'17 ತಿಂಗಳಿಂದ ವೇತನ ಕೊಟ್ಟಿಲ್ಲ, ಜೀವನ ನಡೆಸೋದಾದ್ರೂ ಹೇಗೆ'

By Web Desk  |  First Published Oct 26, 2019, 11:38 AM IST

ವೇತನವಿಲ್ಲದೆ ಕತ್ತಲೆಯಲ್ಲಿ ಹಂಗಾಮಿ ಕಾರ್ಮಿಕರು| ಜನಪ್ರತಿನಿಧಿಗಳು, ಅಧಿಕಾರಿಗಳ ನಿರ್ಲಕ್ಷ್ಯ| ದೀಪಾವಳಿಗೆ ಕಾರ್ಮಿಕರ ಬಾಳಲ್ಲಿ ಮೂಡದ ಬೆಳಕು|


ಸಿರವಾರ(ಅ.26): ಖಾಯಂ ನೌಕರರ ತಿಂಗಳ ವೇತನ ಒಂದು ದಿನ ತಡವಾಗಿ ಖಾತೆಗೆ ಜಮಾವಣೆಯಾಗದಿದ್ದರೆ ಬೊಬ್ಬೆ ಹಾಕುವ ನೌಕರರ ಮಧ್ಯದಲ್ಲಿ 17 ತಿಂಗಳ ವೇತನವಿಲ್ಲದೇ ಹೇಗೆ ಜೀವನ ನಡೆಸಬೇಕೆಂದು ಹಂಗಾಮಿ ಕಾರ್ಮಿಕರು ಪ್ರಶ್ನಿಸುತ್ತಿದ್ದಾರೆ.

ಹೌದು ಸಿಂಧನೂರು, ಸಿರವಾರ, ಯರಮರಸ್‌ ವೃತ್ತದಲ್ಲಿ 750 ತುಂಗಭದ್ರಾ ಹಂಗಾಮಿ ಗುತ್ತಿಗೆ ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದು, ಇವರಿಗೆ ಕಳೆದ 17 ತಿಂಗಳಿಂದ ವೇತನ ಪಾವತಿಯಾಗಿಲ್ಲ. ಹಂಗಾಮಿ ಕಾರ್ಮಿಕರನ್ನು ಕೆಲಸದಿಂದ ತೆಗೆದು ಬೇರೆ ಗುತ್ತಿಗೆ ನೀಡಲು ಟೆಂಡರ್‌ ಸಹ ಆಗಿತ್ತು. ಆಗ ಕಾಮಿಕರು ಧರಣಿ ಮಾಡುವ ಮೂಲಕ ಗುತ್ತಿಗೆ ಪದ್ಧತಿ ಕೈಬಿಡಲಾಯಿತು. 2018ರ ಜು.10 ರಿಂದ ಸೆ.19ರ ವರೆಗೂ ಧರಣಿ, ರಾಯಚೂರಿಂದ ಸಿಂಧನೂರು ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವೆಂಕಟರಾವ್‌ ನಾಡಗೌಡ ಕಾರ್ಯಾಲದವರೆಗೂ ಕಾಲ್ನಡಿಗೆ ಜಾಥಾ ಹಮ್ಮಿಕೊಂಡು ವೇತನ ಹೆಚ್ಚಳ, ಗುತ್ತಿಗೆ ಪದ್ಧತಿ ರದ್ದುಗೊಳಿಸುವಂತೆ ಒತ್ತಾಯಿಸಿ ಧರಣಿ ಹಮ್ಮಿಕೊಂಡು ಗುತ್ತಿಗೆ ಪದ್ಧತಿ ರದ್ದುಗೊಳಿಸುವಲ್ಲಿ ಯಶಸ್ವಿಯಾಗಿದ್ದರಿಂದ ಧರಣಿ ಕೈ ಬಿಟ್ಟು 10 ದಿನಗಳ ಒಳಗಾಗಿ ಹಿಂದಿನ ವೇತನವನ್ನು ಖಾತೆಗೆ ಜಮಾವಣೆ ಮಾಡಲಾಗುವುದು ಎಂದು ಅಧಿಕಾರಿಗಳು ಒಪ್ಪಿಕೊಂಡಿದ್ದರು. ಆದರೆ, ಇಲ್ಲಿಯವರೆಗೂ ಯಾವೊಬ್ಬ ಕಾರ್ಮಿಕರ ಖಾತೆಗೆ 10 ರು. ಕೂಡ ಜಮೆಯಾಗಿಲ್ಲ.

