ಉಪ ಚುನಾವಣೆಯಲ್ಲಿ ಪಕ್ಷ ಸಂಘಟನೆ ಮಾಡಿದವರನ್ನು ಪರಿಗಣಿಸಿ ಬಿಜೆಪಿ ಹೈಕಮಾಂಡ್ ನನಗೆ ಟಿಕೆಟ್ ನೀಡುವ ಭರವಸೆ ಇದೆ ಎಂದ ಆರ್.ಬಸನಗೌಡ ತುರ್ವಿಹಾಳ್| ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಟಿಕೆಟ್ ನೀಡುವಂತೆ ಈಗಾಗಲೇ ರಾಜ್ಯಾಧ್ಯಕ್ಷ ಹಾಗೂ ರಾಜ್ಯ ಮುಖಂಡರ ಗಮನಕ್ಕೆ ತರಲಾಗಿದೆ| ಎಲ್ಲವನ್ನೂ ಪರಿಗಣಿಸಿ ಬಿಜೆಪಿ ಪಕ್ಷವನ್ನು ಬಲಿಷ್ಠ ಪಡಿಸುವ ನಿಟ್ಟಿನಲ್ಲಿ ಟಿಕೆಟ್ ನನಗೆ ನೀಡುತ್ತಾರೆ ಎನ್ನುವ ವಿಶ್ವಾಸವಿದೆ|
ಮಸ್ಕಿ(ಅ.19): ಮುಂಬರುವ ಉಪ ಚುನಾವಣೆಯಲ್ಲಿ ಪಕ್ಷ ಸಂಘಟನೆ ಮಾಡಿದವರನ್ನು ಪರಿಗಣಿಸಿ ಬಿಜೆಪಿ ಹೈಕಮಾಂಡ್ ನನಗೆ ಟಿಕೆಟ್ ನೀಡುವ ಭರವಸೆ ಇದೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಆರ್.ಬಸನಗೌಡ ತುರ್ವಿಹಾಳ್ ಅವರು ಹೇಳಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪ ಚುನಾವಣೆಯಲ್ಲಿ ಮಸ್ಕಿ ಕ್ಷೇತ್ರಕ್ಕೆ ಬಿಜೆಪಿ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಟಿಕೆಟ್ ನೀಡುವಂತೆ ಈಗಾಗಲೇ ರಾಜ್ಯಾಧ್ಯಕ್ಷ ಹಾಗೂ ರಾಜ್ಯ ಮುಖಂಡರ ಗಮನಕ್ಕೆ ತರಲಾಗಿದೆ.
undefined
ಎಲ್ಲವನ್ನೂ ಪರಿಗಣಿಸಿ ಬಿಜೆಪಿ ಪಕ್ಷವನ್ನು ಬಲಿಷ್ಠ ಪಡಿಸುವ ನಿಟ್ಟಿನಲ್ಲಿ ಟಿಕೆಟ್ ನನಗೆ ನೀಡುತ್ತಾರೆ ಎನ್ನುವ ವಿಶ್ವಾಸವಿದೆ. ರಾಜ್ಯ ಸರ್ಕಾರ ನನಗೆ ನೀಡಿರುವ ಕಾಡಾ ಅಧ್ಯಕ್ಷ ಸ್ಥಾನವನ್ನು ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿದ ನಂತರ ಅಧಿಕಾರ ತೆಗೆದುಕೊಳ್ಳುವ ಬಗ್ಗೆ ತಿರ್ಮಾನಿಸಲಾಗುವುದು ಎಂದು ತಿಳಿಸಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಸ್ವಾರ್ಥಕ್ಕಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅನರ್ಹಗೊಂಡಿರುವ ಪ್ರತಾಪಗೌಡ ಪಾಟೀಲ ಅವರಿಗೆ ಬಿಜೆಪಿ ಕಾರ್ಯಕರ್ತರ ಬಗ್ಗೆ ಮಾತನಾಡುವ ನೈತಿಕ ಹಕ್ಕು ಇಲ್ಲ. ಪ್ರತಾಪಗೌಡ ಪಾಟೀಲ ಯಾವ ಕಾರಣಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬುದು ಕ್ಷೇತ್ರದ ಜನತೆಗೆ ಗೊತ್ತಿದೆ. ಕಳೆದ ಚುನವಣೆಯಲ್ಲಿ ವಾಮ ಮಾರ್ಗದಿಂದ ಗೆದ್ದು ಮತದಾರರಿಗೆ ವಂಚಿಸಿದ್ದಾರೆ ಎಂದು ತುರ್ವಿಹಾಳ ಆರೋಪಿಸಿದ್ದಾರೆ.
