ನಟಿ ರಮ್ಯಾ ಅವರು 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಚಿತ್ರತಂಡದ ವಿರುದ್ಧ 1 ಕೋಟಿ ರೂ. ಪರಿಹಾರ ಕೋರಿ ದಾಖಲಿಸಿದ್ದ ದೂರಿನ ವಿಚಾರಣೆಗೆ ಕೋರ್ಟ್‌ಗೆ ಹಾಜರಾಗಿದ್ದಾರೆ. ಚಿತ್ರತಂಡವು ಅವರ ಫೋಟೋ ಮತ್ತು ವಿಡಿಯೋಗಳನ್ನು ಬಳಸಿಕೊಂಡಿದ್ದಕ್ಕೆ ರಮ್ಯಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು (ಜ.07): ಸ್ಯಾಂಡಲ್‌ವುಡ್ ಕ್ವೀನ್ ಖ್ಯಾತಿಯ ನಟಿ ರಮ್ಯಾ ಅಲಿಯಾಸ್ ದಿವ್ಯಸ್ಪಂದನಾ ಅವರು ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರತಂಡದ ಮೇಲೆ ದಾಖಲು ಮಾಡಿದ್ದ ದೂರಿನ ವಿಚಾರಣೆಗೆ ಕೋರ್ಟ್‌ಗೆ ಬಂದಿದ್ದಾರೆ.
ನಟಿ ರಮ್ಯಾ ಅವರು ಒಂದು ಅವಧಿಯಲ್ಲಿ ಕನ್ನಡ ಚಿತ್ರರಂಗದ ಮಹಾರಾಣಿ ಆಗಿ ಮೆರೆದಿದ್ದಾರೆ. ಯಾವಾಗ ಅವರು ರಾಜಕಾರಣಕ್ಕೆ ಕಾಲಿಟ್ಟು ಒಮ್ಮೆ ಸಂಸದರಾಗಿ ಆಯ್ಕೆಯಾದರೋ ಆಗ ಸಿನಿಮಾ ಜೀವನ ಬೇಸರವೆನಿಸಿತೋ ಗೊತ್ತಿಲ್ಲ. ವಾಪಸ್ ಚಿತ್ರರಂಗದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲಿಲ್ಲ. ಆದರೆ, ಇತ್ತೀಚೆಗೆ ಒಂದು ಸಿನಿಮಾದ ಮೂಲಕ ಮತ್ತೆ ಚಿತ್ರರಂಗಕ್ಕೆ ಕಮ್‌ಬ್ಯಾಕ್ ಮಾಡಲಿದ್ದಾರೆ ಎಂಬುದು ಖಚಿತವಾಗಿದ್ದರೂ ಕೊನೇ ಕ್ಷಣದಲ್ಲಿ ಮನಸ್ಸು ಮುರಿದುಕೊಂಡಿದ್ದಾರೆ. ಆದರೆ, ನಟಿ ರಮ್ಯಾ ಅವರನ್ನು ಚಿತ್ರರಂಗಕ್ಕೆ ವಾಪಸ್ ಕರೆತರಲೇಬೇಕು ಎಂದು ಪಟ್ಟು ಹಿಡಿದು ಶತಪ್ರಯತ್ನ ಮಾಡದ್ದ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರತಂಡಕ್ಕೆ ಕೈಜೋಡಿಸಲು ನಿರಾಕರಿಸಿದ್ದರು. ಆದರೂ ಪಟ್ಟು ಬಿಡದ ಹಾಸ್ಟೆಲ್ ಹುಡುಗರು ರಮ್ಯಾ ಅವರ ಕೆಲವೊಂದು ಫೋಟೋ ಮತ್ತು ವಿಡಿಯೋಗಳನ್ನು ಸಿನಿಮಾದಲ್ಲಿ ಬಳಸಿಕೊಂಡಿದ್ದರು.
ಇದನ್ನು ಸಹಿಸಿಕೊಳ್ಳದ ನಟಿ ರಮ್ಯಾ ಅವರು ಹೊಸಬರೇ ಸೇರಿಕೊಂಡು ಹಣ ಒಟ್ಟುಗೂಡಿಸಿ ನಿರ್ಮಿಸಿದ್ದ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ ತಂಡದ ವಿರುದ್ಧ 1 ಕೋಟಿ ರೂ. ಪರಿಹಾರ ಕೊಡುವಂತೆ ಹಾಗೂ ತಾವಿರುವ ವಿಡಿಯೋ ಡಿಲೀಟ್ ಮಾಡುವಂತೆ ಕೋರ್ಟ್ ಮೊರೆ ಹೋಗಿದ್ದಾರೆ. ಈ ಕುರಿತಾಗಿ ಯಾವುದೇ ಪಾತ್ರ ಮಾಡದಿದ್ದರೂ 1 ಕೋಟಿ ರೂ. ಕೊಡಲು ಸಾಧ್ಯವಾಗದ ಹಾಸ್ಟೆಲ್ ಹುಡುಗರು ಚಿತ್ರತಂಡವು ಕೋರ್ಟ್‌ನಲ್ಲಿ ಫೈಟ್ ಮಾಡುವುದಕ್ಕೆ ಮುಂದಾಗಿತ್ತು.
