ಈ ವಾರವೂ 11 ಸಿನಿಮಾ ರಿಲೀಸ್‌;ಬಿಡುಗಡೆಯ ಅತಿವೃಷ್ಟಿಯಲ್ಲಿ ಒಳ್ಳೆಯ ಸಿನಿಮಾಗಳು ಕಾಣೆ!

By Suvarna NewsFirst Published Feb 13, 2020, 8:40 AM IST
Highlights

ಕನ್ನಡ ಚಿತ್ರೋದ್ಯಮ ವರ್ಷದ ಆರಂಭದಲ್ಲೇ ಅತಿವೃಷ್ಟಿಯ ಅಬ್ಬರಕ್ಕೆ ತತ್ತರಿಸಿದೆ. ಪ್ರತಿ ಬಾರಿ ನವೆಂಬರ್‌, ಡಿಸೆಂಬರ್‌ ತಿಂಗಳಲ್ಲಿ ಕಾಣುತ್ತಿದ್ದ ಭೀಕರ ಪರಿಸ್ಥಿತಿ ಈಗ ಫೆಬ್ರವರಿಯಲ್ಲೇ ಶುರುವಾಗಿದೆ. ಬಿಡುಗಡೆ ಆಗುತ್ತಿರುವ ಸಿನಿಮಾಗಳ ಸಂಖ್ಯೆ ಪ್ರತಿವಾರ ಹೆಚ್ಚಾಗುತ್ತಿದೆ. ಪ್ರೇಕ್ಷಕರು ಮಾತ್ರವಲ್ಲ, ಸಿನಿಮಾ ಮಂದಿಯೇ ಬೆಚ್ಚಿ ಬೀಳುವಷ್ಟುಸಂಖ್ಯೆ ಮಿತಿ ಮೀರಿದೆ. ಕಳೆದ ವಾರ ಹತ್ತು ಸಿನಿಮಾಗಳು ತೆರೆ ಕಂಡಿದ್ದೇ ದಾಖಲೆ ಎನ್ನುತ್ತಿದ್ದ ಹೊತ್ತಲ್ಲೇ ಈ ವಾರ ಬರೋಬ್ಬರಿ 11 ಚಿತ್ರಗಳು ಬಿಡುಗಡೆ ಆಗುತ್ತಿವೆ.

ಈಗಾಗಲೇ ‘ಡೆಮೊಪೀಸ್‌’, ‘ಸಾಗುತಾ ದೂರ ದೂರ’, ‘ನವರತ’್ನ, ‘ಬೆಂಕಿಯಲ್ಲಿ ಅರಳಿದ ಹೂವು’, ‘ಲೈಟಾಗಿ ಲವ್ವಾಗಿದೆ’,‘ತುಂಡು ಹೈಕ್ಳ ಸಹವಾಸ’, ‘ಗಡ್ಡಪ್ಪನ ಸರ್ಕಲ್‌’ ಹಾಗೂ ‘ಗಿಫ್ಟ್‌ ಬಾಕ್ಸ್‌’ ಚಿತ್ರಗಳು ಈ ವಾರವೇ ತೆರೆ ಕಾಣುತ್ತಿರುವುದು ಗ್ಯಾರಂಟಿ ಆಗಿದೆ. ಉಳಿದ ಒಂದೆಡೆರೆಡು ಸಿನಿಮಾಗಳು ತೆರೆ ಕಾಣುವ ಸುಳಿವಿದ್ದು, ಆ ಮಾಹಿತಿ ಇನ್ನಷ್ಟೇ ಖಚಿತವಾಗಿಬೇಕಿದೆ. ದುರಂತ ಅಂದ್ರೆ, ಬಂದು ಹೋಗುತ್ತಿರುವ ಈ ಸಿನಿಮಾಗಳ ಅಬ್ಬರದಲ್ಲಿ ಪ್ರೇಕ್ಷಕರು ನೋಡಲೇಬೇಕಿದ್ದ ಗುಣಮಟ್ಟದ ಸಿನಿಮಾಗಳು ಕಾಣೆಯಾಗುತ್ತಿವೆ. ಸಿನಿಮಾ ನಿರ್ಮಾಣಕ್ಕೆ ಬಂಡವಾಳ ಹೂಡಿದವರಿಗೆ ದೇವರೇ ಗತಿ ಎನ್ನುವಂತಾಗಿದೆ.

