‘ಚಾರ್ಲಿ’ ಸಿನಿಮಾ ಪ್ರೇರಣೆ: ಪೊಲೀಸ್‌ ಶ್ವಾನಕ್ಕೆ ‘Charlie’ ನಾಮಕರಣ!

*  ಥಿಯೇಟರ್‌ಗಳಲ್ಲಿ ‘ಚಾರ್ಲಿ’ ಸಿನಿಮಾ ತೆರೆ ಕಂಡ ದಿನವೇ ಪೊಲೀಸ್‌ ಶ್ವಾನದಳಕ್ಕೆ ಪುಟಾಣಿ ‘ಚಾರ್ಲಿ’ ಸೇರ್ಪಡೆ
*  ಪ್ರೀಮಿಯರ್‌ ಶೋ ವೀಕ್ಷಿಸಿದ ಮಂಗಳೂರು ಕಮಿಷನರೇಟ್‌ ಪೊಲೀಸರು 
*  777 ಚಾರ್ಲಿ ಚಲನಚಿತ್ರ ಮನುಷ್ಯ ಮತ್ತು ಶ್ವಾನದ ನಡುವಿನ ಬಾಂಧವ್ಯ ತೋರ್ಪಡಿಸಿದೆ


ಮಂಗಳೂರು(ಜೂ.11): ರಕ್ಷಿತ್‌ ಶೆಟ್ಟಿ ಅಭಿನಯದ ಶ್ವಾನವೇ ಪ್ರಮುಖ ಪಾತ್ರದಲ್ಲಿ ಕಾಣಿಸಿರುವ ‘​777 ಚಾರ್ಲಿ’ ಸಿನಿಮಾ ನಿನ್ನೆ(ಶುಕ್ರವಾರ) ತೆರೆ ಕಂಡಿದೆ. ಇದರ ಪ್ರೀಮಿಯರ್‌ ಶೋ ವೀಕ್ಷಿಸಿದ ಮಂಗಳೂರು ಕಮಿಷನರೇಟ್‌ ಪೊಲೀಸರು ಶ್ವಾನದಳಕ್ಕೆ ಸೇರ್ಪಡೆಗೊಳ್ಳುತ್ತಿರುವ ಪುಟಾಣಿ ಶ್ವಾನಕ್ಕೆ ‘ಚಾರ್ಲಿ’ ಎಂದು ಪ್ರೀತಿಯಿಂದ ನಾಮಕರಣ ಮಾಡಿದ್ದಾರೆ.

ಸುಮಾರು 3 ತಿಂಗಳ ಲ್ಯಾಬ್ರೊಡಾರ್‌ ರಿಟ್ರೀವರ್‌ ಜಾತಿಯ ಶ್ವಾನವನ್ನು ಒಂದು ತಿಂಗಳ ಹಿಂದೆ ಮಂಗಳೂರು ಪೊಲೀಸ್‌ ಕಮಿಷನರ್‌ ಕಚೇರಿಯ ಸಿಎಆರ್‌ (ನಗರ ಸಶಸ್ತ್ರ ಮೀಸಲು ಪಡೆ) ವಿಭಾಗಕ್ಕೆ ಖರೀದಿಸಲಾಗಿತ್ತು. ಪ್ರಸ್ತುತ ಮೂರು ತಿಂಗಳ ಶ್ವಾನಕ್ಕೆ ಶುಕ್ರವಾರ ಸಿಎಎಆರ್‌ ವಿಭಾಗದ ಅಧಿಕಾರಿ ಹಾಗೂ ಸಿಬ್ಬಂದಿ ಚಾರ್ಲಿ ಎಂದು ನಾಮಕರಣ ಮಾಡುವ ಕಾರ್ಯಕ್ರಮ ನಡೆಸಿದರು.

