
ಅಂಟಾರ್ಟಿಕವೂ ಅಪರೂಪದ ವಿದ್ಯಾಮಾನಕ್ಕೆ ಆಗಾಗ ಸಾಕ್ಷಿಯಾಗುತ್ತಲೇ ಇರುತ್ತದೆ. ಭೂಮಿಯ ಮೇಲಿನ ಅತ್ಯಂತ ಅಸಾಮಾನ್ಯ ಸ್ಥಳಗಳಲ್ಲಿ ಒಂದಾದ ಅಂಟಾರ್ಕ್ಟಿಕಾದ ಆಳದಲ್ಲಿ, ವಿಜ್ಞಾನಿಗಳು ಮತ್ತು ಪರಿಶೋಧಕರನ್ನು ವರ್ಷಗಳಿಂದ ಗೊಂದಲಕ್ಕೀಡುಮಾಡಿರುವ ಹಲವು ವಿಲಕ್ಷಣ ನೈಸರ್ಗಿಕ ಅದ್ಭುತವಿದೆ ಅಲ್ಲಿನ ಕೆಲವೊಂದು ವಿಸ್ಮಯಗಳು ವಿಜ್ಞಾನಿಗಳ ಸಂಶೋಧನೆಗೂ ನಿಲುಕದ ವಿಚಾರವಾಗಿದೆ. ಅಂತಹ ಒಂದು ವಿಸ್ಮಯಗಳಲ್ಲಿ ಈ ರಕ್ತ ಜಲಪಾತವೂ ಕೂಡ ಒಂದು. ಈ ರಕ್ತಕೆಂಪು ಬಣ್ಣದ ಹೊಳೆ ಟೇಲರ್ ಗ್ಲೇಸಿಯರ್‌ನಿಂದ ಲೇಕ್ ಬೊನ್ನಿಗೆ ಹರಿಯುತ್ತದೆ, ಇದು ಹಿಮಾವೃತವಾದ ಪ್ರದೇಶದ ಶ್ವೇತಮೇಲ್ಮಯಲ್ಲಿ ಅತ್ಯಂತ ಆಕರ್ಷಕವಾಗಿ ಕಾಣುತ್ತದೆ. ಇದರ ವಿಶಿಷ್ಟವೆನಿಸುವ ನೋಟ ಹಾಗೂ ಹಾಗೂ ಅದರ ಹಿಂದಿನ ನಿಗೂಢತೆಯೂ ಇದನ್ನು ಅಂಟಾರ್ಕ್ಟಿಕಾದ ಅತ್ಯಂತ ಕುತೂಹಲಕಾರಿ ಸ್ಥಳಗಳಲ್ಲಿ ಒಂದೆನಿಸಿದೆ. ಒಂದು ಶತಮಾನಕ್ಕೂ ಮೊದಲೇ ಇದನ್ನು ಕಂಡುಹಿಡಿಯಲಾಗಿದ್ದರೂ ಇಂದಿಗೂ ಇದು ತನ್ನ ಕುತೂಹಲವನ್ನು ಹಿಡಿದಿಟ್ಟುಕೊಂಡಿದೆ.
ರಕ್ತ ಜಲಪಾತದ ಆವಿಷ್ಕಾರ ಆಗಿದ್ಯಾವಾಗ?
ಫೋರ್ಬ್ಸ್ ವರದಿಯ ಪ್ರಕಾರ, 1911ರಲ್ಲಿ, ಆಸ್ಟ್ರೇಲಿಯಾದ ಭೂವಿಜ್ಞಾನಿ ಥಾಮಸ್ ಗ್ರಿಫಿತ್ ಟೇಲರ್ ಅವರು ಟೇಲರ್ ಕಣಿವೆಯಲ್ಲಿ ಅನ್ವೇಷಿಸುತ್ತಾ ಹೊರಟಾಗ ಈ ವಿಚಿತ್ರವೆನಿಸುವ ದೃಶ್ಯವನ್ನು ಪತ್ತೆ ಮಾಡಿದರು. ಇದು ಅವರು ನೋಡಿದ ಬೇರೆ ಯಾವುದೇ ಜಲಪಾತದಂತೆ ಇರಲಿಲ್ಲ, ವಿಶಾಲವಾದ, ಹಿಮಾವೃತವಾದ ಭೂಮಿಯ ನಡುವೆ, ಅವರು ರಕ್ತದಂತೆ ದಟ್ಟ ಕೆಂಪು ಬಣ್ಣದಲ್ಲಿ ನೀರಿನ ಹರಿವನ್ನು ಕಂಡರು, ಇದು ಅವರಿಗೆ ಜೀವನದಲ್ಲಿ ಎಂದೂ ಮರೆಯಲಾಗದ ದೃಶ್ಯ ಎನಿಸಿತ್ತು. ಜೊತೆಗೆ ಈ ಅನ್ವೇಷಣೆಯೂ ಅದರ ಅಸಾಮಾನ್ಯ ಬಣ್ಣದ ರಹಸ್ಯ ಮತ್ತು ಅದು ಎಲ್ಲಿಂದ ಬಂತು ಎಂಬುದನ್ನು ಕಂಡುಹಿಡಿಯಲು ದೀರ್ಘ ವೈಜ್ಞಾನಿಕ ಸಂಶೋಧನೆಗೆ ಕಾರಣವಾಯಿತು.
