ಉದ್ಯೋಗದಲ್ಲಿ ಹೊಸ ಸವಾಲಿಗೆ ‘ಎಸ್’ ಎನ್ನಲೇಕೆ ಹಿಂಜರಿಕೆ?

By Suvarna News  |  First Published Feb 8, 2020, 12:27 PM IST

ನಿಮ್ಮ ಮುಂದೆ ಹೊಸ ಕೆಲಸ ಅಥವಾ ಹೊಸ ಜವಾಬ್ದಾರಿ ಎದುರಾದ್ರೆ ‘ನೋ’ ಎನ್ನುವ ಮೊದಲು ಒಮ್ಮೆ ಯೋಚಿಸಿ. ಹೊಸ ಕೆಲಸಕ್ಕೆ ಏಕೆ ನೀವು ‘ಎಸ್’ ಎನ್ನಬಾರದು? ಆ ಕೆಲಸದಲ್ಲಿ ಯಶಸ್ಸು ಸಿಕ್ಕರೂ, ಸೋಲಾದರೂ ನಿಮಗೊಂದು ಅನುಭವವಂತೂ ಸಿಕ್ಕೇ ಸಿಗುತ್ತದೆ.


ಕೆಲವರಿಗೆ ಏನಾದರೊಂದು ಕೆಲಸ ಮಾಡಲು ಹೇಳಿ. ತಕ್ಷಣ ಅವರಿಂದ ಸಿಗುವ ಪ್ರತಿಕ್ರಿಯೆ ‘ಅಯ್ಯೋ ಈ ಕೆಲಸ ಮಾಡಲು ನನ್ನಿಂದ ಸಾಧ್ಯವಿಲ್ಲ.’ ಅಂದಹಾಗೇ ಈ ಪ್ರತಿಕ್ರಿಯೆಗೆ ಅವರು ತೆಗೆದುಕೊಳ್ಳುವ ಸಮಯ ಕೆಲವೇ ಕೆಲವು ಸೆಕೆಂಡ್‍ಗಳಷ್ಟೆ. ನನ್ನ ಕೈಯಲ್ಲಿ ಈ ಕೆಲಸ ಮಾಡಲಾಗದು ಎನ್ನುವುದು ತುಂಬಾ ಸುಲಭ. ಇದೊಂದು ಮಾತು ಹೇಳಿದರೆ ಸಾಕು,ಅಲ್ಲಿಗೆ ಎಲ್ಲವೂ ಮುಗಿಯಿತು.ಇಲ್ಲಿಂದ ಮುಂದೆ ಯಾವ ಕುತೂಹಲವೂ, ಪರಿಶ್ರಮವೂ, ಸಂತೃಪ್ತಿಯೂ ಇರದು. ಅಷ್ಟೇ ಅಲ್ಲ,ಒಂದು ಉತ್ತಮ ಅನುಭವ ಗಳಿಸುವ ಅವಕಾಶವನ್ನು ನೀವು ಕಳೆದುಕೊಳ್ಳುತ್ತೀರಿ. ಅದೇ ಯಾರದರೂ ನಿಮಗೊಂದು ಕೆಲಸ ಹೇಳಿದಾಗ ಆ ಬಗ್ಗೆ ಅನುಭವ ಇಲ್ಲದಿದ್ದರೂ ಪ್ರಯತ್ನಿಸಿ ನೋಡುತ್ತೇನೆ ಎಂದು ಹೇಳಿ. ಹೀಗೆ ಹೇಳುವಾಗ ನಿಮ್ಮಲ್ಲಿ ಭಯ,ಅನುಮಾನ, ಆತಂಕ ಮುಂತಾದ ಭಾವನೆಗಳು ಮೂಡಬಹುದು. ಆದರೆ, ಒಮ್ಮೆ ಆ ಕಾರ್ಯವನ್ನು ಮಾಡಲು ಆರಂಭಿಸಿ. ನಿಮಗೇ ಗೊತ್ತಿಲ್ಲದೆ ನಿಮ್ಮಲ್ಲಿ ಅಡಗಿರುವ ಹಲವು ಕೌಶಲಗಳ ಪರಿಚಯವಾಗುತ್ತದೆ.ಆ ಕಾರ್ಯದಲ್ಲಿ ಯಶಸ್ಸು ಸಿಕ್ಕಿದರೂ ಸಿಗಬಹುದು. ಒಂದು ವೇಳೆ ಯಶಸ್ಸು ಸಿಕ್ಕಿದರೆ ಮುಂದೆ ಸವಾಲಿನ ಇಂಥ ಇನ್ನಷ್ಟು ಕೆಲಸಗಳನ್ನು ಮಾಡಲು ಪ್ರೇರಣೆ ಸಿಗುತ್ತದೆ. ಒಂದು ವೇಳೆ ಸೋಲಾದರೆ ಒಳ್ಳೆಯ ಅನುಭವ ನಿಮ್ಮದಾಗುತ್ತದೆ. ಯಾವೆಲ್ಲ ಕೌಶಲಗಳನ್ನು ಬೆಳೆಸಿಕೊಳ್ಳಬೇಕು,ನಿಮ್ಮ ದೌರ್ಬಲ್ಯಗಳು ಯಾವುವು ಎಂಬುದು ಪರಿಚಯವಾಗುತ್ತದೆ.