ನಿಖಿಲ್ ರೇವತಿಗೆ ಹಾಕಿರುವ ಉಂಗುರದ ಬೆಲೆ ಇಷ್ಟೊಂದಾ?

ಪೈಪೋಟಿಯಂತೆ ಬಿಡುಗಡೆ ಆಗುತ್ತಿರುವ ಸಿನಿಮಾಗಳ ಸಂಖ್ಯೆ ಒಂದೆಡೆಯಾದರೆ ಚಿತ್ರಮಂದಿರಗಳ ಕೊರತೆ ಕೂಡ ಕನ್ನಡ ಸಿನಿಮಾಗಳಿಗೆ ದೊಡ್ಡ ಸವಾಲಾಗಿದೆ. ಸದ್ಯಕ್ಕೀಗ ಬಂದು ಹೋಗುತ್ತಿರುವ ಸಿನಿಮಾಗಳ ಅಬ್ಬರದಲ್ಲಿ ‘ಲವ್‌ ಮಾಕ್ಟೆಲ್‌’, ‘ದಿಯಾ’, ‘ಮತ್ತೆ ಉದ್ಭವ’,‘ಮಾಲ್ಗುಡಿ ಡೇಸ್‌’, ‘ಬಿಲ್‌ಗೇಟ್ಸ್‌ ’ ಹಾಗೂ ‘ಜಂಟಲ್‌ಮನ್‌’ ಚಿತ್ರಗಳಿಗೆ ಬಾರೀ ಹೊಡೆತ ಬಿದ್ದಿದೆ. ಇವೆಲ್ಲ ಸಿನಿಮಾಗಳಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕರೂ, ಬಂದು ಹೋಗುವ ಸಿನಿಮಾಗಳಿಗೆ ಚಿತ್ರಮಂದಿರಗಳು ಬೇಕಾಗಿರುವ ಹಿನ್ನೆಲೆಯಲ್ಲಿ ಆ ಸಿನಿಮಾಗಳಿಗೆ ಎತ್ತಂಗಡಿಯ ಆತಂಕ ಎದುರಾಗಿದೆ.

ಮದರಂಗಿ ಕೃಷ್ಣ ಹಾಗೂ ಮಿಲನಾ ನಾಗರಾಜ್‌ ಅಭಿನಯದಲ್ಲಿ ಎರಡು ವಾರಗಳ ಹಿಂದೆಯೇ ಬಂದಿದ್ದ ‘ಲವ್‌ ಮಾಕ್ಟೆಲ್‌’ಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತ್ತು. ಸಿನಿಮಾ ಬಗ್ಗೆ ಪ್ರತಿಯೊಬ್ಬರು ಮೆಚ್ಚಿಕೊಂಡು ಮಾತನಾಡಿದ್ದರು. ಇನ್ನೇನು ಅದು ಮತ್ತೊಂದು ವಾರಕ್ಕೆ ಕಾಲಿಡುತ್ತಿರುವ ಹೊತ್ತಲ್ಲಿ ಚಿತ್ರಮಂದಿರಗಳ ಸಮಸ್ಯೆ ಎದುರಾಯಿತು. ಯಾಕಂದ್ರೆ ಫೆ.7ಕ್ಕೆ ಹತ್ತು ಸಿನಿಮಾಗಳು ತೆರೆ ಕಂಡವು. ಆ ಸಿನಿಮಾಗಳ ಬಿಡುಗಡೆಗೆ ಹಲವು ಚಿತ್ರಮಂದಿರಗಳು ತೆರೆದುಕೊಂಡ ಕಾರಣ ಆ ಸಿನಿಮಾ ತೆರೆ ಕಾಣುತ್ತಿದ್ದ ಹಲವು ಚಿತ್ರಮಂದಿರಗಳಲ್ಲಿ ‘ಲವ್‌ ಮಾಕ್ಟೆಲ್‌’ ಕಾಣೆಯಾಯಿತು. ಮತ್ತೆ ಈ ವಾರಕ್ಕೆ ‘ದಿಯಾ’, ‘ಜಂಟಲಮನ್‌’ ಹಾಗೂ ‘ಮಾಲ್ಗುಡಿ ಡೇಸ್‌’ ಚಿತ್ರಕ್ಕೆ ಅಂತಹದೇ ಆತಂಕ ಎದುರಾಗಿದೆ. ಸದ್ಯಕ್ಕೀಗ ಬೆಂಗಳೂರಿನ ಮೆಜೆಸ್ಟಿಕ್‌ ಪ್ರದೇಶದ ನರ್ತಕಿ ಚಿತ್ರಮಂದಿರದಲ್ಲಿ ಬಿಲ್‌ಗೇಟ್ಸ್‌ ಪ್ರದರ್ಶನ ಕಾಣುತ್ತಿದ್ದರೂ, ಚಿತ್ರ ನಿರ್ಮಾಪಕರ ಗಮನಕ್ಕೆ ಬಾರದೆ ಅಲ್ಲಿ ಈ ವಾರಕ್ಕೆ ಇನ್ನೊಂದು ಚಿತ್ರ ಫಿಕ್ಸ್‌ ಆಗಿದೆ. ಇಂತಹದೇ ಎತ್ತಂಗಡಿ ಬೇರೆ ಸಿನಿಮಾಗಳಿಗೂ ಇನ್ನಾವುದೋ ಚಿತ್ರಮಂದಿರದಲ್ಲಿ ಶುರುವಾಗಿದೆ. ಒಳ್ಳೆಯ ಸಿನಿಮಾ ಬರುತ್ತಿಲ್ಲ ಎನ್ನುವ ಪ್ರೇಕ್ಷಕರು ಒಳ್ಳೆಯ ಸಿನಿಮಾ ಬಂದಾಗ ನೋಡಬೇಕೆಂದರೂ ಈಗ ಚಿತ್ರಮಂದಿರಗಳ ಸಮಸ್ಯೆಯಿಂದ ನೋಡದೇ ಇರುವಂತಹ ವಾತಾವರಣ ನಿರ್ಮಾಣವಾಗಿದೆ.