ನೀರು ಕೆಂಪು ಏಕೆ?
ಈ ಜಲಪಾತದಲ್ಲೇಕೆ ರಕ್ತದಂತಹ ಕೆಂಪು ನೀರು ಹರಿಯುತ್ತಿದೆ ಎಂಬುದನ್ನು ವಿಜ್ಞಾನಿಗಳಿಗೆ ವರ್ಷಗಳವರೆಗೆ ಕಂಡುಹಿಡಿಯಲು ಸಾಧ್ಯವಾಗಲಿಲ್ಲ, ಮೊದಲಿಗೆ, ಕೆಂಪು ಪಾಚಿ ಇದಕ್ಕೆ ಕಾರಣವಾಗಿರಬಹುದು ಎಂದು ಅವರು ಭಾವಿಸಿದ್ದರು, ಆದರೆ ಮುಂದುವರೆದ ಸಂಶೋಧನೆ ಇದಕ್ಕೆ ಬೇರೆಯದೇ ಕಾರಣವನ್ನು ನೀಡಿತು. ಅಂಗ್ಲ ಮಾಧ್ಯಮವೊಂದರ ಇತ್ತೀಚಿನ ವರದಿಯ ಪ್ರಕಾರ ಕೆಂಪು ಬಣ್ಣವು ಲಕ್ಷಾಂತರ ವರ್ಷಗಳಿಂದ ಹಿಮನದಿಯ ಅಡಿಯಲ್ಲಿ ಮುಚ್ಚಿಹೋಗಿರುವ ಕಬ್ಬಿಣದ ಸಮೃದ್ಧತೆಯಿಂದ ಬರುತ್ತಿದೆ ಎಂಬುದನ್ನು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಈ ನೀರು ಭೂಮಿಯ ಮೇಲ್ಭಾಗವನ್ನು ತಲುಪಿ ಆಮ್ಲಜನಕದೊಂದಿಗೆ ಬೆರೆತಾಗ ಅದು ಆಕ್ಸಿಡೀಕರಣದ ಮೂಲಕ ಕೆಂಪಾಗಿ ಬದಲಾಗುತ್ತದೆ. ಅಂದರೆ ಕಬ್ಬಿಣದ ತುಕ್ಕು ಹಿಡಿದಂತಹ ಪ್ರಕ್ರಿಯೆಯೇ ಈ ಜಲಪಾತಕ್ಕೆ ವಿಲಕ್ಷಣವಾದ, ರಕ್ತದಂತಹ ನೋಟವನ್ನು ನೀಡುತ್ತದೆ ಎಂಬುದಾಗಿ ವಿಜ್ಞಾನಿಗಳು ಹೇಳುತ್ತಾರೆ.
ಹಿಮಪಾತದ ಪರಿಸ್ಥಿತಿಯಲ್ಲಿ ನೀರು ಹೇಗೆ ಹರಿಯುತ್ತದೆ?
