ಮಸ್ಕಿ ಡ್ಯಾಂಗೆ ಪ್ರತಾಪ್‌ಗೌಡ ಪಾಟೀಲ್‌ ಬಾಗಿನ ಅರ್ಪಣೆ

By Web DeskFirst Published Oct 17, 2019, 10:18 AM IST
Highlights

ಮಸ್ಕಿ ಕ್ಷೇತ್ರದ ಕೆರೆಗಳನ್ನು ತುಂಬಿಸಲು 502 ಕೋಟಿ ನೀಡಲು ಸರ್ಕಾರದಿಂದ ಒಪ್ಪಿಗೆ| ಮಸ್ಕಿ ಜಲಾಶಯ ತುಂಬಿದ ಹಿನ್ನೆಲೆಯಲ್ಲಿ ಜಲಾಶಯಕ್ಕೆ ಗಂಗಾಪೂಜೆ ನೆರವೇರಿಸಿ ಬಾಗಿನ ಅರ್ಪಣೆ| ಸತತ ಬರಗಾಲದಿಂದ ಈ ಭಾಗದಲ್ಲಿ ಜನರಿಗೆ ನೀರಿನ ತೊಂದರೆ ಉಂಟಾಗುತ್ತಿದೆ| ಇದರಿಂದ ಜನ-ಜಾನುವಾರುಗಳು ಸಂಕಷ್ಟಕ್ಕೆ ಸಿಲುಕುವಂತಾಗಿದೆ| ಅಂತರ್ಜಲ ಕುಸಿತ ಹಾಗೂ ನೀರಿನ ತೊಂದರೆ ತಡೆಗಟ್ಟಲು ಬಸವಸಾಗರ ಜಲಾಶಯದಿಂದ ಪೈಪ್‌ಲೈನ್‌ ಮೂಲಕ ಮಸ್ಕಿ ಜಲಾಶಯ ಹಾಗೂ ಕನಕನಾಲಾ ಜಲಾಶಯ ಭರ್ತಿ ಮಾಡುವುದೇ ಈ ಯೋಜನೆಯ ಉದ್ದೇಶ|

ಮಸ್ಕಿ(ಅ.17): ಮಸ್ಕಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಸ್ಕಿ ನಾಲಾ ಜಲಾಶಯ ಹಾಗೂ ಕನಕ ನಾಲಾ ಸೇರಿದಂತೆ ವಿವಿಧ ಗ್ರಾಮಗಳಲ್ಲಿನ ಕೆರೆಗಳಿಗೆ ನೀರು ತುಂಬಿಸಲು 502 ಕೋಟಿ ವೆಚ್ಚದ ಕ್ರಿಯಾ ಯೋಜನೆಗೆ ಡಿಪಿಆರ್‌ ಆಗಿದೆ. ಅಲ್ಲದೆ ಸರ್ಕಾರದ ತಾಂತ್ರಿಕ ಇಲಾಖೆಯೂ ಒಪ್ಪಿಗೆ ನೀಡಿದೆ ಎಂದು ಅನರ್ಹ ಶಾಸಕ ಪ್ರತಾಪ್‌ಗೌಡ ಪಾಟೀಲ್‌ ಹೇಳಿದ್ದಾರೆ.

