ಅರಿಷಡ್ವರ್ಗ ಇದ್ದರೇನೇ ಮನುಷ್ಯರಾಗೋದು: ಅರವಿಂದ್‌ ಕಾಮತ್‌

By Kannadaprabha NewsFirst Published Nov 27, 2020, 9:03 AM IST
Highlights

ವಿಭಿನ್ನ ರೀತಿಯ ಟ್ರೇಲರ್‌ನಿಂದ ಗಮನ ಸೆಳೆದ, ಕನಸು ಟಾಕೀಸ್‌ ನಿರ್ಮಾಣದ, ಅರವಿಂದ್‌ ಕಾಮತ್‌ ನಿರ್ದೇಶನದ ‘ಅರಿಷಡ್ವರ್ಗ’ ಸಿನಿಮಾ ಇಂದು ಚಿತ್ರಮಂದಿರದಲ್ಲಿ ರಿಲೀಸ್‌ ಆಗುತ್ತಿದೆ. ಈ ಸಂದರ್ಭದಲ್ಲಿ ನಿರ್ದೇಶಕರ ಜತೆ ಮಾತುಕತೆ.

ಅರಿಷಡ್ವರ್ಗ ಸಿನಿಮಾ ಏನು ಹೇಳುತ್ತದೆ?

ನಾನು ಹತ್ತು ವರ್ಷದ ಹಿಂದೆ ಗಂಡು ವೇಶ್ಯೆಯರ ಕುರಿತು ಡಾಕ್ಯುಮೆಂಟರಿ ಮಾಡಬೇಕು ಅಂತ ಹೊರಟಿದ್ದೆ. ಆ ಡಾಕ್ಯುಮೆಂಟರಿ ಮಾಡಲಾಗಲಿಲ್ಲ. ಆದರೆ ಆ ವಿಚಾರ ಮನಸ್ಸಲ್ಲಿತ್ತು. ಅದರ ಜತೆ ಈಗೀಗ ಸಂತಾನಹೀನತೆ ಜಾಸ್ತಿಯಾಗುತ್ತಿದೆ. ಇನ್‌ಫರ್ಟಿಲಿಟಿ ಸೆಂಟರ್‌ಗಳೂ ಹೆಚ್ಚಾಗುತ್ತಿವೆ. ಅದೂ ಮನಸ್ಸಲ್ಲಿತ್ತು. ಮತ್ತೊಂದು ಸಮೀಪದಿಂದ ಘಟನೆಯಿಂದಾಗಿ ದೈಹಿಕ ಆಸೆಗಳನ್ನು ತೀರಿಸಿಕೊಳ್ಳುವ ವಿಚಾರ ಬಂದಾಗ ಈ ಸಮಾಜ ಗಂಡನ್ನು ಮತ್ತು ಹೆಣ್ಣನ್ನು ನೋಡುವ ರೀತಿಯೇ ಭಿನ್ನವಾಗಿರುತ್ತದೆ. ಈ ಮೂರೂ ಎಳೆ ಸೇರಿ ಕತೆ ಹೊಳೆಯಿತು. ಅದಕ್ಕೆ ಅರಿಷಡ್ವರ್ಗ ಎಂಬ ಫಿಲಾಸಫಿ ಸೇರಿಕೊಂಡಿತು. ಹಿರಿಯರು ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ ಹೋದರೆ ಒಳ್ಳೆಯ ಮನುಷ್ಯರಾಗಲು ಸಾಧ್ಯ ಎನ್ನುತ್ತಿದ್ದರು. ಆದರೆ ಅವೆಲ್ಲಾ ಇದ್ದರೇನೇ ಮನುಷ್ಯರಾಗಿ ಇರಬಹುದು ಅನ್ನುವುದು ನನ್ನ ತರ್ಕ. ಈ ಸಿನಿಮಾ ಅದೆಲ್ಲದರ ಸುತ್ತಾ ಸುತ್ತುತ್ತದೆ.

ರಿಲೀಸ್‌ ಮಾಡಲು ಈ ಸಂದರ್ಭ ಸೂಕ್ತ ಅಂತನ್ನಿಸುತ್ತದಾ?

