
ಎಂ.ಅಫ್ರೋಜ್ ಖಾನ್
ರಾಮನಗರ [ಅ.15]: ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಮತ್ತು ಸಂಸದ ಡಿ.ಕೆ. ಸುರೇಶ್ ಅವರೊಂದಿಗೆ ಕೊಟ್ಟು ತೆಗೆದುಕೊಳ್ಳುವ ಹಣಕಾಸಿನ ವ್ಯವಹಾರ ನಡೆಸಿರುವ ತಾಯಿ ಗೌರಮ್ಮ ಅವರು ಜಾರಿ ನಿರ್ದೇಶನಾಲಯ (ಇಡಿ)ದ ಗಾಳಕ್ಕೆ ಸಿಲುಕಿಕೊಂಡಿದ್ದಾರೆ.
ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಡಿ.ಕೆ. ಶಿವಕುಮಾರ್ ತಿಹಾರ್ ಜೈಲಿನಲ್ಲಿದ್ದರೆ, ಸಹೋದರ ಸಂಸದ ಡಿ.ಕೆ. ಸುರೇಶ್ ಜಾರಿ ನಿರ್ದೇಶನಾಲಯದ ವಿಚಾರಣೆ ಎದುರಿಸುತ್ತಿದ್ದಾರೆ. ಇದೀಗ ಮಕ್ಕಳೊಂದಿಗೆ ಕೋಟ್ಯಂತರ ರುಪಾಯಿ ಹಣಕಾಸಿನ ವ್ಯವಹಾರ ನಡೆಸಿರುವ ಕಾರಣ ಗೌರಮ್ಮ ಅವರು ಕೂಡ ಇಡಿ ವಿಚಾರಣೆ ಎದುರಿಸಬೇಕಾಗಿದೆ.
ತಾಯಿ ಗೌರಮ್ಮರವರು ತನ್ನ ಮಕ್ಕಳಾದ ಮಾಜಿ ಸಚಿವ ಡಿ.ಕೆ. ಶಿವಕುಮಾರ್, ಸಂಸದ ಡಿ.ಕೆ. ಸುರೇಶ್ ಹಾಗೂ ಸೊಸೆ ಉಷಾ ಶಿವಕುಮಾರ್ ಅವರಿಂದ ಸಾಲದ ರೂಪದಲ್ಲಿ ಕೋಟ್ಯಂತರ ರುಪಾಯಿ ಹಣ ಕೊಟ್ಟು ತೆಗೆದುಕೊಳ್ಳುವ ವ್ಯವಹಾರ ನಡೆಸಿದ್ದಾರೆ. ಗೌರಮ್ಮ ಅವರಿಗೆ ಸೇರಿದ ಆಸ್ತಿಯೇ ಸುಮಾರು 200 ಕೋಟಿ ರುಪಾಯಿ ಮೇಲಿದೆ ಎನ್ನಲಾಗಿದೆ.
ವಿಧಾನಸಭೆ ಚುನಾವಣೆಯಲ್ಲಿ ಡಿ.ಕೆ. ಶಿವಕುಮಾರ್ ಹಾಗೂ ಲೋಕಸಭಾ ಚುನಾವಣೆಯಲ್ಲಿ ಡಿ.ಕೆ.ಸುರೇಶ್ ಅವರು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡೆವಿಟ್ ಗಳಲ್ಲಿ ತಾಯಿ ಗೌರಮ್ಮ ಅವರೊಂದಿಗೆ ನಡೆಸಿರುವ ಹಣಕಾಸಿನ ವ್ಯವಹಾರ ನಡೆಸಿರುವುದನ್ನು ಉಲ್ಲೇಖಿಸಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಇಡಿ ಅಧಿಕಾರಿಗಳು ಹಣಕಾಸು, ಆಸ್ತಿ ಇತ್ಯಾದಿ ಬಗ್ಗೆ ಮಾಹಿತಿ ಕಲೆ ಹಾಕಲು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದ್ದಾರೆ.
2004ರ ವಿಧಾನಸಭಾ ಚುನಾವಣೆಯಲ್ಲಿ ಸಾತನೂರು ಕ್ಷೇತ್ರದಿಂದ ಸ್ಪರ್ಧಿಸಿದ್ದ ಡಿ.ಕೆ. ಶಿವಕುಮಾರ್ ತಮ್ಮ ತಂದೆ ಡಿ.ಕೆ. ಕೆಂಪೇಗೌಡ (ಅವಿಭಕ್ತ ಕುಟುಂಬ) ಅವರಿಂದ 27.89 ಲಕ್ಷ ರುಪಾಯಿ ಸಾಲ ಬರಬೇಕು ಎಂದು ಹೇಳಿಕೊಂಡಿದ್ದರು.
