
ರಾಯಚೂರು: ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಖೈದಿಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಮೆದರಗೋಳ ಗ್ರಾಮದ ನಿವಾಸಿ ಭೀಮರಾಯ (42) ಮೃತಪಟ್ಟ ದುರ್ದೈವಿ.
ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಭೀಮರಾಯ ಕಳೆದ ಎರಡು ತಿಂಗಳ ಹಿಂದೆಯಷ್ಟೇ ಜೈಲು ಸೇರಿದ್ದರು. ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಅವರಿಗೆ ಬುಧವಾರ ರಾತ್ರಿ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡಿತ್ತು. ತೀವ್ರ ಹೃದಯಾಘಾತ ಸಂಭವಿಸಿದ ಹಿನ್ನೆಲೆಯಲ್ಲಿ ಜೈಲು ಸಿಬ್ಬಂದಿ ಮತ್ತು ಪೊಲೀಸರು ಅವರನ್ನು ತಕ್ಷಣವೇ ರಾಯಚೂರಿನ ರಿಮ್ಸ್ (RIMS) ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಭೀಮರಾಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಜೈಲಿನಲ್ಲಿ ಭೀಮರಾಯ ಅವರ ಸಾವು ಸಂಭವಿಸಿರುವುದು ಈಗ ಕುಟುಂಬಸ್ಥರಲ್ಲಿ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ನಮ್ಮ ಮಗನ ಸಾವಿನಲ್ಲಿ ಅನುಮಾನವಿದೆ, ಇದು ಕೇವಲ ಹೃದಯಾಘಾತವಲ್ಲ ಎಂದು ಮೃತರ ಸಂಬಂಧಿಕರು ಆರೋಪಿಸಿದ್ದಾರೆ. ಜೈಲು ಅಧಿಕಾರಿಗಳ ಮಾಹಿತಿ ಮತ್ತು ಸಾವಿನ ಕಾರಣದ ಬಗ್ಗೆ ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ್ದು ಸೂಕ್ತ ತನಿಖೆಗೆ ಒತ್ತಾಯಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ರಾಯಚೂರಿನ ಸದರ್ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗುವ ಪ್ರಕ್ರಿಯೆ ನಡೆಯುತ್ತಿದೆ. ಮರಣೋತ್ತರ ಪರೀಕ್ಷೆಯ ಬಳಿಕವಷ್ಟೇ ಸಾವಿಗೆ ನಿಖರವಾದ ಕಾರಣ ತಿಳಿಯಬೇಕಿದೆ. ಜೈಲಿನಲ್ಲಿ ಖೈದಿಯ ಸಾವಾಗಿರುವುದರಿಂದ ನಿಯಮದಂತೆ ನ್ಯಾಯಾಂಗ ತನಿಖೆ ನಡೆಯುವ ಸಾಧ್ಯತೆಯೂ ಇದೆ.