ಸೋತು ನೆಲಕಚ್ಚಿದ ಆತ ನೆಲದಿಂದಲೇ ಮೇಲೆದ್ದ!

Tap to resize

Latest Videos

undefined

ಹೊಸ ಕೆಲಸದಿಂದ ಹೊಸ ಅನುಭವ: ಬದುಕಿನಲ್ಲಿ ಹೊಸ ಅನುಭವಗಳು ಧಕ್ಕಬೇಕೆಂದರೆ ನಾವು ಹೊಸ  ಕೆಲಸಗಳಿಗೆ ಕೈ ಹಾಕಬೇಕು. ನನ್ನಿಂದ ಇದು ಸಾಧ್ಯವಿಲ್ಲ ಎಂಬ ಅಳುಕು ನಮ್ಮ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ. ಕಲಿಕೆಯನ್ನು ನಿಲ್ಲಿಸುತ್ತದೆ. ಕಷ್ಟಪಡದಿದ್ದರೆ ಯಾವುದೂ ಸಿಗುವುದಿಲ್ಲ. ಸುಖ, ಸಂತೃಪ್ತಿ, ಖುಷಿಗಾಗಿ ನಾವು ಕಷ್ಟಪಡಲೇಬೇಕು. ಗೊತ್ತಿಲ್ಲದ ಕೆಲಸಕ್ಕೆ ಕೈ ಹಾಕಿದಾಗ ಪ್ರಾರಂಭದಲ್ಲಿ ಕಷ್ಟವಾಗಬಹುದು.ಆದರೆ, ಕ್ರಮೇಣ ಕೆಲಸದ ಒಂದೊಂದೇ ಕೌಶಲಗಳು ಕರಗತವಾಗುತ್ತ ಹೋದಂತೆ ಕಷ್ಟಗಳೆಲ್ಲ ದೂರವಾಗುತ್ತವೆ. ಆದಕಾರಣ ಯಾರಾದರೂ ಹೊಸ ಜವಾಬ್ದಾರಿ, ಕೆಲಸವನ್ನು ವಹಿಸಲು ಬಂದಾಗ ನನ್ನಿಂದ ಆಗದು ಎನ್ನುವ ಬದಲು ಪ್ರಯತ್ನಿಸಿ ನೋಡುತ್ತೇನೆ ಎಂಬುದು ಜಾಣತನದ ನಡೆ ಎನಿಸಿಕೊಳ್ಳುತ್ತದೆ. 

