ಭೂಮಿ ಚಂದ್ರರ ನಡುವೆ ಚಂದ್ರಯಾನ 4ರ ಸೇತುವೆ

By Anusha Kb  |  First Published Mar 14, 2024, 4:32 PM IST

ಚಂದ್ರಯಾನ-3 ಯೋಜನೆ ಯಶಸ್ವಿಯಾಗಿ ಪೂರ್ಣಗೊಂಡ ಬಳಿಕ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಈಗ ಚಂದ್ರನ ಮೇಲಿಂದ ಮಾದರಿಗಳನ್ನು ಸಂಗ್ರಹಿಸಿ, ಭೂಮಿಗೆ ತರುವ ಮಹತ್ವಾಕಾಂಕ್ಷಿ ಚಂದ್ರಯಾನ-4 ಯೋಜನೆಯೆಡೆಗೆ ತನ್ನ ದೃಷ್ಟಿ ನೆಟ್ಟಿದೆ.


ಗಿರೀಶ್ ಲಿಂಗಣ್ಣ, ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ಚಂದ್ರಯಾನ-3 ಯೋಜನೆ ಯಶಸ್ವಿಯಾಗಿ ಪೂರ್ಣಗೊಂಡ ಬಳಿಕ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಈಗ ಚಂದ್ರನ ಮೇಲಿಂದ ಮಾದರಿಗಳನ್ನು ಸಂಗ್ರಹಿಸಿ, ಭೂಮಿಗೆ ತರುವ ಮಹತ್ವಾಕಾಂಕ್ಷಿ ಚಂದ್ರಯಾನ-4 ಯೋಜನೆಯೆಡೆಗೆ ತನ್ನ ದೃಷ್ಟಿ ನೆಟ್ಟಿದೆ. ಈ ಯೋಜನೆಯಲ್ಲಿ, ಚಂದ್ರನ ಮೇಲ್ಮೈಯಲ್ಲಿ ಸಾಫ್ಟ್ ಲ್ಯಾಂಡಿಂಗ್ ನಡೆಸಿ, ಅಲ್ಲಿಂದ ಚಂದ್ರನ ಕಲ್ಲಿನ ಮಾದರಿಯನ್ನು ಭೂಮಿಗೆ ತರಲಾಗುತ್ತದೆ. ಒಂದು ವೇಳೆ, ನಿರೀಕ್ಷಿತ ರೀತಿಯಲ್ಲಿ ಈ ಯೋಜನೆ ಯಶಸ್ಸು ಕಂಡರೆ, ಚಂದ್ರನ ಮೇಲಿಂದ ಮಾದರಿ ಸಂಗ್ರಹಿಸಿದ ರಾಷ್ಟ್ರಗಳಾದ ಅಮೆರಿಕಾ ಸಂಯುಕ್ತ ಸಂಸ್ಥಾನ, ರಷ್ಯಾ ಮತ್ತು ಚೀನಾಗಳ ಸಾಲಿಗೆ ಭಾರತವೂ ಸೇರ್ಪಡೆಗೊಳ್ಳಲಿದೆ.

Tap to resize

Latest Videos

undefined

ಚಂದ್ರಯಾನ-4 ಯೋಜನೆಯ ಗುರಿಗಳು:

• ಚಂದ್ರನ ಮೇಲ್ಮೈಯಲ್ಲಿ ಸುರಕ್ಷಿತ ಮತ್ತು ಹಗುರವಾದ ಲ್ಯಾಂಡಿಂಗ್ ನಡೆಸುವುದು.

• ಚಂದ್ರನ ಮೇಲ್ಮೈಯ ಮಾದರಿಗಳನ್ನು ಪಡೆದುಕೊಂಡು, ಸಂಗ್ರಹಿಸುವುದು.

• ಚಂದ್ರನ ಮೇಲ್ಮೈಯಿಂದ ಮೇಲಕ್ಕೆ ಹಾರುವುದು.

• ಚಂದ್ರನ ಕಕ್ಷೆಯಲ್ಲಿ ಡಾಕ್ ಮತ್ತು ಅನ್‌ಡಾಕ್ ನಡೆಸುವುದು.

