಲ್ಲಿ ಚಂದ್ರನ ಕಕ್ಷೆಗೆ ಸೇರಿಸಲಾಗುತ್ತದೆ. ಆ.23ರಂದು ಸಂಜೆ 5.47ಕ್ಕೆ ಚಂದ್ರನ ಅಂಗಳದಲ್ಲಿ ಈ ನೌಕೆಯನ್ನು ನಿಧಾನವಾಗಿ ಇಳಿಸಲಾಗುತ್ತದೆ. ನೌಕೆಯಲ್ಲಿನ ಲ್ಯಾಂಡರ್ ಇಳಿಯುತ್ತಿದ್ದಂತೆ, ಅದರಿಂದ ರೋವರ್ ಹೊರಬಂದು ಅಧ್ಯಯನ ಪ್ರಕ್ರಿಯೆಗಳನ್ನು ಕೈಗೊಳ್ಳಲಿದೆ.
ಚಂದ್ರನ ಮೇಲೆ ನೌಕೆಯನ್ನು ಭಾರತ ಯಶಸ್ವಿಯಾಗಿ ಇಳಿಸಿದರೆ ಅಮೆರಿಕ, ರಷ್ಯಾ ಹಾಗೂ ಸೋವಿಯತ್ ಒಕ್ಕೂಟ (ಈಗಿನ ರಷ್ಯಾ) ನಂತರ ಈ ಸಾಧನೆ ಮಾಡಿದ ವಿಶ್ವದ 4ನೇ ದೇಶ ಎಂಬ ಹಿರಿಮೆಗೆ ಭಾರತ ಭಾಜನವಾಗಲಿದೆ. ಹೀಗಾಗಿ ಆ.23ರಂದು ಇಸ್ರೋ ನಡೆಸುವ ಕಸರತನ್ನು ಇಡೀ ವಿಶ್ವವೇ ಕುತೂಹಲದಿಂದ ಎದುರು ನೋಡುತ್ತಿದೆ.
2ನೇ ಸಲ ಪ್ರಯತ್ನ:
ಕಳೆದ 15 ವರ್ಷಗಳಲ್ಲಿ ಚಂದ್ರನ ಅಧ್ಯಯನಕ್ಕೆ ಇಸ್ರೋ ಕೈಗೊಳ್ಳುತ್ತಿರುವ 3ನೇ ಯಾತ್ರೆ ಇದು. 2008ರಲ್ಲಿ ಚಂದ್ರನ ಕಕ್ಷೆಗೆ ನೌಕೆಯೊಂದನ್ನು ರವಾನಿಸಿ, ಮಾಹಿತಿ ಸಂಗ್ರಹವನ್ನು ಯಶಸ್ವಿಯಾಗಿ ಇಸ್ರೊ ನಡೆಸಿತ್ತು. 2019ರಲ್ಲಿ ಚಂದ್ರನ ಮೇಲೆ ನೌಕೆ ಇಳಿಸುವ ‘ಚಂದ್ರಯಾನ-2’ ಸಾಹಸವನ್ನು ಇಸ್ರೋ ಕೈಗೊಂಡಿತಾದರೂ, ಚಂದ್ರನ ಅಂಗಳ ಪ್ರವೇಶಿಸುವ ಸಂದರ್ಭದಲ್ಲಿ ‘ವಿಕ್ರಮ್’ ಲ್ಯಾಂಡರ್ ಸಂಪರ್ಕ ಕಳೆದುಕೊಂಡಿದ್ದರಿಂದ ಹಿನ್ನಡೆಯಾಗಿತ್ತು. ಆಗ ಆದ ವೈಫಲ್ಯಗಳಿಂದ ಪಾಠ ಕಲಿತಿರುವ ವಿಜ್ಞಾನಿಗಳು, ಹಲವು ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಸುಮಾರು 600 ಕೋಟಿ ರು. ವೆಚ್ಚದಲ್ಲಿ ‘ಚಂದ್ರಯಾನ-3’ ಕೈಗೊಂಡಿದ್ದಾರೆ. ಹಾಲಿವುಡ್ ಸಿನಿಮಾಗಳಿಗೆ ಮಾಡುವ ಖರ್ಚಿಗಿಂತ ಕಡಿಮೆ ಬಂಡವಾಳ ಇದಾಗಿದೆ ಎಂಬುದು ವಿಶೇಷ. ಈ ನೌಕೆಯಲ್ಲಿ ‘ವಿಕ್ರಮ್’ ಲ್ಯಾಂಡರ್, ‘ಪ್ರಗ್ಯಾನ್’ ರೋವರ್ ಹಾಗೂ ಪ್ರೊಪಲ್ಷನ್ ಮಾಡ್ಯೂಲ್‌ಗಳು ಇವೆ.
ಭೂಮಿಯ 14 ದಿನಗಳು ಚಂದ್ರನ 1 ದಿನಕ್ಕೆ ಸಮ. ರೋವರ್ ‘1 ಚಂದ್ರ ದಿನ’ (14 ಭೂಮಿ ದಿನ)ಗಳ ಕಾಲ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿದ್ದು, ಹಲವು ಅಧ್ಯಯನಗಳನ್ನು ನಡೆಸಲಿದೆ.
ಇಸ್ರೋ ರಾಕೆಟ್ ಪೂಜೆ ಖಂಡಿಸಿದ ಪ್ರಗತಿಪರರಿಗೆ ಚಂದ್ರಯಾನವೇ ಗೊತ್ತಿಲ್ಲ! ಮಂಗಳಯಾನವೆಂದು ಖಂಡನೆ
ಮುಂದೇನು?
ಶುಭಾಶಯಗಳು, ಭಾರತ. ಚಂದ್ರನತ್ತ ‘ಚಂದ್ರಯಾನ 3’ರ ಪ್ರಯಾಣ ಆರಂಭವಾಗಿದೆ. ನಮ್ಮ ಎಲ್‌ವಿಎಂ 3 ರಾಕೆಟ್ ಭೂ ಕಕ್ಷೆಗೆ ಯಶಸ್ವಿಯಾಗಿ ನೌಕೆಯನ್ನು ಸೇರಿಸಿದೆ. ಆ.23ರಂದು ಚಂದ್ರನ ಮೇಲೆ ನೌಕೆ ಇಳಿಸಲು ಯೋಜಿಸಲಾಗಿದೆ.
- ಎಸ್. ಸೋಮನಾಥ್ ಇಸ್ರೋ ಅಧ್ಯಕ್ಷ
ಚಂದ್ರಯಾನ-3 ಯಶಸ್ವಿ ಉಡಾವಣೆ, ಪ್ರಧಾನಿ ಮೋದಿ ಅಭಿನಂದನೆ
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.