ಹೊಸ ಸಿನಿಮಾ ರಿಲೀಸಾಗದೆ ಜನ ಬರಲ್ಲ;ಥೇಟರ್‌ ಮತ್ತೆ ಮುಚ್ಚಿದರೂ ಅಚ್ಚರಿ ಇಲ್ಲ!

By Kannadaprabha NewsFirst Published Oct 23, 2020, 9:02 AM IST
Highlights

‘ಕನ್ನಡದ ಹೊಸ ಸಿನಿಮಾಗಳು ಬಿಡುಗಡೆ ಆಗದಿದ್ದರೆ ಥಿಯೇಟರ್‌ಗೆ ಜನ ಬರುವುದಿಲ್ಲ. ಹೀಗೇ ಆದರೆ ಶುರುವಾದ ಥಿಯೇಟರ್‌ಗಳನ್ನು ಮತ್ತೆ ಮುಚ್ಚಿದರೂ ಅಚ್ಚರಿ ಇಲ್ಲ.’

ಪ್ರದರ್ಶಕರ ಸಂಘದ ಅಧ್ಯಕ್ಷ ಕೆವಿ ಚಂದ್ರಶೇಖರ್‌ ಕಡ್ಡಿ ತುಂಡು ಮಾಡಿದಂತೆ ಹೇಳಿದರು. ಅಲ್ಲಿಗೆ ರೀರಿಲೀಸಾದ ಒಂದೂ ಸಿನಿಮಾಗಳೂ ಗಟ್ಟಿಯಾಗಿ ನಿಲ್ಲದೇ ಹೋಗಿದ್ದು ಸ್ಪಷ್ಟವಾಯಿತು.

ಕಳೆದೊಂದು ವಾರದಲ್ಲಿ ಅನೇಕ ಸಿಂಗಲ್‌ ಸ್ಕ್ರೀನ್‌ಗಳು, ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾ ಪ್ರದರ್ಶನ ಆಗುತ್ತಿದೆ. ಸಿನಿಮಾ ಪ್ರದರ್ಶನ ಖರ್ಚನ್ನು ಥಿಯೇಟರ್‌ಗಳೇ ಭರಿಸಿಕೊಳ್ಳುತ್ತಿವೆ. ಜನ ಕಡಿಮೆಯಾದಷ್ಟೂಕಲೆಕ್ಷನ್‌ ಇರಲ್ಲ. ಪರ್ಸಂಟೇಜ್‌ ಪ್ರಕಾರ ಹಂಚಿಕೊಳ್ಳುವ ತೀರ್ಮಾನಕ್ಕೆ ಬಂದರೂ ನಿರ್ಮಾಪಕರ ಬಳಿಗೆ ಕಾಸು ಬರಲ್ಲ. ಹೀಗಾಗಿ ಸಿನಿಮಾ ರೀರಿಲೀಸ್‌ ಮಾಡಿದರೂ ಪ್ರಯೋಜನ ಆಗಲ್ಲ.

ಹಾಗಾದರೆ ಥಿಯೇಟರ್‌ಗಳೆಲ್ಲಾ ಬಾಗಿಲು ತೆಗೆಯಲು, ಜನ ಥೇಟರ್‌ಗಳಿಗೆ ಬಲಗಾಲಿಟ್ಟು ಒಳಬರಲು ಏನು ಮಾಡಬೇಕು?ಈ ಪ್ರಶ್ನೆಗೆ ಥಿಯೇಟರ್‌ಗಳಿಂದ ಬರುವ ಒಕ್ಕೊರಲ ಮಾತು ಹೊಸ ಸಿನಿಮಾ ರಿಲೀಸಾಗಬೇಕು.

"

