ಹಟ್ಟಿ ಚಿನ್ನದ ಗಣಿಯಿಂದ ದಾಖಲೆಯ ಚಿನ್ನ ಉತ್ಪಾದನೆ

By Web DeskFirst Published Oct 14, 2019, 12:24 PM IST
Highlights

ಕರ್ನಾಟಕ ಸರ್ಕಾರಿ ಸ್ವಾಮ್ಯದ ಪ್ರತಿಷ್ಠಿತ ಹಟ್ಟಿ ಚಿನ್ನದ ಗಣಿ ಕಂಪನಿ ವರ್ಷದಿಂದ ವರ್ಷಕ್ಕೆ ದಾಖಲೆಯ ಚಿನ್ನ ಉತ್ಪಾದಿಸುವತ್ತ ಸಾಗಿದೆ| ಪ್ರಸಕ್ತ ಆರ್ಥಿಕ ಸಾಲಿಗೆ 1750 ಕೆ.ಜಿ. ಚಿನ್ನದ ಉತ್ಪಾದನೆ ಗುರಿ ಹೊಂದಲಾಗಿದೆ| ಏಪ್ರಿಲ್‌ 2019 ರಿಂದ ಜೂನ್‌ ವರೆಗೆ ಮೊದಲ ತ್ರೈಮಾಸಿಕದಲ್ಲಿ 391 ಕೆ.ಜಿ. ಚಿನ್ನ ಉತ್ಪಾದನೆ ಮಾಡಿದರೆ| ಜುಲೈನಲ್ಲಿ 149.67 ಕೆ.ಜಿ.| ಆಗಸ್ಟ್‌ನಲ್ಲಿ 145.77 ಕೆ.ಜಿ| ಸೆಪ್ಟೆಂಬರ್‌ನಲ್ಲಿ 136.78 ಕೆ.ಜಿ| ಅರ್ಧ ವಾರ್ಷಿಕಕ್ಕೆ 827.595 ಕೆ.ಜಿ. ಚಿನ್ನವನ್ನು ಉತ್ಪಾದಿಸಿದೆ|  

ಲಿಂಗಸುಗೂರು(ಅ.14): ಚಿನ್ನದ ಉತ್ಪಾದನೆಯಲ್ಲಿ ಏಕ ಸ್ವಾಮ್ಯತೆಯನ್ನು ಸಾಧಿಸಿರುವ ದಕ್ಷಿಣ ಏಷ್ಯಾದ ಏಕೈಕ ಚಿನ್ನದ ಗಣಿಯಾದ ಕರ್ನಾಟಕ ಸರ್ಕಾರಿ ಸ್ವಾಮ್ಯದ ಪ್ರತಿಷ್ಠಿತ ಹಟ್ಟಿ ಚಿನ್ನದ ಗಣಿ ಕಂಪನಿ ವರ್ಷದಿಂದ ವರ್ಷಕ್ಕೆ ದಾಖಲೆಯ ಚಿನ್ನ ಉತ್ಪಾದಿಸುವತ್ತ ಸಾಗಿದೆ.

