ಬೆಂಗಳೂರು ಕಂಪನಿ ದೇಶದಲ್ಲೇ ಗರಿಷ್ಠ ಖಾಸಗಿ ಉದ್ಯೋಗದಾತ!

By Kannadaprabha NewsFirst Published Feb 6, 2020, 7:30 AM IST
Highlights

ಬೆಂಗಳೂರು ಕಂಪನಿ ದೇಶದಲ್ಲೇ ಗರಿಷ್ಠ ಖಾಸಗಿ ಉದ್ಯೋಗದಾತ| 3.85 ಲಕ್ಷ ಮಂದಿಗೆ ಕೆಲಸ: ಬೆಂಗಳೂರು ಕಂಪನಿ ದಾಖಲೆ| ಸಾಫ್ಟ್‌ವೇರ್‌ ಕಂಪನಿಗಿಂತಲೂ ಹೆಚ್ಚು ಉದ್ಯೋಗ ನೀಡಿದ ಕ್ವೆಸ್‌| ಹಲವು ದೇಶಗಳ ಜನಸಂಖ್ಯೆಗಿಂತ ಇದರ ಉದ್ಯೋಗಿಗಳ ಸಂಖ್ಯೆಯೇ ಹೆಚ್ಚು!

ನವದೆಹಲಿ[ಫೆ.06]: ಅತಿ ಹೆಚ್ಚು ಜನರಿಗೆ ಉದ್ಯೋಗ ನೀಡಿರುವ ದೇಶದ ಖಾಸಗಿ ಕಂಪನಿ ಯಾವುದು ಎಂಬ ಪ್ರಶ್ನೆಯನ್ನು ಯಾರನ್ನಾದರೂ ಕೇಳಿದರೆ, ಸಾಫ್ಟ್‌ವೇರ್‌ ಕಂಪನಿಗಳನ್ನೋ ಅಥವಾ ಪ್ರಸಿದ್ಧ ಬ್ರ್ಯಾಂಡ್‌ಗಳ ಹೆಸರನ್ನೋ ಹೇಳುತ್ತಾರೆ. ಆದರೆ ಬಹುತೇಕ ಮಂದಿಗೆ ಹೆಸರೇ ಗೊತ್ತಿಲ್ಲದ ಕಂಪನಿಯೊಂದು ಸದ್ದಿಲ್ಲದೇ ದೇಶದಲ್ಲೇ ಅತಿ ಹೆಚ್ಚು ಮಂದಿಗೆ ಉದ್ಯೋಗ ನೀಡುವ ಮೂಲಕ ಹೊಸ ದಾಖಲೆ ಬರೆದಿದೆ.

‘ಕ್ವೆಸ್‌ ಕಾಪ್‌ರ್‍’ ಎಂಬ ಈ ಕಂಪನಿಯಲ್ಲಿ ಸದ್ಯ 3.85 ಲಕ್ಷ ಮಂದಿ ಉದ್ಯೋಗ ಮಾಡುತ್ತಿದ್ದಾರೆ. ಈ ಕಂಪನಿಗೆ ಕೆಲಸ ಕೊಡಿಸುವುದೇ ಕಾಯಕ. ಸ್ಯಾಮ್‌ಸಂಗ್‌, ಅಮೆಜಾನ್‌, ರಿಲಯನ್ಸ್‌, ವೊಡಾಫೋನ್‌ ಇಂಡಿಯಾ, ಬಜಾಜ್‌ ಫೈನಾನ್ಸ್‌ ರೀತಿಯ ಸುಮಾರು 2000 ಕಂಪನಿಗಳಿಗೆ ನೌಕರರನ್ನು ಈ ಕಂಪನಿ ಒದಗಿಸುತ್ತದೆ. ಸಿಂಗಾಪುರದಂತಹ ದೇಶಗಳಲ್ಲೂ ಈ ಕಂಪನಿಯ 5 ಸಾವಿರ ನೌಕರರಿದ್ದಾರೆ.