• ಚಂದ್ರನ ಮಾದರಿಗಳನ್ನು ಮಾಡ್ಯುಲ್‌ಗಳ ನಡುವೆ ಸಾಗಿಸುವುದು.

• ಭೂಮಿಯ ಕಕ್ಷೆಗೆ ಮರಳಿ, ಚಂದ್ರನ ಮೇಲ್ಮೈ ಮಾದರಿ ಒದಗಿಸಲು ಭೂಮಿಗೆ ಇಳಿಯುವುದು.

ಚಂದ್ರಯಾನ-4 ಯೋಜನೆಗೆ ಸಂಬಂಧಿತ ಕಾರ್ಯತಂತ್ರ ಸಂಕೀರ್ಣವಾಗಿದ್ದು, ಬಾಹ್ಯಾಕಾಶ ನೌಕೆಯ ಐದು ಪ್ರತ್ಯೇಕ ವಿಭಾಗಗಳನ್ನು ಒಳಗೊಂಡಿದೆ. ಅವೆಂದರೆ - ಪ್ರೊಪಲ್ಷನ್ ಸಿಸ್ಟಮ್, ಡಿಸೆಂಡರ್, ಅಸೆಂಡರ್, ಟ್ರಾನ್ಸ್‌ಫರ್ ಮಾಡ್ಯುಲ್ ಮತ್ತು ರಿ ಎಂಟ್ರಿ ಮಾಡ್ಯುಲ್. ಈ ವಿಶಿಷ್ಟ ರೀತಿ ಈ ಬಾಹ್ಯಾಕಾಶ ನೌಕೆಯನ್ನು ಇದರ ಹಿಂದಿನ ಯೋಜನೆಗಳಿಂದ ಭಿನ್ನವಾಗಿಸಿ, ಚಂದ್ರನ ಅನ್ವೇಷಣೆಯಲ್ಲಿ ನೆರವಾಗಿ, ಚಂದ್ರನ ಮಾದರಿಗಳನ್ನು ಭೂಮಿಗೆ ತರಲು ಸಾಧ್ಯವಾಗಿಸುತ್ತದೆ.

5 ಪೇಲೋಡ್‌ಗಳು ಅಥವಾ ಅಂಶಗಳು

• ಲೂನಾರ್ ಪ್ರೊಪಲ್ಷನ್ ಮಾಡ್ಯುಲ್: ಲೂನಾರ್ ಲ್ಯಾಂಡರ್ ಮತ್ತು ಅಸೆಂಡರ್ ಹಂತವನ್ನು ಚಂದ್ರನ ಮೇಲೆ ಕಳುಹಿಸಲು ಇದನ್ನು ಅಭಿವೃದ್ಧಿ ಪಡಿಸಲಾಗಿದ್ದು, ಇದು ಚಂದ್ರಯಾನ-3 ಯೋಜನೆಯ ಪ್ರೊಪಲ್ಷನ್ ಮಾಡ್ಯುಲ್ ರೀತಿಯಲ್ಲಿ ಕಾರ್ಯಾಚರಿಸುತ್ತದೆ.

• ಲೂನಾರ್ ಲ್ಯಾಂಡರ್: ಅಸೆಂಡ್ ಸ್ಟೇಜ್ ಮತ್ತು ಚಂದ್ರನ ಮಣ್ಣನ್ನು ಸಂಗ್ರಹಿಸುವ ಉಪಕರಣಕ್ಕೆ ಬೆಂಬಲ ಒದಗಿಸುವ ಉಪಕರಣಗಳ ಜೊತೆಗೆ ಚಂದ್ರನ ಮೇಲೆ ಇಳಿಯುತ್ತದೆ.