ಇದನ್ನೂ ಓದಿ: ಟಾಲಿವುಡ್ಗೆ ಹಾರಿತು 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ': ರಮ್ಯಾ ಔಟ್, ರಶ್ಮಿ ಗೌತಮ್ ಇನ್!
ಇದೀಗ ಹಾಸ್ಟೆಲ್ ಹುಡುಗರು ಚಿತ್ರತಂಡವು ನಟಿ ರಮ್ಯಾ ಅವರನ್ನು ಕೋರ್ಟ್‌ಗೆ ಕರೆಸಿದ್ದಾರೆ. ಇಂದು ವಾಣಿಜ್ಯ ಕೋರ್ಟ್‌ಗೆ ವಿಚಾರಣೆಗೆ ಆಗಮಿಸಿದ ನಟಿ ರಮ್ಯಾ ಅವರು ಕೋರ್ಟ್‌ನಲ್ಲಿ ಚಿತ್ರತಂಡದ ವಿರುದ್ಧ ಹಾಕಿದ್ದ 1 ಕೋಟಿ ರೂ. ಪರಿಹಾರ ಮತ್ತು ವಿಡಿಯೋ ಡಿಲೀಟ್ ಮಾಡುವ ಕುರಿತಂತೆ ವಿಚಾರಣೆ ಎದುರಿಸಲಿದ್ದಾರೆ. ಈ ವಿಚಾರಣೆಯ ನಂತರ ಕೋರ್ಟ್ ಏನು ತೀರ್ಪು ನೀಡಲಿದೆ ಎಂಬುದನ್ನು ಕಾದುನೋಡಬೇಕಿದೆ.
ಕನ್ನಡ ಚಿತ್ರರಂಗದಿಂದ ಆಕ್ರೋಶ:
ಯಾವುದೇ ಚಿತ್ರರಂಗವಾದರೂ ಹೊಸಬರನ್ನು ಬೆಳೆಸಬೇಕು. ಆದರೆ, ಬೆಳೆಯುವ ಹುಡುಗರನ್ನು ತುಳಿಯಬಾರದು ಎಂಬ ಮಾತು ಚಿತ್ರರಂಗದಲ್ಲಿ ಕೇಳಿಬರುತ್ತದೆ. ಆದರೆ, ನಟಿ ರಮ್ಯಾ ಅವರು ಹೊಸಬರು ಸೇರಿಕೊಂಡು ಮಾಡಿದ್ದ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಎಂಬ ಸಿನಿಮಾ ತಂಡದ ವಿರುದ್ಧ 1 ಕೋಟಿ ರೂ. ಕೇಳಿರುವುದು ದೊಡ್ಡ ತಪ್ಪು ಎಂಬ ವಿಚಾರ ಸ್ಯಾಂಡಲ್‌ವುಡ್ ಗಾಸಿಪ್‌ಗಳಲ್ಲಿ ದೊಡ್ಡದಾಗಿ ಹರಡಿಕೊಂಡಿತ್ತು. ಇದರ ಜೊತೆಗೆ ಹಾಸ್ಟೆಲ್ ಹುಡುಗರು ಚಿತ್ರತಂಡದಿಂದ ದೊಡ್ಡ ಆದಾಯ ಗಳಿಸದ ಸಿನಿಮಾದಿಂದಾಗಿ ನೀವು ಕೇಳಿದ್ಟು ಹಣ ಕೊಡಲಾಗುವುದಿಲ್ಲ. ನಮ್ಮನ್ನು ಮನ್ನಿಸುವಂತೆ ಮನವಿ ಮಾಡಿದರೂ ಸೊಪ್ಪು ಹಾಕಿರಲಿಲ್ಲ. ಕೋರ್ಟ್‌ಗೆ ಹೋಗಿ ಅರ್ಜಿ ವಿಚಾರಣೆ ಎದುರಿಸುತ್ತಿದ್ದು, ಮುಂದೆ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: ಹಾಸ್ಟೆಲ್ ಹುಡುಗರಿಗೆ ರಮ್ಯಾ ನೋಟಿಸ್ ಭಾಗ್ಯ: ಈ ಸಿನಿಮಾ ಮೇಲೆ ಯಾಕೆ ಅನೇಕರಿಗೆ ಕಣ್ಣು?