ದೇಶದಲ್ಲೇ ಅತಿ ಹೆಚ್ಚು ಮಂದಿಗೆ ಉದ್ಯೋಗ ನೀಡಿರುವ ಖಾಸಗಿ ಕಂಪನಿ ಎಂಬ ಹಿರಿಮೆ ಟಾಟಾ ಕನ್ಸಲ್ಟೆನ್ಸಿ ಸವೀರ್‍ಸಸ್‌ (ಟಿಸಿಎಸ್‌) ಹೊಂದಿತ್ತು. ಆ ಕಂಪನಿಯಲ್ಲಿ 4.46 ಲಕ್ಷ ಮಂದಿ ದುಡಿಯುತ್ತಿದ್ದಾರೆ. ಆದರೆ ಆ ಪೈಕಿ 90 ಸಾವಿರ ಮಂದಿ ವಿದೇಶದಲ್ಲಿದ್ದಾರೆ. ಹೀಗಾಗಿ ಭಾರತದಲ್ಲಿ ಆ ಕಂಪನಿಯಲ್ಲಿ ಕೆಲಸ ಮಾಡುತ್ತಿರುವವರ ಸಂಖ್ಯೆ 3.6 ಲಕ್ಷ. ಆದರೆ ಅದೇ ಕ್ವೆಸ್‌ನಲ್ಲಿ ಕೆಲಸ ಮಾಡುತ್ತಿರುವವರು 3.85 ಲಕ್ಷ ಮಂದಿ. ಟಿಸಿಎಸ್‌ ಕೇವಲ ಎಂಜಿನಿಯರ್‌ಗಳಿಗೆ ಮಾತ್ರ ಉದ್ಯೋಗ ನೀಡಿದರೆ, ಕ್ವೆಸ್‌ ಹೆಚ್ಚು ಓದಿಲ್ಲದವರಿಗೆ ಉದ್ಯೋಗ ನೀಡುತ್ತಿದೆ.

ಹಲವು ದೇಶಗಳ ಜನಸಂಖ್ಯೆ ನಮ್ಮ ಕಂಪನಿಯ ಉದ್ಯೋಗಿಗಳಿಗಿಂತ ಕಡಿಮೆ ಇದೆ. ಭಾರತೀಯ ಉದ್ಯೋಗ ಮಾರುಕಟ್ಟೆಯ ಮೇಲಿನ ನಮ್ಮ ಪರಿಣಾಮದ ತೀವ್ರತೆ ಹೆಚ್ಚಿನವರಿಗೆ ಗೊತ್ತಿಲ್ಲ ಎಂದು ಕ್ವೆಸ್‌ ಕಾಪ್‌ರ್‍ ಗ್ರೂಪ್‌ನ ಸಿಇಒ ಸೂರಜ್‌ ಮೊರಾಜೆ ಹೇಳುತ್ತಾರೆ.

ಈ ಕಂಪನಿಯ ಉದ್ಯೋಗಿಗಳ ಮಾಸಿಕ ಸಂಬಳ ಸರಾಸರಿ 12 ಸಾವಿರದಿಂದ 40 ಸಾವಿರ ರು.ವರೆಗೂ ಇದೆ. ಶೇ.70ರಷ್ಟುಮಂದಿ ಇದೇ ವೇತನ ಪಡೆಯುತ್ತಿದ್ದಾರೆ. ಶೇ.75ರಷ್ಟುಉದ್ಯೋಗಿಗಳು 21ರಿಂದ 35ರ ಪ್ರಾಯದವರಾಗಿದ್ದಾರೆ.

ಉದ್ಯಮಿ ಅಜಿತ್‌ ಐಸಾಕ್‌ ಎಂಬುವರು ಕ್ವೆಸ್‌ ಕಂಪನಿಯನ್ನು ದಶಕದ ಹಿಂದೆ ಸ್ಥಾಪಿಸಿದರು. ಕೆಲವೊಂದು ಕಂಪನಿಗಳ ಖರೀದಿ ಬಳಿಕ ಇದು ವೇಗವಾಗಿ ಬೆಳೆಯಿತು. ಸದ್ಯ ಬೆಂಗಳೂರಿನ ಬೆಳ್ಳಂದೂರಿನಲ್ಲಿ ಕೇಂದ್ರ ಕಚೇರಿ ಹೊಂದಿದೆ. ಇ-ಕಾಮರ್ಸ್‌ನಿಂದ ಹಿಡಿದು ಒಂದು ಕಟ್ಟಡದ ನಿರ್ವಹಣೆವರೆಗೆ ಈ ಕಂಪನಿ ನೌಕರರನ್ನು ಒದಗಿಸುತ್ತದೆ.

click me!