ಬಳಿಕ ಬಿಜೆಪಿ ನಗರ ಘಟಕದ ಅಧ್ಯಕ್ಷ ಕೆ.ಅಪ್ಪಾಜಿಗೌಡ ಮಾತನಾಡಿ, ಕಳೆದ ಚುನಾವಣೆಯಲ್ಲಿ ಬಿಜೆಪಿ ಸೋತಿಲ್ಲ ಅವರು ವಾಮ ಮಾರ್ಗದಿಂದ ಸುಳ್ಳು ವೋಟುಗಳನ್ನು ಹಾಕಿಸಿಕೊಂಡು ಅಧಿಕಾರ ಪಡೆದುಕೊಂಡಿದ್ದಾರೆ. ಅದಕ್ಕಾಗಿ ಕಾರ್ಯಕರ್ತರು ಬಸನಗೌಡ ಅವರೊಂದಿಗೆ ಗಟ್ಟಿಯಾಗಿ ನಿಂತುಕೊಂಡು ಅವರನ್ನು ಈ ಬಾರಿ ಶಾಸಕರನ್ನಾಗಿ ಮಾಡಲು ಮುಂದಾಗಬೇಕು ಎಂದು ಹೇಳಿದ್ದಾರೆ.
ಬಿಜೆಪಿ ಮುಖಂಡ ಸಿದ್ಧಣ್ಣ ಹೂವಿನಭಾವಿ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಲು ಅನರ್ಹ ಶಾಸಕರೇ ಕಾರಣರಾಗಿದ್ದಾರೆ. ಅವರಿಗೆ ಬೇಕಾದರೇ ಬಿಜೆಪಿಯಿಂದ ಎಂಎಲ್‌ಸಿ ಮಾಡಿ ಉಪ ಮುಖ್ಯಮಂತ್ರಿ ಮಾಡಲಿ ನಮ್ಮದೇನು ಅಭ್ಯಂತರವಿಲ್ಲ. ಆದರೆ, ಮಸ್ಕಿ ಕ್ಷೇತ್ರಕ್ಕೆ ಬಿಜೆಪಿಯಿಂದ ಬಸನಗೌಡ ಅವರಿಗೆ ಟಿಕೆಟ್ ನೀಡಬೇಕು. ಇಲ್ಲದಿದ್ದರೆ ಮುಂದೆ ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಕಷ್ಟ ಅನುಭವಿಸಬೇಕಾಗುತ್ತದೆ ಎಂದ ಅವರು, ಅನರ್ಹ ಶಾಸಕರು ಯಾವಾಗಲೂ ತಮ್ಮ ಸುತ್ತ ಇರುವ ನಾಲ್ಕೈದು ಜನರ ಮಾತುಗಳನ್ನು ಕೇಳಿಕೊಂಡು ಅವರ ಅಣತಿಯಂತೆ ನಡೆದುಕೊಳ್ಳುತ್ತಿದ್ದಾರೆಯೇ ಹೊರೆತು ಬೇರೆಯಾರ ಮಾತುಗಳನ್ನು ಕೇಳುವುದಿಲ್ಲ. ಇದರಿಂದ ಏನೂ ಅಭಿವೃದ್ಧಿ ಮಾಡಲು ಸಾಧ್ಯವೆಂದು ಪ್ರಶ್ನಿಸಿದರು.
ಅಲ್ಲದೇ ಕ್ಷೇತ್ರದಲ್ಲಿ ಬಸನಗೌಡರು ಬುಕ್ ಆಗಿದ್ದಾರೆಂದು ಕಾರ್ಯಕರ್ತರಲ್ಲಿ ಗೊಂದಲವನ್ನು ಸೃಷ್ಠಿ ಮಾಡಲು ಯತ್ನಿಸಲಾಗುತ್ತಿದೆ. ಆದರೆ, ಬಸನಗೌಡರಾಗಲಿ ನಾವಾಗಲಿ ಯಾರೂ ಅಂತಹ ಕೆಲಸವನ್ನು ಮಾಡುವುದಿಲ್ಲ ಎಂದರು.
ತಾಪಂ ಸದಸ್ಯ ಗವಿಸಿದ್ಧಪ್ಪ ಸಾಹುಕಾರ, ಮಲ್ಲಪ್ಪ ಅಂಕುಶದೊಡ್ಡಿ ಮಾತನಾಡಿದರು. ತಾಪಂ ಸದಸ್ಯ ಶಿವಣ್ಣ ನಾಯಕ, ಅಭಿಜೀತ್ ಮಾಲಿ ಪಾಟೀಲ್ ಸೇರಿದಂತೆ ನೂರಾರು ಅಭಿಮಾನಿ ಕಾರ್ಯಕರ್ತರಿದ್ದರು.