2008ರ ವಿಧಾನಸಭೆ ಚುನಾವಣೆಯಲ್ಲಿ ಕನಕಪುರ ಕ್ಷೇತ್ರದಿಂದ ಸ್ಪರ್ಧಿಸಿದ ಡಿ.ಕೆ. ಶಿವಕುಮಾರ್ ಸಲ್ಲಿಸಿರುವ ಅಫಿಡೆವಿಟ್‌ನಲ್ಲಿ ತಾಯಿ ಗೌರಮ್ಮ ಅವರಿಗೆ 21,85,000 ರುಪಾಯಿ ಅಡ್ವಾನ್ಸ್ ಕೊಟ್ಟಿದ್ದಾರೆ. ಆದರೆ, ಯಾವ ವ್ಯವಹಾರಕ್ಕೆ ಕೊಟ್ಟಿದ್ದಾರೆ ಎಂಬುದರ ಮಾಹಿತಿ ಇಲ್ಲ. ಇದೇ ಅಫಿಡೆವಿಟ್‌ನಲ್ಲಿ ಡಿಕೆಶಿ ತಮ್ಮ ತಾಯಿ ಅವರಿಂದ 1,32,52,510 ರುಪಾಯಿ ಸಾಲ ಬಾಕಿ ಇದೆ ಎಂದು ಘೋಷಿಸಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಕನಕಪುರ ವಿಧಾನಸಭಾ ಕ್ಷೇತ್ರದಿಂದ 2013ರಲ್ಲಿ ಮತ್ತೆ ಸ್ಪರ್ಧಿಸಿದ ವೇಳೆ ಸಲ್ಲಿಸಿದ ಅಫಿಡೆವಿಟ್‌ನಲ್ಲಿ ತಾಯಿ ಗೌರಮ್ಮ ಅವರಿಂದ 19,89,74,303 ಬಾಕಿ ಬರಬೇಕೆಂದು ಹೇಳಿಕೊಂಡಿದ್ದಾರೆ. 2018ರ ಅಫಿಡಾವಿಟ್‌ನಲ್ಲಿ ಡಿಕೆಶಿ ಒಂದು ಕಡೆ ತಮ್ಮ ತಾಯಿಯವರಿಂದ 22,11,74,303 ರುಪಾಯಿ ಬಾಕಿ ಇದೆ ಎಂದು ಹೇಳಿದ್ದರೆ, ಇದೇ ಅಫಿಡೆವಿಟ್‌ನಲ್ಲಿ ತಾಯಿ ಗೌರಮ್ಮ ಅವರಿಗೆ ತಾವು 36,67,850 ರುಪಾಯಿ ಬಾಕಿ ನೀಡಬೇಕಾಗಿರುವುದಾಗಿ ಉಲ್ಲೇಖಿಸಿದ್ದಾರೆ.
ಪುತ್ರನೊಂದಿಗೆ ಮಾತ್ರವಲ್ಲದೆ ಗೌರಮ್ಮ ಅವರು ಸೊಸೆ ಉಷಾ ಶಿವಕುಮಾರ್ ಅವರೊಂದಿಗೆ ಕೊಟ್ಟು ತೆಗೆದುಕೊಳ್ಳುವ ವ್ಯವಹಾರ ನಡೆಸಿರುವುದು ಡಿ.ಕೆ. ಶಿವಕುಮಾರ್ ಸಲ್ಲಿಸಿರುವ ಅಫಿಡೆವಿಟ್‌ಗಳಲ್ಲಿ ದಾಖಲಾಗಿದೆ. ಉಷಾ ಶಿವಕುಮಾರ್ ಅವರು ಗೌರಮ್ಮ ಅವರಿಗೆ 2013ರಲ್ಲಿ 15,36,15,000 ರುಪಾಯಿ ಹಾಗೂ 2018ರ ಡಿಕೆಶಿ ಅಫಿಡೆವಿಟ್‌ನಲ್ಲಿ 15,86,15,000 ಬಾಕಿ ಕೊಡಬೇಕು ಎಂದು ಘೋಷಿಸಿಕೊಂಡಿದ್ದಾರೆ.
ಇಷ್ಟೇ ಅಲ್ಲದೆ ಗೌರಮ್ಮರವರು ಕಿರಿಯ ಮಗ ಸಂಸದ ಡಿ.ಕೆ.ಸುರೇಶ ಅವರಿಂದಲೂ ಸಾಲ ಪಡೆದುಕೊಂಡಿದ್ದಾರೆ. 2014ರಲ್ಲಿ ಸಂಸತ್ತಿಗೆ ಸ್ಪರ್ಧಿಸಿದ್ದ ಡಿ.ಕೆ. ಸುರೇಶ್ ತಮ್ಮ ಅಫಿಡೆವಿಟ್‌ನಲ್ಲಿ ತಾಯಿಯವರಿಂದ 3,92,00,000 ರು. ಹಾಗೂ 2019ರ ಅಫಿಡೆವಿಟ್‌ನಲ್ಲಿ 4,86,00,000 ರುಪಾಯಿ ಬಾಕಿ ಬರಬೇಕಾಗಿದೆ ಎಂದು ಘೋಷಿಸಿಕೊಂಡಿದ್ದಾರೆ.
ಡಿ.ಕೆ. ಸಹೋದರರ ಹಣಕಾಸು ವ್ಯವಹಾರದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಡಿಕೆಶಿ ಪುತ್ರಿ ಐಶ್ವರ್ಯ ಅವರನ್ನು ವಿಚಾರಣೆ ನಡೆಸಿದ್ದಾರೆ. ಇದೀಗ ಸಹೋದರರ ತಾಯಿ ಗೌರಮ್ಮ ಅವರ ಸರದಿ ಬಂದಿದೆ. ಅಷ್ಟಕ್ಕೂ ಗೌರಮ್ಮ ರವರು ಇಷ್ಟೊಂದು ಪ್ರಮಾಣದ ಬಾಕಿ ಉಳಿಸಿಕೊಂಡಿರುವುದೇಕೆ ಎಂಬುದು ಕುತೂಹಲದ ವಿಚಾರ.