ನಿರ್ಮಾಪಕರಿಗೆ ಕೊಂಚ ಭಯ

ಹೊಸ ಸಿನಿಮಾ ರಿಲೀಸ್‌ ಮಾಡಲು ನಿರ್ಮಾಪಕನಿಗೆ ಧೈರ್ಯ ಬರುತ್ತಿಲ್ಲ. ಅದಕ್ಕೆ ಶೇ.50 ಸೀಟ್‌ಗಳು ಮಾತ್ರ ಫುಲ್‌ ಆಗಬೇಕು ಎಂಬ ಷರತ್ತು ಒಂದು ಕಾರಣವಾದರೆ ಪೈರಸಿ ಭಯ ಇನ್ನೊಂದು ಕಾರಣ. ಸಿನಿಮಾ ರಿಲೀಸಾದ ಎರಡು ವಾರಗಳಲ್ಲಿ ಸಿನಿಮಾ ಲಾಭ ಗಳಿಸುವಂತಾಗಬೇಕು ಅನ್ನುವುದು ಹೊಸ ಕಾಲದ ಟ್ರೆಂಡು. ಆಮೇಲೆ ಪೈರಸಿ ಕಾಟ ಶುರುವಾಗುತ್ತದೆ. ಜನ ಬರುವುದು ಕಡಿಮೆಯಾಗುತ್ತದೆ ಎಂಬ ಆತಂಕ. ಅಲ್ಲದೇ ಜನ ಥೇಟರಿಗೆ ಬರುವ ಖಾತರಿಯೂ ಇದ್ದಂತಿಲ್ಲ. ಹಾಗಾಗಿ ಸಿನಿಮಾ ರಿಲೀಸ್‌ ಮಾಡಲು ಹಿಂದೆ ಮುಂದೆ ನೋಡುವ ಸ್ಥಿತಿ ಇದೆ. ಸಣ್ಣ ಸಿನಿಮಾಗಳಾದರೆ ಒಳ್ಳೆಯ ದುಡ್ಡಿಗೆ ಮಾರಾಟವಾದರೆ ಓಟಿಟಿಗೆ ಕೊಡಬಹುದು. ದೊಡ್ಡ ಸಿನಿಮಾಗಳನ್ನು ಓಟಿಟಿಯಲ್ಲಿ ರಿಲೀಸ್‌ ಮಾಡಲು ಯಾರೂ ತಯಾರಿಲ್ಲ. ಹೀಗಾಗಿ ಥೇಟರ್‌ ಅವಲಂಬಿಸುವುದು ಅನಿವಾರ್ಯ ಮತ್ತು ಅವಶ್ಯ.

ಥೇಟರ್‌ಗಳಲ್ಲಿ ಪರಭಾಷೆ ಸಿನಿಮಾ

ಥೇಟರ್‌ಗಳಲ್ಲಿ ಹೊಸ ಸಿನಿಮಾ ಬಿಡುಗಡೆ ಮಾಡಬಹುದು ಅನ್ನುವುದಕ್ಕೆ ಕೆವಿ ಚಂದ್ರಶೇಖರ್‌ ಎರಡು ಕಾರಣ ಕೊಡುತ್ತಾರೆ.

1. ಸಿಂಗಲ್‌ ಸ್ಕ್ರೀನ್‌ಗಳಿಗೆ ಶೇ.50 ಸೀಟು ಅನ್ನುವುದು ದೊಡ್ಡ ಸಮಸ್ಯೆ ಅಲ್ಲ. ಹೊಸ ಸಿನಿಮಾ ರಿಲೀಸ್‌ ಆದರೆ, ಸಿನಿಮಾ ಚೆನ್ನಾಗಿದ್ದರೆ ನಾಲ್ಕು ಪ್ರದರ್ಶನಗಳ ಬದಲಿಗೆ ಆರು ಪ್ರದರ್ಶನ ಇಡಬಹುದು.

2. ನಿರ್ಮಾಪಕರು 2010ರಲ್ಲಿ ಎಷ್ಟುಆದಾಯ ಬರುತ್ತಿತ್ತೋ ಅಷ್ಟುಆದಾಯ ಬಂದರೆ ಸಾಕು ಎಂಬ ಮನಸ್ಥಿತಿ ಇಟ್ಟುಕೊಳ್ಳಬೇಕು. ಆಗ ಹೆಚ್ಚು ದುಡ್ಡು ಬಂದರೆ ಲಾಭವಾಗುತ್ತದೆ.

ಇದರ ಜತೆಗೆ ಅವರು ಇನ್ನೊಂದು ಮಾತು ಹೇಳಿದರು. ‘ಮುಂದಿನ ತಿಂಗಳು ಹಿಂದಿ, ತಮಿಳು, ತೆಲುಗು ಸಿನಿಮಾ ರಿಲೀಸ್‌ ಆಗುವ ಸುದ್ದಿ ಬಂದಿದೆ. ತಮಿಳುನಾಡಿನಲ್ಲಿ ಒಂದೇ ವಾರ ಐದಾರು ಸಿನಿಮಾ ರಿಲೀಸ್‌ ಆಗಲಿದೆಯಂತೆ. ಒಂದು ವೇಳೆ ಪರಭಾಷೆ ಸಿನಿಮಾಗಳು ಬಂದರೆ ನಮ್ಮಲ್ಲೂ ಥಿಯೇಟರ್‌ಗಳಲ್ಲಿ ಪರಭಾಷೆ ಸಿನಿಮಾ ಪ್ರದರ್ಶನ ಅಥವಾ ಆ ಸಿನಿಮಾಗಳ ಡಬ್ಬಿಂಗ್‌ ವರ್ಷನ್‌ ಪ್ರದರ್ಶನ ಆಗಬಹುದು’ ಎನ್ನುತ್ತಾರೆ ಚಂದ್ರಶೇಖರ್‌.

ಅಲ್ಲಿಗೆ ಕನ್ನಡ ಸಿನಿಮಾಗಳಿಗೆ ಕಷ್ಟಮುಂದುವರಿಯುವುದು ಖಾತ್ರಿಯಾದಂತಾಗಿದೆ.

click me!