ಭಾರತದ ಪ್ರಮುಖ ನಗರಗಳಲ್ಲಿ ಇತ್ತೀಚಿನ ದಿನಗಳಲ್ಲಿ ಒಂದು ವಿಚಿತ್ರ ಹಾಗೂ ಆತಂಕಕಾರಿ ಪರಿಸ್ಥಿತಿಯು ಎದುರಾಗುತ್ತಿದೆ. ಜನಸಂದಣಿಯಿಂದ ಕಿಕ್ಕಿರಿದ ಮೆಟ್ರೋ ರೈಲುಗಳು, ಕೆಫೆಗಳು ಮತ್ತು ಸ್ಮಾರ್ಟ್‌ಫೋನ್‌ಗಳ ಅತಿಯಾದ ಬಳಕೆಯ ನಡುವೆಯೂ ಜನರ ಒಳಮನಸ್ಸಿನಲ್ಲಿ 'ಒಂಟಿತನ' ಎಂಬುದು ಒಂದು ಮೌನ ಸಾಂಕ್ರಾಮಿಕ ರೋಗದಂತೆ ಬೆಳೆಯುತ್ತಿದೆ. 958 ಮಿಲಿಯನ್‌ಗಿಂತಲೂ ಹೆಚ್ಚು ಇಂಟರ್ನೆಟ್ ಬಳಕೆದಾರರನ್ನು ಹೊಂದಿರುವ ಭಾರತದಲ್ಲಿ ಇಂದು ಜನರು ಡಿಜಿಟಲ್ ಆಗಿ ಹೆಚ್ಚು ಸಂಪರ್ಕದಲ್ಲಿದ್ದರೂ, ಭಾವನಾತ್ಮಕವಾಗಿ ಅಷ್ಟೇ ದೂರವಾಗುತ್ತಿದ್ದಾರೆ.
ದೀರ್ಘ ಕೆಲಸದ ಅವಧಿ, ಹೊಸ ನಗರಗಳಿಗೆ ಉದ್ಯೋಗಕ್ಕಾಗಿ ವಲಸೆ ಹೋಗುವುದು ಮತ್ತು ವಿಭಕ್ತ ಕುಟುಂಬಗಳ ಸಂಖ್ಯೆ ಹೆಚ್ಚುತ್ತಿರುವುದು ಈ ಆಧುನಿಕ ಒಂಟಿತನಕ್ಕೆ ಪ್ರಮುಖ ಕಾರಣಗಳಾಗಿವೆ. ಈ ಸಮಸ್ಯೆಯು ಕೇವಲ ಮಾನಸಿಕ ಅಸ್ವಸ್ಥತೆಗೆ ಸೀಮಿತವಾಗದೆ, ನಿದ್ರಾಹೀನತೆ, ಹೃದ್ರೋಗ ಮತ್ತು ಅಲ್ಝೈಮರ್‌ನಂತಹ ಗಂಭೀರ ಕಾಯಿಲೆಗಳಿಗೆ ಪ್ರಚೋದನೆ ನೀಡುತ್ತಿದೆ ಎಂದು ಸಂಶೋಧಕರು ಎಚ್ಚರಿಸಿದ್ದಾರೆ.