• ಲೂನಾರ್ ಮಾಡ್ಯುಲ್ ಅಸೆಂಡರ್: ಚಂದ್ರನ ಮೇಲಿನ ಮಾದರಿಗಳನ್ನು ತೆಗೆದು, ಅವುಗಳನ್ನು ಸಂಗ್ರಹಿಸಿದ ಬಳಿಕ, ಅಸೆಂಡರ್ ಮಾಡ್ಯುಲ್ ಲ್ಯಾಂಡರ್‌ನಿಂದ ಬೇರ್ಪಟ್ಟು, ಚಂದ್ರನ ಮೇಲ್ಮೈಯಿಂದ ಟೇಕಾಫ್ ಆಗುತ್ತದೆ. ಇದು ಲ್ಯಾಂಡರ್ ಅನ್ನು ಉಡಾವಣಾ ವೇದಿಕೆಯಾಗಿ ಬಳಸಿಕೊಂಡು, ಚಂದ್ರನ ಕೆಳ ಕಕ್ಷೆಗೆ ಪ್ರವೇಶಿಸುತ್ತದೆ.

• ಟ್ರಾನ್ಸ್‌ಫರ್ ಮಾಡ್ಯುಲ್: ಟ್ರಾನ್ಸ್‌ಫರ್ ಮಾಡ್ಯುಲ್ ಅಸೆಂಡ್ ಹಂತದಿಂದ ಮಾದರಿಗಳನ್ನು ಪಡೆದುಕೊಂಡು, ಅವುಗಳನ್ನು ರಿ ಎಂಟ್ರಿ ಮಾಡ್ಯುಲ್‌ಗೆ ವರ್ಗಾಯಿಸುತ್ತದೆ. ಬಳಿಕ ತನ್ನ ಇಂಜಿನ್ ಅನ್ನು ಚಾಲನೆಗೊಳಿಸಿ, ಎರಡೂ ಮಾಡ್ಯುಲ್‌ಗಳನ್ನು ಭೂಮಿಯ ಕಡೆಗೆ ಸಾಗಿಸುತ್ತದೆ. ಬಳಿಕ ಪೇಲೋಡ್‌ಗಳನ್ನು ಬಿಡುಗಡೆಗೊಳಿಸಿ, ಭೂಮಿಯ ಸುತ್ತಲೂ ಪರಿಭ್ರಮಣೆ ನಡೆಸುತ್ತದೆ.

• ರಿ ಎಂಟ್ರಿ ಮಾಡ್ಯುಲ್: ರಿ ಎಂಟ್ರಿ ಮಾಡ್ಯುಲ್ ಕಕ್ಷೆಯಲ್ಲಿ ಸಂಗ್ರಹಿಸಿದ ಚಂದ್ರನ ಮಾದರಿಗಳನ್ನು (ಈ ಮಾದರಿಗಳನ್ನು ಲೂನಾರ್ ಗೊಲಿತ್ ಮಿಶ್ರಣ ಅಥವಾ ಕಲ್ಲು ಮತ್ತು ಮಣ್ಣು ಎಂದು ಕರೆಯಲಾಗುತ್ತದೆ) ಹೊಂದಿರುತ್ತದೆ.  ಇದನ್ನು ಭೂಮಿಯ ವಾತಾವರಣಕ್ಕೆ ಮರುಪ್ರವೇಶಿಸುವುದನ್ನು ಸಹಿಸಿಕೊಳ್ಳುವ ಮತ್ತು ಚಂದ್ರನ ಮಾದರಿಯೊಡನೆ ಸುರಕ್ಷಿತವಾಗಿ ಭೂಸ್ಪರ್ಶ ನಡೆಸುವಂತೆ ನಿರ್ಮಿಸಲಾಗಿದೆ.

