ಡಿಸಿಎಂ ಭೇಟಿಯಾದ ಶಿವರಾಜ್ ಕುಮಾರ್ ನೇತೃತ್ವದ ನಿಯೋಗ: ಫಿಲ್ಮ್ ಸಿಟಿಗೆ ಸ್ಥಳ ಫಿಕ್ಸ್

Published : Aug 13, 2020, 03:34 PM ISTUpdated : Aug 13, 2020, 03:40 PM IST
ಡಿಸಿಎಂ ಭೇಟಿಯಾದ ಶಿವರಾಜ್ ಕುಮಾರ್ ನೇತೃತ್ವದ ನಿಯೋಗ: ಫಿಲ್ಮ್ ಸಿಟಿಗೆ ಸ್ಥಳ ಫಿಕ್ಸ್

ಸಾರಾಂಶ

ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್ ನೇತೃತ್ವದ ಕನ್ನಡ ಚಿತ್ರರಂಗದ ನಿಯೋಗ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರನ್ನ ಭೇಟಿ ಮಾಡಿದೆ.

ಬೆಂಗಳೂರು, (ಆ.13): ಬಹುನಿರೀಕ್ಷೆಯ ಫಿಲ್ಮ್ ಸಿಟಿಯನ್ನು ರೋರಿಚ್ ಎಸ್ವೇಟಿನ ಬದಲು ಹೆಸರಘಟ್ಟದಲ್ಲಿಯೇ ನಿರ್ಮಾಣ ಮಾಡಲಾಗುವುದು. ಕೋವಿಡ್-19 ನಿಂದ ತೀವ್ರ ಸಂಕಷ್ಟಕ್ಕೆ ಗುರಿ ಆಗಿರುವ ಚಿತ್ರರಂಗದ ಪುನಶ್ಚೇತನಕ್ಕೆ ಎಲ್ಲ ರೀತಿಯ ನೆರವೂ ನೀಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಗುರುವಾರ ಡಾ. ಶಿವರಾಜ್ ಕುಮಾರ್ ನೇತೃತ್ವದಲ್ಲಿ ತಮ್ಮನ್ನು ಭೇಟಿಯಾದ ಕನ್ನಡ ಚಿತ್ರರಂಗದ ನಿಯೋಗದ ಜತೆ ಮಾತುಕತೆ ನಡೆಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ರೋರಿಚ್ ಎಸ್ಟೇಟಿನಲ್ಲಿ ಪರಿಸರಾತ್ಮಕ ಸಮಸ್ಯೆಗಳು ಎದುರಾದವು. ಹೀಗಾಗಿ ಅಲ್ಲಿ ಈ ಯೋಜನೆ ಸಾಧ್ಯವಾಗುತ್ತಿಲ್ಲ ಎಂದರು.

ಚಿತ್ರರಂಗದ ಸ್ಥಿತಿ ಗತಿ ಬಗ್ಗೆ ಶಿವರಾಜ್ ಕುಮಾರ್ ಮನೆಯಲ್ಲಿ ಮತ್ತೊಂದು ಸಭೆ: ಇಲ್ಲಿವೆ ಫೋಟೋಸ್

ಹೆಸರಘಟ್ಟದಲ್ಲಿ 150 ಎಕರೆಯಲ್ಲಿ ಫಿಲ್ಮ್ ಸಿಟಿ

ಹೆಸರಘಟ್ಟದಲ್ಲಿ ಪಶುಸಂಗೋಪನಾ ಇಲಾಖೆಯ 450 ಎಕರೆ ಭೂಮಿ ಇದ್ದು, ಅದರಲ್ಲಿ 150 ಎಕರೆಯನ್ನು ಫಿಲ್ಮ್ ಸಿಟಿ ನಿರ್ಮಾಣಕ್ಕೆ ನೀಡಲಾಗುವುದು. ಅಲ್ಲಿ ಫಿಲ್ಮ್ ಸಿಟಿಗೆ ಸಂಪರ್ಕಕ್ಕೆ ಬೇಕಾದ ರಸ್ತೆಯೊಂದನ್ನು ಮಾಡಿ ಆ ಜಾಗವನ್ನು ಫಿಲ್ಮ್ ಸಿಟಿಗೆ ಹಸ್ತಾಂತರ ಮಾಡಲಾಗುವುದು. ಈಗಾಗಲೇ ಇದಕ್ಕೆ ಸಂಬಂಧಿಸಿದ ಎಲ್ಲ ಪ್ರಕ್ರಿಯೆಗಳು ನಡೆಯುತ್ತಿವೆ. ಆದಷ್ಟು ತ್ವರಿತವಾಗಿ ಫಿಲ್ಮ್ ಸಿಟಿ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು ಎಂದು ಹೇಳಿದರು.