ಪ್ರಸಕ್ತ ಆರ್ಥಿಕ ಸಾಲಿಗೆ 1750 ಕೆ.ಜಿ. ಚಿನ್ನದ ಉತ್ಪಾದನೆ ಗುರಿ ಹೊಂದಲಾಗಿದೆ. ಏಪ್ರಿಲ್‌ 2019 ರಿಂದ ಜೂನ್‌ ವರೆಗೆ ಮೊದಲ ತ್ರೈಮಾಸಿಕದಲ್ಲಿ 391 ಕೆ.ಜಿ. ಚಿನ್ನ ಉತ್ಪಾದನೆ ಮಾಡಿದರೆ, ಜುಲೈನಲ್ಲಿ 149.67 ಕೆ.ಜಿ., ಆಗಸ್ಟ್‌ನಲ್ಲಿ 145.77 ಕೆ.ಜಿ., ಸೆಪ್ಟೆಂಬರ್‌ನಲ್ಲಿ 136.78 ಕೆ.ಜಿ. ಅರ್ಧ ವಾರ್ಷಿಕಕ್ಕೆ 827.595 ಕೆ.ಜಿ. ಚಿನ್ನವನ್ನು ಉತ್ಪಾದಿಸಿ ಗಣಿ ಕಂಪನಿ ಉತ್ಪಾದನೆ ಕಳೆದ ವರ್ಷಕ್ಕೆ ಹೋಲಿಸಿದರೆ ತನ್ನ ದಾಖಲೆ ತಾನೆ ಮುರಿದು ನಿಚ್ಚಳ ಉತ್ಪಾದನೆ ಗುರಿಯತ್ತ ದಾಪುಗಾಲು ಹಾಕುತ್ತಿರುವುದು ಸ್ಪಷ್ಟವಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಅರ್ಧ ವಾರ್ಷಿಕದಲ್ಲಿ ಒಟ್ಟು 835.609 ಕೆ.ಜಿ. ಚಿನ್ನ ಉತ್ಪಾದನೆ ಗುರಿಯ ಪೈಕಿ 827.595 ಕೆ.ಜಿ. ಉತ್ಪಾದಿಸಿ ಗುರಿ ತಲುಪಲು ಕೆಲವೆ ಕೆ.ಜಿ. ಬಾಕಿ ಇದ್ದು ಪ್ರತಿಶತ 98 ರಷ್ಟು ಸಾಧನೆ ಮಾಡಿದೆ. ವಾರ್ಷಿಕ ಒಟ್ಟು ಉತ್ಪಾದನೆಯ ಗುರಿ 1750 ಪೈಕಿ ಕೆ.ಜಿ. ಉತ್ಪಾದನೆಗೆ ಉಳಿದ 922.405 ಕೆ.ಜಿ. ಇನ್ನುಳಿದ 6 ತಿಂಗಳಲ್ಲಿ ಅಂದರೆ ಅಕ್ಟೋಬರ್‌ 2019ರಿಂದ ಮಾರ್ಚ್ 2020 ರವರೆಗೆ ಉತ್ಪಾದಿಸುವುದು ಬಹುತೇಕ ಸ್ಪಷ್ಟವಾಗಿದೆ.

ಕಳೆದ ವರ್ಷದಿಂದ ಹಟ್ಟಿಗಣಿ ಅಧೀನದಲ್ಲಿರುವ ಸಿರವಾರ ತಾಲೂಕ್ಕಿನ ಹೀರಾ-ಬುದ್ಧಿನ್ನಿ ಹೊಸ ಯೋಜನೆ ಬಂದ್‌ ಆಗಿರುವದರಿಂದ ಉತ್ಪಾದನೆಯಲ್ಲಿ ಹಿನ್ನಡೆಯಾಗುವುದು ಎಂಬ ಭೀತಿಯಿತ್ತು. ಪ್ರತಿವರ್ಷ 90 ರಿಂದ 100 ಕೆ.ಜಿ.ಯಷ್ಟು ಬುದ್ಧಿನ್ನಿ ಗಣಿಯಿಂದ ಗುರಿ ಹೊಂದಲಾಗಿದ್ದು, ರೈತರು-ಆಡಳಿತ ವರ್ಗದ ಮಧ್ಯೆ ತಿಕ್ಕಾಟದಿಂದ ಗಣಿ ಮುಚ್ಚಿ ಹೋಗಿದ್ದರು ಗುರಿ ತಲುಪುವಲ್ಲಿ ಕಂಪನಿ ಯಶಸ್ಸು ಕಂಡಿದೆ.

ದಾಖಲೆ ಲಾಭ:

2017-18ನೇ ಸಾಲಿಗೆ 30 ಕೋಟಿ ಹಾಗೂ 2018-19ನೇ ಸಾಲಿಗೆ 80 ಕೋಟಿ ನಿವ್ವಳ ಲಾಭಗಳಿಸಿದ್ದು, ಕಳೆದ ವರ್ಷ ಹಾಗೂ ಹಿಂದಿನ ಎಲ್ಲಾ ವರ್ಷಗಳಿಗೆ ಹೋಲಿಸಿದರೆ ದಾಖಲೆಯ ಲಾಭವಾಗಿದೆ.

