
ಕೆ. ಮಂಜು ಅವರ ಪುತ್ರ ಶ್ರೇಯಸ್ ಮೈಹುರಿಗಟ್ಟಿಸಿಕೊಂಡು ಒಂದು ಪೂರ್ಣ ಪ್ರಮಾಣದ ಆ್ಯಕ್ಷನ್ ಚಿತ್ರಕ್ಕೆ ರೆಡಿಯಾಗಿದ್ದಾರೆ. ಈ ಹಂತದಲ್ಲಿ ಮೊಣಕಾಲು ನೋವಿಗೆ ತುತ್ತಾಗಿ ಸ್ವಲ್ಪ ವಿಶ್ರಾಂತಿ ತೆಗೆದುಕೊಂಡು ಮತ್ತೆ ಎದ್ದು ಬಂದಿದ್ದಾರೆ. ಅವರ ಗೆಲುವು ನೋಡುವುದು ಮಂಜು ಮಹದಾಸೆ. ಹಾಗಾಗಿ ಅದ್ದೂರಿಯಾಗಿ ರಾಣ ಸಿನಿಮಾ ಮಾಡಲು ಮುಂದಾಗಿದ್ದಾರೆ. ನಿರ್ದೇಶಕ ನಂದಕಿಶೋರ್‌ಗೆ ಪೂರ್ತಿ ಸ್ವಾತಂತ್ರ್ಯ ಕೊಟ್ಟಿದ್ದಾರೆ. ನಿರ್ಮಾಪಕ ಪುರುಷೋತ್ತಮ ಗುಜ್ಜಲ್‌ರಿಗೆ ಅರ್ಜುನನ ಮುಂದೆ ಕೃಷ್ಣ ಪರಮಾತ್ಮ ನಿಂತಂತೆ ನಾನಿರುತ್ತೇನೆ ಎಂದು ಸಾರ್ವಜನಿಕವಾಗಿ ಘೋಷಿಸಿದ್ದಾರೆ. ಈ ಹೊತ್ತಲ್ಲಿ ಅವರು ಕೃಷ್ಣನ ನಾಯಕತ್ವ ಗುಣವನ್ನು ಮಾತ್ರ ಪರಿಗಣಿಸಿದ್ದಾರೆ ಎಂದು ಅಲ್ಲಿದ್ದವರೆಲ್ಲಾ ಸ್ಪಷ್ಟಪಡಿಸಿಕೊಂಡರು.
ಈ ಸಲ ನಿರ್ದೇಶಕ ನಂದಕಿಶೋರ್ ಆ್ಯಕ್ಷನ್ ಪ್ರಧಾನ ಚಿತ್ರ ಮಾಡುವುದಕ್ಕೆ ರೆಡಿಯಾಗಿದ್ದಾರೆ. ನಾಯಕ ಶ್ರೇಯಸ್ ಅಂಥಾ ಇಂಥಾ ಎಂಥಾ ಆ್ಯಕ್ಷನ್ ಮಾಡುವುದಕ್ಕೂ ಹುಮ್ಮಸ್ಸಿನಿಂದ ನಿಂತಿದ್ದಾರೆ. ಆದರೆ ಕೆ.ಮಂಜು ಅವರು ನನಗಿರುವುದು ಒಬ್ಬನೇ ಮಗ, ಎಗರುವಾಗ ಹುಷಾರು ಎಂಬ ಎಚ್ಚರಿಯನ್ನೂ ನೀಡಿದ್ದಾರೆ. ಈ ಚಿತ್ರಕ್ಕೆ ಇಬ್ಬರು ಚಂದದ ನಾಯಕಿಯರು. ಏಕ್‌ಲವ್‌ಯಾ ಖ್ಯಾತಿಯ ರೀಷ್ಮಾ ನಾಣಯ್ಯ ಮತ್ತು ಮಟಾಶ್ ಸಿನಿಮಾ ಖ್ಯಾತಿಯ ರಜನಿ ಭಾರದ್ವಾಜ್. ಅವರಿಬ್ಬರ ನಗುವಿನ ದೀಪ ವೇದಿಕೆಯನ್ನು ಬೆಳಗಿಸಿತ್ತು. ರಾಘವೇಂದ್ರ, ಮೋಹನ್ ವಿಲನ್‌ಗಳು. ಅವರು ಸ್ವಲ್ಪ ಖಡಕ್ ಆಗಿ ನಿಂತಿದ್ದರು.
ಇದ್ದ ಟೈಟಲಲ್ಲಿ 'ರಾಣಾ' ಆಯ್ಕೆ ಮಾಡಲಾಗಿತ್ತು, ಬೇಸರಿಸುವ ಉದ್ದೇಶವಿಲ್ಲ: ನಂದಕಿಶೋರ್
ಬಂಡಿ ಮಾಂಕಾಳಮ್ಮನ ಸನ್ನಿಧಾನದಲ್ಲಿ ನಡೆದ ಮುಹೂರ್ತ ಸಂದರ್ಭದಲ್ಲಿ ನಿರ್ಮಾಪಕ ಪುರುಷೋತ್ತಮ ಗುಜ್ಜಲ್ ಲವಲವಿಕೆಯಿಂದ ಓಡಾಡುತ್ತಿದ್ದರು. ಅವರ ಅಮ್ಮ ಚಿತ್ರಕ್ಕೆ ಕ್ಲಾಪ್ ಮಾಡಿದರು. ಉಪೇಂದ್ರ, ಪ್ರಿಯಾಂಕ, ಧ್ರುವ ಸರ್ಜಾ, ಆರ್. ಚಂದ್ರು, ಕೆ.ಪಿ. ಶ್ರೀಕಾಂತ್ ಮುಂತಾದ ಘಟಾನುಘಟಿಗಳು ಬಂದು ಇಡೀ ತಂಡಕ್ಕೆ ಶುಭ ಹಾರೈಸಿದರು. ರಾಣ ಚಿತ್ರೀಕರಣ ಕೆಲವೇ ದಿನಗಳಲ್ಲಿ ಶುರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.