ರಾಯಚೂರು: ವಿವಿಧ ಸಂಘಟನೆಗಳಿಂದ ಸಚಿವ ಶ್ರೀರಾಮುಲುಗೆ ಮನವಿ

By Web Desk  |  First Published Oct 17, 2019, 10:31 AM IST

ವಿವಿಧ ಸಂಘ-ಸಂಸ್ಥೆಗಳು ಹಲವು ಸಮಸ್ಯೆಗಳಿಗೆ ಪರಿಹಾರ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸಚಿವ ಬಿ.ಶ್ರೀರಾಮುಲುಗೆ ಮನವಿ| ನೆರೆ ಪೀಡಿತರಿಗೆ ಪರಿಹಾರ ವಿತರಣೆ ಮಾಡಬೇಕು ಹಾಗೂ ರಾಷ್ಟ್ರೀಯ ಹೆದ್ದಾರಿ 167ರ ಕಾಮಗಾರಿ ಪೂರ್ಣಗೊಳಿಸಬೇಕು| ರಾಯಚೂರು ನಗರಕ್ಕೆ 24 ಗಂಟೆಗಳ ನಿರಂತರ ಕುಡಿಯುವ ನೀರಿನ ಯೋಜನೆ ಮತ್ತು ಒಳಚರಂಡಿ ಕಾಮಗಾರಿ ಕೂಡಲೇ ಪೂರ್ಣಗೊಳಿಸಬೇಕು| 


ರಾಯಚೂರು(ಅ.17): ಜಿಪಂ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರಿಗೆ ವಿವಿಧ ಸಂಘ-ಸಂಸ್ಥೆಗಳು ಹಲವು ಸಮಸ್ಯೆಗಳಿಗೆ ಪರಿಹಾರ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಮನವಿ ಸಲ್ಲಿಸಿದ್ದಾರೆ.

ಕೃಷಿ ಉತ್ಪನ್ನ ಮಾರುಕಟ್ಟೆಸಮಿತಿಯಿಂದ ಲೀಜ್‌ ಕಂ ನಿವೇಶನ ಹಂಚಿಕೆಯಲ್ಲಿ ಭ್ರಷ್ಟಾಚಾರದ ತನಿಖೆ, ನಗರದ ಅಭಿವೃದ್ಧಿಗೆ ನಿರ್ಲಕ್ಷ ವಹಿಸಿದ ನಗರಸಭೆ ಪೌರಾಯುಕ್ತರ ವರ್ಗಾವಣೆ ಮಾಡಬೇಕು ಎಂದು ರಾಯಚೂರು ನಗರದ ಉಸ್ಮಾನಿಯ ತರಕಾರಿ ಮಾರಾಟಗಾರರ ಕ್ಷೇಮಾಭಿವೃದ್ದಿ ಸಂಘದ ಪದಾಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದರು ಈ ಸಂದರ್ಭದಲ್ಲಿ ಅಧ್ಯಕ್ಷ ಮಹಾವೀರ, ಮಹ್ಮದ್‌ ಶಾಲಂ, ಪ್ರಭುನಾಯಕ, ಬಸವರಾಜ, ಕೆ.ವಿ. ಖಾಜಪ್ಪ ಸೇರಿದಂತೆ ಇತರರಿದ್ದರು.

Latest Videos

undefined

ದಸಂಸದಿಂದ ಪ್ರತಿಭಟನೆ:

ಮಾನ್ವಿಯ ಮೆಟ್ರಿಕ್‌ ನಂತರದ ವಸತಿ ನಿಲಯಗಳಿಗೆ ಸಮರ್ಪಕ ಸೌಕರ್ಯಗಳನ್ನು ಒದಗಿಸುವಂತೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಮುಖಂಡರು ನಗರದ ಟಿಪ್ಪು ಸುಲ್ತಾನ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಿದರು ಬಳಿಕ ಶ್ರೀರಾಮುಲು ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.