ನಾವು ಸಿನಿಮಾ ಶುರು ಮಾಡಿದ್ದು 2017ರಲ್ಲಿ. 2019 ಜೂನ್‌ನಲ್ಲಿ ಲಂಡನ್‌ನಲ್ಲಿ ಪ್ರೀಮಿಯರ್‌ ಶೋ ಆಯಿತು. ಅಲ್ಲಿಂದ ಸಿಂಗಾಪುರ್‌, ವ್ಯಾಂಕೋವರ್‌ಗೆ ಹೋದೆವು. ಆ ವರ್ಷ ಫಿಲ್ಮ್‌ ಫೆಸ್ಟಿವಲ್‌ಗಳಿಗೆ ಅಂತಲೇ ಇಟ್ಟುಕೊಂಡಿದ್ದೆವು. ಇನ್ನೂ ರಿಲೀಸ್‌ ಮಾಡದೇ ಇರುವುದರಲ್ಲಿ ಅರ್ಥವಿಲ್ಲ. ಗೆಳೆಯ ಮನ್ಸೋರೆ ಆಕ್ಟ್ 1978 ರಿಲೀಸ್‌ ಮಾಡಿ ಸ್ಫೂರ್ತಿಯಾದ. ಪರಭಾಷೆ ಸಿನಿಮಾಗಳೆಲ್ಲಾ ಥಿಯೇಟರ್‌ಗೆ ಬರುವ ಮೊದಲೇ ನಾವು ಬರುವ ಯೋಚನೆಯಿಂದ ಥಿಯೇಟರ್‌ಗೆ ಬರುತ್ತಿದ್ದಾರೆ. ಜನ ಥೇಟರ್‌ಗೆ ಬರುತ್ತಿರುವುದು ನೋಡಿ ನಂಬಿಕೆ ಹೆಚ್ಚಾಗಿದೆ.

ಐಟಿಯಲ್ಲಿದ್ದವರು ದಾರಿತಪ್ಪಿ ಸಿನಿಮಾಗೆ ಬಂದ್ರಾ?

ದಾರಿ ತಪ್ಪಿ ಐಟಿಗೆ ಹೋಗಿದ್ದೆ. ಸರಿ ದಾರಿ ಗೊತ್ತಾಗಿ ಸಿನಿಮಾಗೆ ಬಂದೆ. ಒಂದು ಇಂಗ್ಲಿಷ್‌ ಸಿನಿಮಾ ಮಾಡಿದೆ. ರಿಲೀಸಾಗಲಿಲ್ಲ. ಆ್ಯಡ್‌ ಫಿಲ್ಮ್‌, ಅನಿಮೇಷನ್‌, ಡಾಕ್ಯುಮೆಂಟರಿ ಹೀಗೆ ಕೆಲಸ ಮಾಡಿ ಪೂರ್ಣ ಪ್ರಮಾಣದ ಸಿನಿಮಾ ನಿರ್ದೇಶಕನಾಗಿ ನಿಮ್ಮ ಮುಂದೆ ನಿಂತಿದ್ದೇನೆ.

ನಿಮ್ಮ ಸಿನಿಮಾ ಯಾಕೆ ನೋಡಬೇಕು?

- ಒಮ್ಮೆ ಟ್ರೇಲರ್‌ ನೋಡಿ. ಇಷ್ಟವಾದರೆ ಈ ಸಿನಿಮಾಗೆ ಬನ್ನಿ.

- ಎಲ್ಲರಂತೆ ನಮ್ಮ ಸಿನಿಮಾ ಚೆನ್ನಾಗಿದೆ ಅಂತ ಹೇಳಲ್ಲ. ಚೆನ್ನಾಗಿದೆ ಅನ್ನುವುದು ಅವರವರ ಭಾವ. ಪ್ರಾಮಾಣಿಕವಾಗಿ ಕತೆ ಹೇಳಿದ್ದೇವೆ. ಕೇಳಿಸಿಕೊಳ್ಳುವ, ನೋಡುವ ಮನಸ್ಸಿರಲಿ.

- ಥಿಯೇಟರ್‌ನಲ್ಲಿ ಸಿನಿಮಾ ನೋಡುವ ಒಂದು ಸಂಭ್ರಮವೇ ಮುಗಿದುಹೋಗಿತ್ತು. ಆ ಸಂಭ್ರಮ ಮತ್ತೆ ಬಂದಿದೆ. ಅದಕ್ಕಾಗಿಯಾದರೂ ಥೇಟರ್‌ಗೆ ಬರಬೇಕು.

- ನಾವೆಲ್ಲರೂ ಕತೆ ಹೇಳುವವರೇ. ಕತೆ ಹೇಳುವ ಶೈಲಿ ಭಿನ್ನವಾಗಿರಬಹುದು. ಒಬ್ಬೊಬ್ಬರಿಗೆ ಒಂದೊಂದು ಥರದ ಕತೆ ಇಷ್ಟವಾಗಬಹುದು. ನಮಗೆ ಇಷ್ಟವಾದ ಕತೆ ನಿಮಗೂ ಇಷ್ಟವಾಗಬಹುದು ಎಂಬ ನಂಬಿಕೆಯಿಂದ ಬಂದಿದ್ದೇವೆ. ಸ್ವೀಕರಿಸಿ.

click me!