ರಾಯಚೂರಲ್ಲಿ ದಾರುಣ ಘಟನೆ.. ಬೀದಿ ನಾಯಿಗಳ ದಾಳಿಗೆ ಒಂದೂವರೆ ವರ್ಷದ ಕಂದಮ್ಮ ಬಲಿ

Published : Jul 16, 2026, 09:25 AM IST
raichuru street dog attack on baby

ಸಾರಾಂಶ

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ ಬೀದಿ ನಾಯಿಗಳ ಹಿಂಡು ದಾಳಿ ನಡೆಸಿದ ಪರಿಣಾಮ 18 ತಿಂಗಳ ಮಗು ಸಾವನ್ನಪ್ಪಿದೆ. ಮನೆಯಿಂದ ಹೊರಬಂದ ಮಗುವಿನ ಮೇಲೆ ಚಿಕನ್ ಅಂಗಡಿ ಬಳಿ ಜಮಾಯಿಸಿದ್ದ ನಾಯಿಗಳು ದಾಳಿ ಮಾಡಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮಗು ಕೊನೆಯುಸಿರೆಳೆದಿದೆ.

ರಾಯಚೂರು: ಜಿಲ್ಲೆಯಲ್ಲಿ ಬೀದಿ ನಾಯಿಗಳ ಹಾವಳಿ ಮಿತಿಮೀರಿದ್ದು, ಇಂದು ಅತ್ಯಂತ ದಾರುಣ ಘಟನೆಯೊಂದು ಸಂಭವಿಸಿದೆ. ಸಿಂಧನೂರು ತಾಲೂಕಿನಲ್ಲಿ ಬೀದಿ ನಾಯಿಗಳ ಹಿಂಡು ದಾಳಿ ನಡೆಸಿದ ಪರಿಣಾಮ 18 ತಿಂಗಳ ಮಗು ಪ್ರಾಣ ಕಳೆದುಕೊಂಡಿದೆ.

ಘಟನೆಯ ವಿವರ

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಹಂಚಿನಾಳ ಕ್ಯಾಂಪ್‌ನಲ್ಲಿ ಈ ಘಟನೆ ನಡೆದಿದೆ. ಅಬ್ದುಲ್ ರಜಾಕ್ ಮತ್ತು ನದಾಫ್ ದಂಪತಿಯ ಪುತ್ರಿ ಅನಂ (18 ತಿಂಗಳು) ಮೃತಪಟ್ಟ ದುರ್ದೈವಿ. ಮಗು ಮನೆಯಲ್ಲಿ ಮಲಗಿದ್ದಾಗ ಎಚ್ಚರಗೊಂಡು ಪೋಷಕರಿಗೆ ತಿಳಿಯದಂತೆ ರಸ್ತೆಗೆ ಬಂದಿದೆ. ಈ ವೇಳೆ ಹತ್ತಿರದಲ್ಲಿದ್ದ ಚಿಕನ್ ಅಂಗಡಿಯ ಬಳಿ ಜಮಾಯಿಸಿದ್ದ ಬೀದಿ ನಾಯಿಗಳ ಹಿಂಡು ಮಗುವಿನ ಮೇಲೆ ಏಕಾಏಕಿ ದಾಳಿ ನಡೆಸಿವೆ. ನಾಯಿಗಳು ಮಗುವನ್ನು ಮನಬಂದಂತೆ ಕಚ್ಚಿ ಎಳೆದಾಡಿವೆ. ಮಗುವಿನ ಚೀರಾಟ ಕೇಳಿ ಪೋಷಕರು ತಕ್ಷಣ ಸ್ಥಳಕ್ಕೆ ಓಡಿ ಬಂದಿದ್ದಾರೆ.

ದಾರಿ ಮಧ್ಯೆಯೇ ಕೊನೆಯುಸಿರೆಳೆದ ಮಗು

ಗಂಭೀರವಾಗಿ ಗಾಯಗೊಂಡಿದ್ದ ಮಗುವನ್ನು ತಕ್ಷಣವೇ ಸಿಂಧನೂರು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಪರಿಸ್ಥಿತಿ ಚಿಂತಾಜನಕವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರಿನ ರಿಮ್ಸ್ (RIMS) ಆಸ್ಪತ್ರೆಗೆ ಕರೆದೊಯ್ಯಲು ವೈದ್ಯರು ಸೂಚಿಸಿದರು. ದುರಾದೃಷ್ಟವಶಾತ್, ರಿಮ್ಸ್ ಆಸ್ಪತ್ರೆಗೆ ತಲುಪುವ ಮುನ್ನವೇ ಮಗು ದಾರಿ ಮಧ್ಯೆ ಕೊನೆಯುಸಿರೆಳೆದಿದೆ.

ಪೊಲೀಸ್ ಭೇಟಿ

ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಸಿಂಧನೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಿಕನ್ ಅಂಗಡಿಗಳ ಬಳಿ ಎಸೆಯಲಾಗುವ ಮಾಂಸದ ತ್ಯಾಜ್ಯದಿಂದಾಗಿ ಬೀದಿ ನಾಯಿಗಳು ಗುಂಪುಗೂಡುತ್ತಿದ್ದು, ಸಾರ್ವಜನಿಕರ ಮೇಲೆ ದಾಳಿ ಮಾಡುತ್ತಿವೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಸುಗೂಸಿನ ಸಾವು ಹಂಚಿನಾಳ ಕ್ಯಾಂಪ್‌ನಲ್ಲಿ ಶೋಕ ಸಾಗರ ಮುಳುಗಿಸಿದೆ.

PREV
Read more Articles on
click me!

Recommended Stories

ಬೇಸಿಗೆ ಆಗಿ ಬದಲಾಯ್ತು ಮಳೆಗಾಲ, ರಾಜ್ಯದಾದ್ಯಂತ ಎಲ್ಲಾ ಜಿಲ್ಲೆಗಳಲ್ಲೂ 3 ರಿಂದ 4 ಡಿಗ್ರಿ ಸೆ ಉಷ್ಣಾಂಶ ಏರಿಕೆ!
ರಾಯಚೂರು ನಗರ ಕ್ಷೇತ್ರದ ಕಾಂಗ್ರೆಸ್ ಮಾಜಿ ಶಾಸಕ ಸೈಯದ್ ಯಾಸೀನ್ ನಿಧನ; ಇಂದು ಅಂತ್ಯಕ್ರಿಯೆ