ಮಾನ್ವಿಯಲ್ಲಿರುವ ಅಂಬೇಡ್ಕರ್‌ ವಸತಿ ನಿಲಯಕ್ಕೆ ತೆರಳಲು ರಸ್ತೆ ಇಲ್ಲದೆ ವಿದ್ಯಾರ್ಥಿಗಳು ಪರದಾಡುವಂತಾಗಿದೆ ಎಂದು ದೂರಿದರು. ಅಲ್ಪಸಂಖ್ಯಾತರ ವಸತಿ ನಿಲಯಕ್ಕೂ ಸೌಕರ್ಯಗಳೆ ಇಲ್ಲ ಅದೇಗೆ ವಿದ್ಯಾರ್ಥಿಗಳು ಅಭ್ಯಾಸ ಮಾಡಬೇಕು ಎಂದು ಪ್ರಶ್ನಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ವಸತಿ ನಿಲಯಗಳಿಗೆ ತಡೆಗೋಡೆ, ಸಂಪರ್ಕ ರಸ್ತೆ ನಿರ್ಮಾಣ, ವಿದ್ಯುತ್‌ ಸಂಪರ್ಕ, ಜನರೇಟರ್‌ ವ್ಯವಸ್ಥೆ, ಶುದ್ಧ ಕುಡಿವ ನೀರಿನ ಪೂರೈಕೆ, ಅಂಬೇಡ್ಕರ್‌ ವಸತಿ ನಿಲಯ ಮೇಲ್ವಿಚಾರ ಭೀಮರಾಯನನ್ನು ವರ್ಗಾವಣೆ ಮಾಡಬೇಕು, ನಗರ ಸಂಚಾರ ಬಸ್‌ ವ್ಯವಸ್ಥೆ, ದಿನಗೂಲಿ ಕಾರ್ಮಿಕರಿಗೆ ಬಾಕಿ ವೇತನ ಪಾವತಿ, ಮೆಟ್ರಿಕ್‌ ಪೂರ್ವ ವಿದ್ಯಾರ್ಥಿಗಳಿಗೆ 3 ಸಾವಿರ, ಮೆಟ್ರಿಕ್‌ ನಂತರದ ವಿದ್ಯಾರ್ಥಿಗಳಿಗೆ ತಲಾ 3500 ರೂ.ಗಳ ವಿದ್ಯಾರ್ಥಿ ವೇತನ, ಸಂಖ್ಯೆಗನುಗುಣವಾಗಿ ವಾರ್ಡನ್‌ ನೇಮಕಕ್ಕೆ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಸಂಘಟನೆ ಸಂಚಾಲಕ ಪರಶುರಾಮ, ಶಿಜ್ಞಾನಿ, ರಮೇಶ, ಪ್ರಕಾಶ, ಬಸವರಾಜ, ಚಿದಾನಂದ, ಹನುಮಂತ, ನರಸಿಂಹಲು, ಹುಲಿಗೆಪ್ಪ, ಬಸವಲಿಂಗ, ಶರೀಫ್‌ ಸೇರಿದಂತೆ ಇತರರು ಇದ್ದರು.

ವಸತಿ ನಿಲಯಗಳ ಕಾರ್ಮಿಕ ಸಂಘ:

ಜಿಲ್ಲೆಯ ವಿವಿಧ ಇಲಾಖೆ ವಸತಿ ನಿಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರ ಬಾಕಿ ವೇತನ ಪಾವತಿಸಿ, ಸೇವೆ ಕಾಯಂ ಸೇರಿದಂತೆ ಇತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ಹಾಗೂ ಖಾಸಗಿ ವಸತಿ ನಿಲಯಗಳ ಕಾರ್ಮಿಕ ಸಂಘದ ಪದಾಧಿಕಾರಿಗಳು, ಸದಸ್ಯರು ಸಚಿವ ರಾಮುಲು ಅವರಿಗೆ ಮನವಿ ಸಲ್ಲಿಸಿದರು. ಬಾಕಿ ವೇತನ ಪಾವತಿಗೆ ಕ್ರಮ ಕೈಗೊಳ್ಳಬೇಕು, ಕಾರ್ಮಿಕ ಇಲಾಖೆಯ ಆದೇಶದನ್ವಯ ಬ್ಯಾಂಕ್‌ ಖಾತೆಗೆ ನೇರ ಜಮಾ, ದಿನಕ್ಕೆ 8 ತಾಸು ಕೆಲಸದ ಅವಧಿ ನಿಗದಿ ಪಡಿಸಬೇಕು, ಸಾರ್ವತ್ರಿಕ ರಜೆ, ಭಾನುವಾರ ಕಡ್ಡಾಯ ರಜೆ ನೀಡಬೇಕು, ಕನಿಷ್ಠ ವೇತನ ಕಾಯ್ದೆ ಪ್ರಕಾರ ಪ್ರತಿ ತಿಂಗಳು 7ನೇ ತಾರೀಖಿನೊಳಗೆ ವೇತನ ಪಾವತಿಸಬೇಕು, ಕಾರ್ಮಿಕರ ಮೇಲೆ ಕಿರುಕುಳ ಹಾಗೂ ಬೆದರಿಕೆ ಒಡ್ಡುವ ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದರು. 