ಚಂದ್ರಯಾನ-4ರ ಆವಿಷ್ಕೃತ ರಾಕೆಟ್ ಬಳಕೆ ಮತ್ತು ಉಡಾವಣಾ ಕಾರ್ಯತಂತ್ರ

ಚಂದ್ರಯಾನ-4 ಯೋಜನೆ ವಿಶಿಷ್ಟವಾಗಿದ್ದು, ಇದು ಎರಡು ರಾಕೆಟ್‌ಗಳನ್ನು ಬಳಸಲಿದೆ. ಅವುಗಳಲ್ಲಿ ಅತ್ಯಂತ ಭಾರವನ್ನು ಒಯ್ಯಬಲ್ಲ ಲಾಂಚ್ ವೆಹಿಕಲ್ ಮಾರ್ಕ್-3 (ಎಲ್ಎಂವಿ-3) ಹೆಚ್ಚಿನ ಪೇಲೋಡ್‌ಗಳನ್ನು ಒಯ್ದರೆ, ಇಸ್ರೋದ ನಂಬಿಕಾರ್ಹ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್ಎಲ್‌ವಿ) ಇನ್ನೊಂದು ರಾಕೆಟ್ ಆಗಿದೆ. ಈ ರಾಕೆಟ್‌ಗಳು ಬೇರೆ ಬೇರೆ ದಿನಗಳಂದು ಉಡಾವಣೆಗೊಳ್ಳಲಿದ್ದು, ಅವುಗಳ ಅತ್ಯಂತ ಸನಿಹದ ಉಡಾವಣೆಯೂ 2028ಕ್ಕಿಂತ ಮೊದಲು ನೆರವೇರುವ ನಿರೀಕ್ಷೆಗಳಿಲ್ಲ.

ಇಸ್ರೋ ಬಾಹ್ಯಾಕಾಶ ನೌಕೆಯ ಭಾಗಗಳನ್ನು ಉಡಾವಣೆಗೊಳಿಸುವ ಸಲುವಾಗಿ ಎರಡು ಪ್ರತ್ಯೇಕ ರಾಕೆಟ್‌ಗಳನ್ನು ಬಳಸಲಿದೆ. ಎಲ್ಎಂವಿ-3 ರಾಕೆಟ್ ಪ್ರೊಪಲ್ಷನ್, ಡಿಸೆಂಡರ್, ಮತ್ತು ಅಸೆಂಡರ್ ಮಾಡ್ಯುಲ್‌ಗಳನ್ನು ಒಯ್ದರೆ, ಪಿಎಸ್ಎಲ್‌ವಿ ರಾಕೆಟ್ ಟ್ರಾನ್ಸ್‌ಫರ್ ಮಾಡ್ಯುಲ್ ಮತ್ತು ರಿ ಎಂಟ್ರಿ ಮಾಡ್ಯುಲ್‌ಗಳನ್ನು ಉದ್ದೇಶಿತ ಚಂದ್ರನ ಕೆಳ ಕಕ್ಷೆಗಳಿಗೆ ಸಾಗಿಸಲಿದೆ. ಇಸ್ರೋ ಇನ್ನೂ ಉಡಾವಣಾ ಅನುಕ್ರಮವನ್ನು ಅಂತಿಮಗೊಳಿಸಿಲ್ಲ.

ಡಿಸೆಂಡರ್ ಮಾಡ್ಯುಲ್ ಚಂದ್ರನ ಮಾದರಿಗಳನ್ನು ಸಂಗ್ರಹಿಸಲು ಒಂದು ರೋಬಾಟಿಕ್ ಕೈಯನ್ನು ಬಳಸಿಕೊಳ್ಳಲಿದೆ. ಬಳಿಕ ಮಾದರಿಯನ್ನು ಅಸೆಂಡರ್ ಮಾಡೆಲ್‌ಗೆ ಸಾಗಿಸಲಾಗುತ್ತದೆ. ಅಸೆಂಡರ್ ಮಾಡ್ಯುಲ್ ಬಳಿಕ ಬೇರ್ಪಟ್ಟು, ಚಂದ್ರನ ಕಕ್ಷೆಯೆಡೆಗೆ ಮೇಲೇರಿ, ಟ್ರಾನ್ಸ್‌ಫರ್ ಮಾಡ್ಯುಲ್‌ಗೆ ಅಳವಡಿಕೆಯಾಗುತ್ತದೆ.

ಇದರಿಂದಾಗಿ ಚಂದ್ರನ ಕಕ್ಷೆಯಲ್ಲಿ ಅಸೆಂಡರ್, ಟ್ರಾನ್ಸ್‌ಫರ್, ಮತ್ತು ರಿ ಎಂಟ್ರಿ ಮಾಡ್ಯುಲ್‌ಗಳ ಸಂಯೋಜನೆ ಕಾರ್ಯಾಚರಿಸುತ್ತದೆ.