ಕೋವಿಡ್-19 ಕಾರಣದಿಂದ ಚಿತ್ರರಂಗ ಎದುರಿಸುತ್ತಿರವ ಸಮಸ್ಯೆಗಳ ಬಗ್ಗೆ ಶಿವರಾಜ್ ಕುಮಾರ್ ಅವರ ಜತೆ ವಿವರವಾಗಿ ಚರ್ಚೆ ಮಾಡಲಾಗಿದೆ. ಮುಂದಿನ ವಾರ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಸಮಸ್ಯೆಗಳ ಪರಿಹಾರದ ಬಗ್ಗೆ ಮಾತುಕತೆ ನಡೆಸಲಾಗುವುದು. ಅದಕ್ಕೆ ಪೂರ್ವಭಾವಿಯಾಗಿ ಇವತ್ತು ಸಭೆ ನಡೆದಿದೆ. ಸಿಎಂ ಅವರ ಜತೆ ಮಾತುಕತೆಯ ನಂತರ ಚಿತ್ರರಂಗದ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಚಿತ್ರರಂಗದಲ್ಲಿ ಅಸಂಘಟಿತ ದಿನಗೂಲಿ ನೌಕರರ ಹಿತ ಕಾಯುವ ಬಗ್ಗೆ ಆದಷ್ಟು ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು. ಅವರನ್ನು ಕಾರ್ಮಿಕ ಇಲಾಖೆ ಅಡಿಗೆ ತಂದು ಸರಕಾರದ ಸವಲತ್ತುಗಳು ಅವರಿಗೂ ಸಿಗುವಂತೆ ನೋಡಿಕೊಳ್ಳಲಾಗುವುದು. ಪ್ರದರ್ಶಕ ವಲಯದಲ್ಲಿ ಕೆಲಸ ಮಾಡುತ್ತಿರುವ ದಿನಗೂಲಿ ಕಾರ್ಮಿಕರಿಗೂ ಸರಕಾರ ಸಹಾಯ ಹಸ್ತ ಚಾಚಲಿದೆ. ಈ ಬಗ್ಗೆ ಸಂಬಂಧಪಟ್ಟವರ ಜತೆ ಆದಷ್ಟು ಬೇಗ ಚರ್ಚೆ ಮಾಡಲಾಗುವುದು. ಇದರ ಜತಗೆ ಸಕಾಲದಲ್ಲಿ ಸಬ್ಸಿಡಿ ಸಿಗುವಂತೆ ಮಾಡುವುದು, ಆ ಸಬ್ಸಿಡಿ ಪ್ರಮಾಣವನ್ನು ಹೆಚ್ಚಿಸುವುದು, ಜಿಎಸ್ ಟಿ ವಿಚಾರದಲ್ಲಿ ಚಿತ್ರರಂಗ ಎದುರಿಸುತ್ತಿರುವ ಸಮಸ್ಯೆಗಳನ್ನು ಹೋಗಲಾಡಿಸುವುದು ಹಾಗೂ ಸಿನಿಮಾ ನಿರ್ಮಾಣಕ್ಕೆ ಪೂರಕವಾದ ಉತ್ತಮ ಮೂಲಸೌಕರ್ಯಗಳನ್ನು ಒದಗಿಸುವುದೂ ಸೇರಿದಂತೆ ಅನೇಕ ಸಂಗತಿಗಳ ಬಗ್ಗೆ ಮಾತುಕತೆಯಾಗಿದ್ದು, ಮುಖ್ಯಮಂತ್ರಿಗಳ ಜತೆ ಸಭೆ ನಡೆದ ನಂತರ ಇವೆಲ್ಲಕ್ಕೂ ಪರಿಹಾರ ಸಿಗಲಿದೆ ಎಂದು ಸ್ಪಷ್ಟಪಡಿಸಿದರು.