Latest Videos

undefined

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಹಣವಿಲ್ಲದೆ ಕಳೆದ ತಿಂಗಳು ದಸರಾ ಹಬ್ಬವನ್ನು ಆಚರಣೆ ಮಾಡಲಿಲ್ಲ, ಮುಂದಿನ ವಾರ ದೀಪಾವಳಿ ಹಬ್ಬ ಬರುತ್ತಿದೆ. ಎಲ್ಲರೂ ಹಬ್ಬ ಮಾಡುತ್ತಾರೆ. ಹಣವಿಲ್ಲದೆ ನಾವು ಹಬ್ಬ ಆಚರಣೆ ಮಾಡದೆ ಕತ್ತಲೆಯಲ್ಲಿ ಕಾಲ ಕಳೆಯುವಂತಾಗಿದೆ. ದೀಪಾವಳಿಗಾದರೂ ಬಾಕಿ ವೇತನ ಪಾವತಿ ಮಾಡುವರೆ ಎಂದು ಕಾರ್ಮಿಕರು ಎದುರು ನೋಡುತ್ತಿದ್ದಾರೆ.

ಅಲ್ಲದೇ ದಿನಸಿ ಅಂಗಡಿಗಳಲ್ಲಿ ಸಾಲವನ್ನು ಮಾಡಿಕೊಂಡಿದ್ದೇವೆ. 17 ತಿಂಗಳಿಂದ ಅವರಿಗೆ ಸಾಲ ಮರುಪಾವತಿ ಮಾಡದೇ ಇರುವುದರಿಂದ ದಿನಸಿ, ಅಗತ್ಯ ವಸ್ತುಗಳನ್ನು ಕೊಡುತ್ತಿಲ್ಲ. ಯಾವ ಖಾತ್ರಿ ಮೇಲೆ ನಿಮಗೆ ಸಾಲದ ರೂಪದಲ್ಲಿ ವಸ್ತುಗಳನ್ನು ನೀಡಬೇಕೆಂದು ಅಂಗಡಿಯವರು ಪ್ರಶ್ನಿಸುತ್ತಾರೆ. ಮಕ್ಕಳ ಶಾಲೆಗೆ ಫೀಜ್‌, ಹೆತ್ತವರಿಗೆ ಔಷಧಿ ತರಲು ಕಷ್ಟವಾಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ತುಂಗಭದ್ರಾ ಎಡದಂಡೆ ನಾಲೆಯ ರೈತರ ಜಮೀನುಗಳಿಗೆ ಸಮರ್ಪಕವಾಗಿ ನೀರು ಹರಿಸಲು ಶ್ರಮಿಸುತ್ತಿದ್ದೇವೆ. ಕೊನೆ ಭಾಗಕ್ಕೆ ನೀರು ಅಲ್ಪ ಮಟ್ಟಿಗೆ ನೀರು ಕೊನೆಭಾಗಕ್ಕೆ ತಲುಪಿವೆ ಎಂದರೆ ಅದು ನಮ್ಮ ಶ್ರಮ. ವೇತನ ಪಾವತಿಸುವಲ್ಲಿ ಅಧಿಕಾರಿಗಳು ವಿಳಂಭ ಮಾಡುತ್ತಿದ್ದಾರೆ. ಧರಣಿ ಕುಳಿತರ ರೈತರಿಗೆ ತೊಂದರೆಯಾಗುತ್ತದೆ ಎಂದು ಸುಮ್ಮನೆ ಇದ್ದೇವೆ ಎಂದು ಸಿರವಾರದ ಹಂಗಾಮಿ ಕಾರ್ಮಿಕರ ಸಂಘದ ಅಧ್ಯಕ್ಷ ಅಮರೇಗೌಡ ಅವರು ಹೇಳಿದ್ದಾರೆ. 
 

click me!