Latest Videos

ಚಾರ್ಲಿಗೂ ಫ್ಯಾನ್ಸ್ ಕ್ಲಬ್: ಚಿಕ್ಕಬಳ್ಳಾಪುರದಲ್ಲಿ ಗಮನ ಸೆಳೆದ ಬ್ಯಾನರ್

ಸಿಎಆರ್‌ ವಿಭಾಗದ ಎಸಿಪಿಗಳಾದ ಎಂ. ಉಪಾಸೆ, ಚೆನ್ನವೀರಪ್ಪ ಹಡಪದ್‌ ಮತ್ತಿತರರು ಪುಟಾಣಿ ಚಾರ್ಲಿಗೆ ಹೂಹಾರ ಹಾಕಿ ಕೇಕ್‌ ಕತ್ತರಿಸಿ ತಿನ್ನಿಸುವ ಮೂಲಕ ನಾಮಕರಣ ಮಾಡಿದರು. ‘ಗುರುವಾರ ‘777-ಚಾರ್ಲಿ’ ಚಲನಚಿತ್ರದ ಪ್ರೀಮಿಯರ್‌ ಶೋ ನೋಡಿದ ಬಳಿಕ ನಮ್ಮ ಶ್ವಾನದಳಕ್ಕೆ ಸೇರ್ಪಡೆಗೊಂಡಿರುವ ಪುಟಾಣಿ ಶ್ವಾನಕ್ಕೂ ಚಾರ್ಲಿ ಎಂದು ಹೆಸರಿಡಲು ನಿರ್ಧರಿಸಿದೆವು. ಈ ಬಗ್ಗೆ ಪೊಲೀಸ್‌ ಆಯುಕ್ತರನ್ನು ಕೇಳಿದಾಗ ಅವರು ಒಪ್ಪಿಗೆ ನೀಡಿದರು. ಆ ಹಿನ್ನೆಲೆಯಲ್ಲಿ ಸರಳ ಕಾರ್ಯಕ್ರಮದ ಮೂಲಕ ನಮ್ಮ ವಿಭಾಗದ ಹೊಸ ಸದಸ್ಯೆಯಾಗಿ ಸೇರ್ಪಡೆಗೊಂಡಿರುವ ಪುಟಾಣಿಗೆ ನಾವು ಚಾರ್ಲಿ ಎಂದು ನಾಮಕರಣ ಮಾಡಿದ್ದೇವೆ. 777 ಚಾರ್ಲಿ ಚಲನಚಿತ್ರವು ಮನುಷ್ಯ ಮತ್ತು ಶ್ವಾನದ ನಡುವಿನ ಬಾಂಧವ್ಯವನ್ನು ತೋರ್ಪಡಿಸಿದೆ’ ಎಂದು ಚಾರ್ಲಿಯ ಯೋಗ ಕ್ಷೇಮ, ತರಬೇತಿಯ ಮೇಲ್ವಿಚಾರಣೆಯನ್ನು ವಹಿಸಲಿರುವ ಸಿಎಆರ್‌ ವಿಭಾಗದ ಸಿಬ್ಬಂದಿ ಹರೀಶ್‌ ತಿಳಿಸಿದ್ದಾರೆ.

ಮಂಗಳೂರು ಸಿಎಆರ್‌ ವಿಭಾಗದ ಶ್ವಾನದಳ ಈಗಾಗಲೇ ರಾಣಿ, ಗೀತಾ, ಬಬ್ಲಿ ಹಾಗೂ ರೂಬಿ ಹೆಸರಿನ ನಾಲ್ವರನ್ನು ಹೊಂದಿದೆ. ಇದೀಗ ಚಾರ್ಲಿ ಹೊಸ ಸೇರ್ಪಡೆಯಾಗಿದ್ದು, ಚಾರ್ಲಿ ಮುಂದಿನ ಸುಮಾರು ಏಳು ತಿಂಗಳ ತರಬೇತಿಯನ್ನು ಬೆಂಗಳೂರಿನ ಅಡುಗೋಡಿ ಸಿಆರ್‌ ಸೌತ್‌ ವಿಭಾಗದಲ್ಲಿ ಪಡೆದ ಬಳಿಕ ಮಂಗಳೂರಲ್ಲಿ ಬಾಂಬ್‌ ನಿಷ್ಕಿ್ರಯ ವಿಭಾಗದಲ್ಲಿ ಕಾರ್ಯ ನಿರ್ವಹಿಸಲಿದೆ. ಬಂಟ್ವಾಳದ ವ್ಯಕ್ತಿಯೊಬ್ಬರಿಂದ 20,000 ರು. ನೀಡಿ ಚಾರ್ಲಿಯನ್ನು ಒಂದು ತಿಂಗಳ ಹಿಂದೆ ಖರೀದಿಸಲಾಗಿದೆ ಎಂದು ಎಸಿಪಿ ಉಪಾಸೆ ತಿಳಿಸಿದರು.

ಪೊಲೀಸ್‌ ಶ್ವಾನಗಳಿಗೂ ಇದೆ ಇನ್ಸೂರೆನ್ಸ್‌!

