ಇದು ಬಹಳ ಕೆಟ್ಟವರ್ಷ ಸಾರ್. ಯಾವುದೂ ಸರಿಹೋಗಲಿಲ್ಲ, ಯಾರಿಗೂ ಒಳ್ಳೇದಾಗಲಿಲ್ಲ. ಮುಂದಿನ ವರ್ಷ ಎಲ್ಲ ಸರಿಹೋಗುತ್ತೆ. ಸಂತೋಷವಾಗಿ ಬದುಕ್ತೀವಿ ಅಂದರು ಕಲ್ಯಾಣ್. ಕವಿಗಳಿಗೆ ಕನಸಿರುವುದು ಸಹಜ. ಕಲ್ಯಾಣ್ ಪ್ರೇಮಕವಿ ಬೇರೆ. ಅವರಿಗೆ ಹಗಲಲ್ಲೂ ಪ್ರೇಮದ ಕನಸುಗಳೇ ಬೀಳಬಹುದು!
ಒಂದು ಕಾಲದಲ್ಲಿ ಕನ್ನಡದ ಪ್ರೇಮಕವಿ ಎಂದೇ ಹೆಸರಾಗಿದ್ದ ಕೆಎಸ್‌ನ ಮನೆಗೆ ಹೋಗಿ ಅವರ ಕಾಲಿಗೆ ಬಿದ್ದು, ದಂಪತಿಗೆ ಬಾಗಿನ ಕೊಟ್ಟು ಪ್ರೇಮಿಗಳ ದಿನ ಆಚರಿಸಿದವರು ಕಲ್ಯಾಣ್. ಬಹಳ ವರ್ಷ ಮದುವೆಯ ಯೋಚನೆಯೇ ಮಾಡದೇ ಇದ್ದ ಅವರನ್ನು ಅನೇಕರು ಏನ್ರೀ, ಹೆಸರಲ್ಲಿ ಮಾತ್ರ ಕಲ್ಯಾಣ, ಜೀವನದಲ್ಲಿ ಯಾವಾಗ ಮದುವೆ ಅಂತ ಕಾಲೆಳೆಯುತ್ತಿದ್ದದ್ದೂ ಉಂಟು. ಪ್ರೇಮಕವಿತೆ ಬರೆದುಕೊಂಡೇ ಬಾಳುತ್ತೇನೆ ಅಂದುಕೊಂಡ ಕಲ್ಯಾಣ್, ಚಿತ್ರರಂಗದಲ್ಲಿ ಪ್ರೇಮ ಕಮ್ಮಿಯಾದ ನಂತರ ಮದುವೆಯಾದರು. ಸುಖವಾಗಿ ಸಂಸಾರ ಮಾಡುತ್ತಿದ್ದಾರೆ ಅನ್ನುವ ಗುಮಾನಿಯೂ ಇತ್ತು.
ಕೆ ಕಲ್ಯಾಣ್ ಪತ್ನಿ ಖಾತೆಯಿಂದ 45 ಲಕ್ಷ ವರ್ಗಾವಣೆ: ಗುರೂಜಿ ವಾಲಿ ಸೆರೆ
ಮೊನ್ನೆ ಮೊನ್ನೆ ಸಂಸಾರಗುಟ್ಟು ವ್ಯಾಧಿರಟ್ಟು ಪ್ರಕರಣ ಆದ ನಂತರ ಕಲ್ಯಾಣ್‌ರನ್ನು ಮಾತಾಡಿಸಿದರೆ ಅವರು ಹೇಳಿದ್ದಿಷ್ಟು: ನಾನೂ ನನ್ನ ಹೆಂಡ್ತಿಯೂ ಅನ್ಯೋನ್ಯವಾಗಿದ್ದೀವಿ. ಅವಳು ನನ್ನ ಜೀವ, ನಾನು ಅವಳ ಪ್ರಾಣ. ನಡುವೆ ಬಂದ ಯಾರೋ ಆಟವಾಡಿದರು.
ಆಟ ಆಡಿದ್ದು ಹೇಗೆ?
ಕಲ್ಯಾಣ್ ಪ್ರಕಾರ ಮನೆಗೆ ಅಡುಗೆ ಮಾಡುವುದಕ್ಕೆಂದು ಬಂದ ಸ್ವಜಾತೀಯ ಮಹಿಳೆಯೊಬ್ಬರು ಬೆಂಗಳೂರಲ್ಲೇ, ಕಲ್ಯಾಣ್ ಜತೆಗೇ ಇದ್ದ ಅವರ ಅತ್ತೆ ಮಾವ ಇಬ್ಬರನ್ನೂ ನಯವಾದ ಮಾತುಗಳಿಂದ ಮರುಳು ಮಾಡಿದ್ದಾರೆ. ಗುರುಗಳ ಬಳಿಗೆ ಕರೆದೊಯ್ಯುವುದಾಗಿ ಹೇಳಿದ್ದಾರೆ. ವಯಸ್ಸಾದ ದಂಪತಿ ತಮಗೆ ಒಳ್ಳೆಯದಾಗಲಿ ಅಂತ ಮಗಳನ್ನು ಕರೆದುಕೊಂಡೇ ಬೆಳಗಾವಿಗೆ ಹೋಗಿದ್ದಾರೆ. ಅಲ್ಲಿ ಮತ್ತೊಬ್ಬ ದುರುಳನೂ ಜೊತೆಯಾಗಿ ಅತ್ತೆ ಮಾವನ ಆಸ್ತಿಯನ್ನೂ ಬರೆಯಿಸಿಕೊಂಡು, ಕಲ್ಯಾಣ್ ಪತ್ನಿಯ ಖಾತೆಯಿಂದ ಒಂದು ಲಕ್ಷ ಜಮಾ ಮಾಡಿಸಿಕೊಂಡದ್ದೇ ಕಲ್ಯಾಣ್‌ಗೆ ಅನುಮಾನ ಬಂದು ಪತ್ತೇದಾರಿ ಆರಂಭಿಸಿದ್ದಾರೆ. ಪಿತೂರಿ ಬಯಲಾಗಿದೆ.
