ನಿವೃತ್ತ ಕ್ಯಾಪ್ಟನ್‌ ಪಾತ್ರದಲ್ಲಿ ರಾಘವೇಂದ್ರ ರಾಜ್‌ಕುಮಾರ್‌

By Kannadaprabha News  |  First Published Oct 9, 2020, 9:16 AM IST

ರಾಘವೇಂದ್ರ ರಾಜ್‌ಕುಮಾರ್‌ ಮತ್ತೊಂದು ಅವತಾರ ಎತ್ತಿದ್ದಾರೆ. ಅವರ ಹೊಸ ಅವತಾರಕ್ಕೆ ಸಾಕ್ಷಿ ಆಗಿರುವುದು ‘ರಾಜತಂತ್ರ’ ಎನ್ನುವ ಸಿನಿಮಾ. ಬಿಳಿ ಗಡ್ಡ, ಹ್ಯಾಟು, ಸೂಟು-ಬೂಟು ತೊಟ್ಟು ನಿವೃತ್ತ ಕ್ಯಾಪ್ಟನ್‌ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 


ಈ ಚಿತ್ರಕ್ಕೆ ಇತ್ತೀಚೆಗಷ್ಟೆಮುಹೂರ್ತ ನಡೆಯಿತು. ದುಷ್ಟಶಕ್ತಿಗಳನ್ನು ತನ್ನ ಬುದ್ಧಿಶಕ್ತಿ ಹಾಗೂ ತಂತ್ರಗಾರಿಕೆಯಿಂದ ಮಣಿಸುವುದು ಹೇಗೆ ಎನ್ನುವುದು ಈ ಚಿತ್ರದ ಕತೆ. ಈ ಚಿತ್ರದ ಮೂಲಕ ಛಾಯಾಗ್ರಾಹಕ ಪಿ ವಿ ಆರ್‌ ಸ್ವಾಮಿ ನಿರ್ದೇಶಕರಾಗುತ್ತಿದ್ದಾರೆ. ದೊಡ್ಡಣ್ಣ, ಭವ್ಯ, ಶ್ರೀನಿವಾಸಮೂರ್ತಿ, ಶಂಕರ್‌ಅಶ್ವಥ್‌, ರಂಜನ್‌ಹಾಸನ್‌, ಮುನಿರಾಜು, ನೀನಾಸಂ ಅಶ್ವಥ್‌ ಮುಂತಾದವರು ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಮುಹೂರ್ತ ಸಮಾರಂಭದಲ್ಲಿ ದೊಡ್ಡಣ್ಣ ಮೊದಲ ದೃಶ್ಯಕ್ಕೆ ಕ್ಲಾಪ್‌ ಮಾಡಿದರೆ, ಸಂಗೀತ ನಿರ್ದೇಶಕ ಹಂಸಲೇಖ ಅವರು ಕ್ಯಾಮೆರಾ ಚಾಲನೆ ಮಾಡಿದರು. ವಿಜಯಭಾಸ್ಕರ್‌ ಹರಪನಹಳ್ಳಿ, ಜೆ.ಎಂ.ಪ್ರಹ್ಲಾದ್‌ ಹಾಗೂ ಪಿ ವಿ ಆರ್‌ ಸ್ವಾಮಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ‘ಸ್ವಾಮಿ ಅವರು ಈ ಹಿಂದೆ ನನ್ನ ನಟನೆಯ ‘ಅಮ್ಮನ ಮನೆ’ ಚಿತ್ರಕ್ಕೆ ಛಾಯಾಗ್ರಾಹಕರಾಗಿದ್ದರು. ಈಗ ನನ್ನ ಚಿತ್ರಕ್ಕೆ ನಿರ್ದೇಶಕರಾಗುತ್ತಿದ್ದಾರೆ. ಕತೆ ಕೇಳಿದ ಕೂಡಲೇ ಇಷ್ಟವಾಗಿ ಈ ಸಿನಿಮಾ ಮಾಡುತ್ತಿದ್ದೇನೆ. ಹೊರಗಿನಿಂದ ಬರುವ ಶತೃಗಳಿಂದ ದೇಶವನ್ನು ರಕ್ಷಿಸಿದ ವ್ಯಕ್ತಿ, ದೇಶದ ಒಳಗೆ ಬಂದಾಗ ಯಾವ ರೀತಿ ಸಮಾಜ, ದೇಶವನ್ನು ದುಷ್ಟರಿಂದ ರಕ್ಷಿಸುತ್ತಾನೆ ಎಂಬುದನ್ನು ನನ್ನ ಪಾತ್ರದಲ್ಲಿ ತೋರಿಸಲಾಗಿದೆ. ಇಲ್ಲಿ ಕ್ಯಾಪ್ಟನ್‌ ರಾಜನೂ ಹೌದು, ರಾಮನೂ ಹೌದು. ಸೈನ್ಯದಿಂದ ಹೊರಬಂದ ಮೇಲೂ ತನ್ನ ಕರ್ತವ್ಯ ಮುಗಿದಿಲ್ಲವೆಂದುಕೊಂಡು ಜವಾಬ್ದಾರಿ ನಿಭಾಯಿಸುವ ವ್ಯಕ್ತಿ ಕೆಲಸ ಮಾಡುವುದು ತಂತ್ರವೋ, ಮಂತ್ರದಿಂದಲೋ ಎನ್ನುವುದು ಚಿತ್ರದ ಕತೆಯ ತಿರುವು’ ಎಂದು ಹೇಳಿಕೊಂಡಿದ್ದು ರಾಘವೇಂದ್ರ ರಾಜ್‌ಕುಮಾರ್‌ ಅವರು.

Tap to resize

Latest Videos

ಜೆ.ಎಂ. ಪ್ರಹ್ಲಾದ್‌ ಅವರು ಕತೆ, ಚಿತ್ರಕತೆ, ಸಂಭಾಷಣೆ ಹಾಗೂ ಸಾಹಿತ್ಯ ಬರೆದಿದ್ದಾರೆ. ಬೆಂಗಳೂರು, ನೆಲಮಂಗಲ ಸುತ್ತಮುತ್ತ 15 ದಿನಗಳ ಕಾಲ ಮೊದಲ ಹಂತದ ಚಿತ್ರೀಕರಣ ನಡೆಯಲಿದೆ. ಈ ಚಿತ್ರದ ಹಾಡುಗಳಿಗೆ ಶ್ರೀಸುರೇಶ್‌ ಸಂಗೀತ ಸಂಯೋಜನೆ ಮಾಡಿದ್ದಾರೆ.

click me!