ಭಾರತದಲ್ಲಿ ಹೆಚ್ಚುತ್ತಿರುವ ಒಂಟಿತನದ ಸಮಸ್ಯೆಗೆ ಪರಿಹಾರವಾಗಿ ಈಗ 'GetCompanion' ನಂತಹ ಹೊಸ ಸ್ಟಾರ್ಟ್‌ಅಪ್‌ಗಳು ಮಾರುಕಟ್ಟೆಗೆ ಬರುತ್ತಿವೆ. ಇವುಗಳು ಜನರಿಗೆ ನೀವು ಒಬ್ಬಂಟಿಯಾಗಿದ್ದಾಗ ಯಾರ ಜೊತೆಯಾದರೂ ಮಾತನಾಡಬೇಕು ಎನಿಸಿದರೆ ಅಥವಾ ವಾಕಿಂಗ್ ಹೋಗಲು, ವಿಡಿಯೋ ಗೇಮ್ ಆಡಲು ಸಂಗಾತಿಯನ್ನು ಒದಗಿಸುತ್ತವೆ. ನೀವಿಲ್ಲಿ ಗಂಟೆಗೆ 600 ರಿಂದ 2,000 ರೂಪಾಯಿಗಳನ್ನು ನೀಡಿ ಒಬ್ಬ ಗೆಳೆಯನನ್ನು ಬಾಡಿಗೆಗೆ ಪಡೆಯಬಹುದು.
ಈ ಪರಿಕಲ್ಪನೆಯು ಜಪಾನ್‌ನಲ್ಲಿರುವ 'ಬಾಯ್‌ಫ್ರೆಂಡ್ ರೆಂಟಲ್' ಸೇವೆಯಂತೆ ಕಂಡರೂ, ಭಾರತದಲ್ಲಿ ಇದು ಕೇವಲ ಸ್ನೇಹ ಮತ್ತು ಮಾತುಕತೆಗೆ ಮಾತ್ರ ಸೀಮಿತವಾಗಿದೆ. ಇಲ್ಲಿ ಕಟ್ಟುನಿಟ್ಟಾದ ನಿಯಮಗಳಿದ್ದು, ಯಾವುದೇ ರೀತಿಯ ಡೇಟಿಂಗ್, ಶಾರೀರಿಕ ಸಂಪರ್ಕ ಅಥವಾ ಅನೈತಿಕ ಚಟುವಟಿಕೆಗಳಿಗೆ ಆಸ್ಪದವಿಲ್ಲ ಮತ್ತು ಅಂತಹ ಕೆಲಸಗಳಿಗೆ ಇಲ್ಲಿ ಅವಕಾಶವೂ ಇರುವುದಿಲ್ಲ. ಮೂಲಭೂತವಾಗಿ, ಇದು ಮನುಷ್ಯನ ಸಾಂಗತ್ಯವನ್ನು ಅಧಿಕೃತವಾಗಿ ಮತ್ತು ಸುರಕ್ಷಿತವಾಗಿ ಬಾಡಿಗೆಗೆ ಪಡೆಯುವ ಒಂದು ಆಧುನಿಕ ವ್ಯವಸ್ಥೆಯಾಗಿದೆ.
ಈ ಸೇವೆಯು ಕೇವಲ ಹರಟೆ ಹೊಡೆಯಲು ಮಾತ್ರವಲ್ಲದೆ, ದೈನಂದಿನ ಅವಶ್ಯಕತೆಗಳಿಗೂ ಆಸರೆಯಾಗುತ್ತಿದೆ. ಉದಾಹರಣೆಗೆ, ಒಬ್ಬ ವ್ಯಕ್ತಿಯು ತನ್ನ 91 ವರ್ಷದ ತಂದೆಗೆ ಪುಸ್ತಕ ಓದಿ ಹೇಳಲು, ಔಷಧಿ ನೀಡಲು ಮತ್ತು ಆಸ್ಪತ್ರೆಗೆ ಕರೆದೊಯ್ಯಲು ಇಂತಹ ಪಾವತಿ ಆಧಾರಿತ ಸಹಾಯಕರನ್ನು ಬಳಸಿಕೊಳ್ಳುತ್ತಿದ್ದಾರೆ. ದಿನಸಿ ಖರೀದಿಸಲು