ಟ್ರಾನ್ಸ್‌ಫರ್ ಮಾಡ್ಯುಲ್ ಸಂಗ್ರಹಿತ ಚಂದ್ರನ ಮಾದರಿಗಳನ್ನು ಅಸೆಂಡರ್ ಮಾಡ್ಯುಲ್‌ನಿಂದ ರಿ ಎಂಟ್ರಿ ಮಾಡ್ಯುಲ್‌ಗೆ ವರ್ಗಾಯಿಸುತ್ತದೆ. ಬಳಿಕ ಅಸೆಂಡರ್ ಮಾಡ್ಯುಲ್ ಮೂರು ಭಾಗಗಳ ರಚನೆಯಿಂದ (ಅಂದರೆ ಅಸೆಂಡರ್, ಟ್ರಾನ್ಸ್‌ಫರ್, ರಿ ಎಂಟ್ರಿ ಮಾಡ್ಯುಲ್‌ಗಳ ಸಂಯೋಜನೆ) ಬೇರ್ಪಡುತ್ತದೆ.

ಟ್ರಾನ್ಸ್‌ಫರ್ ಮತ್ತು ರಿ ಎಂಟ್ರಿ ಮಾಡ್ಯುಲ್‌ಗಳು ಜೊತೆಯಾಗಿ ಭೂಮಿಯ ಕಕ್ಷೆಗೆ ಮರಳುತ್ತವೆ. ರಿ ಎಂಟ್ರಿ ಮಾಡ್ಯುಲ್ ಬಳಿಕ ಟ್ರಾನ್ಸ್‌ಫರ್ ಮಾಡ್ಯುಲ್‌ನಿಂದ ಸೂಕ್ತವಾದ ಭೂಮಿಯೆಡೆಗಿನ ಕಕ್ಷೆಯಲ್ಲಿ ಬೇರ್ಪಟ್ಟು, ಸುರಕ್ಷಿತವಾಗಿ ಭೂಸ್ಪರ್ಶ ನಡೆಸಲು ಭೂಮಿಯ ವಾತಾವರಣವನ್ನು ಪ್ರವೇಶಿಸುತ್ತದೆ.

ಸ್ಪೇಡೆಕ್ಸ್

ಚಂದ್ರನ ಕಕ್ಷೆಯಲ್ಲಿ, ಅಸೆಂಡರ್ ಮಾಡ್ಯುಲ್ ಟ್ರಾನ್ಸ್‌ಫರ್ ಮಾಡ್ಯುಲ್‌ಗೆ ಯಶಸ್ವಿಯಾಗಿ ಅಳವಡಿಕೆಯಾಗುವುದು ಉದ್ದೇಶಿತ ಸ್ಪೇಸ್ ಡಾಕಿಂಗ್ ಎಕ್ಸ್‌ಪರಿಮೆಂಟ್ (SPADEX) ಪೂರ್ಣಗೊಳ್ಳುವುದರ ಮೇಲೆ ಅವಲಂಬಿತವಾಗಿದೆ. ಇಸ್ರೋ ಅಭಿವೃದ್ಧಿ ಪಡಿಸಿರುವ ಈ ಯೋಜನೆ, ಎರಡು ಬಾಹ್ಯಾಕಾಶ ನೌಕೆಗಳನ್ನು ಒಳಗೊಂಡಿದ್ದು, ಕಕ್ಷೆಗಳಲ್ಲಿ ಸಂಧಿಸುವ, ಡಾಕಿಂಗ್ ನಡೆಸುವ, ಮತ್ತು ರಚನಾತ್ಮಕ ಹಾರಾಟ ನಡೆಸುವುದಕ್ಕೆ ಸಂಬಂಧಿಸಿದ ತಂತ್ರಜ್ಞಾನಗಳನ್ನು ಅಭಿವೃದ್ಧಿ ಪಡಿಸುವ ಗುರಿ ಹೊಂದಿದೆ. ಈ ಯೋಜನೆ 2024ರ ಕೊನೆಯ ಭಾಗದಲ್ಲಿ ಪಿಎಸ್ಎಲ್‌ವಿ ರಾಕೆಟ್ ಮೂಲಕ ಉಡಾವಣೆಗೊಳ್ಳುವ ಸಾಧ್ಯತೆಗಳಿವೆ.

click me!