ಪ್ರಯತ್ನಿಸಿ ನೋಡುತ್ತೇನೆ ಎಂದರೆ ತಪ್ಪಿಲ್ಲ: ಎಷ್ಟೋ ಬಾರಿ ನಾವು ಪ್ರಯತ್ನಿಸಿ ನೋಡುತ್ತೇನೆ ಎಂಬ ಎರಡೇ ಎರಡು ಪದ ಹೇಳಲು ಹಿಂಜರಿಯುತ್ತೇವೆ. ಇದಕ್ಕೆ ಕಾರಣ ನಮ್ಮೊಳಗಿನ ಅಳುಕು ಮತ್ತು ಆತ್ಮವಿಶ್ವಾಸದ ಕೊರತೆ. ಜೊತೆಗೆ ಆ ಕಾರ್ಯವನ್ನು ಪೂರ್ಣಗೊಳಿಸಲು ಸಾಧ್ಯವಾಗದಿದ್ದರೆ ಬೇರೆಯವರು ಏನೆಂದುಕೊಳ್ಳುತ್ತಾರೋ ಎಂಬ ಭಯ. ಇದೇ ಕಾರಣಕ್ಕೆ ಎಷ್ಟೋ ಬಾರಿ ನಮಗೆ ಸಿಕ್ಕ ಅತ್ಯುತ್ತಮ ಅವಕಾಶಗಳನ್ನು ಕೈಚೆಲ್ಲುತ್ತೇವೆ. ಆ ಕೆಲಸವನ್ನು ಬೇರೆಯವರು ಮಾಡಿ ತೋರಿಸಿದ ಬಳಿಕ ‘ಅಯ್ಯೋ ನಾನಿದನ್ನು ಮಾಡಬಹುದಿತ್ತಲ್ಲ. ಒಪ್ಪಿಕೊಳ್ಳದೆ ತಪ್ಪು ಮಾಡಿದೆ’ಎಂದು ಪರಿತಪಿಸುತ್ತೇವೆ. 

Ego ದುನಿಯಾದಲ್ಲಿ ಇಂದಿನ ಸಂಬಂಧಗಳು

ಪ್ರಯತ್ನಕ್ಕೂ ಮುನ್ನ ಸೋಲೊಪ್ಪಿಕೊಳ್ಳಬೇಡಿ: ಎಷ್ಟೋ ಬಾರಿ ಪ್ರಯತ್ನಿಸಿ ನೋಡುವ ಮುನ್ನವೇ ನಾವು ಸೋಲನ್ನು ಒಪ್ಪಿಕೊಂಡು ಬಿಡುತ್ತೇವೆ. ಇದೇ ನಾವು ಮಾಡುವ ದೊಡ್ಡ ತಪ್ಪು. ನಮ್ಮಿಂದ ಆಗುವುದೋ, ಇಲ್ಲವೋ ಎಂಬುದು ನಾವು ಪ್ರಯತ್ನಿಸಿ ನೋಡಿದ ಬಳಿಕವಷ್ಟೇ ತಿಳಿಯುತ್ತದೆ ಅಲ್ಲವೆ? ಹೀಗಿರುವಾಗ ಪ್ರಯತ್ನಿಸದೆ ಸೋಲುಪ್ಪಿಕೊಳ್ಳುವುದು ಸರಿಯಲ್ಲ. ಧೈರ್ಯ, ಆತ್ಮವಿಶ್ವಾಸ ಹೊಂದಿರುವ ವ್ಯಕ್ತಿಗಳು ಪ್ರಯತ್ನಿಸುವ ಮುನ್ನವೇ ಸೋಲೊಪ್ಪಿಕೊಳ್ಳುವುದಿಲ್ಲ. ಪ್ರಯತ್ನಿಸದೇ ಸುಮ್ಮನಿರುವುದಕ್ಕಿಂತ ಪ್ರಯತ್ನಿಸಿ ಸೋಲುವುದೇ ಹೆಚ್ಚು ಶ್ರೇಷ್ಠ. ಬದುಕಿನಲ್ಲಿ ಹೊಸ ಅನುಭವ, ಪಾಠಗಳನ್ನು ಕಲಿಯಬಯಸುವವರು ಪ್ರತಿ ಅವಕಾಶವನ್ನು ಅಪ್ಪಿಕೊಳ್ಳುತ್ತಾರೆ, ಪ್ರಯತ್ನಿಸಿ ನೋಡುತ್ತಾರೆ. 