ಅಷ್ಟಕ್ಕೂ ಅವರ ಅತ್ತೆ ಮಾವ ಯಾಕೆ ದುರುಳನ ಮಾತಿಗೆ ಮರುಳಾದರು? ಅವರು ಕಲ್ಯಾಣ್ ಪತ್ನಿಗೆ ಅದೇನು ಹೇಳಿ ತಲೆಕೆಡಿಸಿದರು? ಅಶ್ವಿನಿ ಮತ್ತು ಕಲ್ಯಾಣ್ ಮಧ್ಯೆ ಮೊದಲೇ ಭಿನ್ನಾಭಿಪ್ರಾಯ ಇತ್ತಾ? ಕಲ್ಯಾಣ್ ಬಗ್ಗೆ ಅಡುಗೆಯಾಕೆ ಏನು ಸುಳ್ಳು ಹೇಳಿ ಅಶ್ವಿನಿಯ ಮನಸ್ಸು ಹಾಳುಮಾಡಿದರು? ಈ ಪ್ರಶ್ನೆಗಳಿಗೆ ಕಲ್ಯಾಣ್ ಬಳಿ ಉತ್ತರ ಇದೆ ಮತ್ತು ಇಲ್ಲ. ಅವರ ಸದ್ಯದ ನಿಲುವೆಂದರೆ ಈಗೆಲ್ಲವೂ ಒಂದಾಗಿದ್ದೀವಿ, ಕಷ್ಟಕಣ್ಮರೆಯಾಗಿದೆ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಿದೆ. ತಪ್ಪು ತಿಳಿದವರಿಗೆ ಬುದ್ಧಿ ಬಂದಿದೆ. ಒಡೆದ ಹಾಲು ಮೊಸರಾಗಿದೆ.
ಕಲ್ಯಾಣ್ ಈಚಿನ ವರ್ಷಗಳಲ್ಲಿ ಬದಲಾಗಿದ್ದಾರಾ? ಖಂಡಿತಾ ಇಲ್ಲ ಅಂತ ಅವರು ಚಿತ್ರಗೀತೆಯ ಮೇಲೆ ಪ್ರಮಾಣ ಮಾಡಿ ಹೇಳುತ್ತಾರೆ. ನಾನು ಹೇಗಿದ್ದೀನೋ ಹಾಗೇ ಇದ್ದೀನಿ, ನನ್ನ ಹೆಂಡ್ತೀನೂ ನನ್ನ ಅಷ್ಟೇ ಪ್ರೀತಿಸ್ತಾಳೆ. ಈ ಅಡುಗೆ ಮಾಡೋಕೆ ಬಂದ ಹೆಂಗಸಿನ ಮೇಲೆ ಬೇರೆ ಬೇರೆ ಊರುಗಳಲ್ಲಿ ಪ್ರಕರಣ ದಾಖಲಾಗಿವೆ. ದೇವರನ್ನು ನಂಬೋರು ದೆವ್ವವನ್ನೂ ನಂಬುತ್ತಾರಲ್ಲ, ಹಾಗೇ ಅವಳೂ ಅವಳ ಗೆಳೆಯನೂ ಸೇರಿಕೊಂಡು ದೇವರು, ದೆವ್ವ, ಮಾಟ ಅಂತೆಲ್ಲ ಹೇಳಿ ಮರುಳುಮಾಡಿದ್ದಾರೆ. ಈಗೆಲ್ಲವೂ ಮುಗಿದಿದೆ. ನಾವು ಒಂದಾಗಿದ್ದೇವೆ. ಎರಡೂ ಕುಟುಂಬದವರೂ ಹಾಲುಖೀರು ಪಾಯಸ ಕುಡಿದು ಸಂತೋಷವಾಗಿದ್ದೇವೆ ಅಂತ ಕಲ್ಯಾಣ್ ಹೇಳಿ ನಕ್ಕರು.
ಮಧ್ಯಂತರದಲ್ಲಿ ಮುರಿದ ಮನಸ್ಸು, ಕ್ಲೈಮ್ಯಾಕ್ಸಿನಲ್ಲಿ ಕೂಡಿಕೊಂಡಿದೆ.