ಮನವಿ ಸ್ವೀಕರಿಸಿದ ಸಚಿವರು ಈ ಬಗ್ಗೆ ಸಂಬಂಧಿಸಿದವರ ಗಮನಕ್ಕೆ ತಂದು ಕಾನೂನು ಚೌಕಟ್ಟಿನಲ್ಲಿ ಸಮಸ್ಯೆಗೆ ಪರಿಹಾರ ಹುಡುಕುವುದಾಗಿ ಭರವಸೆ ನೀಡಿದರು. ಈ ವೇಳೆ ಮುಖಂಡರಾದ ಜಿ.ಅಮರೇಶ, ರಂಗನಾಥ, ಚಂದ್ರಶೇಖರ್‌, ಲಾಳೇಸಾಬ್‌, ಹೊನ್ನಪ್ಪ ಎಂ.ಡಿ.ಕೈಸರ್‌ ರಜಾಕ್‌, ರವಿ ದಾದಸ್‌, ಶಿವರಾಜ್‌ ಸೇರಿದಂತೆ ಇನ್ನಿತರರಿದ್ದರು.

ಕರವೇಯಿಂದ ಮನವಿ:

ಜಿಲ್ಲೆಯ ಜ್ವಲಂತ ಸಮಸ್ಯೆಗಳಾದ ನೆರೆ ಪೀಡಿತರಿಗೆ ಪರಿಹಾರ ವಿತರಣೆ ಮಾಡಬೇಕು ಹಾಗೂ ರಾಷ್ಟ್ರೀಯ ಹೆದ್ದಾರಿ 167ರ ಕಾಮಗಾರಿ ಪೂರ್ಣಗೊಳಿಸಬೇಕು ಎಂಬುವುದು ಸೇರಿದಂತೆ ಹಲವು ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿ ಕರವೇ ಕಾರ್ಯಕರ್ತರು ಶ್ರೀರಾಮುಲು ಅವರಿಗೆ ಮನವಿ ಮಾಡಿದರು. ರಾಯಚೂರು ನಗರದ ಮಹತ್ವಾಕಾಂಕ್ಷಿ ಯೋಜನೆಗಳಾದ 24 ಗಂಟೆಗಳ ನಿರಂತರ ಕುಡಿಯುವ ನೀರಿನ ಯೋಜನೆ ಮತ್ತು ಒಳಚರಂಡಿ ಕಾಮಗಾರಿ ಕೂಡಲೇ ಪೂರ್ಣಗೊಳಿಸಬೇಕು, ಒಪೆಕ್‌ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯನ್ನು ವೈದ್ಯಕೀಯ ಶಿಕ್ಷಣ ಇಲಾಖೆಯಿಂದ ಬಿಡುಗಡೆಗೊಳಿಸಿ ಆರೋಗ್ಯ ಇಲಾಖೆಯ ಸ್ವಾಯತ್ತ ಸಂಸ್ಥೆಯನ್ನಾಗಿ ಮಾಡಬೇಕು ಎಂದು ಒತ್ತಾಯಿಸಿದರು.

ಭಾಗದ ಜನರಿಗೆ ಅನುಕೂಲದ ಸೃಷ್ಟಿಯ ಮೂಲುದ್ದೇಶದಂತೆ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷ ವಿನೋದರೆಡ್ಡಿ, ಪದಾಧಿಕಾರಿಗಳಾದ ರಮೇಶ ಪಡುಕೋಟೆ, ವಿರುಪಾಕ್ಷಿ, ಕೆ.ರಾಜೇಶ, ವಿಶ್ವನಾಥಸ್ವಾಮಿ, ರಾಹುಲ್‌, ನಾಗರಾಜ ಹಾಗೂ ಮತ್ತಿತರರಿದ್ದರು.
 

click me!