ಜೊತೆಯಾಗುವುದು ಅಥವಾ ಏರ್‌ಪೋರ್ಟ್‌ಗೆ ಹೋಗುವಾಗ ಜೊತೆಗಿರುವುದು ಹೀಗೆ ಸಣ್ಣಪುಟ್ಟ ಕೆಲಸಗಳಿಗೂ ಜನರಿಗೆ ಒಬ್ಬ ನಂಬಿಕಸ್ಥ ಸಂಗಾತಿಯ ಅವಶ್ಯಕತೆ ಇಂದಿನ ವೇಗದ ಬದುಕಿನಲ್ಲಿ ಅನಿವಾರ್ಯವಾಗಿದೆ. ಅಂದಹಾಗೆ ಈ ಸಂಸ್ಥೆಗಳು ಅಭ್ಯರ್ಥಿಗಳನ್ನು ಕೆಲಸಕ್ಕೆ ಸೇರಿಸಿಕೊಳ್ಳುವ ಮೊದಲು ಅವರ ಹಿನ್ನೆಲೆ ಪರಿಶೀಲನೆ, ಸೈಕೋಮೆಟ್ರಿಕ್ ಪರೀಕ್ಷೆ ಮತ್ತು ಕಠಿಣ ತರಬೇತಿಯನ್ನು ನೀಡುತ್ತವೆ. ಮಹಿಳಾ ಸಿಬ್ಬಂದಿಗಳ ಸುರಕ್ಷತೆಗಾಗಿ ಅವರ ಜೊತೆ ಪುರುಷ ಸಿಬ್ಬಂದಿಯನ್ನು ಕಳುಹಿಸುವ ಪ್ರೋಟೋಕಾಲ್ ಕೂಡ ಇಲ್ಲಿದೆ.
ಕೊನೆಯದಾಗಿ ಹೇಳಬೇಕೆಂದರೆ, ಬಾಡಿಗೆ ಗೆಳೆಯರ ಈ ಸಂಸ್ಕೃತಿಯು ನಮ್ಮ ಸಮಾಜದ ಕಟು ವಾಸ್ತವದ ಪ್ರತಿಬಿಂಬವಾಗಿದೆ. ಜನರಿಗೆ ಇಂದು ಸಲಹೆ ಅಥವಾ ತಂತ್ರಜ್ಞಾನಕ್ಕಿಂತ ಹೆಚ್ಚಾಗಿ ತಮ್ಮ ಪಕ್ಕದಲ್ಲಿ ಕುಳಿತು ಮೌನವಾಗಿ ಆಲಿಸುವ ಒಬ್ಬ ಮನುಷ್ಯನ ಸಾಂಗತ್ಯ ಬೇಕಿದೆ. ಡಿಜಿಟಲ್ ಯುಗದಲ್ಲಿ ಮರೆಯಾಗುತ್ತಿರುವ ಮಾನವೀಯ ಸ್ಪರ್ಶ ಮತ್ತು ಪರಸ್ಪರ ಒಡನಾಟವನ್ನು ಇಂತಹ ಸೇವೆಗಳು ಒದಗಿಸಲು ಪ್ರಯತ್ನಿಸುತ್ತಿವೆ. ಮುಂದಿನ ದಿನಗಳಲ್ಲಿ ಇದು ಕೇವಲ ಒಂದು ಸೇವೆಯಾಗಿ ಉಳಿಯದೆ, ನಗರ ಬದುಕಿನ ಒಂದು ಅನಿವಾರ್ಯ ಜೀವನಶೈಲಿಯಾಗಿ ಬದಲಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಇಂದಿನ ಜಗತ್ತಿನಲ್ಲಿ ಎಲ್ಲರೂ ಸಂಪರ್ಕದಲ್ಲಿದ್ದರೂ, ಭಾವನಾತ್ಮಕವಾಗಿ ಯಾರಿಗೂ ಒಬ್ಬ ಗೆಳೆಯ ಸಿಗುತ್ತಿಲ್ಲ ಎಂಬ ಕೊರತೆಯನ್ನು ಇವು ಸದ್ಯಕ್ಕೆ ನೀಗಿಸುತ್ತಿವೆ.