ರಕ್ತ ಜಲಪಾತದ ಮತ್ತೊಂದು ವಿಶೇಷತೆ ಎಂದರೆ ಅಂಟಾರ್ಕ್ಟಿಕಾದ ತೀವ್ರ ಶೀತದ ನಡುವೆಯೂ ಈ ಜಲಪಾತದ ನೀರು ಮಾತ್ರ ದ್ರವವಾಗಿಯೇ ಉಳಿದಿರುತ್ತದೆ. ಅಂಟಾರ್ಟಿಕಾದಲ್ಲಿ ಸಾಮಾನ್ಯವಾಘಿ ತಾಪಮಾನವೂ ಮೈನಸ್ 19 ಡಿಗ್ರಿಗೆ ಇಳಿದಿರುತ್ತದೆ. ಇದು ನೀರಿನ ಸಾಮಾನ್ಯ ಘನೀಕರಣ ಸ್ಥಿತಿಗಿಂತಲೂ ಕಡಿಮೆ. ಇಂತಹ ಸ್ಥಿತಿಯಲ್ಲಿ ನೀರು ಹರಿಯುವುದು ಅಸಾಧ್ಯವಾಗಿರುತ್ತದೆ. ಆದರೂ ಈ ರಕ್ತಜಲಪಾತ ಜಲರೂಪದಲ್ಲಿರುವುದು ವಿಸ್ಮಯವುಂಟು ಮಾಡುತ್ತದೆ. ಆದರೆ ಈ ವಿಸ್ಮಯಕ್ಕೂ 2003ರಲ್ಲಿ ಸಂಶೋಧಕರು ಕಾರಣ ಹುಡುಕಿದ್ದಾರೆ. ಈ ನೀರಿನಲ್ಲಿ ಸಮುದ್ರದ ನೀರಿನಲ್ಲಿರುವ ಉಪ್ಪಿಗಿಂತಲೂ ಎರಡು ಪಟ್ಟು ಹೆಚ್ಚಿರುತ್ತದೆಯಂತೆ ಈ ಹೆಚ್ಚು ಉಪ್ಪಿನ ಅಂಶವೇ ಈ ನೀರನ್ನು ಮಂಜುಗಡ್ಡಯಾಗದಂತೆ ತಡೆಯುತ್ತದೆಯಂತೆ. ಹೀಗಾಗಿ ಶೂನ್ಯಕ್ಕಿಂತ ಕಡಿಮೆ ತಾಪಮಾನದಲ್ಲಿಯೂ ಈ ರಕ್ತ ಜಲಪಾತವೂ ದ್ರವರೂಪದಲ್ಲಿ ಹರಿಯುತ್ತದೆ.
ಸೂಕ್ಷ್ಮಜೀವಿಗಳ ವಾಸ
ಇಷ್ಟೆಲ್ಲಾ ವಿಲಕ್ಷಣವೆನಿಸುವ ವಿಚಾರಗಳ ಜೊತೆ ಈ ಕೆಂಪು ಜಲಪಾತವೂ ಅನೇಕ ಸಣ್ಣಜೀವಿಗಳಿಗೆ ನೆಲೆಯಾಗಿದೆ ಎಂಬ ವಿಚಾರವನ್ನೂ ನೀವು ನಂಬಲೇಬೇಕು. ವರದಿಯ ಪ್ರಕಾರ, ಹಿಮನದಿಯ ಆಳದಲ್ಲಿ, ನೀರಿನಲ್ಲಿ ಸೂರ್ಯನ ಬೆಳಕು ಅಥವಾ ಆಮ್ಲಜನಕವಿಲ್ಲದ ಸ್ಥಳದಲ್ಲಿ, ಬ್ಯಾಕ್ಟೀರಿಯಾದ ವಿಶಿಷ್ಟ ಸಮುದಾಯವಿದೆಯಂತೆ. ಭೂಮಿ ಮೇಲಿನ ಪ್ರತಿಯೊಂದು ಜೀವಿಗೂ ಸೂರ್ಯನ ಬೆಳಕು ಬೇಕೆ ಬೇಕು. ಆದರೆ ಈ ಜೀವಿಗಳು ಸೂರ್ಯನ ಬೆಳಕನ್ನು ಅವಲಂಬಿಸುವ ಬದಲು, ಕೀಮೋಸಿಂಥೆಸಿಸ್ ಎಂಬ ಪ್ರಕ್ರಿಯೆಯಲ್ಲಿ ಶಕ್ತಿಗಾಗಿ ಸಲ್ಫೇಟ್ ಮತ್ತು ಕಬ್ಬಿಣದಂತಹ ರಾಸಾಯನಿಕಗಳನ್ನು ಬಳಸುತ್ತವೆ. ಅಂತಹ ಕಠಿಣ ವಾತಾವರಣದಲ್ಲಿ ಅವುಗಳ ಬದುಕುಳಿಯುವಿಕೆಯು ಭೂಮಿಯ ಮೇಲಿನ ಅತ್ಯಂತ ತೀವ್ರವಾದ ಸ್ಥಳಗಳಲ್ಲಿಯೂ ಸಹ ಜೀವನವು ಎಷ್ಟು ಹೊಂದಿಕೊಳ್ಳಬಲ್ಲದು ಎಂಬುದನ್ನು ತೋರಿಸುತ್ತದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.