ದೌರ್ಬಲ್ಯಗಳನ್ನು ಮೆಟ್ಟಿ ನಿಲ್ಲಬಹುದು: ಪ್ರಯತ್ನದಿಂದ ನಮ್ಮಲ್ಲಿನ ಸಾಮಥ್ರ್ಯದ ಅರಿವಾಗುವಂತೆ ದೌರ್ಬಲ್ಯಗಳು ಕೂಡ ತಿಳಿಯುತ್ತವೆ. ಹೊಸ ಕಾರ್ಯದಲ್ಲಿ ಯಶಸ್ಸು ಸಾಧಿಸಲು ಆ ದೌರ್ಬಲ್ಯಗಳನ್ನು ಮೆಟ್ಟಿ ನಿಲ್ಲುವುದು ಹೇಗೆ ಎಂಬುದರ ಅರಿವಾಗುತ್ತದೆ. ದೌರ್ಬಲ್ಯಗಳು ನಮ್ಮ ಬಹುತೇಕ ಕಾರ್ಯಗಳಿಗೆ ದೊಡ್ಡ ಹಿನ್ನಡೆಯಾಗಿರುತ್ತವೆ. ಎಷ್ಟೋ ಬಾರಿ ನಮಗೆ ಅವುಗಳ ಪರಿಚಯವೇ ಇರುವುದಿಲ್ಲ. ಅವೇ ನಮ್ಮ ಸೋಲಿಗೆ ಕಾರಣವಾಗಿರುತ್ತವೆ. 

ಗುರಿ ಸಾಧನೆ ಹಾದಿಯಲ್ಲಿ ನಿಮಗೆ ನೀವೇ ಪ್ರೇರಣೆಯಾಗಬೇಕೇ?

ಇನ್ನೊಬ್ಬರ ಬಗ್ಗೆ ಚಿಂತೆ ಬಿಡಿ: ಹೊಸ ಪ್ರಯತ್ನದಲ್ಲಿ ನಿಮಗೆ ಸೋಲಾದರೆ ಅದಕ್ಕೆ ಖಂಡಿತವಾಗಿಯೂ ಟೀಕೆಗಳು ಬಂದೇ ಬರುತ್ತವೆ. ಅವುಗಳಲ್ಲಿ ನಿಮಗೆ ಯೋಗ್ಯವೆನಿಸಿದ್ದನ್ನು ಆರಿಸಿಕೊಳ್ಳಿ, ಉಳಿದವನ್ನು ಬಿಟ್ಟು ಬಿಡಿ. ನಿಮ್ಮನ್ನು ನೋಡಿ ಕೆಲವರು ಆಡಿಕೊಳ್ಳಬಹುದು,ಅವಮಾನಿಸಬಹುದು. ಆ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ. ನೀವು ಪ್ರಯತ್ನಿಸಿ ನೋಡಿ ಸೋತಿದ್ದೀರಿ. ಆದರೆ, ನಿಮ್ಮನ್ನು ಹೀಯಾಳಿಸುವವರು ಪ್ರಯತ್ನಿಸಿ ಕೂಡ ನೋಡಿಲ್ಲ. ಹೀಗಾಗಿ ಅವರಿಗಿಂತ ನೀವೇ ಹೆಚ್ಚು ಸಮರ್ಥರು. 

click me!