ಪೊಲೀಸ್‌ ಶ್ವಾನಗಳಿಗೆ ತಲಾ 300 ರು. ನಂತೆ ದಿನಕ್ಕೆ ಆಹಾರ ಖರ್ಚು ವೆಚ್ಚಕ್ಕೆ ಪೊಲೀಸ್‌ ಇಲಾಖೆಯಿಂದ ಅನುದಾನ ದೊರೆಯುತ್ತಿರುವುದಲ್ಲದೆ, ಪ್ರತ್ಯೇಕ ವಿಮಾ ಸೌಲಭ್ಯವೂ ಇದೆ. ಸರ್ಕಾರಿ ಸ್ವಾಮ್ಯದ ಯುನೈಟೆಡ್‌ ಇಂಡಿಯಾ ಇನ್ಸೂರೆನ್ಸ್‌ ಕಂಪನಿಯಡಿ ಪೆಟ್‌ ಡಾಗ್‌ ಇನ್ಸೂರೆನ್ಸ್‌ ಕೂಡಾ ಪ್ರತಿ ಶ್ವಾನಕ್ಕೂ ವಾರ್ಷಿಕ ವಿಮಾ ಪಾವತಿ ಮಾಡಲಾಗುತ್ತದೆ. ಈ ಬಗ್ಗೆ ಪ್ರತ್ಯೇಕ ಖರ್ಚು ವೆಚ್ಚಗಳ ಸಮಗ್ರ ಮಾಹಿತಿಯನ್ನೂ ಶ್ವಾನದಳ ಹೊಂದಿದೆ.

Rakshith shettyಗೆ ನಾಯಿಗಿಂತ ಬೆಕ್ಕೇ ಇಷ್ಟವಂತೆ! ಬೆಕ್ಕಿನ ಸಿನಿಮಾ ಮಾಡ್ತಾರಾ?

ಮಂಗಳೂರು ಶ್ವಾನದಳದ ಗೀತಾ ಹೆಸರಿನ ಲ್ಯಾಬ್ರೊಡಾರ್‌ (ರಿಟ್ರೀವರ್‌) ಕಳೆದ ಸುಮಾರು 12 ವರ್ಷಗಳಿಂದ ಬಾಂಬ್‌ ನಿಷ್ಕ್ರೀಯ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಗೀತಾಳ ಜತೆ ರಾಣಿಯೂ ಬಾಂಬ್‌ ನಿಷ್ಕ್ರೀಯ ವಿಭಾಗದ ಶ್ವಾನವಾಗಿದೆ. ರೂಬಿ ಮತ್ತು ಬಬ್ಲಿ ಅಪರಾಧ ವಿಭಾಗದ ಪತ್ತೆ ಕಾರ್ಯದಲ್ಲಿ ಪೊಲೀಸರಿಗೆ ಸಹಕರಿಸುತ್ತಿದ್ದಾರೆ. ಈ ಎಲ್ಲ ಶ್ವಾನಗಳ ಪ್ರತಿ ತಿಂಗಳು ಆರೋಗ್ಯ ತಪಾಸಣೆ, ಮೇಲ್ವಿಚಾರಣೆ ನೋಡಿಕೊಳ್ಳಲು ಸಿಬ್ಬಂದಿಯೂ ಇದ್ದಾರೆ.

 

| Mangaluru Police names 3-month-old Labrador Retriever police dog as 'Charlie' inspired by Kannada film 'Charlie 777'

This new dog will be trained for the detection of explosives: Mangaluru Police Commissioner N Shashi Kumar pic.twitter.com/Ddbogm7b22

— ANI (@ANI)

ಪೊಲೀಸ್‌ ಶ್ವಾನ ದಳಕ್ಕೆ ಒಂದು ತಿಂಗಳ ಹಿಂದೆ ಸೇರ್ಪಡೆಯಾಗಿರುವ ಸದಸ್ಯೆಗೆ ಚಾರ್ಲಿ ನಾಮಕರಣ ಮಾಡುವಂತೆ ವಿಭಾಗದ ಸಿಬ್ಬಂದಿ ಕೋರಿದ್ದರು. ಅದಕ್ಕೆ ಒಪ್ಪಿಗೆ ನೀಡಿದ್ದು, ಈಗ ನಾಮಕರಣ ಮಾಡಿದ್ದಾರೆ. ಚಾರ್ಲಿ ಸಿನೆಮಾದ ಪ್ರೀಮಿಯರ್‌ ಶೋ ನೋಡಿದ ಸಿಬ್ಬಂದಿ ಈ ನಿರ್ಧಾರಕ್ಕೆ ಬಂದಿದ್ದಾರೆ. ಶ್ವಾನದಳದಲ್ಲಿ ಸುಮಾರು 12 ವರ್ಷಗಳಿಂದ ಹ್ಯಾಂಡ್ಲರ್‌ ಆಗಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಶ್ವಾನಗಳ ಜತೆ ನಿಕಟವಾದ ಬಾಂಧವ್ಯವನ್ನು ಹೊಂದಿರುತ್ತಾರೆ. ಶ್ವಾನಕ್ಕೆ ತರಬೇತಿ ವೇಳೆ ಅವರಿಗೂ ತರಬೇತಿ ನೀಡಲಾಗುತ್ತದೆ ಅಂತ ಮಂಗಳೂರು ಕಮಿಷನರ್‌ ಶಶಿಕುಮಾರ್‌ ತಿಳಿಸಿದ್ದಾರೆ.  

click me!