ಸಮೀಪದ ಮಾರಲದಿನ್ನಿ ಹತ್ತಿರದ ಮಸ್ಕಿ ಜಲಾಶಯ ತುಂಬಿದ ಹಿನ್ನೆಲೆಯಲ್ಲಿ ರೈತರೊಂದಿಗೆ ತೆರಳಿ ಬುಧವಾರ ಜಲಾಶಯಕ್ಕೆ ಗಂಗಾಪೂಜೆ ನೆರವೇರಿಸಿ ಖಾಸಗಿಯಾಗಿ ಬಾಗಿನ ಸಲ್ಲಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ನಂತರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಸತತ ಬರಗಾಲದಿಂದ ಈ ಭಾಗದಲ್ಲಿ ಜನರಿಗೆ ನೀರಿನ ತೊಂದರೆ ಉಂಟಾಗುತ್ತಿದೆ. ಇದರಿಂದ ಜನ-ಜಾನುವಾರುಗಳು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಅಲ್ಲದೆ ವರ್ಷದಿಂದ ವರ್ಷಕ್ಕೆ ಅಂತರ್ಜಲ ಕುಸಿತ ಕಾಣುತ್ತಿದೆ. ಆದ್ದರಿಂದ ಅಂತರ್ಜಲ ಕುಸಿತ ಹಾಗೂ ನೀರಿನ ತೊಂದರೆ ತಡೆಗಟ್ಟಲು ಈ ಭಾಗದ ಜನರ ಅನೂಕೂಲಕ್ಕಾಗಿ ಬಸವಸಾಗರ ಜಲಾಶಯದಿಂದ ಪೈಪ್‌ಲೈನ್‌ ಮೂಲಕ ಮಸ್ಕಿ ಕ್ಷೇತ್ರಕ್ಕೆ ನೀರು ತಂದು ಮಸ್ಕಿ ಜಲಾಶಯ ಹಾಗೂ ಕನಕನಾಲಾ ಜಲಾಶಯ ಸೇರಿದಂತೆ ಕ್ಷೇತ್ರದಲ್ಲಿ ಬರುವ ಎಲ್ಲಾ ಕೆರೆಗಳನ್ನು ಭರ್ತಿ ಮಾಡುವುದೇ ಈ ಯೋಜನೆಯ ಉದ್ದೇಶವಾಗಿದೆ. ಅಧಿಕಾರಿಗಳು ಡಿಪಿಆರ್‌ ಮಾಡಿದ್ದಾರೆ. ಇದಕ್ಕೆ ಈಗಾಗಲೇ ಮುಖ್ಯಮಂತ್ರಿಗಳು ಒಪ್ಪಿಗೆ ನೀಡಿದ್ದಾರೆ. ಅಲ್ಲದೇ ತಾಂತ್ರಿಕ ಇಲಾಖೆ ಒಪ್ಪಿಗೆ ಸೂಚಿಸಿದೆ. ಶೀಘ್ರದಲ್ಲಿ ಸಚಿವ ಸಂಪುಟ ಸಭೆಯಲ್ಲಿ ಈ ಯೋಜನೆಗೆ ಒಪ್ಪಿಗೆ ದೊರೆಯುವ ವಿಶ್ವಾಸವಿದೆ ಎಂದರು.

ಈ ಯೋಜನೆಯಿಂದ ಈ ಭಾಗದ ರೈತರಿಗೆ ಅನೂಕೂಲವಾಗಿದೆ. ಮಸ್ಕಿ ನಾಲಾ ಜಲಾಶಯ ಅಭಿವೃದ್ಧಿ ಹಾಗೂ ಕಾಲುವೆಗಳಲ್ಲಿನ ಹೂಳು ತೆಗೆಯಲು ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಹ ಸಲ್ಲಿಸಲಾಗಿದೆ. ಅದೂ ಕೂಡ ಒಪ್ಪಿಗೆ ದೊರೆಯಲಿದೆ ಎಂದರು.

ಈ ಸಂದರ್ಭದಲ್ಲಿ ಮುಖಂಡರಾದ ಮಹಾದೇವಪ್ಪಗೌಡ ಪೊಲೀಸ್‌ ಪಾಟೀಲ್‌, ಪ್ರತಾಪಗೌಡ ಅವರ ಅಭಿಮಾನಿಗಳು ಹಾಗೂ ನೂರಾರು ಸಂಖ್ಯೆಯಲ್ಲಿ ರೈತರು ಹಾಗೂ ಕುಟುಂಬ ಸದಸ್ಯರು ಪಾಲ್ಗೊಂಡಿದ್ದರು.
 

click me!