ಎಸ್‌ಒಪಿಯಲ್ಲಿ ರಿಯಾಯಿತಿ

 ಕೋವಿಡ್-19 ಕಾರಣಕ್ಕೆ ಎಸ್‌ಒಪಿ ಜಾರಿಯಲ್ಲಿದೆ. ಕಲಾವಿದರು ಮತ್ತು ಕಾರ್ಮಿಕರ ಹಿತದೃಷ್ಟಿಯಿಂದ ಈ ನಿಯಮಗಳಲ್ಲಿ ಸ್ವಲ್ಪ ಮಟ್ಟಿಗೆ ರಿಯಾಯಿತಿ ನೀಡುವಂತೆ ಚಿತ್ರರಂಗದ ಗಣ್ಯರು ಕೇಳಿದ್ದಾರೆ. ಆ ಬಗ್ಗೆಯೂ ಕ್ರಮ ಕೈಗೊಳ್ಳಲಾಗುವುದು ಎಂದ ಡಿಸಿಎಂ, ಸದ್ಯಕ್ಕೆ ಎಸ್‌ಒಪಿ ಪ್ರಕಾರ ಶೂಟಿಂಗ್ ಮತ್ತಿತರೆ ಸಿನಿಮಾ ಸಂಬಂಧಿತ ಚಟುವಟಿಕೆಗಳಲ್ಲಿ 40 ಜನ ಮಾತ್ರ ಇರಬೇಕು. ಇದರಿಂದ ಕೈಕಾಲು ಕಟ್ಟಿಹಾಕಿದಂತೆ ಆಗಿದ್ದು, ಅನೇಕ ಕಲಾವಿದರು ಮತ್ತು ಕಾರ್ಮಿಕರಿಗೆ ಕಷ್ಟವಾಗುತ್ತಿದೆ. ಹೀಗಾಗಿ ಈ ಮಿತಿಯನ್ನು ಸಡಿಲ ಮಾಡುವಂತೆ ಕೇಳಿದ್ದಾರೆ. ಈ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಡಾ. ಅಶ್ವತ್ಥನಾರಾಯಣ ಹೇಳಿದರು.

ಹೊಸ ಚಲನಚಿತ್ರ ನೀತಿ

ಕನ್ನಡ ಚಲನಚಿತ್ರ ರಂಗವೂ ಸರಕಾರದ ಹಲವಾರು ಇಲಾಖೆಗಳಲ್ಲಿ ಹಂಚಿಹೋಗಿದೆ. ಈಗಾಗಲೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಲನಚಿತ್ರ ಅಕಾಡೆಮಿ ಇತ್ಯಾದಿಗಳ ಅಡಿಯಲ್ಲಿ ಸಿನಿಮಾ ಕ್ಷೇತ್ರದ ಕೆಲಸಗಳು ಆಗುತ್ತಿವೆ. ಇವೆಲ್ಲವನ್ನೂ ಒಟ್ಟಾಗಿ ಅನುಸಂಧಾನಗೊಳಿಸಿ ಕನ್ನಡ ಚಲನಚಿತ್ರ ಉತ್ತೇಜನಾ ಮಂಡಳಿಯನ್ನು ರಚಿಸಲು ಸಾಧ್ಯವೇ? ಎಂಬ ಚಿಂತನೆಯೂ ಇದೆ. ಈ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚೆ ಮಾಡಲಾಗುವುದು. ಹಾಗೆಯೇ ಈಗಾಗಗಲೇ ಇರುವ ಚಲನಚಿತ್ರ ನೀತಿ ಹಳೆಯದಾಗಿದ್ದು, ಆದಷ್ಟು ಬೇಗ ಹೊಸ ನೀತಿಯನ್ನು ರೂಪಿಸಲಾಗುವುದು. ಅದರಲ್ಲಿ ಜನತಾ ಥಿಯೇಟರ್ ಸ್ಥಾಪನೆ, ಈಗಿರುವ ಟಾಕೀಸ್’ಗಳನ್ನು ಉತ್ತಮಪಡಿಸಿ ಪ್ರದರ್ಶನ ವಲಯಕ್ಕೆ ಶಕ್ತಿ ತುಂಬುವ ಅಂಶಗಳನ್ನು ಮುಂಬರುವ ನೀತಿಯಲ್ಲಿ ಸೇರಿಸಲಾಗುವುದು ಎಂದು ವ್ಯಕ್ತಪಡಿಸಿದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