ಆಡಳಿತ ವರ್ಗದ ವಿಶ್ವಾಸ:

ಪ್ರತಿ ವರ್ಷವು ಗುರಿಗಿಂತ ಹೆಚ್ಚಿಗೆ ದಾಖಲೆ ಚಿನ್ನ ಉತ್ಪಾದಿಸಿ ತೋರಿಸುತ್ತಿರುವ ಕಾರ್ಮಿಕರ ಶ್ರಮ ಹಾಗೂ ನುರಿತ ಅಧಿಕಾರಿಗಳ ಮಾರ್ಗದರ್ಶನ ಮೇಲೆ ನಂಬಿಕೆ ಇಟ್ಟುಕೊಂಡು ಬಂದಿರುವ ಕಂಪನಿ ಈ ಬಾರಿಯು ದಾಖಲೆ ಮಾಡಿ ತೋರಿಸುವ ಅಪಾರ ವಿಶ್ವಾಸ ಹೊಂದಿದೆ. ಪ್ರತಿ ತಿಂಗಳಿನ ಲೆಕ್ಕಾಚಾರದಲ್ಲಿ ಏನೆ ಏರುಪೇರಾದರು ಸಹಿತ ವರ್ಷಾಂತ್ಯಕ್ಕೆ ಗುರಿ ತಲುಪಿ ತೋರಿಸಿರುವ ದಾಖಲೆ ಗಣಿಯಲ್ಲಿದೆ.

ಈ ಬಗ್ಗೆ ಮಾತನಾಡಿದ ಹಟ್ಟಿಚಿನ್ನದಗಣಿ ಕಂಪನಿ(ನಿ)ಯ ಕಾರ್ಯನಿರ್ವಾಹಕ ನಿರ್ದೇಶಕ ಪ್ರಕಾಶ್‌ ಬಹದ್ದೂರ್‌ ಅವರು,  ಗಣಿ ಕಂಪನಿಯು ಪ್ರತಿ ದಿನಕ್ಕೆ 2000 ಟನ್‌ ಅದಿರು ಬೀಸುವ ಸಾಮರ್ಥ್ಯ ಹೊಂದಿದೆ. ಗಣಿ ಕಂಪನಿಯು ಉತ್ಪಾದನೆಯಲ್ಲಿ ಯಾವತ್ತು ಹಿಂದೆ ಬಿದ್ದಿಲ್ಲ. ಅಧಿಕಾರಿ-ಕಾರ್ಮಿಕ ವರ್ಗದ ಪರಿಶ್ರಮದಿಂದ ಪ್ರಸಕ್ತ ಆರ್ಥಿಕ ಸಾಲಿಗೆ ನಿರೀಕ್ಷೆ ಮೀರಿ ಉತ್ಪಾದನೆ ಗುರಿ ತಲಪುವ ಭರವಸೆ ಇದೆ ಎಂದು ಹೇಳಿದ್ದಾರೆ. 

ಆರು ತಿಂಗಳಲ್ಲಿ ಶೇ.98 ರಷ್ಟು ಕಂಪನಿ ಸಾಧನೆ ಮಾಡಿದೆ. ಕಾಮಿಕರು ಹಾಗೂ ಅಧಿಕಾರಿಗಳ ಪರಿಶ್ರಮದಿಂದ ಗಣಿ ಕಂಪನಿಯು ಚಿನ್ನ ಉತ್ಪಾದನೆಯ ಗುರಿ ತಲುಪುತ್ತಿದೆ. ವಾರ್ಷಿಕ ಗುರಿಯಾದ 1670 ಕೆ.ಜಿಗಿಂತ ಅಧಿಕ ಚಿನ್ನ ಉತ್ಪಾದಿಸುವ ವಿಶ್ವಾಸವಿದೆ ಎಂದು ಹಟ್ಟಿಚಿನ್ನದಗಣಿ ಕಂಪನಿ(ನಿ)ಯ ಹಿರಿಯ ವ್ಯವಸ್ಥಾಪಕರಾದ(ಮಾಸಾ) ಯಮನೂರಪ್ಪ ಅವರು ತಿಳಿಸಿದ್ದಾರೆ. 
 

click me!