ಶ್ರೀನಿ ಜೊತೆ 'ಓಲ್ಡ್ ಮಾಂಕ್' ಹಿಡಿದ ಅದಿತಿ ಪ್ರಭುದೇವ.!

ಕನ್ನಡ ಚಿತ್ರಗಳ ಇವತ್ತಿನ ಪರಿಸ್ಥಿತಿ ಭೀಕರವಾಗಿದೆ. ಒಳ್ಳೆಯ ಸಿನಿಮಾಗಳಿಗೂ ಇಲ್ಲಿ ಉಳಿಗಾಲವಿಲ್ಲ. ಇದರ ನಿಯಂತ್ರಣಕ್ಕೆ ಒಂದು ವ್ಯವಸ್ಥೆ ಅತ್ಯಗತ್ಯ. ವಾಣಿಜ್ಯ ಮಂಡಳಿ ಮಧ್ಯ ಪ್ರವೇಶ ಮಾಡಬೇಕಿದೆ. ವಾರದಲ್ಲಿ ಇಂತಿಷ್ಟೇ ಸಿನಿಮಾ ಬರುವಂತೆ ಮಾಡ್ಬೇಕಿದೆ. ಒಳ್ಳೆಯ ಸಿನಿಮಾಗಳು ಉಳಿದು ಕೊಳ್ಳಬೇಕು.

ವಸಂತ್‌ ಕುಮಾರ್‌, ಬಿಲ್‌ಗೇಟ್ಸ್‌ ಚಿತ್ರದ ನಿರ್ಮಾಪಕ

ಈ ವಾರಕ್ಕೆ ತೆರೆಗೆ ಬರುವ ಸಿನಿಮಾಗಳು

1. ಡೆಮೊಪೀಸ್‌

2. ಸಾಗುತಾ ದೂರ ದೂರ

3. ನವರತ್ನ

4. ಬೆಂಕಿಯಲ್ಲಿ ಅರಳಿದ ಹೂವು

5. ಗಡ್ಡಪ್ಪನ ಸರ್ಕಲ್‌

6. ಗಿಫ್ಟ್‌ ಬಾಕ್ಸ್‌

7. ಸಾವು

8.ಲೈಟಾಗಿ ಲವ್ವಾಗಿದೆ

9. ತುಂಡು ಹೈಕ್ಳ ಸಹವಾಸ

10 . ಪ್ರೇಮಸ್ವರ

11. ಪ್ರೀತಿಯೆಂದರೇನು

click me!